- ರಾಜ್ಯ ಸರ್ಕಾರದ ನಿರ್ಧಾರ ಕಾನೂನು ಬಾಹಿರ
- ಸರ್ಕಾರದ ನಿರ್ಣಯಗಳನ್ನು ಬಯಲಾಗುತ್ತಿವೆ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಡಿ ಕೆ ಶಿವಕುಮಾರ್ ವಿರುದ್ಧ ಸಿಬಿಐ ತನಿಖೆಯನ್ನು ಹಿಂಪಡೆದಿರುವ ರೀತಿ ನೋಡಿದರೆ, ಅವರ ಸರ್ಕಾರ ಡಿಕೆಶಿ ಕಾಲ ಕೆಳಗೆ ಇರುವುದನ್ನು ಪ್ರದರ್ಶಿಸಿದಂತಿದೆ ಎಂದು ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಟೀಕಿಸಿದರು.
ಮೈಸೂರಿನಲ್ಲಿ ಮಾತನಾಡಿದ ಅವರು, “ರಾಜ್ಯ ಸರ್ಕಾರದ ನಿರ್ಧಾರ ಕಾನೂನು ಬಾಹಿರ. ವಕೀಲರು, ಕಾನೂನು ಉಪನ್ಯಾಸಕರೂ ಆಗಿದ್ದ ಮುಖ್ಯಮಂತ್ರಿಯಿಂದ ಇಂತಹ ತೀರ್ಮಾನ ಬಂದಿರುವುದು ಅವರ ಸರ್ಕಾರದ ನಿರ್ಣಯಗಳನ್ನು ಬಯಲು ಮಾಡಿದೆ” ಎಂದು ಹೇಳಿದರು.
“ಕಾನೂನುಬಾಹಿರ ಚಟುವಟಿಕೆಗಳಿಗೆ ರಕ್ಷಣೆ ನೀಡುವ ಸಲುವಾಗಿಯೇ ಅನುಮತಿ ಹಿಂಪಡೆಯಲಾಗಿದೆ. ಸಂವಿಧಾನದ ರಕ್ಷಕರು ಎಂದು ಘೋಷಿಸಿಕೊಂಡವರು ಈ ತೀರ್ಮಾನ ಮಾಡಿದ್ದು ಸರಿಯೇ” ಎಂದು ಪ್ರಶ್ನಿಸಿದರು.
“ಹಿಂದಿನ ಬಿಜೆಪಿ ಸರ್ಕಾರ ಸ್ಪೀಕರ್ ಅನುಮತಿ ಪಡೆಯದೆಯೇ ಶಿವಕುಮಾರ್ ವಿರುದ್ಧ ಸಿಬಿಐ ತನಿಖೆಗೆ ಅನುಮತಿ ನೀಡಿದ್ದು ಕಾನೂನುಬಾಹಿರ ಎಂಬ ಕಾಂಗ್ರೆಸ್ ಆರೋಪ ಸರಿಯಲ್ಲ. ಅನುಮತಿ ನೀಡಲು ಸ್ಪೀಕರ್ ಒಪ್ಪಿಗೆ ಬೇಕಿಲ್ಲ. ಇದನ್ನು ಬೇಕಿದ್ದರೆ ವಿಧಾನಸಭೆಯಲ್ಲಿ ಚರ್ಚಿಸೋಣ” ಎಂದರು.
“ಈ ಹಿಂದೆ ಪ್ರಕರಣವೊಂದರಲ್ಲಿ ತನಿಖೆಗೆ ಅನುಮತಿ ಕೋರಿ ಆರ್‌ಟಿಐ ಕಾರ್ಯಕರ್ತರೊಬ್ಬರು ಸ್ಪೀಕರ್‌ಗೆ ಪತ್ರ ಬರೆದಿದ್ದರು. ಅದಕ್ಕೆ ಉತ್ತರಿಸಿದ್ದ ಸ್ಪೀಕರ್ ಕಾರ್ಯಾಲಯ, ಇದಕ್ಕೆ ಸ್ಪೀಕರ್ ಅನುಮತಿ ಬೇಕಿಲ್ಲ ಎಂದು ಪತ್ರ ಬರೆದಿತ್ತು” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ತಪ್ಪಿದ ಘೋರ ದುರಂತ- ಆಳುವವರ ಅಲಕ್ಷ್ಯ ಅಕ್ಷಮ್ಯ
ಬಿ ಆರ್ ಪಾಟೀಲ ವಿಚಾರವಾಗಿ ಪ್ರತಿಕ್ರಿಯಿಸಿ, “ಅವರ ಪಕ್ಷದ ನಾಯಕರ ಧೋರಣೆಗೆ ಮನನೊಂದು ಮುಖ್ಯಮಂತ್ರಿಗೆ ಪತ್ರ ಬರೆದಿದ್ದಾರೆ. ಒಬ್ಬ ಆಡಳಿತ ಪಕ್ಷದ ಶಾಸಕರ ಪರಿಸ್ಥಿತಿ ಹೀಗಾದಾಗ ಬೇರೆಯವರ ಗತಿ ಏನು? ಈಗಿನ ಸರ್ಕಾರದಲ್ಲಿ ಶಾಸಕರಿಗೆ ಬೆಲೆ ಎಷ್ಟಿದೆ ಎಂದು ನಾನು ಹೇಳಬೇಕಿಲ್ಲ. ರಾಯರೆಡ್ಡಿ, ಶ್ಯಾಮನೂರು ಶಿವಶಂಕರಪ್ಪ ಮತ್ತೀಗ ಬಿ ಆರ್ ಪಾಟೀಲ ಮನನೊಂದು ಮಾತನಾಡಿದ್ದಾರೆ” ಎಂದು ತಿಳಿಸಿದರು.
“ಕಾಂಗ್ರೆಸ್‌ನವರು ಬಿಜೆಪಿಯ ಶೇ 40 ಭ್ರಷ್ಟಾಚಾರದ ಬಗ್ಗೆ ಮಾತನಾಡಿ ಅಧಿಕಾರ ಹಿಡಿದರು. ಈಗ ಅದನ್ನೇ ಮುಂದುವರಿಸಿಕೊಂಡು ಹೋಗುತ್ತಿದ್ದೇವೆ ಎಂಬುದನ್ನು ಈಗಾಗಲೇ ಸಾಬೀತುಪಡಿಸಿದ್ದಾರೆ. ಹಿಂದಿನ ಸರ್ಕಾರದಲ್ಲಿ ಆಗಿದ್ದ ಹಲವು ಟೆಂಡರ್‌ಗಳನ್ನು ಈಗಿನ ಸರ್ಕಾರ ಕಮಿಷನ್ ಸಲುವಾಗಿ ತಡೆ ಹಿಡಿದಿದೆ” ಎಂದು ಆರೋಪಿಸಿದರು.