ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ: ಶೋಭಕ್ಕ ಅಥವಾ ವಿಜಯೇಂದ್ರ – ಯಾರು ಹಿತವರು ಈ ಸಂದಿಗ್ಧದೊಳಗೆ?

Date:

Advertisements

ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಹೀನಾಯ ಸೋಲು ಕಂಡಿದೆ. ಪರಿಣಾಮ ರಾಜ್ಯ ಬಿಜೆಪಿ ನಾಯಕರ ಮೇಲೆ ಹೈಕಮಾಂಡ್‌ ಮುನಿಸಿಕೊಂಡಿದೆ ಎಂದೂ ಹೇಳಲಾಗುತ್ತಿದೆ. ಹಾಗಾಗಿಯೇ, ಚುನಾವಣೆ ಮುಗಿದು ಐದು ತಿಂಗಳಾದರೂ ಇನ್ನೂ ವಿರೋಧ ಪಕ್ಷದ ನಾಯಕನನ್ನೂ ಹಾಗೂ ಪಕ್ಷದ ರಾಜ್ಯಾಧ್ಯಕ್ಷನನ್ನು ಆಯ್ಕೆ ಮಾಡಿಲ್ಲ ಎಂಬ ಅಭಿಪ್ರಾಯಗಳಿವೆ. ಈ ನಡುವೆ, ಕೇಂದ್ರ ಸಚಿವ ಶೋಭಾ ಕರಂದ್ಲಾಜೆಯನ್ನು ಬಿಜೆಪಿ ರಾಜ್ಯಾಧ್ಯಕ್ಷೆಯನ್ನಾಗಿ ನೇಮಕ ಮಾಡಬಹುದು ಎಂಬ ಚರ್ಚೆಗಳು ಹೆಚ್ಚಾಗಿವೆ.

ಶೋಭಾ ಕರಂದ್ಲಾಜೆ ಅವರು ತಾವು ಕೇಂದ್ರ ಸಚಿವೆಯಾಗಿಯೇ ಸಂತೋಷವಾಗಿದ್ದೇನೆ. ತಮಗೆ ರಾಜ್ಯಾಧ್ಯಕ್ಷ ಸ್ಥಾನದ ಮೇಲೆ ವ್ಯಾಮೋಹವಿಲ್ಲ ಎಂದು ಹೇಳುತ್ತಿದ್ದಾರೆ. ಆದರೂ, ಅವರು ಹೊಸ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರೆ ಕೆಲವು ಹೊಸ ಕ್ರಮಗಳಿಗೆ ಅನುಕೂಲವಾಗುತ್ತದೆ ಎಂದು ಪಕ್ಷದೊಳಗಿನ ಕೆಲವರು ಹೇಳುತ್ತಿದ್ದಾರೆ.

ಒಕ್ಕಲಿಗ ಸಮುದಾಯಕ್ಕೆ ಸೇರಿದ ಕರಂದ್ಲಾಜೆ ಅವರು ಕರಾವಳಿ ಭಾಗದವರು, ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಮತ್ತು ರಾಜ್ಯ ಹಿರಿಯ ನಾಯಕ ಬಿ.ಎಸ್.ಯಡಿಯೂರಪ್ಪ- ಇಬ್ಬರಿಗೂ ಸಲ್ಲುವವರು. ಅವರು ರಾಜ್ಯಾಧ್ಯಕ್ಷೆಯಾದರೆ ಪಕ್ಷದಲ್ಲಿನ ಎಲ್ಲ ಬಣಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಾರೆ, ಪಕ್ಷದ ಕಾರ್ಯಕರ್ತರನ್ನು ಒಗ್ಗೂಡಿಸುತ್ತಾರೆ. ಮಾತ್ರವಲ್ಲ, ಪಕ್ಷದ ಮೇಲೆ ಹೈಕಮಾಂಡ್‌ ನೇರ ಹಿಡಿತ ಸಾಧಿಸಲು ಅನುಕೂಲವಾಗುತ್ತದೆ ಎಂದು ಹೇಳಲಾಗುತ್ತಿದೆ.

Advertisements

ಯಾರೇ ಅಧ್ಯಕ್ಷರಾದರೂ, ಮುಂದಿನ ಲೋಕಸಭಾ ಚುಣಾವಣೆಯಲ್ಲಿ ರಾಜ್ಯದ 28 ಸ್ಥಾನಗಳಲ್ಲಿ 25 ಸ್ಥಾನಗಳನ್ನು ಗೆಲ್ಲುವುದು ದೊಡ್ಡ ಸವಾಲಾಗಿದೆ. ಅದು ಕರಂದ್ಲಾಜೆ ಅವರನ್ನೂ ಕಾಡುತ್ತಿದೆ.

ಇಂತಹ ಸಮಯದಲ್ಲಿ ಪಕ್ಷದ ಜವಾಬ್ದಾರಿಯನ್ನು ವಹಿಸಿಕೊಳ್ಳುವುದು ಅವರಿಗೆ ಹೊರೆಯಾಗಲಿದೆ. ಚುನಾವಣೆಗೆ ಕೆಲವೇ ತಿಂಗಳುಗಳಿದ್ದು, ಈ ಅಲ್ಪಾವಧಿಯಲ್ಲಿ ಸಾಕಷ್ಟು ಕೆಲಸಗಳನ್ನು ಮಾಡಬೇಕಾಗಿದೆ. ರಾಜ್ಯದಲ್ಲಿ ಲೋಕಸಭಾ ಚುನಾವಣೆ ಫಲಿತಾಂಶವು ಅವರ ನಿರೀಕ್ಷೆಯಂತೆ ಬರದಿದ್ದರೆ, ಪಕ್ಷದ ಚುಕ್ಕಾಣಿ ಹಿಡಿದವರ ರಾಜಕೀಯ ವೃತ್ತಿಜೀವನದ ಮೇಲೆ ಕಳಂಕ ಕೂರುವ- ಹರಕೆಯ ಕುರಿಯಾಗುವ ಸಾಧ್ಯತೆ ಇದೆ ಎಂಬುದು ರಾಜಕೀಯ ವಲಯದ ವಿಶ್ಲೇಷಣೆಯಾಗಿದೆ.

ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿರುವ ಪಕ್ಷದ ರಾಜ್ಯ ಉಪಾಧ್ಯಕ್ಷ ಬಿವೈ ವಿಜಯೇಂದ್ರ ಅವರ ಹೆಸರು ಕೂಡ ಅಧ್ಯಕ್ಷರ ಸ್ಥಾನದ ರೇಸ್‌ನಲ್ಲಿದೆ. ವಿಜಯೇಂದ್ರ ತಮ್ಮ ತಂದೆ ಯಡಿಯೂರಪ್ಪನವರ ಮಾರ್ಗದರ್ಶನ ಪಡೆದು ಪರಿಣಾಮಕಾರಿಯಾಗಿ ಕೆಲಸ ಮಾಡಬಹುದು ಎಂದು ಕೆಲವರು ಹೇಳುತ್ತಿದ್ದಾರೆ. ಆದರೆ, ವಿಜಯೇಂದ್ರ ಅವರಿಗಿಂತ ಹಿರಿಯರಾಗಿರುವ ಶೇ.80ರಷ್ಟು ಶಾಸಕರು ಅವರ ಕೈಕೆಳಗೆ ಹೇಗೆ ಕೆಲಸ ಮಾಡುತ್ತಾರೆ ಎಂದು ಪಕ್ಷದ ಕೆಲವು ಮುಖಂಡರು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೆ, ಪಕ್ಷದ ಚುಕ್ಕಾಣಿ ಮತ್ತೆ ಯಡಿಯೂರಪ್ಪ ಅವರ ಅಧೀನಕ್ಕೆ ಹೋಗುತ್ತದೆ ಎಂಬುದೂ ಇದೆ.

ಈ ಸುದ್ದಿ ಓದಿದ್ದೀರಾ?: ಮೋದಿ ಹೆಸರಲ್ಲೇ ನಾವೆಲ್ಲ ಚುನಾವಣೆ ಗೆಲ್ಲುವುದು: ಪ್ರತಾಪ್ ಸಿಂಹ

ಈ ಇಬ್ಬರಲ್ಲದೆ, ಅಶೋಕ್ ಮತ್ತು ನಿರಾಣಿ ಅವರ ಹೆಸರುಗಳೂ ರೇಸ್‌ನಲ್ಲಿ ತಾಳೆ ಹಾಕಿಕೊಂಡಿವೆ. ಈ ಇಬ್ಬರ ಬಳಿಯೂ ಸಾಕಷ್ಟು ಹಣವಿದೆ. ಅವರು ಪಕ್ಷಕ್ಕಾಗಿ ಖರ್ಚು ಮಾಡಬಹುದು. ಅಲ್ಲದೆ, ಹೈಕಮಾಂಡಿನ ಹಿಡಿತದಲ್ಲೂ ಇರುತ್ತಾರೆ. ಜೊತೆಗೆ, ಅಶ್ವತ್ಥನಾರಾಯಣ ಮತ್ತು ಯತ್ನಾಳ್ ಹೆಸರುಗಳೂ ಕೇಳಿಬರುತ್ತಿದೆಯಾದರೂ ಈ ಇಬ್ಬರಿಗೂ ಅಂತಹ ವ್ಯಕ್ತಿಗತ ವರ್ಚಸ್ಸು ಇಲ್ಲ. ಹೀಗಾಗಿ ಬಿಜೆಪಿ ಹೈಕಮಾಂಡ್ ಗೊಂದಲದಲ್ಲಿದೆ. ಅದಕ್ಕಿಂತ ಹೆಚ್ಚಾಗಿ ರಾಜ್ಯ ನಾಯಕರ ಮೇಲೆ ಕೋಪದಲ್ಲಿದೆ.

ಈ ಹಿಂದೆ, ದಸರಾ ನಂತರ ಹೊಸ ಅಧ್ಯಕ್ಷರ ನೇಮಕವಾಗುತ್ತದೆ ಎಂದು ಹೇಳಲಾಗಿತ್ತು. ಆದರೆ, ಆ ಬಗ್ಗೆ ಪಕ್ಷದಿಂದ ಇನ್ನೂ ಯಾವುದೇ ಸ್ಪಷ್ಟನೆ ಬಂದಿಲ್ಲ. ಅಧ್ಯಕ್ಷರ ನೇಮಕ ವಿಚಾರದಲ್ಲಿ ಶೀಘ್ರವೇ ನಿರ್ಧಾರ ತೆಗೆದುಕೊಳ್ಳುತ್ತೇವೆಂದು ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ, ಎಂಎಲ್‌ಸಿ ರವಿಕುಮಾರ್ ಹೇಳಿದ್ದಾರೆ.

ಪಕ್ಷದ ವರಿಷ್ಠರು ಐದು ರಾಜ್ಯಗಳ ಚುನಾವಣೆಗಳಲ್ಲಿ ನಿರತರಾಗಿದ್ದಾರೆ. ಆ ಚುನಾಣೆಗಳ ಫಲಿತಾಂಶವು ಡಿಸೆಂಬರ್ 3 ರಂದು ಪ್ರಕಟವಾಗಲಿದೆ. ಅಲ್ಲಿಯವರೆಗೆ ವರಿಷ್ಠರು ಈ ನಿರ್ಣಾಯಕ ನಿರ್ಧಾರವನ್ನು ತೆಗೆದುಕೊಳ್ಳಲು ಲಭ್ಯವಿರುವುದಿಲ್ಲ ಎಂದು ಪಕ್ಷದ ಕೆಲವರು ಹೇಳುತ್ತಿದ್ದಾರೆ. ಹೀಗಾಗಿ, ರಾಜ್ಯ ಬಿಜೆಪಿಯ ಚುಕ್ಕಾಣಿ ಹಿಡಿಯುವವರು ಯಾರು ಎಂಬುದಕ್ಕಾಗಿ ಡಿಸೆಂಬರ್‌ವರೆಗೂ ಕಾಯಬೇಕಾದ ಪರಿಸ್ಥಿತಿ ಇದೆ ಎನ್ನಲಾಗುತ್ತಿದೆ.

“ಲೋಕಸಭೆ ಚುನಾವಣೆಗೆ ಇನ್ನು ಕೆಲವೇ ತಿಂಗಳುಗಳು ಬಾಕಿ ಇವೆ. ಈ ಹಿನ್ನೆಲೆಯಲ್ಲಿ ಪಕ್ಷಕ್ಕೆ ಪುಟಿದೇಳುವ ಚೈತನ್ಯ ತುಂಬಬೇಕಾಗಿದೆ. ಪಕ್ಷವು ಜನ ಬೆಂಬಲವನ್ನು ಪಡೆಯಲು ಕಾರ್ಯಕರ್ತರ ತಂಡಗಳನ್ನು ನೇಮಿಸಿ, ಪ್ರಚಾರಕ್ಕಿಳಿಯಬೇಕಾಗಿದೆ. ಆದರೆ, ವಿಧಾನಸಭೆಯಲ್ಲಿ ವಿಪಕ್ಷ ನಾಯಕನ್ನು ಆಯ್ಕೆ ಮಾಡದೇ ಇರುವುದು ಮತ್ತು ಅವಧಿ ಮುಗಿದ ಅಧ್ಯಕ್ಷರನ್ನೇ ಮುಂದುವರೆಸುವುದು- ಪಕ್ಷ ಪುಟಿದೇಳಬಹುದಾದ ಅವಕಾಶವನ್ನು ತಾನಾಗಿಯೇ ಕಳೆದುಕೊಂಡರೆ ಆಶ್ಚರ್ಯವಿಲ್ಲ” ಎಂದು ರಾಜಕೀಯ ವಿಶ್ಲೇಷಕ ಬಿ.ಎಸ್‌ ಮೂರ್ತಿ ಹೇಳಿದ್ದಾರೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬ್ರಹ್ಮಾವರ | ಮಹೇಶ್ ಶೆಟ್ಟಿ ತಿಮರೋಡಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ

ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್ ವಿರುದ್ಧ ಅವಹೇಳನಾಕಾರಿ ಹೇಳಿಕೆ...

ಚಿಕ್ಕಮಗಳೂರು l ಸಭಾಧ್ಯಕ್ಷರೇ ಮಲೆನಾಡಿನ ಸಮಸ್ಯೆ ಬಗ್ಗೆ ಚರ್ಚಿಸಲು ಅವಕಾಶ ಕಲ್ಪಿಸಿ; ಹೆಚ್.ಡಿ ತಮ್ಮಯ್ಯ

ಮಲೆನಾಡಿನಲ್ಲಿ ಕಾಡುತ್ತಿರುವ ಕಾಡು-ಪ್ರಾಣಿ-ಮಾನವ ಸಂಘರ್ಷದಿಂದ ಜನಜೀವನ ಅಸ್ತವ್ಯಸ್ಥವಾಗಿದೆ. ಇಂತಹ ಗಂಭೀರ ಸಮಸ್ಯೆಗಳ...

ಧರ್ಮಸ್ಥಳ ಪ್ರಕರಣಗಳ ಸಮಗ್ರ ತನಿಖೆಗೆ ಎಡಪಕ್ಷಗಳ ಒತ್ತಾಯ

ಧರ್ಮಸ್ಥಳದಲ್ಲಿ ನಡೆದಿರುವ ವೇದವಲ್ಲಿ, ಪದ್ಮಲತಾ, ನಾರಾಯಣ, ಯಮುನಾ ಮತ್ತು ಸೌಜನ್ಯ, ಮುಂತಾದ...

ಒಳಮೀಸಲಾತಿ | ಅಲೆಮಾರಿ ಸಮುದಾಯಗಳಿಗೆ ಸರ್ಕಾರದಿಂದ ನ್ಯಾಯ ಸಿಗಲಿ: ಬರಗೂರು ರಾಮಚಂದ್ರಪ್ಪ

ರಾಜ್ಯ ಸರ್ಕಾರವು ಜಾರಿಗೊಳಿಸಿರುವ ಒಳಮೀಸಲಾತಿಯಲ್ಲಿ ಅಲೆಮಾರಿ ಸಮುದಾಯಗಳಿಗೆ ನ್ಯಾಯ ಸಿಗಬೇಕು ಎಂದು...

Download Eedina App Android / iOS

X