ಬೈಕ್‌ನಲ್ಲಿ ಬೆನ್ನತ್ತಿ ಶಿವಸೇನೆ ನಾಯಕನಿಗೆ ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಪಂಜಾಬ್‌ನ ಮೋಗಾದಲ್ಲಿ ನಡೆದಿದೆ. ದಾಳಿಯಲ್ಲಿ ಮೃತಪಟ್ಟವರು ಶಿವಸೇನೆಯ ಮೋಗಾ ಜಿಲ್ಲೆಯ ಜಿಲ್ಲಾಧ್ಯಕ್ಷರು ಎನ್ನಲಾಗಿದೆ. ಈ ದಾಳಿಯಲ್ಲಿ ಓರ್ವ ಬಾಲಕನಿಗೂ ಗಾಯವಾಗಿದೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.
ಗುರುವಾರ ರಾತ್ರಿ ಶಿವಸೇನೆಯ ಮೋಗಾ ಜಿಲ್ಲಾ ಘಟಕದ ಅಧ್ಯಕ್ಷ ಮಂಗತ್ ರೈ ಮಂಘ ಹಾಲು ಖರೀದಿಸುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ. ರಾತ್ರಿ 10 ಗಂಟೆ ಸುಮಾರಿಗೆ ಮೂವರು ಅಪರಿಚಿತರು ಮಂಗತ್ ರೈ ಅವರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ.
ಇದನ್ನು ಓದಿದ್ದೀರಾ? ಬೆಳಗಾವಿ | ಶಿವಸೇನೆ, ಎಂಇಎಸ್, ಮರಾಠಿಗರ ದೌರ್ಜನ್ಯ ಖಂಡಿಸಿ ಕನ್ನಡಿಗರ ಮೌನ ಪ್ರತಿಭಟನೆ
ಮಂಗತ್ ರೈ ಅವರು ಗುಂಡಿನ ದಾಳಿಯಿಂದ ತಪ್ಪಿಸಿಕೊಳ್ಳುವ ಯತ್ನ ಮಾಡಿದಾಗ 12 ವರ್ಷದ ಬಾಲಕನಿಗೆ ಗುಂಡು ತಗುಲಿದೆ. ಮಂಗತ್ ರೈ ಅವರು ಕೂಡಲೇ ಬೈಕ್‌ನಲ್ಲಿ ಆ ಸ್ಥಳದಿಂದ ಹೊರಟಿದ್ದು, ಅಪರಿಚಿತ ದಾಳಿಕೋರರು ಬೆನ್ನಟ್ಟಿದ್ದಾರೆ ಎಂದು ತಿಳಿಸಿದ್ದಾರೆ.
ಬೆನ್ನಟ್ಟಿದ ದುಷ್ಕರ್ಮಿಗಳು ಮಂಗತ್ ರೈ ಅವರ ಮೇಲೆ ಗುಂಡು ಹಾರಿಸಿ ಸ್ಥಳದಿಂದ ಪರಾರಿಯಾಗಿದ್ದಾರೆ. ಪೊಲೀಸರು ಮಂಗತ್ ಅವರನ್ನು ಆಸ್ಪತ್ರೆಗೆ ಕರೆದೊಯ್ದಿದ್ದು, ವೈದ್ಯರು ಮಂಗತ್ ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ.
ಗಾಯಾಳು ಬಾಲಕನನ್ನು ಆರಂಭದಲ್ಲಿ ಮೋಗಾ ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಉತ್ತಮ ಚಿಕಿತ್ಸೆಗಾಗಿ ಮತ್ತೊಂದು ಆಸ್ಪತ್ರೆಗೆ ಕಳುಹಿಸಲಾಗಿದೆ. ಶಿವಸೇನೆ ಇಬ್ಭಾಗವಾಗಿರುವ ಕಾರಣ ಸದ್ಯ ಮಂಗತ್ ಯಾವ ಶಿವಸೇನೆ ಸಂಘಟನೆಯೊಂದಿಗೆ ಸಂಬಂಧ ಹೊಂದಿದ್ದಾರೆ ಎಂಬುದನ್ನು ಪರಿಶೀಲಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಕಾಂಗ್ರೆಸ್ ಅಥವಾ ಎಎಪಿ ಪರ ಶಿವಸೇನೆ ಪ್ರಚಾರ ಮಾಡಲ್ಲ: ಸಂಜಯ್ ರಾವತ್
ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ಬಲಪಂಥೀಯ ಗುಂಪು ವಿಶ್ವ ಹಿಂದೂ ಶಕ್ತಿಯ ರಾಷ್ಟ್ರೀಯ ಅಧ್ಯಕ್ಷ ಜೋಗಿಂದರ್ ಶರ್ಮಾ, “ಕೆಲವು ದುಷ್ಕರ್ಮಿಗಳು ಮಂಗೇಶ್ ಅವರನ್ನು ಗುಂಡಿಕ್ಕಿ ಕೊಂದಿದ್ದಾರೆಂದು ನಮಗೆ ತಿಳಿಯಿತು. ಮಾಹಿತಿ ಬಂದ ತಕ್ಷಣ ನಾವು ಆಸ್ಪತ್ರೆಗೆ ತಲುಪಿದೆವು. ನಮಗೆ ನ್ಯಾಯ ಬೇಕು ಮತ್ತು ಅದಕ್ಕಾಗಿ ನಾವು ಏನು ಬೇಕಾದರೂ ಮಾಡುತ್ತೇವೆ” ಎಂದರು.
ಪಂಜಾಬ್‌ನಲ್ಲಿ ಗುರುವಾರ ರಾತ್ರಿ ಎರಡು ಸ್ಥಳಗಳಲ್ಲಿ ಗುಂಡು ಹಾರಿಸಲಾಗಿದೆ. ಮೂವರು ಮೋಟಾರ್ ಸೈಕಲ್ ಸವಾರರು ರಾತ್ರಿ 9 ಗಂಟೆ ಸುಮಾರಿಗೆ ಬಗಿಯಾನಾ ಬಸ್ತಿಯಲ್ಲಿರುವ ಸಲೂನ್‌ಗೆ ಕ್ಷೌರ ಮಾಡಿಸಲು ಬಂದು ಮಾಲೀಕ ದೇವೇಂದರ್ ಕುಮಾರ್ ಮೇಲೆ ಎರಡು ಬಾರಿ ಗುಂಡು ಹಾರಿಸಿದರು. ಒಂದು ಗುಂಡು ಕುಮಾರ್ ಕಾಲಿಗೆ ತಗುಲಿದ್ದು, ಅವರನ್ನು ಚಿಕಿತ್ಸೆಗಾಗಿ ಮೋಗಾ ಸಿವಿಲ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಅಲ್ಲಿಂದ ಬೇರೆ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ಡಿಎಸ್‌ಪಿ ಸಿಟಿ ರವೀಂದರ್ ಸಿಂಗ್ ತಿಳಿಸಿದ್ದಾರೆ.
