ಮಾರ್ಚ್ 1 ರಂದು ರಾಮೇಶ್ವರಂ ಕೆಫೆಯಲ್ಲಿ ನಡೆದ ಸ್ಫೋಟದಲ್ಲಿ ಭಾಗಿಯಾಗಿರುವ ಶಂಕಿತ ಆರೋಪಿ ತಮಿಳುನಾಡಿನವರು ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಆರೋಪಿಸಿದ್ದು, ತೀವ್ರ ವಿರೋಧ ವ್ಯಕ್ತವಾದ ಬಳಿಕ ಕ್ಷಮೆಯಾಚಿಸಿದ್ದಾರೆ.
“ನನ್ನ ತಮಿಳು ಸಹೋದರರು ಮತ್ತು ಸಹೋದರಿಯರಿಗೆ ನೋವುಂಟು ಮಾಡುವುದು ನನ್ನ ಉದ್ದೇಶವಲ್ಲ. ಆದರೂ ನನ್ನ ಹೇಳಿಕೆಗಳು ಕೆಲವರಿಗೆ ನೋವು ತಂದಿದೆ ಎಂದು ಗೊತ್ತಾಯಿತು. ಅದಕ್ಕಾಗಿ ನಾನು ಕ್ಷಮೆಯಾಚಿಸುತ್ತೇನೆ. ನನ್ನ ಟೀಕೆಗಳು ಕೃಷ್ಣಗಿರಿ ಅರಣ್ಯದಲ್ಲಿ ತರಬೇತಿ ಪಡೆದವರು ಮತ್ತು ರಾಮೇಶ್ವರಂ ಕೆಫೆ ಸ್ಪೋಟಕ್ಕೆ ಮಾತ್ರ ಸಂಬಂಧಿಸಿವೆ. ತಮಿಳುನಾಡಿನ ಯಾರಿಗಾದರೂ ನೋವಾಗಿದ್ದರೆ, ನನ್ನ ಹೃದಯಾಂತರಾಳದಿಂದ ಕ್ಷಮೆಯನ್ನು ಕೇಳುತ್ತೇನೆ. ನಾನು ನನ್ನ ಹಿಂದಿನ ಹೇಳಿಕೆಗಳನ್ನು ಹಿಂಪಡೆಯುತ್ತೇನೆ” ಎಂದು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
ಹಿಂದುಗಳು ಮತ್ತು ಬಿಜೆಪಿ ಕಾರ್ಯಕರ್ತರ ವಿರುದ್ಧ ಹೇಳಿಕೆ ನೀಡಿದ್ದ ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರ ಮೇಲೆ ವಾಗ್ದಾಳಿ ನಡೆಸಿರುವ ಶೋಭಾ, “ಮಿಸ್ಟರ್ ಸ್ಟಾಲಿನ್, ನಿಮ್ಮ ಆಡಳಿತದಲ್ಲಿ ತಮಿಳುನಾಡಿಗೆ ಏನು ದೊರೆತಿದೆ? ನಿಮ್ಮ ತುಷ್ಟೀಕರಣ ರಾಜಕೀಯವು ಹಿಂದುಗಳು ಮತ್ತು ಬಿಜೆಪಿ ಕಾರ್ಯಕರ್ತರ ಮೇಲೆ ಹಗಲು ರಾತ್ರಿ ದಾಳಿ ಮಾಡುವುದನ್ನು ಉತ್ತೇಜಿಸಿದೆ. ಐಸಿಸ್‌ನಂತಹ ಭಯೋತ್ಪಾದಕ ಸಂಘಟನೆಗಳಂತೆ ಆಗಾಗ್ಗೆ ಬಾಂಬ್ ಸ್ಫೋಟ ನಡೆಯುವಾಗ, ನೀವು ಕಣ್ಮುಚ್ಚಿ ಕುಳಿತಿರುತ್ತೀರಿ” ಎಂದು ಕಿರಿಕಾರಿದ್ದಾರೆ.