ಶಿಗ್ಗಾಂವಿ ಚುನಾವಣೆ | ಸೋಲಲು ನಿರ್ಧರಿಸಿದೆ ಕಾಂಗ್ರೆಸ್‌; ಗೆಲ್ಲುವ ಹಠದಲ್ಲಿ ಸತೀಶ್‌

Date:

Advertisements

ರಾಜ್ಯದ ಮೂರು ವಿಧಾನಸಭಾ ಕ್ಷೇತ್ರಗಳಿಗೆ ಇನ್ನೊಂದು ವಾರದಲ್ಲಿ ಮತದಾನ ನಡೆಯಲಿದೆ. ರಾಜ್ಯದ ಮೂರು ಪ್ರಮುಖ ಪಕ್ಷಗಳು ಮೂರೂ ಕ್ಷೇತ್ರಗಳಲ್ಲಿಯೂ ಕುಟುಂಬ ರಾಜಕಾರಣದ ಮೊರೆಹೋಗಿವೆ. ಹಾಲಿ ಸಂಸದರ ಮಡದಿ, ಮಕ್ಕಳನ್ನು ಗೆಲ್ಲಿಸಲು ಕಸರತ್ತು ನಡೆಸುತ್ತಿವೆ. ಶಿಗ್ಗಾಂವಿಯಲ್ಲಿ ಸಂಸದ, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಪುತ್ರ ಭರತ್‌ರನ್ನು ಬಿಜೆಪಿ ಕಣಕ್ಕಿಳಿಸಿದೆ. ಅವರನ್ನು ಗೆಲ್ಲಿಸಲು ಬಿಜೆಪಿಗಿಂತ ಕಾಂಗ್ರೆಸ್‌ಗೆ ಹೆಚ್ಚು ಉತ್ಸಾಹವಿದೆ ಎಂಬ ಅಭಿಪ್ರಾಯಗಳು ಕ್ಷೇತ್ರದಲ್ಲಿ ವ್ಯಕ್ತವಾಗುತ್ತಿವೆ.

ಉಪಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್‌ ಮೈತ್ರಿ ಮತ್ತು ಕಾಂಗ್ರೆಸ್‌ ನಡುವೆ ಹೋರಾಟವಿದ್ದರೂ, ಶಿಗ್ಗಾಂವಿಯಲ್ಲಿ ಕಾಂಗ್ರೆಸ್‌ ಹೊಂದಾಣಿಕೆ ರಾಜಕಾರಣಕ್ಕೆ ಮಣೆ ಹಾಕಿದೆ ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಮುಸ್ಲಿಂ ಬಾಹುಳ್ಯ ಉಳ್ಳ ಕ್ಷೇತ್ರದಲ್ಲಿ ಅಜ್ಜಂ ಪೀರ್ ಖಾದ್ರಿ ಅವರಿಗೆ ಕಾಂಗ್ರೆಸ್‌ ಟಿಕೆಟ್‌ ನೀಡಬೇಕೆಂಬ ಒತ್ತಾಯ ಹಿಂದಿನಿಂದಲೂ ಇತ್ತು. ಆದರೆ, ಖಾದ್ರಿ ಬದಲಾಗಿ, ಯಾಸಿರ್​ ಅಹ್ಮದ್ ಖಾನ್​​ ಪಠಾಣ್ ಅವರನ್ನು ಕಾಂಗ್ರೆಸ್‌ ಕಣಕ್ಕಿಳಿಸಿದೆ. ಕಾಂಗ್ರೆಸ್‌ ನಿರ್ಧಾರದ ವಿರುದ್ಧ ಕಾಂಗ್ರೆಸ್‌ನಲ್ಲಿ ಭಾರೀ ಅಸಮಾಧಾನ ವ್ಯಕ್ತವಾಗಿದೆ. ಖಾದ್ರಿ ಅವರನ್ನು ಕೈ ನಾಯಕರು ಸಮಾಧಾನಪಡಿಸಿದ್ದರೂ, ಅವರ ಬೆಂಬಲಿಗರು ಸಮಾಧಾನಗೊಂಡಿಲ್ಲ. ಅವರಲ್ಲಿ ಆಕ್ರೋಶ ಮುಂದುವರೆದಿದೆ.

ಶಿಗ್ಗಾಂವಿಯಲ್ಲಿ ಪಠಾಣ್ ಅವರಿಗೆ ಹೆಚ್ಚಿನ ಪ್ರಬಲ್ಯತೆ ಇಲ್ಲ. ಬೊಮ್ಮಾಯಿ ಪ್ರಭಾವದ ಎದುರು ಪಠಾಣ್ ಗೆಲ್ಲಲು ಸಾಧ್ಯವಿಲ್ಲ ಎಂಬ ಮಾತುಗಳು ಕ್ಷೇತ್ರದ ಮತದಾರರ ನಡುವೆ ಹರಿದಾಡುತ್ತಿವೆ. ಬಸವರಾಜ ಬೊಮ್ಮಾಯಿ ಅವರಿಗೆ ರಾಜಕೀಯ ನೆಲೆಕೊಟ್ಟ ಶಿಗ್ಗಾಂವಿಯಲ್ಲಿ ಬೊಮ್ಮಾಯಿ ಅವರೂ ಒಂದಷ್ಟು ಕಾಣುವಂತಹ ಕೆಲಸಗಳನ್ನು ಮಾಡಿದ್ದಾರೆ. ಕೆರೆ-ಕಟ್ಟೆಗಳಿಗೆ ನೀರು ತುಂಬಿಸಿದ್ದಾರೆ. ಹಲವು ಗ್ರಾಮಗಳಿಗೆ ಅಗತ್ಯ ಮೂಲ ಸೌಕರ್ಯಗಳನ್ನು ಒದಗಿಸಿದ್ದಾರೆ. ಮಾತ್ರವಲ್ಲದೆ, ಕ್ಷೇತ್ರದಲ್ಲಿ ಮುಸ್ಲಿಂ ಮುಖಂಡರನ್ನೂ ಬೊಮ್ಮಾಯಿ ವಿಶ್ವಾಸದಲ್ಲಿಟ್ಟುಕೊಂಡಿದ್ದಾರೆ.

Advertisements

ಬಿಜೆಪಿಯಲ್ಲಿ ಯಡಿಯೂರಪ್ಪ ಅವರ ಪಾಳಯದಲ್ಲಿದ್ದ ಬೊಮ್ಮಾಯಿ, ಕೋಮುವಾದ, ಕೋಮುದ್ವೇಷಕ್ಕೆ ಹೆಚ್ಚು ಮಣೆ ಹಾಕುವವರಲ್ಲ. ಕೋಮು ಗಲಭೆಗಳನ್ನು ಪ್ರಚೋದಿಸುವವರಲ್ಲ ಎಂಬ ಅಭಿಪ್ರಾಯಗಳು ಮುಸ್ಲಿಮರು ಸೇರಿದಂತೆ ಜನರ ಮನದಲ್ಲಿ ಉಳಿದುಹೋಗಿದೆ. ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದಾಗ, ಇಡೀ ರಾಜ್ಯದಲ್ಲಿಯೇ ಹಿಜಾಬ್ ವಿವಾದವೂ ಸೇರಿದಂತೆ ಕೋಮು ವಿಚಾರಗಳು ಮುನ್ನೆಲೆಗೆ ಬಂದಿದ್ದವು. ಆದರೂ, ಶಿಗ್ಗಾಂವಿಯಲ್ಲಿ ಕೋಮುದ್ವೇಷಕ್ಕೆ ಸಂಬಂಧಿಸಿದ ಘಟನೆಗಳು ಘಟಿಸಲಿಲ್ಲ. ಇದು, ಬೊಮ್ಮಾಯಿ ಬಗ್ಗೆ ಮುಸ್ಲಿಮರು ಒಲವು ಹೊಂದಲು ಕಾರಣವಾಗಿದೆ.

ಆದಾಗ್ಯೂ, ವಕ್ಫ್‌ ಆಸ್ತಿ ವಿಚಾರವಾಗಿ ಶಿಗ್ಗಾಂವಿ ಕ್ಷೇತ್ರವನ್ನೂ ಒಳಗೊಂಡಿರುವ ಹಾವೇರಿ ಜಿಲ್ಲೆಯಲ್ಲಿಯೇ ಇತ್ತೀಚೆಗೆ ಕೋಮು ಗಲಭೆ ನಡೆಯಿತು. ಬೊಮ್ಮಾಯಿಗೆ ಈ ಗಲಭೆ ‘ಬಯಸದೇ ಬಂದ ಭಾಗ್ಯ’ದಂತಾಗಿದೆ. ಕಡಕೋಳದಲ್ಲಿ ನಡೆದ ವಕ್ಫ್‌ ಗಲಭೆಯು ಶಿಗ್ಗಾಂವಿಯಲ್ಲಿ ಹಿಂದುಗಳ ಮತ ಕ್ರೋಡೀಕರಣಕ್ಕೆ ನೆರವಾಗುತ್ತದೆ ಎಂದು ಹೇಳಲಾಗುತ್ತಿದೆ.

2023ರ ವಿಧಾನಸಭಾ ಚುನಾವಣೆಯಲ್ಲಿ ಹಾವೇರಿ ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳ ಪೈಕಿ, ಶಿಗ್ಗಾಂವಿಯಲ್ಲಿ ಬೊಮ್ಮಾಯಿ ಹೊರತುಪಡಿಸಿ, ಬೇರಾವುದೇ ಬಿಜೆಪಿ ಅಭ್ಯರ್ಥಿಗಳು ಗೆಲ್ಲಲಾಗಿಲ್ಲ. ಪಕ್ಷದ ಹೊರತಾಗಿಯೂ ಶಿಗ್ಗಾಂವಿಯಲ್ಲಿ ಬೊಮ್ಮಾಯಿ ಮತ್ತು ಜನರ ನಡುವಿನ ಒಡನಾಟ ಬೊಮ್ಮಾಯಿ ಅವರ ಗೆಲುವಿಗೆ ನೆರವಾಗಿತ್ತು. ಈಗಲೂ, ಬಿಜೆಪಿ ಕಾರಣಕ್ಕೆ ಅಲ್ಲದಿದ್ದರೂ, ಬೊಮ್ಮಾಯಿ ಕಾರಣಕ್ಕೆ ಭರತ್ ಬೊಮ್ಮಾಯಿ ಗೆಲ್ಲಬಹುದು. ಲಿಂಗಾಯತ ಹಾಗೂ ಒಬಿಸಿಗಳ ಮತಗಳು ಸರಾಗವಾಗಿ ಬಿಜೆಪಿಗೆ ಹರಿದುಬರಲಿವೆ. ಜೊತೆಗೆ, ಖಾದ್ರಿ ಅವರಿಗೆ ಟಿಕೆಟ್ ನೀಡದ ಕಾರಣಕ್ಕೆ ಅಸಮಾಧಾನಗೊಂಡಿರುವ ಮುಸ್ಲಿಮರ ಒಂದು ಭಾಗದ ಮತಗಳೂ ಭರತ್ ಬೊಮ್ಮಾಯಿಗೆ ಲಭಿಸುವ ಸಾಧ್ಯತೆಗಳಿವೆ.

ಆದರೆ, ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಮುರುಗೇಶ್ ನಿರಾಣಿಗೂ ಬೊಮ್ಮಾಯಿ ಪುತ್ರನಿಗೆ ಟಿಕೆಟ್ ಕೊಟ್ಟಿರುವುದು ಇಷ್ಟವಿಲ್ಲ. ಭರತ್ ಬೊಮ್ಮಾಯಿ ಸೋಲಬೇಕೆಂದು ನಿರಾಣಿ ಬಯಸಿದ್ದಾರೆ. ಆದರೆ, ಬಹಿರಂಗವಾಗಿ ಅದನ್ನು ತೋರ್ಪಡಿಕೊಳ್ಳುತ್ತಿಲ್ಲ. ಭರತ್ ಪರವಾಗಿ ಪ್ರಚಾರಕ್ಕೂ ಹೋಗಿಲ್ಲ. ಬೆಂಬಲವನ್ನೂ ನೀಡಿಲ್ಲ.

ಇನ್ನು, ಕಾಂಗ್ರೆಸ್‌ನಲ್ಲಿ, ಖಾದ್ರಿ ಅವರಿಗೆ ಟಿಕೆಟ್ ಕೊಟ್ಟಿದ್ದರೆ ಕಾಂಗ್ರೆಸ್‌ ಗೆದ್ದುಬಿಡುತಿತ್ತು ಎಂದೇನೂ ಇಲ್ಲ. ಬದಲಾಗಿ, ಖಾದ್ರಿ ಅವರನ್ನು ಎಂಎಲ್‌ಸಿ ಮಾಡಿ, ವಿನಯ್‌ ಕುಲಕರ್ಣಿ ಅವರ ಪುತ್ರಿ ವೈಶಾಲಿ ಕುಲಕರ್ಣಿ ಅವರಿಗೆ ಕಾಂಗ್ರೆಸ್‌ ಟಿಕೆಟ್ ಕೊಡಬಹುದಿತ್ತು. ಕ್ಷೇತ್ರದಲ್ಲಿ 65,000 ಲಿಂಗಾಯತ ಹಾಗೂ 50,000ಕ್ಕೂ ಹೆಚ್ಚು ಮುಸ್ಲಿಂ ಮತಗಳಿವೆ. ಖಾದ್ರಿ ಅವರು ಎಂಎಲ್‌ಸಿ ಆಗಿದ್ದರೆ ಅವರ ಬೆಂಬಲಿಗರು ಖುಷಿಯಾಗುತ್ತಿದ್ದರು. ಆ ಮತಗಳು ಕಾಂಗ್ರೆಸ್‌ ಬುಟ್ಟಿಯಲ್ಲಿ ಭದ್ರವಾಗಿರುತ್ತಿದ್ದವು. ಜೊತೆಗೆ, ಲಿಂಗಾಯತ ಸಮುದಾಯದವರಾದ ವೈಶಾಲಿ ಅಭ್ಯರ್ಥಿಯಾಗಿದ್ದರೆ ಲಿಂಗಾಯತ ಮತಗಳೂ ಕಾಂಗ್ರೆಸ್‌ ಎಡೆಗೆ ತಿರುಗುತ್ತಿದ್ದವು. ಸಿದ್ದರಾಮಯ್ಯ ಕಾರಣಕ್ಕಾಗಿ ಕುರುಬರೂ ಸೇರಿದಂತೆ ಅಹಿಂದ ಮತಗಳು ಕಾಂಗ್ರೆಸ್‌ಗೆ ಲಾಭ ಮಾಡಿಕೊಡುತ್ತಿದ್ದವು ಎಂದು ಸ್ಥಳೀಯರು ಹೇಳುತ್ತಾರೆ.

ಶಿಗ್ಗಾಂವಿ ಕ್ಷೇತ್ರವು ಜಿಲ್ಲೆಯಲ್ಲಿ ಹಾವೇರಿಯ ಭಾಗವಾಗಿದ್ದರೂ, ರಾಜಕೀಯವಾಗಿ, ಲೋಕಸಭಾ ಕ್ಷೇತ್ರವಾಗಿ ಧಾರವಾಡ ವ್ಯಾಪ್ತಿಯಲ್ಲಿದೆ. ಹೀಗಾಗಿ, ಶಿಗ್ಗಾಂವಿಯಲ್ಲಿ ಹಾಲಿ ಕಾಂಗ್ರೆಸ್‌ ಅಭ್ಯರ್ಥಿ ಪಠಾಣ್ ಅವರಿಗಿಂತ ವಿನಯ್ ಕುಲಕರ್ಣಿ ಅವರ ಪ್ರಾಬಲ್ಯವೇ ಹೆಚ್ಚಿದೆ. ಖಾದ್ರಿ ಅವರನ್ನು ಸಮಾಧಾನಿಸಿ, ವೈಶಾಲಿ ಅವರಿಗೆ ಟಿಕೆಟ್ ಕೊಟ್ಟಿದ್ದರೆ ಕಾಂಗ್ರೆಸ್‌ ನಿರಾಯಾಸವಾಗಿ ವಿಜಯ ಗಳಿಸಬಹುದಿತ್ತು ಎನ್ನುತ್ತಾರೆ ಸ್ಥಳೀಯರು.

ಈ ವರದಿ ಓದಿದ್ದೀರಾ?: ವಕ್ಫ್‌ ವಿವಾದ | ಬೊಮ್ಮಾಯಿ ಅವರೇ ಸತ್ಯ ಒಪ್ಕೊಂಡ ಮೇಲೂ ಸುಳ್ಳು ಬೇಡ!

ಆದರೆ, ಈಗ ಶಿಗ್ಗಾಂವಿ ರಾಜಕೀಯ ಚಿತ್ರಣ ಬದಲಾಗಿದೆ. ಸ್ಥಳೀಯರೂ ಅಲ್ಲದ, ಗೆಲ್ಲುವ ಅಭ್ಯರ್ಥಿಯೂ ಅಲ್ಲದ ಪಠಾಣ್ ಅವರಿಗೆ ಕಾಂಗ್ರೆಸ್‌ ಟಿಕೆಟ್ ಕೊಟ್ಟಿದೆ. ಅವರನ್ನು ಗೆಲ್ಲಿಸುವ ಹೊಣೆ ಮತ್ತು ಚುನಾವಣಾ ಉಸ್ತುವಾರಿಯನ್ನು ಸಚಿವ ಸತೀಶ್ ಜಾರಕಿಹೊಳಿ ಅವರ ಹೆಗಲಿಗೆ ಕಾಂಗ್ರೆಸ್‌ ಹೇರಿದೆ. ಆದರೆ, ಬಂಡಾಯದ ಕಾರಣದಿಂದ ಸತೀಶ್‌ ಅವರಿಗೆ ಸರಿಯಾದ ಬೆಂಬಲ ದೊರೆಯುತ್ತಿಲ್ಲ. ಸ್ಥಳೀಯ ಮುಖಂಡರು ಸಹಕರಿಸದ ಕಾರಣ, ಬೆಳಗಾವಿಯಿಂದ ಕಾರ್ಯಕರ್ತರನ್ನು ಕ್ಷೇತ್ರಕ್ಕೆ ಸತೀಶ್ ಕರೆಸಿಕೊಂಡಿದ್ದಾರೆ. ಪ್ರತಿ ಬೂತ್‌ಗಳಿಗೂ ಇಬ್ಬರು ಕಾರ್ಯಕರ್ತರನ್ನು ನೇಮಿಸಿದ್ದಾರೆ.

ಏನಾದರೂ ಆಗಲಿ, ಕಾಂಗ್ರೆಸ್‌ ಅಭ್ಯರ್ಥಿಯನ್ನು ಕ್ಷೇತ್ರದಲ್ಲಿ ಗೆಲ್ಲಿಸಲೇಬೇಕೆಂದು ಸತೀಶ್‌ ಹಠಕ್ಕೆ ಬಿದ್ದಿದ್ದಾರೆ. ಮನೆ-ಮನೆಗಳ ಮೆಟ್ಟಿಲೇರಿ ಪ್ರಚಾರ ಮಾಡುತ್ತಿದ್ದಾರೆ. ಮಾಡಿಸುತ್ತಿದ್ದಾರೆ. ಅಸಮಾಧಾನಗೊಂಡವರನ್ನೂ ಸಮಾಧಾನಿಸುವ ಪ್ರಯತ್ನ ಮಾಡುತ್ತಿದ್ದಾರೆ. ಎಲ್ಲ ಸಮುದಾಯದವರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಲು ಶತಪ್ರಯತ್ನ ಮಾಡುತ್ತಿದ್ದಾರೆ. ಇನ್ನು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಕುರುಬ ಸಮುದಾಯದ ಸಭೆ ನಡೆಸಿದ್ದಾರೆ. ನನಗಾಗಿ ಕಾಂಗ್ರೆಸ್‌ ಅಭ್ಯರ್ಥಿಗೆ ಮತಹಾಕಿ, ಅಹಿಂದ ಸಂಘಟನೆಯನ್ನು ಭದ್ರಗೊಳಿಸಿ ಎಂದು ಮನವಿ ಮಾಡಿದ್ದಾರೆ.

ಬಿಜೆಪಿಯಲ್ಲಿ ನಿರಾಣಿ ಒಳ ಬಂಡಾಯ, ಸತೀಶ್ ಜಾರಕಿಹೊಳಿ ಅವರ ಹಠದ ಜೊತೆಗೆ, ಸಿದ್ದರಾಮಯ್ಯ ಅವರು ಕ್ಷೇತ್ರದಲ್ಲಿ ಹೆಚ್ಚು ಪ್ರಚಾರ ಮಾಡಿದರೆ, ಕಾಂಗ್ರೆಸ್‌ ಭಾರೀ ಫೈಟ್‌ ಕೊಡಬಹುದು. ಮಾತ್ರವಲ್ಲ, ಕೊನೆ ಕ್ಷಣದಲ್ಲಿ ಹೆಚ್ಚು ಮತಗಳು ಕಾಂಗ್ರೆಸ್‌ ಎಡೆಗೆ ತಿರುಗಿದರೆ, ಕಾಂಗ್ರೆಸ್‌ ಅಭ್ಯರ್ಥಿ ಗೆಲ್ಲಲೂಬಹುದು ಎಂಬ ಅಭಿಪ್ರಾಯಗಳಿವೆ. ಆದರೆ, ಬೊಮ್ಮಾಯಿ ಅವರ ಪುತ್ರನನ್ನು ಸೋಲಿಸಲು ಸ್ವತಃ ಸಿದ್ದರಾಮಯ್ಯ ಅವರಿಗೆ ಇಚ್ಛೆ ಇಲ್ಲ ಎಂಬುದು ಕಾಣಿಸುತ್ತಿದೆ ಎನ್ನುತ್ತಿದ್ದಾರೆ ಸ್ಥಳೀಯ ಮುಖಂಡರು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

1 COMMENT

  1. ಕನ್ನಡ ಸುದ್ದಿ ವಾಹಿನಿಗಳು ಎಲ್ಲಿಗೆ ಬಂದು ನಿಂತಿವೆ.? ಅಲ್ಲಿ ರವಿ ಕೃಷ್ಣಾರೆಡ್ಡಿ ಎಂಬ ಹೋರಾಟಗಾರ 6 ತಿಂಗಳಿನಿಂದ ಮನೆ ಮಠ ಬಿಟ್ಟು ಚುನಾವಣೆ ಪ್ರಚಾರ ಮಾಡುತ್ತಿದ್ದಾರೆ. ಜನ ಕೂಡ ಗಮನಿಸುತ್ತಿದ್ದಾರೆ. ಆದರೆ ನಮ್ಮ ಕನ್ನಡ ಸುದ್ದಿ ವರದಿಗಾರರು ಅವರ ಬಗ್ಗೆ ಎಲ್ಲಿಯೂ ದಾಖಲಿಸುತ್ತಿಲ್ಲ. ವಾಸ್ತವ ಗಮನಿಸದೆ ಸಿನಿಕತನ ದಿಂದ ವರ್ತಿಸುವ ಪತ್ರಕರ್ತರು, ಸುದ್ದಿ ವಾಹಿನಿಗಳು ಬಿಜೆಪಿ-ಕಾಂಗ್ರೆಸ್ ಪಕ್ಷಗಳ ಬೂತ್ ಏಜೆಂಟ್ ಗಳ ರೀತಿ ಆಗಿವೆ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X