ರಾಜ್ಯ ಪಡೆಯುವ ಸಾಲ ಅದರ ಒಟ್ಟು ರಾಜ್ಯ ಅಭಿವೃದ್ಧಿ ಪ್ರಮಾಣದ (ಜಿಎಸ್‌ಡಿಪಿ) 3%ಗೆ ಮಿತಿಯಲ್ಲಿರಬೇಕೆಂಬುದು ಕೇಂದ್ರ ಸರ್ಕಾರದ ನಿಲುವಾಗಿದೆ. ಹೀಗೆ ಕೇಂದ್ರ ಸರ್ಕಾರವು ತನ್ನ ಮೇಲೆ ಮಿತಿ ಹೇರುವುದರ ಮೂಲಕ ತನ್ನ ಮೂಲಭೂತ ಹಣಕಾಸು ಅವಶ್ಯಕತೆಗಳನ್ನು ಈಡೇರಿಸಿಕೊಳ್ಳಲು ಅಡ್ಡಿ ಮಾಡಿ, ಒಕ್ಕೂಟ ವ್ಯವಸ್ಥೆಯ ನಿಯಮಗಳನ್ನು ಉಲ್ಲಂಘಿಸಿದೆಯಲ್ಲವೇ?
ರಾಜ್ಯ ಮತ್ತು ಕೇಂದ್ರ ಸರ್ಕಾರದ ನಡುವಿನ ಹಣಕಾಸು ಸಂಬಂಧದ ಕುರಿತು ಬಿಸಿ ಬಿಸಿ ಚರ್ಚೆಗಳು ನಡೆಯುತ್ತಿವೆ. ಕೇರಳದ ಸರ್ಕಾರ ಈ ವಿಚಾರವಾಗಿ ಸುಪ್ರೀಂ ಕೋರ್ಟ್‌ನ ಮೊರೆ ಹೋಗಿದೆ.
ಕೇರಳ ಸರ್ಕಾರ ಕೋರ್ಟಿನಲ್ಲಿ ಕೇಳಿರುವ ಪ್ರಶ್ನೆಗಳು ಹೀಗಿವೆ: ಒಂದು ರಾಜ್ಯ ಸರ್ಕಾರ ತನ್ನ ಆದಾಯ-ಖರ್ಚುಗಳ ನಡುವಿನ ಅಂತರವನ್ನು ಸರಿದೂಗಿಸಿಕೊಳ್ಳಲು ಸಾಲದ ಮಾರುಕಟ್ಟೆಯಲ್ಲಿ ಎಷ್ಟು ಪ್ರಮಾಣದಲ್ಲಿ ಸಾಲ ಪಡೆಯಲು ಅವಕಾಶವಿದೆ? ಒಂದು ರಾಜ್ಯ ಪಡೆಯುವ ಸಾಲ ಅದರ ಒಟ್ಟು ರಾಜ್ಯ ಅಭಿವೃದ್ಧಿ ಪ್ರಮಾಣದ (ಜಿಎಸ್‌ಡಿಪಿ) 3%ಗೆ ಮಿತಿಯಲ್ಲಿರಬೇಕೆಂಬುದು ಕೇಂದ್ರ ಸರ್ಕಾರದ ನಿಲುವಾಗಿದೆ. ಹೀಗೆ ಕೇಂದ್ರ ಸರ್ಕಾರವು ತನ್ನ ಮೇಲೆ ಮಿತಿ ಹೇರುವುದರ ಮೂಲಕ ತನ್ನ ಮೂಲಭೂತ ಹಣಕಾಸು ಅವಶ್ಯಕತೆಗಳನ್ನು ಈಡೇರಿಸಿಕೊಳ್ಳಲು ಅಡ್ಡಿ ಮಾಡಿ, ಒಕ್ಕೂಟ ವ್ಯವಸ್ಥೆಯ ನಿಯಮಗಳನ್ನು ಉಲ್ಲಂಘಿಸಿದೆ ಎನ್ನುವುದು ಕೇರಳ ಸರ್ಕಾರದ ದೂರು.
ರಾಜ್ಯಗಳ ವೆಚ್ಚಗಳೇಕೆ ಅಧಿಕ?
ಭಾರತದಲ್ಲಿ ತೆರಿಗೆಗಳನ್ನು ವಿಧಿಸುವ ಬಹುತೇಕ ಅಧಿಕಾರ ಕೇಂದ್ರ ಸರ್ಕಾರದ ಬಳಿ ಇದ್ದರೆ, ಸರ್ಕಾರದ ಹಂತದಲ್ಲಿ ಅತೀ ಹೆಚ್ಚು ಹಣ ಖರ್ಚು ಮಾಡುವ ಹೊಣೆಗಾರಿಕೆ ರಾಜ್ಯ ಸರ್ಕಾರಗಳ ಪಾಲಿಗಿರುತ್ತದೆ. ಜನರ ದಿನನಿತ್ಯದ ಬದುಕಿನ ಮೇಲೆ ಪರಿಣಾಮ ಬೀರುವ ಅಂಶಗಳಿಗೆ ಹಣ ವಿನಿಯೋಗಿಸುವ ಜವಾಬ್ದಾರಿ ರಾಜ್ಯ ಸರ್ಕಾರದ ಹೆಗಲ ಮೇಲಿದೆ. ಆರೋಗ್ಯ ಮತ್ತು ಶಿಕ್ಷಣವನ್ನು ಒಳಗೊಂಡ ಸಾಮಾಜಿಕ ಸೇವೆಗಳಿಗೆ 2022-23ರ ಸಾಲಿನಲ್ಲಿ ಕೇಂದ್ರ ಸರ್ಕಾರದ ವೆಚ್ಚ ರೂ. 2,230 ಶತ ಕೋಟಿಗಳಾದರೆ, ಭಾರತದ ಎಲ್ಲಾ ರಾಜ್ಯ ಸರ್ಕಾರಗಳು ಇದೇ ಸಾಲಿನಲ್ಲಿ ಮಾಡಿರುವ ವೆಚ್ಚ ರೂ. 19,182 ಶತಕೋಟಿಗಳಾಗಿದೆ. ಅಂದರೆ, ದೇಶದ ಎಲ್ಲಾ ರಾಜ್ಯ ಸರ್ಕಾರಗಳ ಒಟ್ಟು ವೆಚ್ಚ ಕೇಂದ್ರ ಸರ್ಕಾರದ ವೆಚ್ಚಕ್ಕಿಂತ 8.6 ಪಟ್ಟು ಹೆಚ್ಚಾಗಿದೆ.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವೆಚ್ಚಗಳು ಸಂವಿಧಾನದ ಚೌಕಟ್ಟಿನಲ್ಲೇ ನಡೆಯುತ್ತವೆ ಎನ್ನುವುದು ಸತ್ಯವಾದರೂ, ಕೆಲವು ಪ್ರಮುಖ ಅಂಕಿಅಂಶಗಳನ್ನು ವೈಜ್ಞಾನಿಕವಾಗಿ ನೋಡುವ ಅಗತ್ಯವಿರುತ್ತದೆ. ಸಾಮಾಜಿಕ ಸೇವಾವಲಯಗಳಿಗೆ ಮಾಡುವ ಎರಡು ಪಟ್ಟು ಹೆಚ್ಚಿನ ವೆಚ್ಚವನ್ನು ರಕ್ಷಣಾ ವಲಯಕ್ಕೆ ಕೇಂದ್ರ ಸರ್ಕಾರ ಮಾಡುತ್ತದೆ. ಹಾಗೆ ಸಾರಿಗೆ ವಲಯಕ್ಕೆ 2.4 ಪಟ್ಟು ಹೆಚ್ಚಿನ ವೆಚ್ಚವನ್ನು ಸಹಾ ಅದು ಮಾಡುತ್ತದೆ.
ಭಾರತದ ರಿರ್ಸವ್ ಬ್ಯಾಂಕ್ ಸರ್ಕಾರಗಳ ವೆಚ್ಚವನ್ನು ಎರಡು ಗುಂಪುಗಳಾಗಿ ವಿಂಗಡಿಸುತ್ತದೆ: ಅಭಿವೃದ್ಧಿ ವೆಚ್ಚಗಳು ಮತ್ತು ಅಭಿವೃದ್ಧಿಯೇತರ ವೆಚ್ಚಗಳು. ಸಾಮಾಜಿಕ ಸೇವೆಗಳು ಮತ್ತು ಆರ್ಥಿಕ ಸೇವೆಗಳು (ಕೃಷಿ, ಕೈಗಾರಿಕೆ ಇತ್ಯಾದಿ) ಅಭಿವೃದ್ಧಿ ವೆಚ್ಚಗಳಾದರೆ; ಸಾಲದ ಮೇಲಿನ ಬಡ್ಡಿ ಹಣವನ್ನು ಭರಿಸುವುದು, ಸಂಬಳ, ಪೆನಶನ್ ಮುಂತಾದವುಗಳು ಅಭಿವೃದ್ಧಿಯೇತರ ವೆಚ್ಚಗಳಾಗುತ್ತವೆ. ಕಳೆದ ಎರಡು ದಶಕಗಳಲ್ಲಿ ಸಾಮಾಜಿಕ ಸೇವಾವಲಯಕ್ಕೆ ರಾಜ್ಯಗಳು ವಿನಿಯೋಗಿಸುತ್ತಿರುವ ಹಣ ಎರಡು ಪಟ್ಟು ಹೆಚ್ಚಾಗಿದ್ದರೆ, ಇದೇ ವಲಯಕ್ಕೆ ಕೇಂದ್ರ ಸರ್ಕಾರ ವಿನಿಯೋಗಿಸುವ ವೆಚ್ಚದಲ್ಲಿ ಹೆಚ್ಚೇನು ಬದಲಾವಣೆ ಆಗಿರುವುದಿಲ್ಲ. ರಾಜ್ಯಗಳ ವೆಚ್ಚ 2004-05ರಲ್ಲಿ 8.8% ಇದ್ದರೆ, 2021-22ನೇ ಸಾಲಿನಲ್ಲಿ ಇದು 12.೫% ಆಗಿರುತ್ತದೆ. ಜೀವನ ನಿರ್ವಹಣೆಯ ಅಂಶಗಳಿಗೆ ಹೆಚ್ಚಿನ ಬೆಂಬಲ ನೀಡಿರುವುದು ರಾಜ್ಯ ಸರ್ಕಾರಗಳು ಎನ್ನುವುದನ್ನು ಗುರುತಿಸಬೇಕಿದೆ.
ಕೇರಳದ ಅನುಭವ
ಒಂದು ಪ್ರಾದೇಶಿಕ ಅರ್ಥ ವ್ಯವಸ್ಥೆಯ ಮೇಲೆ ರಾಜ್ಯ ಸರ್ಕಾರ ಬೀರಬಹುದಾದ ಪ್ರಭಾವವನ್ನು ಅರಿಯಲು ಕೇರಳ ರಾಜ್ಯ ಒಂದು ಉತ್ತಮ ಉದಾಹರಣೆಯಾಗಿದೆ. ಶಿಕ್ಷಣ ಮತ್ತು ಆರೋಗ್ಯ ವಲಯಗಳು ಸೇರಿದಂತೆ ಸಾಮಾಜಿಕ ವಲಯಕ್ಕೆ ಕೇರಳ ಸರ್ಕಾರ ಕಳೆದ ನಾಲ್ಕು ದಶಕಗಳಿಂದ (1960-1990) ತನ್ನ ಒಟ್ಟಾರೆ ಬಜೆಟ್‌ನ 40% ರಿಂದ 50% ಹಣವನ್ನು ವಿನಿಯೋಗಿಸಿದೆ. ಇತರೆ ರಾಜ್ಯಗಳಿಗೆ ಹೋಲಿಸಿದರೆ, 2000 ಇಸ್ವಿಯವರೆಗೆ ಸಾಮಾಜಿಕ ಸೇವಾವಲಯಕ್ಕೆ ಕೇರಳ ಸರ್ಕಾರದ ವೆಚ್ಚ ಅಧಿಕವಾಗಿದೆ. 2000ನೇ ಇಸ್ವಿಯ ನಂತರ ಇತರ ರಾಜ್ಯಗಳು ಕೇರಳ ರೀತಿಯಲ್ಲಿ ಹಣ ವಿನಿಯೋಗಿಸಲು ಆರಂಭಿಸಿದವು. ಕೇರಳದ ಒಟ್ಟಾರೆ ಬಜೆಟ್ 6% ಹಣ ನೇರವಾಗಿ ಸ್ಥಳೀಯ ಆಡಳಿತಗಳಿಗೆ (ಪಂಚಾಯಿತಿಗಳಿಗೆ) ವಿನಿಯೋಗವಾಗುತ್ತದೆ. ಪಂಚಾಯಿತಿಗಳು ಸಾಮಾಜಿಕ ಸೇವಾವಲಯಕ್ಕೆ ವಿನಿಯೋಗಿಸುವ ಹಣವನ್ನು ಲೆಕ್ಕೆ ತೆಗೆದುಕೊಂಡರೆ, ರಾಜ್ಯದಲ್ಲಿ ಬಳಕೆಯಾಗುವ ಹಣದ ಮೊತ್ತ ಇನ್ನೂ ಹೆಚ್ಚಾಗಿರುತ್ತದೆ.
ಇದನ್ನು ಓದಿದ್ದೀರಾ?: ಬಾಬಾ ರಾಮ್‌ದೇವ್‌ಗೆ ಸುಪ್ರೀಂ ಕೋರ್ಟ್ ಛೀಮಾರಿ ಹಾಕಿದರೂ ಪ್ರಧಾನಿ ಮೋದಿ ಮೌನವಾಗಿರುವುದೇಕೆ?
ಕೇರಳ ಸರ್ಕಾರ ಸಂಬಳ ಮತ್ತು ಪೆನ್‌ಶನ್‌ಗಳಿಗಾಗಿ ವಿನಿಯೋಗಿಸುವ ವೆಚ್ಚದ ಪ್ರಮಾಣ ಸ್ವಲ್ಪ ಹೆಚ್ಚೇ ಆಗಿರುತ್ತದೆ. ಆದರೆ, ಶಿಕ್ಷಕ, ಶುಶ್ರೂಷಕ ಮತ್ತು ಇತರೆ ಸೇವೆಗಳಲ್ಲಿ ಅರ್ಧದಷ್ಟಿರುವ ಮಹಿಳಾ ನೌಕರರ ಶ್ರಮವೇ ಸಾಮಾಜಿಕ ಸೇವಾವಲಯದಲ್ಲಿ ಕೇರಳ ಸರ್ಕಾರದ ಉತ್ತಮ ಸಾಧನೆಗೆ ಕಾರಣವಾಗಿದೆ ಎನ್ನುವುದನ್ನು ಸಹಾ ಗುರುತಿಸಬೇಕಿದೆ.
ಕೇರಳದ ಒಟ್ಟಾರೆ ಬಜೆಟ್‌ನ 16.4% ಹಣ ನಿವೃತ್ತ ನೌಕರರ ಪೆನ್‌ಶನ್ ಮತ್ತು ದುರ್ಬಲರಿಗೆ ನೀಡುವ ಪೆನ್‌ಶನ್‌ಗೆ (ಹಿರಿಯ ನಾಗರಿಕರು, ಕೃಷಿ ಕಾರ್ಮಿಕರು, ವಿಧವೆಯರು ಇತ್ಯಾದಿ) ವಿನಿಯೋಗವಾಗುವುದು ಕೂಡ ವಾಸ್ತವವೇ. ಇದು ಭಾರತದ ಇತರೆ ರಾಜ್ಯಗಳಿಗೆ (ಇವುಗಳ ಸರಾಸರಿ ವೆಚ್ಚ 9.7% ಆಗಿರುತ್ತದೆ) ಹೋಲಿಸಿದರೆ ಅಧಿಕ ವೆಚ್ಚವಾಗಿರುತ್ತದೆ. ಜೊತೆಗೆ ಕೇರಳದ ಬಜೆಟ್‌ನಲ್ಲಿ ಕೇವಲ 10% ಮಾತ್ರ ಬಂಡವಾಳ ಸೃಷ್ಟಿ ಕಾರ್ಯಗಳಿಗೆ (2022-23) ವಿನಿಯೋಗವಾಗುತ್ತದೆ ಎನ್ನುವುದು ಸಹಾ ಗಮನಿಸಬೇಕಾದ ಅಂಶವಾಗಿದೆ.
ಕೇರಳ ರಾಜ್ಯ ಮೂರು ಮೂಲಗಳಿಂದ ತನ್ನ ಸಂಪನ್ಮೂಲವನ್ನು ಪಡೆದುಕೊಳ್ಳುತ್ತದೆ: ಸ್ವಂತ ಮೂಲ (ತೆರಿಗೆ ಮತ್ತು ತೆರಿಗೆಯೇತರ); ಕೇಂದ್ರ ಸರ್ಕಾರ ನೀಡುವ ಸಂಗ್ರಹಿತ ತೆರಿಗೆಯ ಅಂಶ ಮತ್ತು ಅನುದಾನ; ಸಾಲ. 2020-21ನೇ ಸಾಲಿನಲ್ಲಿ ಕೇರಳ ಸರ್ಕಾರ ತನ್ನ ಒಟ್ಟಾರೆ ವೆಚ್ಚದಲ್ಲಿ 18% ಹೆಚ್ಚಳವನ್ನು ಕೋವಿಡ್ 19ರ ಪರಿಣಾಮದಿಂದ ಕಾಣಬೇಕಾಯಿತು. 2023-24ನೇ ಸಾಲಿನಲ್ಲಿ ಕೇಂದ್ರ ನೀಡುವ ಹಣದ ಮೊತ್ತದಲ್ಲಿ 2.4% ಕುಸಿತವಾಗಿದ್ದರೆ, ಸ್ವಂತ ಮೂಲದ ಆದಾಯದ ಬೆಳವಣಿಗೆ 8%ರಲ್ಲಿಯೇ ಸ್ಥಗಿತಗೊಂಡಿದೆ. ಹೀಗಾಗಿ ಕೇರಳ ಸರ್ಕಾರ ತನ್ನ ಬಜೆಟ್ ಅವಶ್ಯಕತೆಯನ್ನು ಈಡೇರಿಸಿಕೊಳ್ಳಲು ಸಾಲ ಪಡೆಯುವ ಅನಿವಾರ್ಯತೆಗೆ ಒಳಗಾಯಿತು. ಸದರಿ ಬಜೆಟ್ ಕೇರಳದ ಒಟ್ಟು ಜಿಎಸ್‌ಡಿಪಿಯ 14.2% ಆಗಿದ್ದರೆ ಮತ್ತು ಪಡೆಯಲು ಮುಂದಾದ ಸಾಲದ ಪ್ರಮಾಣ ಜಿಎಸ್‌ಡಿಪಿಯ 3.4% ಆಗಿತ್ತು. ಇದು ಕೇಂದ್ರ ಸರ್ಕಾರ ನಿಗದಿಪಡಿಸಿರುವ ಸಾಲ ಪಡೆಯುವ ಪ್ರಮಾಣಕ್ಕಿಂತ ಹೆಚ್ಚಿದೆ. ಕೇರಳ ಸರ್ಕಾರದ ದೂರನ್ನು ಇತ್ಯರ್ಥಗೊಳಿಸುವ ಹೊಣೆಗಾರಿಕೆಯನ್ನು ಸುಪ್ರೀಂ ಕೋರ್ಟ್ ತನ್ನ ಸಂವಿಧಾನ ಪೀಠಕ್ಕೆ ವಹಿಸಿದೆ.
ಸರ್ಕಾರವೇಕೆ ವೆಚ್ಚ ಮಾಡಬೇಕು?
ಕೇರಳ ರಾಜ್ಯ ಇದುವರೆಗೂ ಸಾಧಿಸಿರುವ ಸಾಮಾಜಿಕ ಪ್ರಗತಿಯ ಅನುಕೂಲವನ್ನು ತನ್ನ ಆದಾಯ ಹೆಚ್ಚಳಕ್ಕೆ ದುಡಿಸಿಕೊಳ್ಳಬೇಕೆಂದರೆ, ಅದರ ಸರ್ಕಾರದ ವೆಚ್ಚ ಹೆಚ್ಚಾಗಬೇಕಿರುವುದು ಅನಿವಾರ್ಯವಾಗಿದೆ. ಬಹಳ ಮುಖ್ಯವಾಗಿ ಉನ್ನತ ಶಿಕ್ಷಣ ಮತ್ತು ಸಂಶೋಧನೆಗಳಿಗೆ ಪೂರಕವಾದ ವ್ಯವಸ್ಥೆಗಳನ್ನು ನಿರ್ಮಿಸಲು ಹಣವನ್ನು ವಿನಿಯೋಗಿಸುವ ಅನಿವಾರ್ಯತೆಯಿದೆ. ತನ್ಮೂಲಕ ಜ್ಞಾನಾಧರಿತ ಆರ್ಥಿಕ ವ್ಯವಸ್ಥೆಯನ್ನು ರಾಜ್ಯದ ಅನುಕೂಲಕ್ಕೆ ಪೋಷಿಸಲು ಅವಕಾಶವಾಗುತ್ತದೆ. ಸದ್ಯದ ಆರ್ಥಿಕ ಪರಿಸ್ಥಿತಿಯಲ್ಲಿ ಕೇರಳ ಸರ್ಕಾರ ಹೆಚ್ಚಿನ ವೆಚ್ಚಕ್ಕೆ ಅಗತ್ಯವಾದ ಸಂಪನ್ಮೂಲವನ್ನು ಸಾಲದ ಮೂಲಕವೇ ಪಡೆದುಕೊಳ್ಳಲು ಮಾತ್ರ ಅವಕಾಶವಿದೆ.
ಕೇರಳ ಸರ್ಕಾರ ಪಡೆಯುವ ಸಾಲದ ಬಹುತೇಕ ಭಾಗ ಸಾರ್ವಜನಿಕ ಬ್ಯಾಂಕ್‌ಗಳು ಮತ್ತು ವಿಮಾ ಸಂಸ್ಥೆಗಳಿಂದ ಬರುತ್ತದೆ. ಇವು ತಮ್ಮ ಸಂಪನ್ಮೂಲವನ್ನು ಸಾರ್ವಜನಿಕರು ತೊಡಗಿಸುವ ಉಳಿತಾಯದ ಮೂಲಕ ಪಡೆಯುತ್ತವೆ. ದೇಶದಲ್ಲೇ ಅತ್ಯಂತ ಹೆಚ್ಚಿನ ಖಾಸಗಿ ಉಳಿತಾಯದ ಹಣವಿರುವ ರಾಜ್ಯ ಕೇರಳವಾಗಿದೆ. ಹೀಗೆ ಸಂಗ್ರಹಿತವಾದ ಖಾಸಗಿ ಹಣವನ್ನು ಸಾರ್ವಜನಿಕ ಅಭಿವೃದ್ಧಿಯ ಕಾರ್ಯಗಳಿಗೆ ಬಳಸುವುದು ಉತ್ತಮವಾದ ಕ್ರಮವಾಗಿರುತ್ತದೆ.
ಸಾಲದ ಮೇಲೆ ನಡೆಯುವ ಸರ್ಕಾರದ ವೆಚ್ಚಗಳ ಕುರಿತಾಗಿರುವ ಆತಂಕಗಳು ಅಗತ್ಯಕ್ಕಿಂತ ಹೆಚ್ಚಿನ ಮನ್ನಣೆಯನ್ನು ಪಡೆಯುತ್ತಿವೆ. ನವೀನ ಉದ್ಯೋಗಗಳನ್ನು ಸೃಜಿಸುವ ಮತ್ತು ಆದಾಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸಾಲದ ಹಣವನ್ನು ತೊಡಗಿಸಿದ್ದೇ ಆದಲ್ಲಿ, ಸರ್ಕಾರದ ವೆಚ್ಚಗಳು ಸಾಮಾಜಿಕ ಲಾಭವನ್ನು ನೀಡುತ್ತವೆ ಎನ್ನುವುದನ್ನು ಅರ್ಥಶಾಸ್ತ್ರಜ್ಞರು ಒಪ್ಪುತ್ತಾರೆ. ಮುಪ್ಪಾಗುತ್ತಿರುವ ಜನಸಂಖ್ಯೆ, ಹೆಚ್ಚಾಗುತ್ತಿರುವ ಪೆನ್‌ಶನ್ ಹೊರೆ, ಯುವ ಜನತೆಯ ವಲಸೆ – ಇವೇ ಮುಂತಾದ ಸವಾಲುಗಳನ್ನು ಕೇರಳ ರಾಜ್ಯ ಎದುರಿಸುತ್ತಿದೆ. ಮುಂದಿನ ದಿನಗಳಲ್ಲಿ ಇತರೆ ರಾಜ್ಯಗಳು ಸಹಾ ಇವೇ ಸವಾಲನ್ನು ಎದುರಿಸುವ ಅನಿವಾರ್ಯತೆಯಿದೆ. ಇವನ್ನು ನಿಭಾಯಿಸುವ ಸೂಕ್ತ ಮಾರ್ಗವನ್ನು ಸಂಶೋಧಿಸಲು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಒಟ್ಟಾಗಿ ಕಾರ್ಯನಿರ್ವಹಿಸುವ ತುರ್ತು ಇದೆ. ಹಾಗೇ ಕೇರಳ ರಾಜ್ಯವೂ ಸಹಾ ತಾನು ಪಡೆಯುವ ಸಾಲದ ಬಹುತೇಕ ಭಾಗ ಆರ್ಥಿಕ ವ್ಯವಸ್ಥೆಯನ್ನು ಬಲಪಡಿಸಲು ವಿನಿಯೋಗವಾಗುತ್ತದೆ ಎನ್ನುವುದನ್ನು ಇತರರಿಗೆ ಮನದಟ್ಟು ಮಾಡಬೇಕಿದೆ.
(ಮೂಲ: ಜಯನ್ ಜೋಸ್ ಥಾಮಸ್, ಐಐಟಿ, ದೆಹಲಿಯಲ್ಲಿ ಅರ್ಥಶಾಸ್ತ್ರದ ಪ್ರೊಫೆಸರ್. ದಿ ಹಿಂದೂ ಪತ್ರಿಕೆ, 5.4.2024)
