ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರವು ರಚನೆಯಾದ 24 ಗಂಟೆಗಳ ಬಳಿಕ ಎನ್‌ಡಿಎ ಕೂಟದಲ್ಲಿ ಅಸಮಾಧಾನ ಕಂಡುಬಂದಿದೆ. ಏಕನಾಥ್ ಶಿಂದೆ ನೇತೃತ್ವದ ಶಿವಸೇನೆ ಮತ್ತು ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿಗೆ ಸಚಿವ ಸಂಪುಟ ಸ್ಥಾನ ಸಿಗದಿರುವ ಬಗ್ಗೆ ಶಿವಸೇನೆ ಸಂಸದರೊಬ್ಬರು ನಿರಾಶೆ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಇತರ ಎನ್‌ಡಿಎ ಘಟಕಗಳ ಬಗ್ಗೆ ‘ಪಕ್ಷಪಾತ’ ಮಾಡಿದೆ ಎಂದು ಆರೋಪಿಸಿದ್ದಾರೆ.
ಎನ್‌ಡಿಎ ಸರ್ಕಾರದಲ್ಲಿನ ರಾಜ್ಯ ಸಚಿವ ಸ್ಥಾನ ಪಡೆಯುವ ಬಿಜೆಪಿಯ ಪ್ರಸ್ತಾಪವನ್ನು ಶಿವಸೇನೆ ನಿರಾಕರಿಸಿತ್ತು. ಇದಾದ, ಒಂದು ದಿನದ ನಂತರ ಮಾವಲ್‌ನ ಶಿವಸೇನೆ ಸಂಸದ ಶ್ರೀರಂಗ್ ಬಾರ್ನೆ ಅವರು ಬಿಜೆಪಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅದಾಗ್ಯೂ, ಶಿವಸೇನೆ ಮಾತ್ರ ಎನ್‌ಡಿಎ ಸರ್ಕಾರಕ್ಕೆ ತಮ್ಮ ಬೇಷರತ್ ಬೆಂಬಲವನ್ನು ಸೂಚಿಸುವುದಾಗಿ ಹೇಳಿದೆ.
“ಶಿವಸೇನೆಗೆ ಸಚಿವ ಸಂಪುಟದಲ್ಲಿ ಸ್ಥಾನ ಸಿಗುತ್ತದೆ ಎಂದು ನಾವು ನಿರೀಕ್ಷಿಸಿದ್ದೆವು. ಒಬ್ಬ ಸಂಸದರನ್ನು ಹೊಂದಿರುವ ಪಕ್ಷಕ್ಕೆ ಸ್ಥಾನ ನೀಡಲಾಗಿದೆ. ಆದರೆ, ನಾವು ಅಧಿಕ ಕ್ಷೇತ್ರದಲ್ಲಿ ಗೆಲುವು ಕಂಡರೂ ನಮಗೆ ಸಚಿವ ಸ್ಥಾನ ನೀಡಿಲ್ಲ” ಎಂದಿದ್ದಾರೆ.
ಇದನ್ನು ಓದಿದ್ದೀರಾ? ಸಿಗದ ಸಚಿವ ಸ್ಥಾನ: ಮೋದಿ ನೇತೃತ್ವದ ಮೊದಲ ಮೈತ್ರಿ ಸರ್ಕಾರದಲ್ಲಿ ಅಜಿತ್ ಪವಾರ್ ಬಣಕ್ಕೆ ಹಿನ್ನಡೆ
15 ಸ್ಥಾನಗಳಲ್ಲಿ ಸ್ಪರ್ಧಿಸಿದ್ದ ಶಿವಸೇನೆ ಏಳು ಸ್ಥಾನಗಳಲ್ಲಿ ಗೆಲುವು ಸಾಧಿಸಿದರೆ, ಐದು ಸ್ಥಾನಗಳಲ್ಲಿ ಸ್ಪರ್ಧಿಸಿದ್ದ ಎನ್‌ಸಿಪಿ ಒಂದರಲ್ಲಿ ಮಾತ್ರ ಗೆಲುವು ಸಾಧಿಸಿದೆ. ಶಿವಸೇನೆಯ (ಯುಬಿಟಿ) ಸಂಜೋಗ್ ವಾಘೆರೆ ಪಾಟೀಲ್ ಅವರನ್ನು ಸೋಲಿಸುವ ಮೂಲಕ ಮೂರನೇ ಬಾರಿಗೆ ಮಾವಲ್ ಸ್ಥಾನವನ್ನು ಉಳಿಸಿಕೊಂಡ ಬಾರ್ನೆ, “ಲೋಕಸಭೆ ಚುನಾವಣೆಯಲ್ಲಿ ಶಿವಸೇನೆ ಏಳು ಸ್ಥಾನಗಳನ್ನು ಗೆದ್ದಿದ್ದರೂ, ಪಕ್ಷಕ್ಕೆ ರಾಜ್ಯ ಸಚಿವ ಸ್ಥಾನ ಮಾತ್ರ ನೀಡಲಾಗಿದೆ” ಎಂದು ಹೇಳಿದ್ದಾರೆ.
“ಹೆಚ್ ಡಿ ಕುಮಾರಸ್ವಾಮಿ ಅವರ ಪಕ್ಷ ಎರಡು ಸ್ಥಾನ ಮತ್ತು ಜಿತನ್ ರಾಮ್ ಮಾಂಝಿ ಅವರ ಪಕ್ಷ ಒಂದು ಸ್ಥಾನವನ್ನು ಗೆದ್ದಿದ್ದಾರೆ. ಚಿರಾಗ್ ಪಾಸ್ವಾನ್ ಅವರ ಪಕ್ಷವು ಐದು ಸ್ಥಾನಗಳನ್ನು ಗೆದ್ದಿದೆ. ಅವರೆಲ್ಲರಿಗೂ ಸಚಿವ ಸ್ಥಾನವನ್ನು ನೀಡಲಾಗಿದೆ. ಆದರೆ, ಶಿವಸೇನೆಗೆ ಕೇವಲ ಒಂದು ಸಚಿವ ಸ್ಥಾನ ದೊರೆತಿಲ್ಲ. ಶಿವಸೇನೆ ವಿರುದ್ಧ ಪಕ್ಷಪಾತವಿದೆ ಎಂದು ನನಗೆ ವೈಯಕ್ತಿಕವಾಗಿ ಅನಿಸುತ್ತಿದೆ. ಮುಂದಿನ ಮೂರು ತಿಂಗಳಲ್ಲಿ ನಾವು ಒಟ್ಟಾಗಿ ವಿಧಾನಸಭಾ ಚುನಾವಣೆಯನ್ನು ಎದುರಿಸುತ್ತೇವೆ” ಎಂದು ಪ್ರಸ್ತಾಪಿಸಿದರು.
Maharashtra Breaking
Shivsena Shinde MP Shrirang Barne has now come out against protest in NDA Govt formation.
Shinde Shivsena talks about injustice in cabinet in which they have been offered only 1 minister of state while they have 7 MPs. While, Kumaraswamy with 2 MPs have… pic.twitter.com/ovy4uVWaRa
— Anshuman Sail Nehru (@AnshumanSail) June 10, 2024
ಸರ್ಕಾರದಲ್ಲಿ ರಾಜ್ಯ (ಸ್ವತಂತ್ರ) ಸಚಿವ ಹುದ್ದೆಯನ್ನು ಸ್ವೀಕರಿಸಲು ನಿರಾಕರಿಸಿದ ಶಿವಸೇನೆ, ಸಚಿವ ಸ್ಥಾನವನ್ನು ನಿರೀಕ್ಷಿಸುವುದಾಗಿ ಹೇಳಿತ್ತು. ಆದರೆ, “ಮೋದಿ ನೇತೃತ್ವದ ಸರ್ಕಾರಕ್ಕೆ ತನ್ನ ಬೆಂಬಲ ಬೇಷರತ್ತಾಗಿದೆ ಮತ್ತು ಯಾವುದೇ ಸಚಿವ ಹುದ್ದೆ ಅಥವಾ ಖಾತೆಗಳ ವಿಚಾರದಲ್ಲಿ ಚೌಕಾಶಿ ಮಾಡುವುದಿಲ್ಲ” ಎಂದು ಶಿವಸೇನೆ ಸ್ಪಷ್ಟಪಡಿಸಿದೆ.
ಇದನ್ನು ಓದಿದ್ದೀರಾ? ಶಿವಸೇನೆ, ಎನ್‌ಸಿಪಿ ನಾಯಕರ ಮೇಲೆ ಇಡಿ ಕಣ್ಣು; ಉದ್ಧವ್ ಠಾಕ್ರೆ ಪಕ್ಷದಿಂದ ಎನ್‌ಡಿಎಗೆ ಜಂಪ್!
ಈ ಬಗ್ಗೆ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ಪ್ರತಿಕ್ರಿಯೆ ನೀಡಿದ ಏಕನಾಥ್ ಶಿಂದೆ ಪುತ್ರ ಶ್ರೀಕಾಂತ್ ಶಿಂದೆ, “ನಾವು ಸರ್ಕಾರವನ್ನು ಬೇಷರತ್ತಾಗಿ ಬೆಂಬಲಿಸುತ್ತೇವೆ ಎಂದು ನಾವು ಈಗಾಗಲೇ ಸ್ಪಷ್ಟಪಡಿಸಿದ್ದೇವೆ. ಇಲ್ಲಿ ಚೌಕಾಸಿಯೇ ಇಲ್ಲ. ನಮ್ಮದು ಸೈದ್ಧಾಂತಿಕ ಒಕ್ಕೂಟವಾಗಿದ್ದು, ಪ್ರಧಾನಿ ಮೋದಿ ಅವರು ಕಳೆದ 10 ವರ್ಷಗಳಿಂದ ರಾಷ್ಟ್ರ ನಿರ್ಮಾಣದ ಉದ್ದೇಶವನ್ನು ಮುಂದುವರಿಸಬೇಕೆಂದು ನಾವು ಬಯಸುತ್ತೇವೆ” ಎಂದು ತಿಳಿಸಿದ್ದಾರೆ.
ವಿಪಕ್ಷಗಳ ಟೀಕೆ, ವ್ಯಂಗ್ಯ
ಶಿಂದೆ ಬಣ ಮತ್ತು ಅಜಿತ್ ಬಣಕ್ಕೆ ಸಚಿವ ಸ್ಥಾನ ಲಭ್ಯವಾಗದಿರುವ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ಶಿವಸೇನೆ (ಉದ್ಧವ್ ಠಾಕ್ರೆ ಬಣ) ನಾಯಕ ಸಂಜಯ್ ರಾವತ್, “ನೀವು ಇನ್ನೊಬ್ಬರ ಗುಲಾಮರಾಗಲು ನಿರ್ಧರಿಸಿದಾಗ ನೀವು ಪಡೆಯುವುದು ಇದನ್ನೇ” ಎಂದು ಹೇಳಿದ್ದಾರೆ.
ಇನ್ನು ಕಾಂಗ್ರೆಸ್ ನಾಯಕ ವಿಜಯ್ ವಡೆತ್ತಿವಾರ್, “ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ರಾಜ್ಯ ಸಚಿವ ಸ್ಥಾನವನ್ನು ಪಡೆಯದಿದ್ದರೆ ಮುಂದೆ ಸಚಿವ ಸ್ಥಾನವನ್ನು ಮರೆತು ಬಿಡಬೇಕಷ್ಟೆ. ಬಿಜೆಪಿಯು ತನ್ನ ಮಿತ್ರಪಕ್ಷಗಳಿಗೆ ಯೂಸ್ ಅಂಡ್ ಥ್ರೋ ನೀತಿಯನ್ನು ಹೊಂದಿದೆ ಎಂಬುದನ್ನು ಅಜಿತ್ ಪವಾರ್ ತಡವಾಗಿಯಾದರೂ ಅರಿತುಕೊಂಡಿರಬೇಕು” ಎಂದು ವ್ಯಂಗ್ಯವಾಡಿದ್ದಾರೆ.