ಶಿವಕುಮಾರ್ ಅವರ ಇತ್ತೀಚಿನ ಮಾನಗೇಡಿನ ಕೆಲಸಗಳಿಗೆ ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಕಡಿವಾಣ ಹಾಕುವಂತೆ ಕಾಣುತ್ತಿಲ್ಲ. ಆದ್ದರಿಂದ, ಈಗ ಆ ಮೇಲಿನವರಿಗೂ, ಶಿವಕುಮಾರ್ ಅವರಿಗೂ ನಾಡಿನ ಜನತೆಯೇ ಕಟುವಾದ ಛೀಮಾರಿ ಹಾಕಬೇಕಾಗಿದೆ.
ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, ದೇಶದ ಸಂವಿಧಾನವು ತಮಗೆ ಕೊಟ್ಟ ಪವಿತ್ರ ಕರ್ತವ್ಯವೆಂದರೆ ಕರ್ನಾಟಕ ಜನತೆ ಮತ್ತು ಸರಕಾರದ ಹಣವನ್ನು ಪೋಲು, ಹಾಳುಮಾಡುವುದು, ನಾಡಿನ ನೆಲ, ಜಲ, ಜನಜೀವನದ ಸರ್ವನಾಶಮಾಡುವುದು ಎಂದು ಭಾವಿಸಿದಂತಿದೆ.
ಸಾಂಸ್ಕೃತಿಕ ಅಕಾಡೆಮಿಗಳ ಅಧ್ಯಕ್ಷರ ಸಭೆಯನ್ನು ತಮ್ಮ ಪಕ್ಷದ ಕಚೇರಿಯಲ್ಲಿ ನಡೆಯಿಸಿ, ಆ ನಡೆಯನ್ನು ಭಂಡತನದಿಂದ ಸಮರ್ಥಿಸಿಕೊಂಡದ್ದಾಯಿತು; ಮೇಕೆದಾಟು ಅಣೆಕಟ್ಟು ಯೋಜನೆಯಂಥ ಅನಗತ್ಯ ಮತ್ತು ಪರಿಸರವಿನಾಶೀ ಉದ್ಯಮದ ಹಂಚಿಕೆಹಾಕಿ, ಅದರ ಸಲುವಾಗಿ ಪಾದಯಾತ್ರೆ ನಡೆಸಿದ್ದಾಯಿತು; ಮುಖ್ಯಮಂತ್ರಿ ಹುದ್ದೆಗಾಗಿ ಬಹಿರಂಗ ಸಭೆಯಲ್ಲಿ ಮಠಾಧೀಶರಿಂದ ಶಿಫಾರಸು, ಒತ್ತಾಯ ಬರುವಂತೆ ಮಾಡಿದ್ದಾಯಿತು; ವಾರಣಾಸಿಯ ಗಂಗಾ ಆರತಿ ಮಾದರಿಯಲ್ಲಿ ಕಾವೇರಿ ಆರತಿ ನಡೆಸಲು ಯೋಜನೆ ರೂಪಿಸಿ, ಕನ್ನಂಬಾಡಿ ಕಟ್ಟೆಯ ಪರಿಸರದ ಸರ್ವನಾಶವಾದರೂ ಸರಿಯೇ ಆ ಯೋಜನೆಗಾಗಿ 92 ಕೋಟಿ ರೂಪಾಯಿ ಖರ್ಚು ಮಾಡಲೇಬೇಕೆಂದು ಹಂಚಿಕೆಹಾಕಿ, ಅದನ್ನು ನಡೆಸುವತ್ತ ಕೆಲಸ ಶುರುಮಾಡಿರುವುದೂ ಆಯಿತು.

ಅಷ್ಟರಮೇಲೆ, ಕೃಷ್ಣರಾಜಸಾಗರ ಅಣೆಕಟ್ಟಿನ ಬಳಿ ದೊಡ್ಡದೊಂದು ಮೋಜುಮಸ್ತಿಯ ಅಮ್ಯೂಸ್ಮೆಂಟ್ ಪಾರ್ಕಿನ ಸ್ಥಾಪನೆಗಾಗಿ ರಾಜ್ಯ ಸರಕಾರದ ಸಂಪುಟ ಸಭೆಯಲ್ಲಿ ಜುಲುಮೆಮಾಡಿ ಮಂಜೂರಾತಿ ಪಡೆದದ್ದಾಯಿತು; ಅಲ್ಲಿ ಮತ್ತು ಜೋಗ ಜಲಪಾತದ ಬಳಿ ಒಂದೊಂದು ಪಂಚತಾರಾ ಹೋಟೆಲಿನ ಕಟ್ಟೋಣವಾಗಬೇಕು ಎಂಬ ಹೊಳಹನ್ನು ತೇಲಿಬಿಟ್ಟದ್ದಾಯಿತು. ಇದು, ಶಿವಕುಮಾರ್ ಅವರು ಮಾಡುತ್ತಿರುವ ಜನದ್ರೋಹದ ಒಂದು ಭಾಗ.
ಇನ್ನು, ಬೆಂಗಳೂರನ್ನು ಗುರಿಯಾಗಿಸಿಕೊಳ್ಳುವ ದಂಧೆ ಮತ್ತೊಂದು ಭಾಗ. ರಾಜಧಾನಿಯ ರಸ್ತೆಗಳ ವೈಟ್ ಟಾಪಿಂಗ್ ಮಾಡೋಣ; ಹೆಮ್ಮಿಗೆಪುರದ ಬಳಿಯೋ ಮತ್ತೊಂದು ಜಾಗದಲ್ಲೋ ಅತ್ಯತಿ ಶ್ರೀಮಂತರ ವಾಸ, ಮೋಜು ಹಾಗೂ ಕಚೇರಿಗಳಿಗಾಗಿ ಬಾನಚುಚ್ಚುವ ಸ್ಕೈಡೆಕ್ ಕಟ್ಟಡ ಮಾಡೋಣ; ಹೆಬ್ಬಾಳದಿಂದ ಕೇಂದ್ರೀಯ ಸಿಲ್ಕ್ ಬೋರ್ಡ್‍ವರೆಗೆ 18 ಕಿಮೀ ಉದ್ದದ ಸುರಂಗ ಮಾರ್ಗವನ್ನು ಕೊರೆಯೋಣ; ಆಮೇಲೆ, ಬಹುಶಃ ಬೇರೆಡೆಗಳಲ್ಲೂ ಆ ಥರದ ಇನ್ನಷ್ಟು ಮಾರ್ಗಕ್ಕೆ ಕನ್ನಹಾಕೋಣ; ಊರಿಗೆ ಮತ್ತೊಂದು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮಾಡೋಣ; ರಾಮನಗರವನ್ನು ದಕ್ಷಿಣ ಬೆಂಗಳೂರು ಜಿಲ್ಲೆ ಮಾಡಿಬಿಡೋಣ – ಗುತ್ತಿಗೆದಾರಿಕೆಯ ಇಂಥ ಹಂಚಿಕೆಗಳದ್ದು ಅವರು ಮಾಡುತ್ತಿರುವ ಅವಾಂತರದ ಮತ್ತೊಂದು ಭಾಗ.
ಇದನ್ನು ಓದಿದ್ದೀರಾ?: ಕೃಷ್ಣ ಬೈರೇಗೌಡರ ‘ರೇಟ್ ಬೋರ್ಡ್’ ಕೂಗು: ಸೋಮಾರಿ ಸಚಿವರಿಗೆ ಪ್ರೇರಣೆ ನೀಡುವುದೇ?
ಸಾಗುವಳಿಯ ಬದುಕು ದುರ್ಭರವಾಗಿ, ಕಳೆದ ಎರಡು ವರ್ಷದಲ್ಲಿ ರಾಜ್ಯದ 1886 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ (ವಾರ್ತಾಭಾರತಿ 31 ಮೇ 2025). ನಾಡಿನ ನೂರಾರು ಕೆರೆಗಳು ನಂಜು ತುಂಬಿ ಸತ್ತಿವೆ, ಸಾಯುತ್ತಿವೆ. ಮಂಡ್ಯ ಜಿಲ್ಲೆಯಲ್ಲಿ ಕಬ್ಬಿನ ಗದ್ದೆಗಳು ಬೇಡುವ ಅತಿಯಾದ ನೀರಾವರಿಯಿಂದಾಗಿ ಭೂಮಿ ಸವುಳಾಗಿದೆ; ಅದರಿಂದಾಗಿಯೂ ರೈತರು ವಿಷ ಕುಡಿದು ಸಾಯುತ್ತಿದ್ದಾರೆ. ನಮ್ಮ ಹಳ್ಳಿಗಳಲ್ಲಿ ಬಡವರ ಮಕ್ಕಳ ಶಾಲೆಗಳು ಮೂಲಭೂತ ಸೌಕರ್ಯಗಳಿಲ್ಲದೆ ಸೊರಗುತ್ತಿವೆ; ಅಲ್ಲೆಲ್ಲ ಆಸ್ಪತ್ರೆಗಳು ಮತ್ತು ವೈದ್ಯರ ದೊಡ್ಡ ಕೊರತೆಯಿದೆ. ಕೊಡಗು ಜಿಲ್ಲೆಯಲ್ಲಿ ಪ್ರವಾಸೋದ್ಯಮದ ವಿಪರೀತ ಲಾಲಸೆಯಿಂದಾಗಿ ಕಟ್ಟಿದ ಹೋಮ್‍ಸ್ಟೇ-ರಿಸಾರ್ಟು-ಹೋಟೆಲು ಹಾಗೂ ರಸ್ತೆಗಳಿಂದಾಗಿ ಗುಡ್ಡಗಳು ಕುಸಿದು, ಜನಜೀವನ, ನಿಸರ್ಗಜೀವನ – ಎರಡೂ ಮೂರಾಬಟ್ಟೆಯಾಗುತ್ತಿವೆ. ಗ್ಯಾರಂಟಿಗಳೆಂದು ನಾಡಿನ ಜನತೆಗೆ ತಾನು ಕೊಟ್ಟ ಮಾತನ್ನು ಉಳಿಸಿಕೊಳ್ಳಲು ಹಣ ಸಾಲದೆ ರಾಜ್ಯ ಸರಕಾರ ಪರದಾಡುತ್ತಿದೆ.

ಆ ಯಾವುದರ ನೆದರೇ ಇಲ್ಲದವರಂತೆ ಇದ್ದಾರೆ ಶಿವಕುಮಾರ್ ಅವರು. ದಿನ ಕಳೆದಂತೆ, ಅವರ ಅಟಾಟೋಪ ಇನ್ನೂಯಿನ್ನೂ ವಿಪರೀತವಾಗುತ್ತಿದೆ. ಶಿವಕುಮಾರರ ಈ ಆವುಟಗಳಿಂದಾಗಿ, ದೇಶದ ಒಕ್ಕೂಟ ಸರಕಾರದ ಪ್ರಧಾನಿ ಮೋದಿ ಹಾಗೂ ಉತ್ತರ ಪ್ರದೇಶ ಸರಕಾರದ ಮುಖ್ಯಮಂತ್ರಿ ಆದಿತ್ಯನಾಥರ ಅನೃತ-ಅಧರ್ಮಯುತ ನಡೆನುಡಿಗಳ ವಿರುದ್ಧ ನಿಲ್ಲಬೇಕಾದ ನಮ್ಮ ರಾಜ್ಯ ಸರಕಾರವೇ ಇದೀಗ ಆ ಇಬ್ಬರ ದುಬಾರಿ ಬಡಿವಾರಗಳ ಅನುಕರಣೆ ಮಾಡುತ್ತಿದೆ; ಅವರ ಆ ನಡೆಗಳನ್ನು ನಮ್ಮಲ್ಲಿಯೂ ನೆಲೆಯೂರಿಸಲೆಂದು ಹೊರಟಿದೆ. ಶಿವಕುಮಾರ್ ಅವರ ಕಲ್ಪನೆಯ ಆರತಿ ಮತ್ತು ಉತ್ಸವಗಳ ಯೋಜನೆ ನನಸಾದರೆ, ಪ್ರವಾಸೋದ್ಯಮದ ಭರಾಟೆ ಇನ್ನಷ್ಟು ಹೆಚ್ಚಾಗಿ, ನೆಲನೀರುಗಳು ಇನ್ನಷ್ಟು ಹಾಳಾಗುತ್ತವೆ; ಜನಜೀವನ ಇನ್ನಷ್ಟು ಕದಡಿಹೋಗುತ್ತದೆ.
ಸೌಜನ್ಯ ಎಂಬ ಹೆಣ್ಣುಮಗಳ ಭೀಕರ ಅತ್ಯಾಚಾರ ನಡೆದು, ಆಕೆಯ ಕೊಲೆಯಾಗಿ ಇಂದಿಗೆ ಹದಿಮೂರು ವರ್ಷಗಳಾಗಿವೆ. ಹೆಚ್ಚುಕಮ್ಮಿ ಮುಚ್ಚಿಹೋಗಿದ್ದ ಆ ಪಾತಕದ ಪ್ರಕರಣ ಮೊನ್ನೆ ಯುವಕನೊಬ್ಬ ಮಾತನಾಡಿ ಹಂಚಿಕೊಂಡ ವಿಡಿಯೋದಿಂದಾಗಿ ಮತ್ತೆ ಜನರ ನೆನಪಿನಿಂದ ಎದ್ದುಬಂದಿದೆ. ಜನ ತಲ್ಲಣಿಸಿದ್ದಾರೆ; ತಪ್ಪಿತಸ್ಥರು ಯಾರು ಅನ್ನುವುದು ಸ್ಪಷ್ಟವಾಗಿದ್ದರೂ ಸರಕಾರೀ ಯಂತ್ರವು ತಟಸ್ಥವಾಗಿರುವುದರ ವಿರುದ್ಧ ಪ್ರತಿಭಟಿಸಿ, ನ್ಯಾಯ ಕೇಳುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ಶಿವಕುಮಾರ್ ಅವರು ಮತ್ತು ಸಿದ್ದರಾಮಯ್ಯನವರು, ಕೆಲವೊಮ್ಮೆ ಇಬ್ಬರೂ ಜೊತೆಗೂಡಿ, ಕೆಲವೊಮ್ಮೆ ಒಬ್ಬರೇ, ಪ್ರತ್ಯೇಕವಾಗಿ, ‘ಖಾವಂದರು, ಧರ್ಮಾಧಿಕಾರಿಗಳು’ ಎಂದು ಕರೆಯಿಸಿಕೊಳ್ಳುವವರ ದರ್ಶನಭಾಗ್ಯ ಪಡೆದು, ಅವರಿಗೆ ತಮ್ಮ ಸೇವೆಯ ಭರವಸೆ ನೀಡಿ ಬಂದಿದ್ದಾರೆ.

ಇದೆಲ್ಲವುದರ ಜೊತೆ, ತೀರ ಈಚೆಗೆ, ಜೂನ್ 4ರಂದು, ಐಪಿಎಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಗೆದ್ದ ಆರ್‍ಸಿಬಿ ತಂಡವನ್ನು ಮಂತ್ರಿಮಂಡಲದ ಈ ಮುಖ್ಯಸ್ಥರಿಬ್ಬರೂ ವಿಧಾನಸೌಧದ ಮೆಟ್ಟಿಲಮೇಲೆ ಸನ್ಮಾನಿಸಿದ್ದನ್ನೂ ಆ ಬಳಿಕ ಚಿನ್ನಸ್ವಾಮಿ ಕ್ರಿಕೆಟ್ ಮೈದಾನದ ಹೊರಗೆ ದೊಂಬಿಯ ಕಾಲ್ತುಳಿತದಿಂದಾಗಿ ಆದ ಸಾವುನೋವನ್ನೂ ನೆನೆಯಬೇಕು. ಐಪಿಎಲ್ ಪಂದ್ಯಾವಳಿ ಕರ್ನಾಟಕ ರಾಜ್ಯಕ್ಕಾಗಲಿ, ಇಲ್ಲಿನ ಸರಕಾರಕ್ಕಾಗಲಿ ಯಾವುದೇ ರೀತಿಯಲ್ಲಿಯೂ ಸಂಬಂಧಿಸದ ವ್ಯಾಪಾರ, ಜೂಜಿನ ಒಂದು ದಂಧೆ; ಅದು ಆಟದ ಸರಣಿ ಆಗಿರುವುದು ಹೆಸರಿಗೆ ಮಾತ್ರ. ಅದರಲ್ಲಿನ ತಂಡವೊಂದು ಗಳಿಸಿದ ಜಯದಿಂದ ನಡೆದ ಅನುಚಿತ ಸಂಭ್ರಮಾಚರಣೆ ಮತ್ತು ದುರಂತ – ಎರಡಕ್ಕೂ ಕಾರಣವಾದ ಸಿನಿಕ ವಿಲಾಸೀತನದ ಪ್ರವೃತ್ತಿ ಮುಖ್ಯವಾಗಿ ಯಾರದ್ದು ಎಂದು ಬಿಡಿಸಿಹೇಳಬೇಕಿಲ್ಲ.
ಶಿವಕುಮಾರ್ ಅವರ ಇಂಥ ಮಾನಗೇಡಿನ ಕೆಲಸಗಳಿಗೆ ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಕಡಿವಾಣ ಹಾಕುವಂತೆ ಕಾಣುತ್ತಿಲ್ಲ. ಆದ್ದರಿಂದ, ಈಗ ಆ ಮೇಲಿನವರಿಗೂ, ಶಿವಕುಮಾರ್ ಅವರಿಗೂ ನಾಡಿನ ಜನತೆಯೇ ಕಟುವಾದ ಛೀಮಾರಿ ಹಾಕಬೇಕಾಗಿದೆ.
ಕಡೆಯ ಕೆಲವು ಮಾತು.
ಕಳೆದ ವರ್ಷ, 2024ರ ಜುಲೈ ತಿಂಗಳಲ್ಲಿ ನಡೆದ ಉದ್ಯಮಿ ಮುಖೇಶ್ ಅಂಬಾನಿಯವರ ಕಿರಿಯ ಮಗನ ಮದುವೆಗೆ ಭೇಟಿನೀಡಿದ ಬೆರಳೆಣಿಕೆಯಷ್ಟೇ ಜನ ಕಾಂಗ್ರೆಸ್ಸಿಗರಲ್ಲಿ ಶಿವಕುಮಾರ್ ಕೂಡ ಒಬ್ಬರಾಗಿದ್ದರು. ಅದರ ಹಿಂದಿನ ತಿಂಗಳು ಬೆಂಗಳೂರಿನಲ್ಲಿರುವ ಇಸ್ರಯೇಲ್ ಕಾನ್ಸುಲೇಟ್ ಜನರಲ್ ಕಚೇರಿಯ ಮುಖ್ಯಸ್ಥೆ, ಕಾನ್ಸುಲ್ ಜನರಲ್ ಟ್ಯಾಮಿ ಬೆನ್-ಹೆಯ್ಮ್ ಅವರಿಗೆ ವಿಧಾನಸೌಧದ ತಮ್ಮ ಕಚೇರಿಯಲ್ಲಿ ದರ್ಶನ ನೀಡಿ, ಆಕೆಯನ್ನು ಅತಿಯಾಗಿ ಗೌರವಿಸಿ ಸನ್ಮಾನಿಸಿದರು. ಅದೇ ವರ್ಷದ ಸೆಪ್ಟೆಂಬರ್ ತಿಂಗಳಲ್ಲಿ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ ಐಐಎಸ್‍ಸಿಯಲ್ಲಿ ನಡೆದ ಇಂಡಿಯಾ-ಇಸ್ರಯೇಲ್ ವಾಣಿಜ್ಯ ಶೃಂಗಸಮಾವೇಶದಲ್ಲಿ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಆರೋಗ್ಯ ಇಲಾಖೆಯ ಮಂತ್ರಿ ದಿನೇಶ್ ಗುಂಡೂರಾವ್ ಅವರೊಡನೆ ಅತಿಯಾದ ಉತ್ಸಾಹದಿಂದ ಪಾಲ್ಗೊಂಡರು. ಮತ್ತು, ಈ ವರ್ಷ, 2025ರ ಮೇ ತಿಂಗಳ ಕಡೆಯ ವಾರದಲ್ಲಿ ಇಸ್ರಯೇಲಿನ ಅದೇ ಕಚೇರಿಯ ಉಪಮುಖ್ಯಸ್ಥೆ ಡೆಪ್ಯೂಟಿ ಕಾನ್ಸುಲ್ ಜನರಲ್ ಇನ್‍ಬಾಲ್ ಸ್ಟೋನ್ ಅವರನ್ನು ಬರಮಾಡಿಕೊಂಡು, ಆಕೆಯನ್ನೂ ಅತಿಯಾಗಿ ಗೌರವಿಸಿ, ಸನ್ಮಾನಿಸಿದರು. ಇದೇ ಜೂನ್ 5ರಂದು ಇಸ್ರಯೇಲ್‍ನ, ತಥಾಕಥಿತ, ಸ್ವಾತಂತ್ರ್ಯ ದಿನ ಎಂಬೊಂದು ದಿನದಂದು ಆ ದೇಶಕ್ಕೆ ಭೇಟಿನೀಡಲು ಆಕೆ ಶಿವಕುಮಾರರನ್ನು ಆಹ್ವಾನಿಸಿದರು. ಶಿವಕುಮಾರ್ ಅವರು ತಮಗೆ ಬಂದ ಆ ಆಹ್ವಾನವನ್ನು ಸಾಮಾಜಿಕ ಜಾಲತಾಣದಲ್ಲಿ ಜಾಹೀರು ಮಾಡಿ, ಕರ್ನಾಟಕ ಹಾಗೂ ಇಸ್ರಯೇಲ್ ನಡುವಿನ ಬಾಂಧವ್ಯವನ್ನು ಬಲಪಡಿಸಲು ತಮಗಿರುವ ಮಹದಾಸೆಯನ್ನು ಹೇಳಿಕೊಂಡರು.
ಇದನ್ನು ಓದಿದ್ದೀರಾ?: Ground Report | ದೆಹಲಿ ರೈತ ಚಳವಳಿ ಮಾದರಿಯಲ್ಲಿ ‘ಚನ್ನರಾಯಪಟ್ಟಣ ಭೂ ಹೋರಾಟ’; ಸರ್ಕಾರಕ್ಕೆ ಜಗ್ಗದ ದಿಟ್ಟ ಜನತೆ
ಆದರೆ, ಅರ್ಥಮಾಡಿಕೊಳ್ಳೋಣ: ಇಸ್ರಯೇಲ್ ಪ್ರಪಂಚದ ಅತಿಕ್ರೂರ ವಸಾಹತು-ವರ್ಣಭೇದ ನೀತಿಯನ್ನು ಅನುಸರಿಸುತ್ತಿರುವ ರಾಷ್ಟ್ರಪ್ರಭುತ್ವವಾಗಿದೆ; ತನ್ನ ಯಜಮಾನ ದೇಶವಾದ ಅಮೆರಿಕಾದ ಕುಮ್ಮಕ್ಕಿನೊಡನೆ, ಯೂರೋಪಿನ ದೇಶಗಳ ಮೌನಸಮ್ಮತಿಯೊಡನೆ ಪ್ಯಾಲೆಸ್ತೀನೀಯರ ನರಮೇಧ ಕೈಗೊಂಡಿರುವ ನವನಾಟ್‍ಜೀ಼ ರಾಷ್ಟ್ರವಾಗಿದೆ; ಅಂತಾರಾಷ್ಟ್ರೀಯ ಒಪ್ಪಂದದ ಎಲ್ಲ ನೀತಿ, ನಿಮಯಗಳನ್ನೂ ಕಾಲ ಕಸದಂತೆ ಕಂಡು ಲೆಬನಾನ್, ಸಿರಿಯಾ ದೇಶಗಳ ಮೇಲೆ ದಾಳಿ ನಡೆಸಿದ ಆ ದೇಶ ಇದೀಗ ಇನ್ನೂ ಒಂದು ಹೆಜ್ಜೆ ಮುಂದೆಹೋಗಿ ಇರಾನಿನ ಅಣುಸ್ಥಾವರಗಳ ಮೇಲೆ ದಾಳಿ ನಡೆಸಿದೆ. ಬರಿಯ ಗೂಂಡಾದೇಶವಷ್ಟೇ ಆಗಿಲ್ಲ ಅದು; ತನ್ನ ಯಜಮಾನ ಅಮೆರಿಕಾದಂತೆ ಸೈತಾನನ ಪ್ರತಿರೂಪವೇ ತಾನಾಗಿದೆ.

ಮತ್ತು, ಇದೀಗ ಕೇಳಿಕೊಳ್ಳೋಣ: ರಾಜ್ಯದ ಅತಿ ಸಿರಿವಂತರಲ್ಲೊಬ್ಬರಾಗಿರುವ ನಮ್ಮ ಈ ಉಪಮುಖ್ಯಮಂತ್ರಿಗಳು ದೇಶದ ಬಹುದೊಡ್ಡ ಬಂಡವಳಿಗ ಕುಟುಂಬದ ಸಂಸ್ಕಾರಹೀನ ಮದುವೆ ಸಮಾರಂಭಕ್ಕೆ ನೀಡಿದ ಭೇಟಿ, ಅಧರ್ಮವೇ ಮೈವೆತ್ತಂತಿರುವ ಖಾವಂದರೊಂದಿಗಿನ ಅವರ ಸಂಧಾನ, ಪ್ರಪಂಚದ ಎರಡು ಮಹಾಸೈತಾನ ದೇಶಗಳ ಅವರ ಅಪ್ಪುಗೆ, ಮತ್ತು ಹಲವು ವಿಷಯಗಳಲ್ಲಿ ಅವರಿಗೆ ಸಾಟಿಯಾಗಿ ನಿಂತ ಸಿದ್ದರಾಮಯ್ಯನವರೂ ಅವರಂತೆಯೇ ಆಡುತ್ತಿರುವುದು – ಇದೆಲ್ಲ ಅವರಿಬ್ಬರನ್ನು ಕುರಿತು, ನಮ್ಮ ರಾಜ್ಯದ ಇಂದಿನ ಪಾಡನ್ನು ಕುರಿತು ಏನನ್ನು ಹೇಳುತ್ತದೆ?

ರಘುನಂದನ
ಕವಿ, ನಾಟಕಕಾರ, ರಂಗನಿರ್ದೇಶಕ