ಲವ್ ಜಿಹಾದ್ ಪ್ರಕರಣದಲ್ಲಿ ಹಲ್ಲೆ ಆರೋಪದಡಿ ಚಿಕ್ಕಮಗಳೂರು ಜಿಲ್ಲಾ ಕಾರಾಗೃಹ ಸೇರಿರುವ ಬಜರಂಗದಳ ಕಾರ್ಯಕರ್ತರನ್ನು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಭೇಟಿ ನೀಡಿ ಯೋಗಕ್ಷೇಮ ವಿಚಾರಿಸಿದ್ದಾರೆ.
ಬಳಿಕ ಸುದ್ದಿಗಾರರ ಜೊತೆ ಮಾತನಾಡಿ, ತಮ್ಮ ವಿರುದ್ಧದ ಪಿತೂರಿ ಬಗ್ಗೆ ಮಾತನಾಡುತ್ತ, “ಗಂಡಸರಲ್ಲಿ ಒಂದು ಮನಸ್ಥಿತಿ ಇದೆ. ಅಧಿಕಾರ ತಮ್ಮಲ್ಲೆ ಇರಬೇಕು ಎಂದು ದುಡ್ಡಿನ ದರ್ಪದಿಂದ, ಅಹಂಕಾರದಿಂದ ‘ಗೋಬ್ಯಾಕ್ ಶೋಭಾ’ ಅಭಿಯಾನ ಮಾಡಿಸಿದ್ದಾರೆ” ಎಂದು ಆರೋಪಿಸಿದರು.
“ನನ್ನ ವಿರುದ್ಧ ಕಳೆದ ಚುನಾವಣೆಯಲ್ಲಿ ಗೋಬ್ಯಾಕ್ ಮಾಡಿದ್ದರು. ಈ ಚುನಾವಣೆಯಲ್ಲೂ ಮಾಡಿದ್ದಾರೆ. ವ್ಯವಸ್ಥಿತವಾಗಿ ಮಾಡಿದ್ದಾರೆ. ಮಾಡಿಸುತ್ತಿದ್ದಾರೆ. ಹೈಕಮಾಂಡ್ ನನಗೆ ಯಾವ ಜವಾಬ್ದಾರಿ ನೀಡಿದೆ ಪ್ರಾಮಾಣಿಕವಾಗಿ, ಕಪ್ಪು ಚುಕ್ಕೆ ಬಾರದಂತೆ ರಾಜಕೀಯ ಮಾಡಿದ್ದೇನೆ. ಯಾರು ಷಡ್ಯಂತ್ರ ಮಾಡಿದರು. ಉತ್ತರ ನಾನು ಕೊಡಲ್ಲ ಹೈಕಮಾಂಡ್, ಹಿರಿಯರು ಕೊಡುತ್ತಾರೆ” ಎಂದು ಆಕ್ರೋಶ ಹೊರ ಹಾಕಿದರು.
“ಪತ್ರ ಯಾರು ಬರೆದರು, ಯಾರು ಪೋಸ್ಟ್ ಮಾಡಿದರು, ಎಷ್ಟು ಪೋಸ್ಟ್ ಮಾಡಿದರು. ಇದೆಲ್ಲದರ ಬಗ್ಗೆ ಕೇಂದ್ರ ಕೂಡ ವರದಿ ತರಿಸಿ ಕೊಂಡಿದೆ. ಸತ್ಯ ಕೇಂದ್ರದವರಿಗೆ ತಿಳಿದಿದೆ” ಎಂದರು.
