ಶ್ರೀಪಾದ ಭಟ್ ಅವರ 'ಒಕ್ಕೂಟವೋ, ತಿಕ್ಕಾಟವೋ' ಪುಸ್ತಕ ಎಲ್ಲ ಕ್ಷೇತ್ರಗಳಲ್ಲೂ – ಶಾಸನಾತ್ಮಕ, ಆಡಳಿತಾತ್ಮಕ ಹಾಗೂ ಹಣಕಾಸು - ಗಣರಾಜ್ಯ ವ್ಯವಸ್ಥೆ ಎದುರಿಸುತ್ತಿರುವ ಬಿಕ್ಕಟ್ಟುಗಳನ್ನು ಚರ್ಚಿಸುತ್ತದೆ. ಗಣರಾಜ್ಯ ವ್ಯವಸ್ಥೆಯ ಬಿಕ್ಕಟ್ಟುಗಳನ್ನು ವಿವರಿಸುವ ಬರಹಗಳನ್ನು ಓದುವುದು ಇಂದು ನಮ್ಮ ಗಣರಾಜ್ಯ ವ್ಯವಸ್ಥೆ ಎದುರಿಸುತ್ತಿರುವ ಬಿಕ್ಕಟ್ಟುಗಳನ್ನು ಅರ್ಥ ಮಾಡಿಕೊಳ್ಳಲು ಅನಿವಾರ್ಯ.
ನಮ್ಮ ಒಕ್ಕೂಟ ವ್ಯವಸ್ಥೆ ಅಲುಗಾಡುತ್ತಿರುವ ಸಂದರ್ಭದಲ್ಲಿ ಒಕ್ಕೂಟ ವ್ಯವಸ್ಥೆ ಕುರಿತ ಚರ್ಚೆ, ಬರಹಗಳ ಕೊರತೆಯಿದೆ. ಇಂತಹ ಕೊರತೆಯನ್ನು ಬಿ.ಶ್ರೀಪಾದ ಭಟ್ ಅವರ ‘ಒಕ್ಕೂಟವೋ ತಿಕ್ಕಾಟವೋ’ ಪುಸ್ತಕ ತುಂಬಬಹುದು. ನಮ್ಮ ಒಕ್ಕೂಟ ವ್ಯವಸ್ಥೆ ಹೊರನೋಟಕ್ಕೆ ಕಾಣುವಷ್ಟು ಸರಳವಾಗಿಲ್ಲ ಎನ್ನುವುದನ್ನು ಮನದಟ್ಟು ಮಾಡುವ ಹಲವು ಬೆಳವಣಿಗೆಗಳನ್ನು ಪುಸ್ತಕ ಚರ್ಚಿಸುತ್ತಿದೆ.
ನಮ್ಮದು ಅಮೆರಿಕಾದ ರೀತಿಯಲ್ಲಿ ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾ ಅಲ್ಲ. ಅಲ್ಲಿ ಮೊದಲು ರಾಜ್ಯಗಳು ನಂತರ ಫೆಡರಲ್ ಅಥವಾ ಒಕ್ಕೂಟ ವ್ಯವಸ್ಥೆ ರೂಪುಗೊಂಡಿದೆ. ಪ್ರತಿ ರಾಜ್ಯಕ್ಕೂ ಅಲ್ಲಲ್ಲಿ ಅದರದ್ದೇ ಆದ ಸಂವಿಧಾನ ಇದೆ. ಕೇಂದ್ರದ ಕಾಯಿದೆ ಕಾನೂನುಗಳನ್ನು ಒಪ್ಪುವ ಅಥವಾ ನಿರಾಕರಿಸುವ ಸ್ವಾತಂತ್ರ್ಯ ಅಲ್ಲಿನ ರಾಜ್ಯಗಳಿಗಿದೆ. ಆದರೆ ನಮ್ಮದು ಯುನೈಟೆಡ್ ಸ್ಟೇಟ್ಸ್ ಆಫ್ ಇಂಡಿಯಾ ಅಲ್ಲ. ಇಲ್ಲಿ ಮೊದಲು ಕೇಂದ್ರ ನಂತರ ರಾಜ್ಯಗಳು ಹುಟ್ಟಿವೆ. ವಸಾಹತು ನಂತರ ರೂಪುಗೊಂಡ ಇಲ್ಲಿನ ಹಲವು ರಾಜ್ಯಗಳು ವಸಾಹತು ಕಾಲದಲ್ಲಿ ಬ್ರಿಟಿಷ್ ಅಧಿಕಾರಿಗಳ(ಪ್ರೆಸಿಡೆನ್ಸಿ), ರಾಜರುಗಳ, ಸಾಮಂತರ ಆಳ್ವಿಕೆಯಲ್ಲಿದ್ದವು. ಸ್ವಾತಂತ್ರ್‍ಯ ನಂತರ ಅವನ್ನು ಪ್ರಯತ್ನಪೂರ್ವಕವಾಗಿ ಒಕ್ಕೂಟ ವ್ಯವಸ್ಥೆಗೆ ತರಲಾಯಿತು.
ಒಕ್ಕೂಟ ವ್ಯವಸ್ಥೆ ರೂಪುಗೊಳ್ಳುವ ಚಾರಿತ್ರಿಕ ಸಂದರ್ಭದ ಹಲವು ಬೆಳವಣಿಗೆಗಳು ಬಲವಾದ ಕೇಂದ್ರ ಮತ್ತು ಬಲಹೀನ ರಾಜ್ಯ ವ್ಯವಸ್ಥೆ ರೂಪಿಸುವಲ್ಲಿ ಮಹತ್ತರವಾದ ಪಾತ್ರ ವಹಿಸಿವೆ. ಅವುಗಳಲ್ಲಿ ಎರಡು ಪ್ರಮುಖ. ಒಂದು, ಭಾರತ ಪಾಕಿಸ್ತಾನ ವಿಭಜನೆ ಮತ್ತು ಎರಡು, ಕೆಲವು ಪ್ರದೇಶಗಳಲ್ಲಿ ಕೇಳಿ ಬರುತ್ತಿದ್ದ ಪ್ರತ್ಯೇಕ ರಾಷ್ಟ್ರದ ಕೂಗು. ಇವುಗಳ ಜೊತೆಗೆ ನಮ್ಮದು ಮೂಲತಃ ಬಹುಸಂಸ್ಕೃತಿಯ ನಾಡು. ಇಲ್ಲಿ ಬಹುತ್ವದಲ್ಲಿ ಏಕತೆಯನ್ನು ಕಾಪಾಡಿಕೊಳ್ಳುವುದು ಆದ್ಯತೆ ಆಯಿತು. ಇವೆಲ್ಲವೂ ಕೇಂದ್ರ ಸಂವಿಧಾನದಲ್ಲಿ ಅತೀ ಹೆಚ್ಚಿನ ಶಕ್ತಿ ಪಡೆಯಲು ಕಾರಣಗಳಾದವು. ರಾಜ್ಯಗಳನ್ನು ಹುಟ್ಟು ಹಾಕುವ, ರಾಜ್ಯಗಳನ್ನು ರದ್ದುಗೊಳಿಸುವ, ರಾಜ್ಯಗಳನ್ನು ಕೇಂದ್ರ ಸರಕಾರದ ಆಡಳಿತಕ್ಕೆ ಒಳಪಡಿಸುವ ಅಧಿಕಾರವನ್ನು ಸಂವಿಧಾನ ಕೇಂದ್ರಕ್ಕೆ ನೀಡಿದೆ. ಕಾಯಿದೆ ಕಾನೂನುಗಳಿಗೆ ಸಂಬಂಧಿಸಿದಂತೆ ಕೇಂದ್ರ ಹಾಗೂ ರಾಜ್ಯಗಳ ಪಟ್ಟಿ ಇದ್ದರೂ ಕೇಂದ್ರ ರಾಜ್ಯಕ್ಕೆ ಸಂಬಂಧಪಟ್ಟ ವಿಷಯಗಳ ಮೇಲೆ ಕಾಯಿದೆ ಮಾಡುವ ಅಧಿಕಾರ ಪಡೆದಿದೆ. ಜನರ ಬದುಕಿಗೆ ನೇರವಾಗಿ ಸಂಬಂಧಿಸಿದ ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ಬಹುಪಾಲು ರಾಜ್ಯಗಳ ಜವಾಬ್ದಾರಿ. ಆದರೆ ತೆರಿಗೆ ಸಂಗ್ರಹಿಸುವ ಅಧಿಕ ಅಧಿಕಾರ ಕೇಂದ್ರದ ಪಾಲಾಗಿದೆ. ಹೀಗೆ ನಮ್ಮ ಸಂವಿಧಾನವೇ ಬಲವಾದ ಕೇಂದ್ರ ಮತ್ತು ಬಲಹೀನ ರಾಜ್ಯಗಳನ್ನು ಸೃಷ್ಟಿಸಿದೆ.
ಇದನ್ನು ಓದಿದ್ದೀರಾ?: ಪಕ್ಷಾಂತರಿಗಳನ್ನು ಶಿಕ್ಷಿಸುವ ಅಧಿಕಾರವನ್ನು ಜನ ತಮ್ಮ ಕೈಗೇ ತೆಗೆದುಕೊಳ್ಳಬೇಕಿದೆ
ಹಾಗೆಂದು ಇದೇ ಸ್ಥಿತಿಯಲ್ಲೇ ಮುಂದುವರಿಯಬೇಕೆಂದಿಲ್ಲ. ಕಾಲಕಾಲಕ್ಕೆ ಸಂವಿಧಾನದ ತಿದ್ದುಪಡಿಗಳು ನಡೆಯುತ್ತಿವೆ. ಇವುಗಳಲ್ಲಿ ಕೆಲವು ಇನ್ನೂ ಹೆಚ್ಚಿನ ಅಧಿಕಾರವನ್ನು ಕೇಂದ್ರಕ್ಕೆ ಒಪ್ಪಿಸಿದರೆ ಕೆಲವು ತಿದ್ದುಪಡಿಗಳು ಕೇಂದ್ರದ ಅಧಿಕಾರವನ್ನು ಹಂಚಿಕೊಳ್ಳಲು ಅವಕಾಶ ಕಲ್ಪಿಸಿವೆ. ಉದಾಹರಣೆಗೆ 1976ರಲ್ಲಿ ನಡೆದ 42ನೇ ಸಂವಿಧಾನದ ತಿದ್ದುಪಡಿ ರಾಜ್ಯ ಪಟ್ಟಿಯಲ್ಲಿದ್ದ ಹಲವು ವಿಷಯಗಳನ್ನು ಸಮವರ್ತಿ (ಕಾನ್‌ಕರೆಂಟ್ – ಇಬ್ಬರಿಗೂ ಸೇರಿದ) ಪಟ್ಟಿಗೆ ಸೇರಿಸಿದೆ. 1993ರಲ್ಲಿ ನಡೆದ 73 ಮತ್ತು 74ನೇ ತಿದ್ದುಪಡಿಗಳು ಕೇಂದ್ರ, ರಾಜ್ಯಗಳಿಗೆ ಸೀಮಿತವಾಗಿದ್ದ ಸರಕಾರವನ್ನು ಇನ್ನೂ ಕೆಳಗೆ ಇಳಿಸಿ ಜಿಲ್ಲಾ, ತಾಲ್ಲೂಕು ಮತ್ತು ಪಂಚಾಯತ್ ಮಟ್ಟದಲ್ಲೂ ಸರಕಾರಗಳ ರಚನೆಗೆ ಅವಕಾಶ ಕಲ್ಪಿಸಿವೆ. ಅಷ್ಟು ಮಾತ್ರವಲ್ಲ ಕಾಲಕಾಲಕ್ಕೆ ಕೇಂದ್ರ ಮತ್ತು ರಾಜ್ಯಗಳ ಸಂಬಂಧಗಳ ಸುಧಾರಣೆಗೆ ಅಧ್ಯಯನ ಸಮಿತಿಗಳು ನೇಮಕಗೊಂಡು ಸಲಹೆಗಳನ್ನು ನೀಡುತ್ತಿವೆ. ಇವೆಲ್ಲ ಬಿಜೆಪಿ ಪಕ್ಷ ಕೇಂದ್ರದಲ್ಲಿ ಅಧಿಕಾರ ಪಡೆಯುವತನಕದ ಕೇಂದ್ರ-ರಾಜ್ಯ ಸಂಬಂಧಗಳ ಕತೆ. 2014ರಲ್ಲಿ ಬಿಜೆಪಿ ಅಧಿಕಾರದ ಗದ್ದುಗೆ ಏರಿದ ನಂತರ ಸಂವಿಧಾನದ ಅನುಷ್ಠಾನಕ್ಕಿಂತ ಹೆಚ್ಚು ತಮ್ಮ ಪಕ್ಷದ ಅಜಂಡಾವನ್ನು ಜಾರಿಗೊಳಿಸುವುದಕ್ಕೆ ಆದ್ಯತೆ ನೀಡುತ್ತಿದೆ. ಒಕ್ಕೂಟ ವ್ಯವಸ್ಥೆಯನ್ನು ಶಾಶ್ವತವಾಗಿ ಕದಡುವ ಹಲವು ಪ್ರಯತ್ನಗಳು ನಡೆಯುತ್ತಿವೆ.
ರಾಜ್ಯಪಾಲರನ್ನು ಬಳಸಿಕೊಂಡು ರಾಜ್ಯ ಸರಕಾರಗಳ ಆಡಳಿತದ ಮೇಲೆ ಹತೋಟಿ ಸಾಧಿಸಲು ಪ್ರಯತ್ನಿಸುವುದು, ಎಂಎಲ್‌ಎಗಳನ್ನು ಖರೀದಿಸಿ ವಿರೋಧ ಪಕ್ಷದ ರಾಜ್ಯ ಸರಕಾರಗಳನ್ನು ಅಧಿಕಾರದಿಂದ ಇಳಿಸುವುದು, ಸಿಬಿಐ, ಇಡಿ, ಆದಾಯ ತೆರಿಗೆ ಇತ್ಯಾದಿ ಇಲಾಖೆಗಳನ್ನು ಬಳಸಿಕೊಂಡು ವಿರೋಧ ಪಕ್ಷದ ನಾಯಕರನ್ನು ಬಂಧಿಸುವುದು ಇತ್ಯಾದಿಗಳೆಲ್ಲ ತಾತ್ಕಾಲಿಕವಾಗಿ ಕೇಂದ್ರ-ರಾಜ್ಯ ಸಂಬಂಧಗಳನ್ನು ಹದಗೆಡಿಸುತ್ತಿವೆ. ಇವೆಲ್ಲ ಶಾಶ್ವತವಾಗಿ ನಡೆಯಲು ಸಾಧ್ಯವಿಲ್ಲ. ಆದರೆ ಬಿಜೆಪಿ ಪಕ್ಷದ ಕೆಲವು ಅಜಂಡಾಗಳು ನಮ್ಮ ಒಕ್ಕೂಟ ವ್ಯವಸ್ಥೆಯನ್ನು ಶಾಶ್ವತವಾಗಿ ಹದಗೆಡಿಸಬಹುದು. ಅವುಗಳಲ್ಲಿ ಪ್ರಮುಖ ಬಿಜೆಪಿ ಪಕ್ಷದ ಒಂದು ದೇಶ, ಒಂದು ಭಾಷೆ, ಒಂದು ಸಂಸ್ಕೃತಿ, ಒಂದು ಮಾರುಕಟ್ಟೆ, ಒಂದು ತೆರಿಗೆ, ಒಂದು ಪರೀಕ್ಷೆ, ಒಂದು ಚುನಾವಣೆ ಇತ್ಯಾದಿಗಳು. 2022ರಲ್ಲಿ ಕೇಂದ್ರ ಸರಕಾರದ ಗೃಹ ಇಲಾಖೆ ಅಧ್ಯಕ್ಷರಿಗೆ ಸಲ್ಲಿಸಿದ ಅಧಿಕೃತ ಭಾಷೆ ಮೇಲಿನ ವರದಿ ಹಲವು ಅಧಿಕೃತ ಭಾಷೆಗಳ ಇರುವಿಕೆಯನ್ನು ನಿರಾಕರಿಸುತ್ತಿದೆ. ಆ ವರದಿಯಲ್ಲಿ ಹಿಂದಿಯನ್ನು ಶಿಕ್ಷಣ, ಆಡಳಿತ, ಉದ್ಯೋಗಗಳಲ್ಲಿ ಕಡ್ಡಾಯಗೊಳಿಸುವ ಇರಾದೆ ಇದೆ. ಕೇಂದ್ರ ಸರಕಾರ ನಡೆಸುವ (ಪ್ರಾಥಮಿಕದಿಂದ ಉನ್ನತ) ಶಿಕ್ಷಣ ಸಂಸ್ಥೆಗಳಲ್ಲಿ ಹಿಂದಿ ಮಾಧ್ಯಮದಲ್ಲೇ ಪಠ್ಯಪ್ರವಚನ ನಡೆಯಬೇಕು, ಕೇಂದ್ರ ಸರಕಾರದ ಇಲಾಖೆಗಳ ಉದ್ಯೋಗಕ್ಕೆ ನಡೆಯವ ಪ್ರವೇಶ ಪರೀಕ್ಷೆಗಳನ್ನು ಹಿಂದಿಯಲ್ಲೇ ನಡೆಸಬೇಕು, ಕೇಂದ್ರ ಸರಕಾರ ಪತ್ರಿಕೆಗಳಿಗೆ ನೀಡುವ ಜಾಹೀರಾತಿನ ಶೇ.50ನ್ನು ಹಿಂದಿ ಪತ್ರಿಕೆಗಳಿಗೆ ನೀಡಬೇಕು, ರಾಜ್ಯಗಳು ಹಿಂದಿ ಪ್ರಚಾರ ಮಾಡುವುದನ್ನು ಕಡ್ಡಾಯಗೊಳಿಸಬೇಕು ಇತ್ಯಾದಿ ಶಿಫಾರಸ್ಸುಗಳಿವೆ.
ಆದಾಯತೆರಿಗೆ, ಕಾರ್ಪೊರೇಟ್ ತೆರಿಗೆ, ಸೆಂಟ್ರಲ್ ಎಕ್ಸೈಸ್, ಸೆಂಟ್ರಲ್ ಕಸ್ಟಮ್ಸ್ ಇತ್ಯಾದಿ ಶೇ.70ಕ್ಕಿಂತಲೂ ಹೆಚ್ಚಿನ ತೆರಿಗೆಗಳನ್ನು ಕೇಂದ್ರ ಸರಕಾರ ಸಂಗ್ರಹಿಸುತ್ತಿತ್ತು. ಜಿ.ಎಸ್.ಟಿ ಜಾರಿಗೆ ಬಂದ ನಂತರ ಶೇ.80ಕ್ಕಿಂತಲೂ ಹೆಚ್ಚಿನ ತೆರಿಗೆ ಸಂಗ್ರಹ ಅಧಿಕಾರ ಕೇಂದ್ರದ ಪಾಲಾಯಿತು. ನಮ್ಮ ರಾಜ್ಯದಿಂದ ಪ್ರತಿ ತಿಂಗಳು ಕೆಲವು ಸಾವಿರ (ರೂ.12,344) ಕೋಟಿ ಜಿ.ಎಸ್.ಟಿ ಸಂಗ್ರಹವಾಗುತ್ತಿದೆ. ಇಡೀ ದೇಶದಲ್ಲೇ ಮಹಾರಾಷ್ಟ್ರ ಜಿ.ಎಸ್.ಟಿ ಸಂಗ್ರಹದಲ್ಲಿ ಮೊದಲನೇ ಸ್ಥಾನದಲ್ಲಿದ್ದರೆ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಜಿ.ಎಸ್.ಟಿ ಜಾರಿಗೆ ಬಂದ ನಂತರ ನಮ್ಮ ರಾಜ್ಯದ ಅಗತ್ಯಕ್ಕೆ ಅನುಸಾರ ತೆರಿಗೆ ವಿಧಿಸಿ ಸಂಗ್ರಹಿಸುವ ಅಧಿಕಾರ ಇಲ್ಲದಾಗಿದೆ. ಜೊತೆಗೆ ಕೇಂದ್ರ ಕಾಲಕಾಲಕ್ಕೆ ನಮ್ಮ ಪಾಲನ್ನು ನೀಡದಿದ್ದರೆ ಕಾಡಿಬೇಡಿ ಪಡೆಯುವ ಸ್ಥಿತಿ ನಿರ್ಮಾಣ ಆಗಿದೆ. ಕೇಂದ್ರ ಸರಕಾರ ಸಂಗ್ರಹಿಸುವ ತೆರಿಗೆಯಲ್ಲಿ ಕೇಂದ್ರ ಮತ್ತು ರಾಜ್ಯಗಳ ಪಾಲನ್ನು ಮತ್ತು ಪ್ರತಿರಾಜ್ಯದ ಪಾಲನ್ನು ಕೇಂದ್ರ ಸರಕಾರ ನೇಮಿಸುವ ಹಣಕಾಸು ಸಮಿತಿ ನಿರ್ಧರಿಸುತ್ತಿದೆ. 14ನೇ ಹಣಕಾಸು ಸಮಿತಿ (2015-20) ರಾಜ್ಯಗಳ ಪಾಲನ್ನು ಶೇ.32ರಿಂದ ಶೇ.42ಕ್ಕೆ ಏರಿಸಿದೆ. ಇದು 2015ರಲ್ಲಿ ಅಧಿಕಾರ ನಡೆಸುತ್ತಿದ್ದ ಕೇಂದ್ರ ಸರಕಾರಕ್ಕೆ ಸರಿ ಬರಲಿಲ್ಲ. ಹಾಗೆಂದು ಹಣಕಾಸು ಸಮಿತಿಯ ನಿರ್ಧಾರವನ್ನು ಬದಲಿಸುವಂತಿರಲಿಲ್ಲ. ಆದುದರಿಂದ ರಾಜ್ಯಗಳ ಪಾಲನ್ನುಕಡಿಮೆ ಮಾಡಲು ಕೇಂದ್ರ ಅಡ್ಡದಾರಿ ತುಳಿಯಿತು.
ಇದನ್ನು ಓದಿದ್ದೀರಾ?: ಹಿಡನ್ ಅಜೆಂಡಾ | ಅಡೊಲೊಸೆನ್ಸ್ ಎಂಬ ನೆಟ್‌ಫ್ಲಿಕ್ಸ್ ಸಿರೀಸ್ ಹುಟ್ಟುಹಾಕಿದ ಪ್ರಶ್ನೆಗಳ ಸುತ್ತ
ಕೇಂದ್ರ ಸಂಗ್ರಹಿಸುವ ತೆರಿಗೆಯಲ್ಲಿ ಎರಡು ಪಾಲಿದೆ– ಒಂದು, ಮೂಲ ತೆರಿಗೆ ಮತ್ತು ಎರಡು, ಸೆಸ್ ಮತ್ತು ಸರ್‌ಚಾರ್ಜ್. ಮೂಲ ತೆರಿಗೆಯನ್ನು ರಾಜ್ಯಗಳೊಂದಿಗೆ ಹಂಚಿಕೊಳ್ಳಬೇಕು; ಸೆಸ್, ಸರ್‌ಚಾರ್ಜ್‌ಗಳನ್ನು ರಾಜ್ಯಗಳೊಂದಿಗೆ ಹಂಚಿಕೊಳ್ಳುವ ಅಗತ್ಯ ಇಲ್ಲ. ಆದುದರಿಂದ ಕೇಂದ್ರ ಮೂಲ ತೆರಿಗೆಯನ್ನು ಯಥಾಸ್ಥಿತಿಯಲ್ಲಿರಿಸಿ ಹೆಚ್ಚು ಹೆಚ್ಚು ಸೆಸ್ ಮತ್ತು ಸರ್‌ಚಾರ್ಜ್‌ಗಳನ್ನು ಸಂಗ್ರಹಿಸಲು ಆರಂಭಿಸಿತು. ಪರಿಣಾಮವಾಗಿ 2017ರಲ್ಲಿ ಶೇ.13.5ರಷ್ಟಿದ್ದ ಸೆಸ್ ಸಂಗ್ರಹ 2020ರಲ್ಲಿ ಶೇ.20.2ಕ್ಕೆ ಏರಿತು. ಸೆಸ್ ಸಂಗ್ರಹ ಹೆಚ್ಚಾದುದರಿಂದ ರಾಜ್ಯಗಳೊಂದಿಗೆ ಹಂಚಿಕೊಳ್ಳುವ ಪಾಲು ಶೇ.32ರಿಂದ ಶೇ.42ಕ್ಕೆ ಏರಿದರೂ ರಾಜ್ಯಗಳಿಗೆ ವರ್ಗಾವಣೆ ಆಗುವ ಮೊತ್ತ ಬದಲಾಗಲಿಲ್ಲ. ಏಕೆಂದರೆ ಹಂಚಿಕೊಳ್ಳುವ ಭಾಗ ಶೇ.100 ಇದ್ದದ್ದು ಶೇ.80ಕ್ಕೆ ಇಳಿಯಿತು. ಅಷ್ಟು ಮಾತ್ರವಲ್ಲ 2019ರಲ್ಲಿ ಆರ್ಟಿಕಲ್ 370 ರದ್ದುಗೊಂಡು ಮೂರು ಕೇಂದ್ರಾಡಳಿತ ಪ್ರದೇಶಗಳು ಸೃಷ್ಟಿಯಾದವು. ಅವುಗಳ ಅಭಿವೃದ್ಧಿಗಾಗಿ ತೆರಿಗೆ ಸಂಗ್ರಹದ ಶೇ.1ನ್ನು ಕೇಂದ್ರ ತನ್ನಲ್ಲೇ ಇರಿಸಿಕೊಂಡು ರಾಜ್ಯಗಳ ಪಾಲನ್ನು ಶೇ.41ಕ್ಕೆ ಇಳಿಸಿದೆ. ಅಂದರೆ ರಾಜ್ಯಗಳಿಗೆ ವರ್ಗಾವಣೆ ಆಗುವ ಮೊತ್ತ ಪುನಃ ಶೇ.32.8ಕ್ಕೆ ಇಳಿಯಿತು.
14ನೇ ಹಣಕಾಸು ಸಮಿತಿ ಶಿಫಾರಸ್ಸನ್ನು ಕೇಂದ್ರ ಅಡ್ಡದಾರಿ ಮೂಲಕ ಸೋಲಿಸಿ ರಾಜ್ಯಗಳ ಪಾಲನ್ನು ಕಡಿಮೆ ಮಾಡಿದರೆ 15ನೇ ಹಣಕಾಸು ಸಮಿತಿ ಶಿಫಾರಸ್ಸುಗಳು (2020-25) ರಾಜ್ಯ ರಾಜ್ಯಗಳ ನಡುವಿನ ಪಾಲನ್ನು ದೊಡ್ಡ ಪ್ರಮಾಣದಲ್ಲಿ ಹೆಚ್ಚು ಕಡಿಮೆ ಮಾಡಿದೆ. 15ನೇ ಹಣಕಾಸು ಸಮಿತಿ ರಾಜ್ಯಗಳ ನಡುವೆ ಸಂಪನ್ಮೂಲಗಳನ್ನು ಹಂಚಲು ಹಿಂದಿನದ್ದೇ ಮಾನದಂಡಗಳನ್ನು ಬಳಸಿದೆ. ಜನಸಂಖ್ಯೆ, ಜನಸಂಖ್ಯೆ ನಿಯಂತ್ರಣ ಪ್ರಯತ್ನ, ಬಡ ರಾಜ್ಯ (ತಲಾ ಆದಾಯ ಅಂತರ), ವಿಸ್ತೀರ್ಣ, ಅರಣ್ಯ ಪ್ರದೇಶ ಮತ್ತು ತೆರಿಗೆ ಸಂಗ್ರಹ ಪ್ರಯತ್ನ ಇವೆಲ್ಲ ಹಿಂದಿನ ಮಾನದಂಡಗಳೇ. ಈ ಮಾನದಂಡಗಳಲ್ಲಿ ಮೂರು (ಜನಸಂಖ್ಯೆ, ಜನಸಂಖ್ಯೆ ನಿಯಂತ್ರಣ ಪ್ರಯತ್ನ ಮತ್ತು ತಲಾ ಆದಾಯದ ಮೂಲ ಮಾಪನ ಮಾಡುವ ರಾಜ್ಯದ ಬಡತನ) ಜನಸಂಖ್ಯೆ ಮೇಲೆ ನಿಂತಿದೆ. ಈ ಮೂರು ಒಟ್ಟು ಸೇರಿ ಶೇ.70ಕ್ಕಿಂತಲೂ ಹೆಚ್ಚಿನ ಪಾಲನ್ನು ಪಡೆಯಲು ಸಹಕರಿಸುತ್ತವೆ. ಹೆಚ್ಚು ಜನಸಂಖ್ಯೆ, ಹೆಚ್ಚು ವಿಸ್ತೀರ್ಣ ಇರುವ ಮತ್ತು ಹೆಚ್ಚು ಹಿಂದುಳಿದ ರಾಜ್ಯಗಳು ಕೇಂದ್ರದ ತೆರಿಗೆ ಸಂಗ್ರಹದಲ್ಲಿ ಹೆಚ್ಚಿನ ಪಾಲು ಪಡೆಯುತ್ತಿವೆ.
ಮಾನದಂಡಗಳು ಹಿಂದಿನದ್ದೇ. ಅವನ್ನು ಕೇಂದ್ರ ಬದಲಾಯಿಸಿಲ್ಲ. ಆದರೆ ಒಂದು ಸಣ್ಣ ಬದಲಾವಣೆ ಮಾಡಿದೆ. ಅದೇನೆಂದರೆ ಹಿಂದಿನ ಸಮಿತಿಗಳು 1971ರ ಜನಸಂಖ್ಯೆಯನ್ನು ಬಳಸಿದರೆ 15ನೇ ಹಣಕಾಸು ಸಮಿತಿ 2011ರ ಜನಸಂಖ್ಯೆಯನ್ನು ಬಳಸಿದೆ. ಇದರ ಪರಿಣಾಮದಿಂದ ಜನಸಂಖ್ಯೆ ನಿಯಂತ್ರಣ ಮಾಡಿದ ದಕ್ಷಿಣದ ರಾಜ್ಯಗಳು ಅತೀ ಕಡಿಮೆ ಸಂಪನ್ಮೂಲ ಪಡೆದು ಜನಸಂಖ್ಯೆ ನಿಯಂತ್ರಣ ಮಾಡದ ಉತ್ತರದ ರಾಜ್ಯಗಳು ಹೆಚ್ಚು ಸಂಪನ್ಮೂಲ ಪಡೆದವು. ಉದಾಹರಣೆಗೆ ದಕ್ಷಿಣದ ಕರ್ನಾಟಕ, ಕೇರಳ ಮತ್ತು ತಮಿಳುನಾಡು ರಾಜ್ಯಗಳು 1971ರಲ್ಲಿ ದೇಶದ ಶೇ.17ರಷ್ಟು ಜನಸಂಖ್ಯೆ ಹೊಂದಿದ್ದವು. ಜನಸಂಖ್ಯೆ ನಿಯಂತ್ರಣ ಮಾಡಿದಕಾರಣ 2011ರ ವೇಳೆಗೆ ಈ ರಾಜ್ಯಗಳ ಜನಸಂಖ್ಯೆ ಶೇ.14ಕ್ಕೆ ಇಳಿಯಿತು. ಇದೇ ಅವಧಿಯಲ್ಲಿ (1971ರಲ್ಲಿ) ಉತ್ತರಪ್ರದೇಶ, ಮಧ್ಯಪ್ರದೇಶ ಮತ್ತು ಬಿಹಾರ ರಾಜ್ಯಗಳಲ್ಲಿದ್ದ ಶೇ.28 ಜನಸಂಖ್ಯೆ 2011ರಲ್ಲಿ ಶೇ.31ಕ್ಕೆ ಏರಿದೆ.
ಇದನ್ನು ಓದಿದ್ದೀರಾ?: ಹಿಂದುತ್ವವಾದಿಗಳ ದಾಂಧಲೆ-ಆಕ್ಷೇಪ; ‘ಫುಲೆ’ ಸಿನಿಮಾ ಬಿಡುಗಡೆ ಮುಂದೂಡಿಕೆ
2011ರ ಜನಸಂಖ್ಯೆಯನ್ನು ಹಣಕಾಸು ಸಮಿತಿ ಬಳಸಿದ ಕಾರಣ ಕೇಂದ್ರದ ಪ್ರತಿ ರೂ.100 ಸಂಪನ್ಮೂಲದಲ್ಲಿ ಬಿಹಾರ ರೂ.10, ಮಧ್ಯಪ್ರದೇಶ ರೂ.7.8 ಮತ್ತು ಉತ್ತರ ಪ್ರದೇಶ ರೂ.17.9 ಪಡೆದರೆ, ಕರ್ನಾಟಕ ರೂ. 36, ಕೇರಳ ರೂ.1.9 ಮತ್ತು ತಮಿಳುನಾಡು ರೂ.4ಗಳನ್ನು ಪಡೆದಿವೆ. 2023-24ನೇ ಕೇಂದ್ರದ ಬಜೆಟಲ್ಲಿ ಉತ್ತರದ ಮೂರು ರಾಜ್ಯಗಳು ಕೇಂದ್ರದಿಂದ ರೂ.2,31,207 ಕೋಟಿಯಷ್ಟು ನೇರ ತೆರಿಗೆಯ ಪಾಲು ಪಡೆದರೆ, ದಕ್ಷಿಣದ ಮೂರು ರಾಜ್ಯಗಳು ಕೇವಲ ರೂ.62,245 ಕೋಟಿ ಪಡೆದಿವೆ. 2021-22ರಲ್ಲಿ ದಕ್ಷಿಣದ ಮೂರು ರಾಜ್ಯಗಳು ಶೇ.20ರಷ್ಟು ನೇರ ತೆರಿಗೆ ತುಂಬಿದರೆ, ಉತ್ತರದ ಮೂರು ರಾಜ್ಯಗಳು ಕೇವಲ ಶೇ.2ರಷ್ಟು ನೇರ ತೆರಿಗೆ ತುಂಬಿವೆ. 2017-18ರಲ್ಲಿ ಕೇಂದ್ರದ ಬಜೆಟ್ ಮೊತ್ತ ರೂ.24.42 ಲಕ್ಷ ಕೋಟಿ ಇದ್ದಾಗ ಕರ್ನಾಟಕ ರೂ.51,977 ಕೋಟಿಯಷ್ಟು ಕೇಂದ್ರದ ತೆರಿಗೆ ಮತ್ತು ಗ್ರಾಂಟ್ಸ್‌ಗಳಲ್ಲಿ ಪಾಲು ಪಡೆದಿತ್ತು. 2023-24ರಲ್ಲಿ ಕೇಂದ್ರದ ಬಜೆಟ್ ಮೊತ್ತ ದ್ವಿಗುಣಗೊಂಡಿದೆ; ರೂ.45.03 ಲಕ್ಷ ಕೋಟಿಗೆ ಏರಿದೆ. ಆದರೆ ಕರ್ನಾಟಕದ ಪಾಲು ರೂ.50,257 ಕೋಟಿಗಳಿಗೆ ಕುಸಿದಿದೆ. ಹಿಂದುಳಿದ ರಾಜ್ಯಗಳ ಅಭಿವೃದ್ಧಿಗೆ ಸಹಕರಿಸುವ ಭರದಲ್ಲಿ ಕರ್ನಾಟಕ ತನ್ನ ಅಭಿವೃದ್ಧಿಗೆ ಸಾಲ ಮಾಡುವ ಸ್ಥಿತಿ ನಿರ್ಮಾಣ ಆಗಿದೆ.
ಕೇಂದ್ರ ಈಗ ಒಂದು ದೇಶ ಒಂದು ಚುನಾವಣೆ ನಡೆಸಲು ಹೊರಟಿದೆ. ಕೇಂದ್ರ ಸರಕಾರ ಅಧ್ಯಯನ ಸಮಿತಿಯನ್ನು ನೇಮಕ ಮಾಡಿದೆ. ಅದು ಒಂದು ದೇಶ ಒಂದು ಚುನಾವಣೆ ನಡೆಸಲು ಶಿಫಾರಸ್ಸು ಮಾಡಿದೆ. ಕೇಂದ್ರ ಸರಕಾರ ಸಮಿತಿ ಶಿಫಾರಸ್ಸನ್ನು ಅನುಮೋದಿಸಿದೆ. ಆದರೆ ಇದರ ಪರಿಣಾಮದ ಬಗ್ಗೆ ನಮ್ಮಲ್ಲಿ ವಿಶೇಷ ಚರ್ಚೆ ನಡೆಯುತ್ತಿಲ್ಲ. ಕೇಂದ್ರದ ಯೋಜನೆ ಸಫಲವಾದರೆ ಏನಾಗಬಹುದೆನ್ನುವುದು ಅರ್ಥವಾಗಬೇಕಾದರೆ ಈ ಕೆಳಗಿನ ಕೆಲವು ಅಂಕಿಅಂಶಗಳನ್ನು ಗಮನಿಸಬೇಕು. ನಮ್ಮಸಂವಿಧಾನ ಪ್ರಕಾರ ಜನಸಂಖ್ಯೆಯ ಆಧಾರದಲ್ಲಿ ವಿಧಾನಸಭೆ ಮತ್ತು ಲೋಕಸಭೆ ಸೀಟುಗಳ ಮರುವಿಂಗಡನೆ ನಡೆಸಬೇಕು. ಅದರಂತೆ 1951, 61 ಮತ್ತು 71ರಲ್ಲಿ ನಡೆದಿದೆ. 1976ರಲ್ಲಿ ನಡೆದ ಸಂವಿಧಾನ ತಿದ್ದುಪಡಿ ಕ್ಷೇತ್ರಗಳ ಮರುವಿಂಗಡನೆಯನ್ನು 2001ಕ್ಕೆ ಮುಂದೂಡಿದೆ. ಇದಕ್ಕೆ ಕಾರಣ ಕೇಂದ್ರದ ಜನಸಂಖ್ಯೆ ನಿಯಂತ್ರಣ ನೀತಿಯನ್ನು ದಕ್ಷಿಣದ ರಾಜ್ಯಗಳು ಜಾರಿಗೊಳಿಸಿದ್ದು ಮತ್ತು ಉತ್ತರದ ಹಿಂದಿ ರಾಜ್ಯಗಳು ಜಾರಿಗೊಳಿಸದಿರುವುದು. ಇದೇ ಕಾರಣವನ್ನು ಮುಂದಿಟ್ಟು 2002ರಲ್ಲಿ ಎನ್‌ಡಿಎ ಸರಕಾರ ಕೂಡ ಕ್ಷೇತ್ರಗಳ ಮರುವಿಂಗಡನೆಯನ್ನು 2026ಕ್ಕೆ ಮುಂದೂಡಿದೆ. ಈಗ ಕ್ಷೇತ್ರಗಳ ಮರುವಿಂಗಡನೆ ಆಗದೆ 50 ವರ್ಷಗಳಾಗಿವೆ. ಇದರಿಂದ ಕೆಲವು ರಾಜ್ಯಗಳಲ್ಲಿ ಪ್ರತಿ ಎಂಎಲ್‌ಎ ಕ್ಷೇತ್ರ 8-10 ಲಕ್ಷ ಜನರನ್ನು ಮತ್ತು ಎಂಪಿ ಕ್ಷೇತ್ರ 15-25 ಲಕ್ಷ ಜನರನ್ನು ಪ್ರತಿನಿಧಿಸುವ ಸ್ಥಿತಿ ಇದೆ. ಆದುದರಿಂದ 2026ರಲ್ಲಿ ಮತಕ್ಷೇತ್ರಗಳ ಮರುವಿಂಗಡನೆ ಆಗಲೇ ಬೇಕು.
ಒಂದು ವೇಳೆ 2026ರಲ್ಲಿ ಮತಕ್ಷೇತ್ರಗಳ ಮರುವಿಂಗಡನೆ ನಡೆದರೆ 2021ರ ಜನಸಂಖ್ಯೆ ನೆಲೆಯಲ್ಲಿ ನಡೆಯಬೇಕು ಅಥವಾ 2031ರ (ಊಹಿತ) ಜನಸಂಖ್ಯೆಯ ನೆಲೆಯಲ್ಲಿ ನಡೆಯಬೇಕು. 2031ರ (ಊಹಿತ) ಜನಸಂಖ್ಯೆ ನೆಲೆಯಲ್ಲಿ ನಡೆದರೆ ಉತ್ತರ ಮತ್ತು ದಕ್ಷಿಣದ ರಾಜ್ಯಗಳ ಲೋಕಸಭೆ ಕ್ಷೇತ್ರಗಳ ಸಂಖ್ಯೆಯಲ್ಲಾಗುವ ಬದಲಾವಣೆಯನ್ನು ಊಹಿಸುವ ಹಲವು ಅಧ್ಯಯನಗಳು ಬಂದಿವೆ. ಒಂದು ಅಧ್ಯಯನದ ಪ್ರಕಾರ ಈಗ ಉತ್ತರಪ್ರದೇಶ, ಮಧ್ಯಪ್ರದೇಶ, ಬಿಹಾರ ಮತ್ತು ರಾಜಸ್ತಾನಗಳಲ್ಲಿ ಒಟ್ಟು 174 ಲೋಕಸಭೆ ಸೀಟುಗಳಿವೆ. ಅಲ್ಲಿನ ಮತಕ್ಷೇತ್ರಗಳ ಸಂಖ್ಯೆ 2031ರ ಜನಸಂಖ್ಯೆ ಪ್ರಕಾರ ಮರುವಿಂಗಡನೆ ನಡೆದರೆ 289ಕ್ಕೆ ಏರಬಹುದು. ಅದೇ ರೀತಿ ಈಗ ಕರ್ನಾಟಕ, ಕೇರಳ, ತಮಿಳುನಾಡು ಮತ್ತು ಅವಿಭಜಿತ ಆಂಧ್ರಪ್ರದೇಶಗಳಲ್ಲಿರುವ 129 ಲೋಕಸಭೆ ಸೀಟುಗಳು 2031ರ ಜನಸಂಖ್ಯೆ ಪ್ರಕಾರ 145ಕ್ಕೆ ಏರಬಹುದು. ಅಂದರೆ ಮತಕ್ಷೇತ್ರಗಳ ಮರುವಿಂಗಡನೆ ನಂತರ ಉತ್ತರದ ರಾಜ್ಯಗಳಲ್ಲಿ ಲೋಕಸಭೆ ಸೀಟುಗಳು ಶೇ.66ರಷ್ಟು ಹೆಚ್ಚಾದಾಗ ದಕ್ಷಿಣದ ರಾಜ್ಯಗಳಲ್ಲಿ ಕೇವಲ ಶೇ.12ರಷ್ಟು ಹೆಚ್ಚಾಗಬಹುದು. ಈ ಎಲ್ಲದರ ಒಟ್ಟು ಪರಿಣಾಮ ಏನೆಂದರೆ ಉತ್ತರದ ದೊಡ್ಡ ರಾಜ್ಯಗಳಲ್ಲಿ ಹೆಚ್ಚು ಲೋಕಸಭೆ ಸೀಟು ಪಡೆಯುವ ಪಕ್ಷ ಸುಲಭದಲ್ಲಿ ಕೇಂದ್ರದಲ್ಲಿ ಅಧಿಕಾರ ಹಿಡಿಯಬಹುದು.
ಇದನ್ನು ಓದಿದ್ದೀರಾ?: ಆನ್ಲೈನ್ ಗೇಮಿಂಗ್-ಬೆಟ್ಟಿಂಗ್‌ಗೆ ಕಡಿವಾಣ ಹಾಕಿ, ಕಾಯ್ದೆ ರೂಪಿಸುವ ಅಗತ್ಯವಿದೆ
ಬೇರೆ ಪಕ್ಷಗಳಿಗೆ ಹೋಲಿಸಿದರೆ ಬಿಜೆಪಿ ಪಕ್ಷ ಉತ್ತರದ ರಾಜ್ಯಗಳಲ್ಲಿ ಹೆಚ್ಚು ಸೀಟು ಪಡೆಯುವ ಸಾಧ್ಯತೆಗಳು ಹೆಚ್ಚಿವೆ. ಏಕೆಂದರೆ ಆ ಪಕ್ಷ ಮಾತ್ರ ಒಂದು ದೇಶ – ಒಂದು ಭಾಷೆ, ಒಂದು ಸಂಸ್ಕೃತಿ, ಒಂದು ತೆರಿಗೆ, ಒಂದು ಚುನಾವಣೆ ಬಗ್ಗೆ ಮಾತಾಡುತ್ತಿದೆ ಮತ್ತು ಬಿಜೆಪಿಯ ಈ ಅಜಂಡಾ ಉತ್ತರದ ದೊಡ್ಡ ರಾಜ್ಯಗಳ ಭಾಷೆ, ಸಂಸ್ಕೃತಿ ಮತ್ತು ಅಗತ್ಯಗಳಿಗೆ ಹತ್ತಿರವಾಗಿದೆ. ಇಂದು ಈ ನಿಲುವುಗಳು ಊಹೆಗಳ ರೂಪದಲ್ಲಿ ಕಾಣಬಹುದು. ಆದರೂ ಮುಂದೊಂದು ದಿನ ಈ ರೀತಿ ಆಗುವ ಸಾಧ್ಯತೆಯೇ ಇಲ್ಲ ಎಂದು ಖಡಾಖಂಡಿತವಾಗಿ ಹೇಳುವ ಸ್ಥಿತಿಯಲ್ಲಿ ನಾವಿಲ್ಲ. ಏಕೆಂದರೆ ಇಂದು ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಪಕ್ಷ ಒಕ್ಕೂಟ ವ್ಯವಸ್ಥೆಯನ್ನು ಅಲುಗಾಡಿಸುತ್ತಿರುವುದನ್ನು ನೋಡಿದರೆ ಮುಂದೊಂದು ದಿನ ಇನ್ನೂ ಹೆಚ್ಚಿನ ಕೇಂದ್ರೀಕರಣಕ್ಕೆ ಪ್ರಯತ್ನಿಸುವುದಿಲ್ಲವೆಂದು ಹೇಳಲು ಸಾಧ್ಯವೇ ಇಲ್ಲ. ಒಂದು ವೇಳೆ ಮುಂದೆ ಇನ್ನೂ ಹೆಚ್ಚಿನ ಕೇಂದ್ರೀಕರಣ ನಡೆದರೆ ಒಕ್ಕೂಟ ವ್ಯವಸ್ಥೆ ಇನ್ನೂ ಹೆಚ್ಚಿನ ಅತಂತ್ರ ಸ್ಥಿತಿಗೆ ತಲುಪಬಹುದು. ಆವಾಗ ದಕ್ಷಿಣದ ರಾಜ್ಯಗಳು ಎರಡನೇ ಬಾರಿಗೆ ವಸಾಹತು ಸರಕಾರದ ಆಡಳಿತವನ್ನು ಅನುಭವಿಸುವ ಸಾಧ್ಯತೆ ಇದೆ.
ಒಕ್ಕೂಟ ವ್ಯವಸ್ಥೆ ಇಂದು ಎದುರಿಸುತ್ತಿರುವ ಆತಂಕಗಳಲ್ಲಿ ಕೆಲವನ್ನು ಮಾತ್ರ ನಾನಿಲ್ಲಿ ಚರ್ಚಿಸಿದ್ದೇನೆ. ಶ್ರೀಪಾದ ಭಟ್ ಅವರ ‘ಒಕ್ಕೂಟವೋ ತಿಕ್ಕಾಟವೋ’ ಪುಸ್ತಕ ಎಲ್ಲ ಕ್ಷೇತ್ರಗಳಲ್ಲೂ – ಶಾಸನಾತ್ಮಕ, ಆಡಳಿತಾತ್ಮಕ ಹಾಗೂ ಹಣಕಾಸು – ಗಣರಾಜ್ಯ ವ್ಯವಸ್ಥೆ ಎದುರಿಸುತ್ತಿರುವ ಬಿಕ್ಕಟ್ಟುಗಳನ್ನು ಚರ್ಚಿಸುತ್ತಿದೆ. ಗಣರಾಜ್ಯ ವ್ಯವಸ್ಥೆಯ ಬಿಕ್ಕಟ್ಟುಗಳನ್ನು ವಿವರಿಸುವ ಬರಹಗಳನ್ನು ಓದುವುದು ಇಂದು ನಮ್ಮ ಗಣರಾಜ್ಯ ವ್ಯವಸ್ಥೆ ಎದುರಿಸುತ್ತಿರುವ ಬಿಕ್ಕಟ್ಟುಗಳನ್ನು ಅರ್ಥ ಮಾಡಿಕೊಳ್ಳಲು ಅನಿವಾರ್ಯ. ಅಷ್ಟು ಮಾತ್ರವಲ್ಲ, ಮುಂದೊಂದು ದಿನ ಎರಡನೇ ಬಾರಿಗೆ ವಸಾಹತು ಆಡಳಿತಕ್ಕೆ ಬಲಿಯಾಗುವುದನ್ನು ತಪ್ಪಿಸಲು ಕೂಡ ಅನಿವಾರ್ಯ.
(ಪ್ರಕಾಶಕರು: ಕ್ರಿಯಾ ಮಾಧ್ಯಮ, ಬೆಲೆ: 170, ಸಂಪರ್ಕ: 96090 16473, 98804 53799)

ಪ್ರೊ ಚಂದ್ರ ಪೂಜಾರಿ
ನಿವೃತ್ತ ಪ್ರಾಧ್ಯಾಪಕ, ರಾಜಕೀಯ ವಿಶ್ಲೇಷಕ