- ನಿಗದಿತ ಪ್ರಮಾಣಕ್ಕಿಂತ ಹೆಚ್ಚು ನೀರು ಬಿಡುಗಡೆ ಮಾಡಲಾಗಿದೆ
- ಇಂಡಿಯಾ ಟೀಮ್ ಅನ್ನು ಖುಷಿ ಪಡಿಸಲು ನೀರು ಬಿಡುತ್ತಿದ್ದಾರೆ
ಕೆಆರ್‌ಎಸ್ ಡ್ಯಾಮ್‌ನ ಪರಿಸ್ಥಿತಿಯ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದ ಜನತೆಗೆ ಶ್ವೇತಪತ್ರ ಹೊರಡಿಸಬೇಕು ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಒತ್ತಾಯಿಸಿದ್ದಾರೆ.
ಉಡುಪಿಯಲ್ಲಿ ಶುಕ್ರವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, “ಕಾವೇರಿ ವಿಚಾರದಲ್ಲಿ ರಾಜ್ಯ ಸರಕಾರ ತಮಿಳುನಾಡು ಸರಕಾರದ ಮನವೊಲಿಸಬೇಕು. ಕಳೆದ ಬಾರಿ ನಿಗದಿತ ಪ್ರಮಾಣಕ್ಕಿಂತ ಹೆಚ್ಚು ನೀರು ಬಿಡುಗಡೆ ಮಾಡಲಾಗಿದೆ. ಈ ಬಾರಿ ರಾಜ್ಯ ಸರಕಾರ ತಪ್ಪು ಮಾಡುತ್ತಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
“ಕೆಆರ್‌ಎಸ್ ಡ್ಯಾಂ ಕರ್ನಾಟಕದ ದಕ್ಷಿಣ ಭಾಗಕ್ಕೆ ಮತ್ತು ಕಾವೇರಿ ನದಿ ಬೆಂಗಳೂರು, ಕೋಲಾರ, ಮೈಸೂರಿಗೆ, ಮಂಡ್ಯ, ತುಮಕೂರಿಗೆ ನೀರು ಕೊಡುತ್ತದೆ. ನಮ್ಮ ಡ್ಯಾಮ್‌ನ ನೀರು ಬಿಟ್ಟರೆ ಬೇಸಿಗೆಯಲ್ಲಿ ಕುಡಿಯುವ ನೀರಿಗೆ ಎಲ್ಲಿಗೆ ಹೋಗುವುದು. ‘ಇಂಡಿಯಾ ಟೀಮ್’ ಅನ್ನು ಖುಷಿಪಡಿಸಲು ನೀರು ಬಿಡುತ್ತಿದ್ದಾರೆ” ಎಂದು ಟೀಕಿಸಿದರು
ಬಿಜೆಪಿ ಯಾರೂ ಬಿಡಲ್ಲ
ರಾಜ್ಯದಲ್ಲಿ ಇವತ್ತು ಬಿಜೆಪಿ ಸಂಕಷ್ಟದಲ್ಲಿ ಇರಬಹುದು. ಅಧಿಕಾರ ಅನುಭವಿಸುವ ಸಂದರ್ಭದಲ್ಲಿ ಎಲ್ಲರೂ ಬಂದಿದ್ದೀರಿ. ನಿಮಗೆ ಒಳ್ಳೆಯ ಅಧಿಕಾರ ಕೊಟ್ಟು ಒಳ್ಳೆಯ ಮಂತ್ರಿಗಿರಿ ಕೊಟ್ಟಿದ್ದೇವೆ. ಇಲ್ಲಿ ಬಂದರು, ಅಧಿಕಾರ ಇಲ್ಲದಾಗ ಹೋದರು ಎಂಬ ಕೆಟ್ಟ ಹೆಸರು ಬೇಡ. ಇದೇ ಕಾರಣಕ್ಕೆ ಯಾರು ಕೂಡ ಬಿಜೆಪಿ ಬಿಡಲ್ಲ, ಬಿಡಲುಬಾರದು ಎಂದು ಪ್ರಾರ್ಥನೆ ಮಾಡುತ್ತೇನೆ ಎಂದು ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದರು.
“ಕಾಂಗ್ರೆಸ್ ನಾಯಕರನ್ನು ಬಿಜೆಪಿಗೆ ಕರೆತರುವ ಯಾವುದೇ ಯೋಚನೆ ಬಂದಿಲ್ಲ. ರಾಜ್ಯ ಸರಕಾರ ಈಗಷ್ಟೇ ನೂರು ದಿನ ಪೂರೈಸಿದೆ. ಸರಕಾರದಲ್ಲಿ ಅಸಮಾಧಾನ ಇದೆ. ಬಿಜೆಪಿ ಎಂದೂ ಶಾಸಕರನ್ನು ಸೆಳೆಯುವ ಯೋಚನೆ ಮಾಡಿಲ್ಲ. ಆದರೆ ಕಾಂಗ್ರೆಸ್ ಈ ಪ್ರಯತ್ನ ಮಾಡುತ್ತಿದೆ. ಕಾಂಗ್ರೆಸ್‌ನೊಳಗೆ ಆಪರೇಷನ್ ಸ್ಪರ್ಧೆ ಮಾಡುತ್ತಿದೆ” ಎಂದು ಹರಿಹಾಯ್ದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ದಲಿತ ಪ್ರಾಧ್ಯಾಪಕಿಯ ಮೇಲೆ ಸಹೋದ್ಯೋಗಿಗಳು- ವಿದ್ಯಾರ್ಥಿಗಳಿಂದ ಹಲ್ಲೆ; ಎತ್ತ ಸಾಗುತ್ತಿದೆ ಭಾರತ?
“ಕಾಂಗ್ರೆಸ್ಸಿನ ಉಚಿತ ಯೋಜನೆಗಳಿಂದ ಹಲವಾರು ಅವಾಂತರವಾಗಿದೆ. ಎಲ್ಲವನ್ನು ಉಚಿತವಾಗಿ ಕೊಟ್ಟರೆ ಜನರಿಗೆ ಸಂತೋಷ ಆಗುತ್ತದೆ. ಕಳೆದ ತಿಂಗಳು ಈ ರಾಜ್ಯದ ನ್ಯಾಯಾಧೀಶರಿಗೆ, ಶಿಕ್ಷಕರಿಗೆ ಮತ್ತೆಲ್ಲರಿಗೂ ಒಂದು ವಾರ ತಡವಾಗಿ ಸಂಬಳವಾಗಿದೆ. ಹಲವಾರು ಯೋಜನೆಗಳಿಗೆ ಸರಿಯಾಗಿ ಹಣ ಸಿಗುತ್ತಿಲ್ಲ. ಸಾಮಾಜಿಕ ಭದ್ರತಾ ಯೋಜನೆಗೆ ಹಣ ಇಲ್ಲ. ಕಿಸಾನ್ ಸಮ್ಮಾನ್ ಯೋಜನೆಗೆ ರಾಜ್ಯ ಸರಕಾರದ ಕೊಡುಗೆ ನಿಲ್ಲಿಸಿದೆ” ಎಂದು ಕಿಡಿಕಾರಿದರು.
“ಶೇ.50ರಷ್ಟು ರೂಟ್ ಬಸ್‌ಗಳನ್ನು ಕಡಿತ ಮಾಡಲಾಗಿದೆ. ಸಾರಿಗೆ ಇಲಾಖೆಯ ಸಂಸ್ಥೆಗಳು ನಷ್ಟಕ್ಕೆ ಹೋಗುತ್ತಿವೆ. ಎಲ್ಲದಕ್ಕೂ ಮುಖ್ಯಮಂತ್ರಿಗಳು ಉತ್ತರ ನೀಡಬೇಕು. ಚೀಪ್ ರಾಜಕಾರಣದಿಂದ ಅವಾಂತರ ಮಾಡಿದ್ದಾರೆ. ಫ್ರೀ ಅಂತ ಇನ್ನೊಬ್ಬರಿಂದ ಕಿತ್ತುಕೊಳ್ಳುತ್ತಿದ್ದಾರೆ ಮತ್ತು ದರೋಡೆ ಮಾಡುತ್ತಿದ್ದಾರೆ” ಎಂದು ವಾಗ್ದಾಳಿ ನಡೆಸಿದರು.
“ಒಂದು ದೇಶ ಒಂದು ಚುನಾವಣೆ ಏಕಕಾಲದಲ್ಲಿ ಎಲ್ಲ ಚುನಾವಣೆಗಳು ಆಗಬೇಕು ಎಂಬುದು ನಮ್ಮ ಅಪೇಕ್ಷೆ. ಕೇರಳದಲ್ಲಿ ಜಿಪಂ, ಗ್ರಾಪಂ, ನಗರಸಭೆ ಚುನಾವಣೆಗಳು ಒಟ್ಟಿಗೆ ನಡೆಯುತ್ತವೆ. ಇದೇ ರೀತಿ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳು ಒಟ್ಟಿಗೆ ನಡೆಯಬಹುದು” ಎಂದು ಅಭಿಪ್ರಾಯಪಟ್ಟರು.