- ಸಿದ್ದರಾಮಯ್ಯ ವಿರುದ್ಧ ಗಂಭೀರ ಆರೋಪ ಮಾಡಿದ ಬಿಜೆಪಿ ಸಚಿವರು
- ಮೈತ್ರಿ ಸರ್ಕಾರ ಉರುಳಿಸುವುದರ ಬಗ್ಗೆಯೇ ಚಿಂತನೆ ನಡೆಸುತ್ತಿದ್ದ ಸಿದ್ದರಾಮಯ್ಯ
ಮೈತ್ರಿ ಸರ್ಕಾರ ಪತನ ಹಾಗೂ ನಾವು ಪಕ್ಷ ಬಿಡುವುದಕ್ಕೂ ಸಿದ್ದರಾಮಯ್ಯನವರೇ ಕಾರಣ, ಎಂದು ಬಿಜೆಪಿ ಮಾಜಿ ಸಚಿವರುಗಳಾದ ಡಾ.ಸುಧಾಕರ್ ಹಾಗೂ ಸೋಮಶೇಖರ್ ಗಂಭೀರ ಆರೋಪ ಮಾಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಸುಧಾಕರ್, 2018ರಲ್ಲಿ ಅಂದಿನ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದಲ್ಲಿ ನಮಗಾಗುತ್ತಿದ್ದ ಅನ್ಯಾಯದ ಬಗ್ಗೆ ಹೇಳಿಕೊಳ್ಳಲು ಶಾಸಕರು ಸಮನ್ವಯ ಸಮಿತಿ ಅಧ್ಯಕ್ಷರಾಗಿದ್ದ ಮಾನ್ಯ ಸಿದ್ದರಾಮಯ್ಯನವರ ಬಳಿ ಹೋದಾಗಲೆಲ್ಲ ಈ ಸರ್ಕಾರದಲ್ಲಿ ನನ್ನದೇ ಏನು ನಡೆಯುತ್ತಿಲ್ಲ, ನನ್ನ ಕ್ಷೇತ್ರದ, ನನ್ನ ಜಿಲ್ಲೆಯ ಕೆಲಸಗಳೇ ಆಗುತ್ತಿಲ್ಲ ಎಂದು ಹೇಳುತ್ತಿದ್ದರು.
2019ರ ಲೋಕಸಭೆ ಚುನಾವಣೆವರೆಗೂ ಸಹಿಸಿಕೊಳ್ಳಿ, ಲೋಕಸಭೆ ಚುನಾವಣೆ ಮುಗಿದ ನಂತರ ಯಾವುದೇ ಕಾರಣಕ್ಕೂ ಒಂದು ದಿವಸವೂ ಮಾನ್ಯ ಕುಮಾರಸ್ವಾಮಿ ಅವರ ನೇತೃತ್ವದ ಈ ಸಮ್ಮಿಶ್ರ ಸರ್ಕಾರ ಇರಲು ಬಿಡುವುದಿಲ್ಲ ಎಂದು ಶಾಸಕರಿಗೆ ಸಮಾಧಾನ ಮಾಡುತ್ತಿದ್ದರು.
ನಮ್ಮ ಕ್ಷೇತ್ರಗಳಲ್ಲಿ ನಮ್ಮನ್ನು ನಂಬಿದ ಕಾರ್ಯಕರ್ತರನ್ನ, ಮುಖಂಡರನ್ನ ಉಳಿಸಿಕೊಳ್ಳಲು ದೊಡ್ಡ ರಿಸ್ಕ್ ತೆಗೆದುಕೊಂಡು ರಾಜೀನಾಮೆ ಕೊಟ್ಟು ಮತ್ತೊಮ್ಮೆ ಜನರಿಂದ ಆರಿಸಿ ಬಂದು ಮಂತ್ರಿಗಳಾದೆವು. ನಮ್ಮ ನಡೆಯಲ್ಲಿ ಮಾನ್ಯ ಸಿದ್ದರಾಮಯ್ಯನವರ ಪ್ರೇರಣೆ, ಪರೋಕ್ಷ ಅಥವಾ ಅಪರೋಕ್ಷ ಪಾತ್ರ ಇಲ್ಲವೆಂದು ಸಿದ್ದರಾಮಯ್ಯನವರು ನಿರಾಕರಿಸಲು ಸಾಧ್ಯವೇ? ಎಂದು ಡಾ. ಕೆ ಸುಧಾಕರ್ ಟ್ವೀಟ್ ಮಾಡುವ ಮೂಲಕ ಗಂಭೀರ ಆರೋಪ ಮಾಡಿದ್ದಾರೆ.
ಇದೇ ರೀತಿ ತಮ್ಮ ಅಭಿಪ್ರಾಯ ತಿಳಿಸಿರುವ ಎಸ್ ಟಿ ಸೋಮಶೇಖರ್, ಮಾನ್ಯ ಸಿದ್ದರಾಮಯ್ಯನವರು ಸಮ್ಮಿಶ್ರ ಸರ್ಕಾರದ ದಿನಗಳಲ್ಲಿ ಶಾಸಕರಲ್ಲಿ ತೋಡಿಕೊಳ್ಳುತ್ತಿದ್ದ ಅಸಹಾಯಕತೆ, ಕೊಡುತ್ತಿದ್ದ ಆಶ್ವಾಸನೆ ಇದೇ ಎಂಬುದು ಸತ್ಯ. ಸಿದ್ದರಾಮಯ್ಯನವರ ಅಸಹಾಯಕತೆ ಸಹ ನಾವು ಪಕ್ಷ ಬಿಡಲು ಒಂದು ಪ್ರೇರಣೆಯಾಯಿತು ಎಂದರೆ ಅದು ತಪ್ಪಾಗಲಾರದು ಎಂದಿದ್ದಾರೆ.
ಈ ಸುದ್ದಿ ಓದಿದ್ದೀರಾ?:ಸುಳ್ಳು ಸುದ್ದಿ ಹರಡುವ ಚಾನೆಲ್‌ಗಳ ವಿರುದ್ಧ ಮಾನನಷ್ಟ ಮೊಕದ್ದಮೆ: ಡಿಕೆಶಿ ಎಚ್ಚರಿಕೆ
ಮಾಜಿ ಸಚಿವರಿಬ್ಬರ ಈ ಆರೋಪವೀಗ ಸಿದ್ದರಾಮಯ್ಯರನ್ನು ಅನುಮಾನದಿಂದ ನೋಡುವಂತೆ ಮಾಡಿದೆ. ಜೊತೆಗೆ ಇವರಿಬ್ಬರು ಹೊಸ ಸರ್ಕಾರ ರಚನೆಯಾಗುವ ಹೊತ್ತಿನಲ್ಲೇ ಈ ಆರೋಪ ಮಾಡುತ್ತಿರುವುದೇಕೆ ಎನ್ನುವ ಪ್ರಶ್ನೆಯೂ ಎದುರಾಗುತ್ತದೆ.
ಇಲ್ಲಿ ಗಮನಿಸಬೇಕಾದ ಬಹಳ ಮುಖ್ಯ ಸಂಗತಿ ಎಂದರೆ, ಬಿಜೆಪಿ ಆಡಳಿತದುದ್ದಕ್ಕೂ ಸರ್ಕಾರವನ್ನು ಉಗ್ರವಾಗಿ ಟೀಕಿಸುತ್ತಿದ್ದ ಮತ್ತು ಪ್ರಧಾನಿ ಮೋದಿಯವರ ಸುಳ್ಳುಗಳನ್ನು ಜನತೆಯ ಮುಂದಿಟ್ಟು ಲೇವಡಿ ಮಾಡುತ್ತಿದ್ದ ಸಿದ್ದರಾಮಯ್ಯನವರನ್ನು, ಕಟ್ಟಿಹಾಕುವುದು ಬಿಜೆಪಿಗೆ ಬಹುಮುಖ್ಯ ಕೆಲಸವಾಗಿತ್ತು. ಅವರನ್ನು ಸಿದ್ರಾಮುಲ್ಲಾ ಖಾನ್ ಎಂದು ಹೀಗಳೆದು, ವ್ಯಕ್ತಿತ್ವಹರಣ ಮಾಡುವುದೇ ದಿನನಿತ್ಯದ ಕೆಲಸವಾಗಿತ್ತು.
ಇದು ಚುನಾವಣೆಯಲ್ಲಿ ಬಿಜೆಪಿ ಹೀನಾಯವಾಗಿ ಸೋತ ನಂತರವೂ ಮುಂದುವರೆದಿದೆ. ಸಿದ್ದರಾಮಯ್ಯನವರು ಮುಖ್ಯಮಂತ್ರಿ ಆಗುತ್ತಾರೆಯೋ, ಇಲ್ಲವೋ ಅದು ಬೇರೆ ಪ್ರಶ್ನೆ. ಆದರೆ ಇಷ್ಟು ದಿನ ಸುಮ್ಮನಿದ್ದು, ಸರ್ಕಾರ ರಚನೆಯಾಗುವ ಸಂದರ್ಭದಲ್ಲಿ ಸುಧಾಕರ್ ಮತ್ತು ಸೋಮಶೇಖರ್ ಆರೋಪ ಮಾಡಲು ಮುಂದಾಗುತ್ತಾರೆ ಎಂದರೆ, ಅದರ ಹಿಂದೆ ವಿಘ್ನಸಂತೋಷಿಗಳ ಕೈವಾಡವಿರಬಹುದು, ಆ ಮೂಲಕ ಸಿದ್ದರಾಮಯ್ಯನವರನ್ನು ಹಣಿಯುವ ತಂತ್ರಗಾರಿಕೆ ಅಡಗಿರಬಹುದು ಎನ್ನಲಾಗುತ್ತಿದೆ.