ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಆಕ್ಷೇಪಾರ್ಹ ಲೇಖನ ಪ್ರಕಟಿಸಿದ್ದಕ್ಕೆ ಶಿವಸೇನೆಯ ಉದ್ದವ್ ಠಾಕ್ರೆ ಬಣದ ನಾಯಕ, ಸಂಸದ ಸಂಜಯ್ ರಾವತ್ ವಿರುದ್ಧ ಮಹಾರಾಷ್ಟ್ರದಲ್ಲಿ ದೇಶದ್ರೋಹದ ಪ್ರಕರಣ ದಾಖಲಾಗಿದೆ.
ಪಕ್ಷದ ಮುಖವಾಣಿ ‘ಸಾಮ್ನಾ’ದಲ್ಲಿ ಡಿ.11ರಂದು ಪ್ರಕಟವಾದ ಲೇಖನವು ದೂರುದ್ದೇಶದಿಂದ ಕೂಡಿದೆ. ಹಾಗಾಗಿ ಸಂಸದ ಹಾಗೂ ‘ಸಾಮ್ನಾ’ದ ಕಾರ್ಯನಿರ್ವಾಹಕ ಸಂಪಾದಕರಾದ ಸಂಜಯ್ ರಾವತ್ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ದೂರಿ ಬಿಜೆಪಿ ಯವತ್ಮಾಲ್ ಸಂಚಾಲಕ ನಿತಿನ್ ಭೂತಾಡ್ ಪೊಲೀಸರಿಗೆ ದೂರು ನೀಡಿದ್ದರು.
“ಉಮರಖೇಡ್ ಪೊಲೀಸ್ ಠಾಣೆಯಲ್ಲಿ ಸೋಮವಾರ ಪ್ರಕರಣ ದಾಖಲಾಗಿದ್ದು, ದೂರಿನ ಪ್ರಕಾರ ನಾವು ಪ್ರಕರಣವನ್ನು ದಾಖಲಿಸಿಕೊಂಡಿದ್ದೇವೆ ಮತ್ತು ಅದರ ಬಗ್ಗೆ ತನಿಖೆ ನಡೆಸುತ್ತೇವೆ” ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ರಾವತ್ ಅವರು ಮೋದಿ ಮತ್ತು ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ಆಗಾಗ್ಗೆ ಸಾಮ್ನಾದಲ್ಲಿ ಟೀಕೆ ಮಾಡುತ್ತಲೇ ಇರುತ್ತಾರೆ. ಆದರೆ ಡಿ.11 ರಂದು ಮಧ್ಯಪ್ರದೇಶ ಫಲಿತಾಂಶಕ್ಕೆ ಸಂಬಂಧಿಸಿದಂತೆ ಲೇಖನ ಪ್ರಕಟವಾಗಿತ್ತು.
ತಮ್ಮ ‘ರೋಖ್‌ಥೋಕ್’ ಅಂಕಣದಲ್ಲಿ, “ತವರು ರಾಜ್ಯವಾದ ಮಧ್ಯಪ್ರದೇಶದಲ್ಲಿ ಶಿವರಾಜ್ ಸಿಂಗ್ ಅವರನ್ನು ಬಿಜೆಪಿ ಹೈಕಮಾಂಡ್ ಅವಮಾನಿಸಿದೆ. ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರ ಗುರಿ ಕಾಂಗ್ರೆಸ್ ಅನ್ನು ಸೋಲಿಸುವುದು ಅಲ್ಲ, ಬದಲಾಗಿ ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ಸಂಪೂರ್ಣವಾಗಿ ತೊಡೆದು ಹಾಕುವುದು” ಎಂದು ಬರೆದಿದ್ದರು.
Nagpur, Maharashtra: Shiv Sena (UBT) MP Sanjay Raut on a case registered against him for objectionable writeup against PM in ‘Saamana’; says, “We have respect for PM Narendra Modi…Amit Shah made remarks on Former PM Jawaharlal Nehru a few days earlier, will a case get… pic.twitter.com/hfYGIwsRR5
— ANI (@ANI) December 12, 2023
ಈ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ವಿರುದ್ಧ ಆಕ್ಷೇಪಾರ್ಹ ಲೇಖನವನ್ನು ಬರೆದಿದ್ದಾರೆ ಎಂದು ಭೂತಾಡ್ ಅವರು ದೂರಿನಲ್ಲಿ ಆರೋಪಿಸಿದ್ದಾರೆ. ರಾವತ್ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್ 153 (ಎ), 505 (2) ಮತ್ತು 124 (ಎ) ಅಡಿಯಲ್ಲಿ ಉಮರಖೇಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಸೆಕ್ಷನ್ಗಳು ವಿವಿಧ ಗುಂಪುಗಳು ಮತ್ತು ಇತರ ಅಪರಾಧಗಳ ನಡುವೆ ದ್ವೇಷವನ್ನು ಉತ್ತೇಜಿಸುತ್ತದೆ ಎಂಬುದನ್ನು ಹೇಳುತ್ತವೆ.
ತನ್ನ ವಿರುದ್ಧ ದಾಖಲಾಗಿರುವ ದೇಶದ್ರೋಹ ಪ್ರಕರಣದ ಕುರಿತು ಪ್ರತಿಕ್ರಿಯಿಸಿರುವ ಸಂಸದ ರಾವತ್, “ನಮಗೆ ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಗೌರವವಿದೆ. ಕೆಲವು ದಿನಗಳ ಹಿಂದೆ ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಅವರ ವಿರುದ್ಧ ಅಮಿತ್ ಶಾ ಹೇಳಿಕೆ ನೀಡಿದ್ದರು. ಅವರ ವಿರುದ್ಧ ಪ್ರಕರಣ ದಾಖಲಾಗುತ್ತದೆಯೇ? ಈ ದೇಶದಲ್ಲಿ ಪ್ರಜಾಪ್ರಭುತ್ವವಿದೆ ಮತ್ತು ಅನೇಕ ರಾಜಕಾರಣಿಗಳು ಹೇಳಿಕೆಗಳನ್ನು ನೀಡುತ್ತಾರೆ. ಜನರು ಬಯಸಿದ್ದರೆ ಅದರ ವಿರುದ್ಧವೂ ಪ್ರಕರಣಗಳನ್ನು ದಾಖಲಿಸಬಹುದಿತ್ತು. ಆದರೆ, ನಾವು ಮಾಡಿಲ್ಲ. ಈಗಿನ ಬೆಳವಣಿಗೆ ಗಮನಿಸುವಾಗ ತುರ್ತು ಪರಿಸ್ಥಿತಿಯ ವಿರುದ್ಧ ಹೋರಾಡಿದ್ದೇವೆ ಎಂದು ಹೇಳುವ ಹಕ್ಕು ಬಿಜೆಪಿಯವರಿಗಿಲ್ಲ ಎಂದು ನನಗಿಸುತ್ತಿದೆ” ಎಂದು ಬಿಜೆಪಿಯ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.