- ನಮ್ಮ ತೆರಿಗೆ ಹಣದಲ್ಲಿ ಕೇಂದ್ರ ಸರ್ಕಾರ ರಾಜ್ಯಭಾರ ಮಾಡುತ್ತಿಲ್ಲವೇ?
- ನಾವು ಸಾಮಂತ ರಾಜರು, ಕೇಂದ್ರದವರು ಧೀಮಂತ ರಾಜರಾ?: ಕಿಡಿ
ಕೇಂದ್ರ ಸರ್ಕಾರದ ತಾರತಮ್ಯ ನೋಡಿಕೊಂಡು ಒಕ್ಕೂಟ ವ್ಯವಸ್ಥೆಯಲ್ಲಿ ನಾವು ಇನ್ನೂ ಇರಬೇಕಾ? ನಮ್ಮ ತೆರಿಗೆ ಹಣದಲ್ಲಿ ಕೇಂದ್ರ ಸರ್ಕಾರ ರಾಜ್ಯಭಾರ ಮಾಡುತ್ತಿಲ್ಲವೇ? ನಾವು ಸಾಮಂತ ರಾಜರು, ಅವರು (ಕೇಂದ್ರ ಸರ್ಕಾರ) ಧೀಮಂತ ರಾಜರಾ? ಎಂದು ಅರಸೀಕೆರೆ ಶಾಸಕ ಶಿವಲಿಂಗೇಗೌಡ ತೀವ್ರ ಬೇಸರದ ಮಾತುಗಳನ್ನು ಆಡಿದರು.
ಗುರುವಾರದ ವಿಧಾನಸಭೆ ಕಲಾಪದಲ್ಲಿ ರಾಜ್ಯಪಾಲರ ಭಾಷಣದ ಮೇಲೆ ಮಾತನಾಡಿ, “ಒಕ್ಕೂಟ ವ್ಯವಸ್ಥೆಯ ಅರ್ಥಕ್ಕೆ ಮಸಿ ಬಳಿಯುವ ರೀತಿ ಕೇಂದ್ರ ಸರ್ಕಾರ ನಡೆದುಕೊಂಡಿದೆ. ಸಾಕಷ್ಟು ಪ್ರಮಾಣದಲ್ಲಿ ಅಕ್ಕಿ ಇದ್ದರೂ ದ್ವೇಷ ರಾಜಕಾರಣಕ್ಕೆ ಅಕ್ಕಿ ನೀಡುತ್ತಿಲ್ಲ. ಬಡವರ ಮೇಲೆ ಕೇಂದ್ರಕ್ಕೆ ಎಷ್ಟು ಅಸಹನೆ ಇದೆ ಎಂಬುದು ಇದರಿಂದ ಅರ್ಥವಾಗುತ್ತದೆ” ಎಂದರು.
ಶಿವಲಿಂಗೇಗೌಡ ಮಾತಿಗೆ ಆಕ್ಷೇಪ ಎತ್ತಿದ ಬಿಜೆಪಿ ಸದಸ್ಯರು ಅವರ ಆಡುವ ಪ್ರತಿ ಮಾತಿಗೂ ಅಡ್ಡಿಪಡಿಸಿದರು. ಇದರಿಂದ ಸಿಟ್ಟಾದ ಶಿವಲಿಂಗೇಗೌಡರು, “ನೀವು ವಿರೋಧ ಪಕ್ಷದಲ್ಲಿ ಇರುವವರು. ಪ್ರತಿಮಾತಿಗೂ ಹೀಗೆ ಅಡ್ಡಿಪಡಿಸಿ ಸದನದಲ್ಲಿ ಹೊಸ ಸಂಪ್ರದಾಯ ಆರಂಭಿಸಿದ್ದೀರಿ. ಜನರು ನಿಮ್ಮನ್ನು ಅಧಿಕಾರದಿಂದ ಕೆಳಗೆ ಇಳಿಸಿದರೂ ನಿಮಗೆ ಬುದ್ಧಿ ಬಂದಿಲ್ಲ” ಎಂದು ತರಾಟೆಗೆ ತೆಗೆದುಕೊಂಡರು.
ಮಾಜಿ ಸಚಿವ ಅಶ್ವತ್ಥನಾರಾಯಣ ಮಧ್ಯ ಪ್ರವೇಶಿಸಿ, “ಕಾಂಗ್ರೆಸ್‌ಗೆ ಹೋಗಿ ನೀವೇನು ಸಾಧಿಸಿದ್ರಿ ಮೊದಲು ಅದನ್ನು ಹೇಳಿ?” ಎಂದರು. ತಿರುಗೇಟು ನೀಡಿದ ಶಿವಲಿಂಗೇಗೌಡ, “ನೋಡಿ ಅಶ್ವತ್ಥನಾರಾಯಣ, ನಿಮಗೆ ತಾಕತ್ತು, ಧಮ್ಮು ಇದ್ದರೆ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಗೆದ್ದು ತೋರಿಸಿʼ’ ಎಂದು ಸವಾಲು ಹಾಕಿದರು.
‘ಕೇಂದ್ರದ ನಾಯಕರು ಮಾರ್ಕ್ಸ್ ಕೊಡುತ್ತಾರೆ’
ಲಕ್ಷ್ಮಣ ಸವದಿ ಅವರು ಶಿವಲಿಂಗೇಗೌಡ ಬೆಂಬಲಕ್ಕೆ ಎದ್ದು ನಿಂತು, “ಈ ಸದನದಲ್ಲಿ ಕಾಂಗ್ರೆಸ್ ಸದಸ್ಯರು ಪ್ರಸ್ತಾಪಿಸುವ ಪ್ರತಿ ವಿಚಾರಗಳಿಗೂ ಬಿಜೆಪಿ ಸದಸ್ಯರು ಗುಂಪಾಗಿ ಎದ್ದು ನಿಂತು ಏರುಧ್ವನಿಯಲ್ಲಿ ಮಾತನಾಡಲು ಹೋಗುತ್ತಾರೆ. ಕಾರಣ ಕೇಂದ್ರದ ನಾಯಕರು ಸದನದ ವಿಡಿಯೋ ನೋಡುತ್ತಿದ್ದು, ಇವರೆಲ್ಲರಿಗೂ ಅಂಕ ನೀಡುತ್ತಿದ್ದಾರೆ. ಇದಕ್ಕಾಗಿ ಇವರು ಈ ರೀತಿ ನಡೆದುಕೊಳ್ಳುತ್ತಿದ್ದಾರೆ” ಎಂದು ಛೇಡಿಸಿದರು.
ಅಶ್ವತ್ಥನಾರಾಯಣ ಮಧ್ಯ ಪ್ರವೇಶಿಸಿ, “ಕಾಂಗ್ರೆಸ್‌ನಲ್ಲಿ ನಿಮಗೆ ಏನು ಸ್ಥಾನಮಾನ ಸಿಕ್ಕಿದೆ ನೋಡಿ” ಎಂದು ವ್ಯಂಗ್ಯ ಮಾಡಿದರು. ಸವದಿ ತಿರುಗೇಟು ನೀಡಿ, “ನೋಡಿ ಅಶ್ವತ್ಥನಾರಾಯಣ, ನಿಮ್ಮ ತರ ಸ್ವಾಭಿಮಾನ ಬಿಟ್ಟು ಬದುಕುವ ರೂಢಿ ನನಗಿಲ್ಲ. ಸ್ವಾಭಿಮಾನಕ್ಕೆ ಪೆಟ್ಟಾಯಿತು. ಅಲ್ಲಿಂದ ಎದ್ದು ಬಂದೆ. ಗುಲಾಮಿ ಮನಸ್ಥಿತಿ ನನಗಿಲ್ಲ” ಎಂದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ರಾಜ್ಯದಲ್ಲಿ ಮತ್ತೆ ಶುರುವಾಯಿತು ಹೆಣ ರಾಜಕಾರಣ
ಶಿವಲಿಂಗೇಗೌಡ ಮತ್ತೆ ಭಾಷಣ ಆರಂಭಿಸುತ್ತಿದ್ದಂತೆ ಬಿಜೆಪಿ ಸದಸ್ಯರು ಮತ್ತೊಮ್ಮೆ ಅಡ್ಡಿಪಡಿಸಿದರು. ಕೆಂಡಾಮಂಡಲರಾದ ಶಿವಲಿಂಗೇಗೌಡ, “ನಿಮಗೆ ಇಷ್ಟು ಹೊಟ್ಟೆ ಉರಿ ಇದ್ದರೆ ನಾನಿನ್ನು ಮಾತನಾಡುವುದೇ ಇಲ್ಲ ಬಿಡಿ. ಬಡವರ ಬಗ್ಗೆ ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯದ ಬಗ್ಗೆ ಪ್ರಶ್ನಿಸಿದರೆ ನಿಮಗೆ ಸಂಕಟವಾಗುತ್ತದೆ. ನಾನು ರೈತನ ಮಗ. ಈ ಅನ್ಯಾಯ ನೋಡಿಕೊಂಡು ನಿಮ್ಮ ತರ ಕೈಕಟ್ಟಿ ಕುಳಿತುಕೊಳ್ಳಲು ಆಗುವುದಿಲ್ಲ” ಎಂದು ಸಾತ್ವಿಕ ಸಿಟ್ಟಿನಿಂದ ಉತ್ತರಿಸಿದರು.
ಕೊನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಧ್ಯ ಪ್ರವೇಶಿಸಿ, “ವಿರೋಧ ಪಕ್ಷದ ಸದಸ್ಯರು ಸದನದ ಮರ್ಯಾದೆ ಹಾಳು ಮಾಡಬಾರದು. ಶಿವಲಿಂಗೇಗೌಡರಿಗೆ ಮಾತನಾಡಲು ಅವಕಾಶ ಕೊಡದೇ ಪ್ರತಿ ಮಾತಿಗೂ ತಡೆಯುತ್ತೀರಿ. ನಿಮಗೂ ಹಕ್ಕು ಇದೆ. ಅವರ ಮಾತುಗಳಲ್ಲಿ ತಪ್ಪು ಇದ್ದರೆ ನಂತರ ಸದನದ ಗಮನಕ್ಕೆ ತನ್ನಿ. ಅದನ್ನು ಬಿಟ್ಟು ಮಧ್ಯ ಮಧ್ಯ ಎದ್ದು ತೊಂದರೆ ಕೊಟ್ಟರೆ ಹೇಗೆ?” ಎಂದು ಬುದ್ಧಿ ಮಾತು ಹೇಳಿದರು.
”ಬಿಜೆಪಿಯವರ ಕ್ಷುಲ್ಲಕ ಬುದ್ಧಿ ನಡುವೆ ಮಾತನಾಡಲೇಬೇಕು ಎನ್ನುವ ಅವಶ್ಯಕತೆ ನನಗಿಲ್ಲ. ನಮಗೂ ಅವರಾಡುವ ಮಾತುಗಳಿಗೆ ಅಡ್ಡಿಪಡಿಸಲು ಬರುತ್ತದೆ. ಸದನದಲ್ಲಿ ಕೆಟ್ಟ ಸಂಪ್ರದಾಯ ಆರಂಭಿಸಿದ್ದಾರೆ. ಯಾವುದೇ ಮಾತು ತಾಳ್ಮೆಯಿಂದ ಕೇಳಿಸಿಕೊಳ್ಳುವ ಗುಣ ಇವರಿಗಿಲ್ಲ. ರಾಜ್ಯದ ಜನ ನೋಡುತ್ತಿದ್ದಾರೆ. ಲೋಕಸಭೆಯಲ್ಲೂ ಇವರಿಗೆ ತಕ್ಕ ಉತ್ತರವನ್ನು ನೀಡಲಿದ್ದಾರೆ” ಎಂದು ಮಾತು ಮುಗಿಸಿ ಕುಳಿತರು.