- ಅನೇಕ ರಾಜ್ಯಗಳು 341ನೇ ಆರ್ಟಿಕಲ್ ತಿದ್ದುಪಡಿಗೆ ಮನವಿ ಮಾಡಿವೆ
- ಕಾನೂನು ಅರಿವಿರುವ ಸಿದ್ದರಾಮಯ್ಯ ಬದ್ಧತೆ ಬಗ್ಗೆ ಮಾತನಾಡುತ್ತಾರೆ
ಪರಿಶಿಷ್ಟ ಜಾತಿ ಒಳ ಮೀಸಲಾತಿ ಮತ್ತು ಕಾಂತರಾಜು ಆಯೋಗದ ವರದಿ ಅನುಷ್ಠಾನಕ್ಕೆ ತರುವ ಮೂಲಕ ಸಿಎಂ ಸಿದ್ದರಾಮಯ್ಯ ಅವರು ತಮ್ಮ ಬದ್ಧತೆ ತೋರಿಸಲಿ. ಮತ್ತೊಬ್ಬರ ಬಗ್ಗೆ ಮಾತನಾಡುವುದು ಸೂಕ್ತವಲ್ಲ ಎಂದು ಕೇಂದ್ರ ಸಚಿವ ಎ ನಾರಾಯಣಸ್ವಾಮಿ ಸವಾಲು ಎಸೆದರು.
ಬಿಜೆಪಿ ರಾಜ್ಯ ಕಾರ್ಯಾಲಯದಲ್ಲಿ ಶನಿವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬಿಜೆಪಿಗೆ ಬದ್ಧತೆ ಇದೆ. ನಾವು ಒಳ ಮೀಸಲಾತಿ ಶಿಫಾರಸು ಮಾಡಿ ಕಳುಹಿಸಿದ್ದೇವೆ. ಶೆಡ್ಯೂಲ್ 9ಕ್ಕೆ ಸೇರುವ ಮೊದಲೇ ತಮಿಳುನಾಡಿನಲ್ಲಿ ಒಳಮೀಸಲಾತಿ ಜಾರಿಗೊಳಿಸಿದ್ದರು. ಆಂಧ್ರ ಪ್ರದೇಶದಲ್ಲಿ ಒಳ ಮೀಸಲಾತಿ ಜಾರಿಗೆ ಬಂದ 24 ಗಂಟೆಯಲ್ಲೇ ಆ ರಾಜ್ಯದಲ್ಲಿ ಒಳ ಮೀಸಲಾತಿಯನ್ನು ಕೊಟ್ಟಿದ್ದರು. ಒಳ ಮೀಸಲಾತಿ ಪರಿಣಾಮವಾಗಿ ವಂಚಿತ, ಶೋಷಿತ ಅನೇಕ ವರ್ಗಕ್ಕೆ ಉದ್ಯೋಗ, ಶಿಕ್ಷಣಾವಕಾಶ ಲಭಿಸಿತ್ತು ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅರಿಗೆ ಬದ್ಧತೆ ಇದ್ದರೆ ಆಂಧ್ರ ಪ್ರದೇಶ ಮತ್ತು ತಮಿಳುನಾಡಿನಲ್ಲಿ ಶೋಷಿತರಿಗೆ ನ್ಯಾಯ ನೀಡಿದ ಮಾದರಿಯಲ್ಲಿ ಕೊಡುವ ಎದೆಗಾರಿಕೆ ತೋರಿಸಬೇಕು. ಅದಕ್ಕಾಗಿ ವಿಶೇಷ ಅಧಿವೇಶನ ಕರೆದು ಜಾರಿ ಮಾಡಿ ಎಂದು ಒತ್ತಾಯಿಸಿದರು.
ಆರ್ಟಿಕಲ್ 341 ತಿದ್ದುಪಡಿ ಆಗಬೇಕು. ರಾಜ್ಯಗಳಿಂದ ಇದಕ್ಕೆ ಉತ್ತರ ಬೇಕಿತ್ತು. ಶೂನ್ಯ ಎಸ್‍ಸಿ ಜನಸಂಖ್ಯೆ ಇರುವ ರಾಜ್ಯಗಳು ಋಣಾತ್ಮಕ ಉತ್ತರ ನೀಡಿವೆ. 7 ರಾಜ್ಯಗಳು ಪರವಾಗಿವೆ. ದೆಹಲಿ ಮತ್ತು ಪಂಜಾಬ್ ರಾಜ್ಯಗಳ ಎಎಪಿಯ ಮಹಾ ಘಟಬಂಧನ್ ಸದಸ್ಯರು ತಿದ್ದುಪಡಿ ವಿರೋಧಿಸಿದ್ದಾರೆ. ಹಿಮಾಚಲ ಪ್ರದೇಶದಲ್ಲಿ ನಿಮ್ಮದೇ ಸರ್ಕಾರವಿದ್ದು, ವಿರೋಧಿಸಿದ್ದಾರೆ. ಘಟಬಂಧನ್ ಸದಸ್ಯರಾದ ಪಶ್ಚಿಮ ಬಂಗಾಲ ಸರ್ಕಾರ ವಿರೋಧಿಸಿದೆ. ಸಿದ್ದರಾಮಯ್ಯ ಅವರು ಒಳ ಮೀಸಲಾತಿಗೆ ಒಪ್ಪಿಗೆ ಕೊಡಿಸಲು ಆ ರಾಜ್ಯಗಳ ಸಿಎಂಗಳ ಜೊತೆ ಚರ್ಚಿಸಬೇಕು. ವಿಶೇಷ ಅಧಿವೇಶನ ಕರೆದು ಒಳ ಮೀಸಲಾತಿಗೆ ತಮ್ಮ ಬದ್ಧತೆಯನ್ನು ಪ್ರದರ್ಶಿಸಬೇಕು ಎಂದು ಆಗ್ರಹಿಸಿದರು.
ಕಾನೂನು ತಿಳಿದಿರುವ ವಕೀಲರಾಗಿದ್ದ ಸಿದ್ದರಾಮಯ್ಯ ಅವರು ಬಿಜೆಪಿ ಬದ್ಧತೆ ಮಾತನಾಡುತ್ತಾರೆ. ಚುನಾವಣಾ ಪೂರ್ವದಲ್ಲಿ ಒಂದು ಸಭೆಯಲ್ಲಿ, ಪ್ರಣಾಳಿಕೆಯಲ್ಲಿ ಒಳ ಮೀಸಲಾತಿಯ ಬದ್ಧತೆ ಬಗ್ಗೆ ತಿಳಿಸಿದ್ದರು. ಒಳ ಮೀಸಲಾತಿ ಜಾರಿ ಮಾಡಿ ತೀರುತ್ತೇವೆ ಎಂದು 25 ರಿಂದ 30 ಸಾವಿರ ಜನರಿದ್ದ ಸಭೆಯ ವೇದಿಕೆ ಮೇಲೆ ಹೇಳಿದ್ದರು. ಬಳಿಕ ಕೆಳಗಿಳಿದು ಐದು ನಿಮಿಷದಲ್ಲಿ ಇತರ ಸಮಾಜದವರು ಕೇಳಿದಾಗ ‘ನಾನು ಯಾವುದೇ ಕಾರಣಕ್ಕೂ ಒಳ ಮೀಸಲಾತಿ ಜಾರಿ ಮಾಡುವುದಿಲ್ಲ. ಸಿಎಂ ಆಗಿದ್ದಾಗ ನಾನು ಮಾಡಲಿಲ್ಲ. ನೀವು ಹೆದರಬೇಡಿ’ ಎಂದಿದ್ದರು ಎಂದು ಆರೋಪಿಸಿದರು.
ಸಂಸತ್ತಿನಲ್ಲಿ ಪ್ರಶ್ನೆಗೆ ನೀಡಿದ ಉತ್ತರದ ವಿಚಾರದಲ್ಲಿ ಮಾತನಾಡಿದ ಸಿದ್ದರಾಮಯ್ಯ ಅವರು ಬಿಜೆಪಿ ಬೂಟಾಟಿಕೆ ಬಯಲಾಗಿದೆ ಎಂದಿದ್ದಾರೆ. ಎಸ್‍ಸಿಗಳಿಗೆ ಒಳ ಮೀಸಲಾತಿ ಸಂಬಂಧ ಈಗ ಸಂವಿಧಾನದ 341ನೇ ಆರ್ಟಿಕಲ್‍ನಡಿ ಏನು ಹೇಳುತ್ತದೆ ಎಂಬುದನ್ನು ಸಚಿವನಾಗಿ ತಿರುಚಿ ಹೇಳುವಂತಿಲ್ಲ. ತಿರುಚಿ ಹೇಳುವ ಮನೋಭೂಮಿಕೆಯೂ ನನ್ನದಲ್ಲ. ಈಗಿನ ಸ್ಥಿತಿ ಬಗ್ಗೆ ನಾನು ಉತ್ತರಿಸಿದ್ದೇನೆ ಎಂದು ಸ್ಪಷ್ಟನೆ ನೀಡಿದರು.
ಒಳ ಮೀಸಲಾತಿಯನ್ನು ಕರ್ನಾಟಕ ಸರ್ಕಾರ ಒಪ್ಪಿಕೊಂಡಿದೆ. ರಾಜ್ಯದ ಹಿಂದಿನ ಬಿಜೆಪಿ ಸರ್ಕಾರವು ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಆಗಿದ್ದಾಗ ಮಾಧುಸ್ವಾಮಿ ನೇತೃತ್ವದ ಸಮಿತಿಗೆ ಒಳ ಮೀಸಲಾತಿ ಬಗ್ಗೆ, ಸದಾಶಿವ ಆಯೋಗ, ಇತರ ಆಯೋಗಗಳ ವರದಿಗಳ ಕುರಿತು ಸಂಕ್ಷಿಪ್ತವಾಗಿ ಅಧ್ಯಯನ ನಡೆಸಿ ವರದಿ ಕೊಡಲು ತಿಳಿಸಲಾಗಿತ್ತು. ಅದು ನೀಡಿದ ವರದಿಯಡಿ ತಿಳಿಸಿದಂತೆ ಮೀಸಲಾತಿ ಪ್ರಮಾಣವನ್ನು ಶೇ 15ರಿಂದ ಶೇ 17ರಷ್ಟು ಏರಿಕೆ ಮಾಡಿ , 6, 5.5, 4.5, 1 ಶೇಕಡಾವನ್ನು ಒಳಮೀಸಲಾತಿಯನ್ನು ರಾಜ್ಯ ಸರ್ಕಾರ ಒಪ್ಪಿಕೊಂಡಿದೆ. ಅದರಂತೆ ಕೇಂದ್ರ ಸರ್ಕಾರಕ್ಕೆ 341ನೇ ಆರ್ಟಿಕಲ್ ತಿದ್ದುಪಡಿ ಮಾಡಲು ಶಿಫಾರಸು ಮಾಡಿದ್ದರು ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ʻಸದ್ಯದ ಸ್ಥಿತಿಯಲ್ಲಿ ಒಳಮೀಸಲಾತಿಗೆ ಅವಕಾಶವಿಲ್ಲʼ: ಕೇಂದ್ರ ಸಚಿವರ ಪ್ರತಿಕ್ರಿಯೆಗೆ ಹೋರಾಟಗಾರರ ಆಕ್ರೋಶ
ರಾಜ್ಯ ಸರ್ಕಾರವು ರಾಜ್ಯಪಾಲರ ಶಿಫಾರಸಿನೊಂದಿಗೆ ಕಳುಹಿಸಿತ್ತು. ರಾಜ್ಯದ ಒಳಮೀಸಲಾತಿಗೆ ಬದ್ಧತೆ ಇದೆ ಎಂದು ಕೇಂದ್ರ ಗೃಹ ಸಚಿವರೂ ಹೇಳಿದ್ದಾರೆ. ಅನೇಕ ರಾಜ್ಯಗಳು ಸಹ 341ನೇ ಆರ್ಟಿಕಲ್ ತಿದ್ದುಪಡಿ ಮಾಡಲು ಮನವಿ ಮಾಡಿವೆ. ಆಂಧ್ರ ಪ್ರದೇಶ, ಪಂಜಾಬ್, ಮಹಾರಾಷ್ಟ್ರ ಸರ್ಕಾರಗಳೂ ಇಂಥ ಮನವಿ ಮಾಡಿದ್ದವು. ಈ ನಡುವೆ ಆಂಧ್ರದ ಹೈಕೋರ್ಟಿನಲ್ಲಿ ಮೀಸಲಾತಿ ಅವಶ್ಯಕತೆ ಕುರಿತು ತೀರ್ಪು ಬಂದಿತ್ತು. ಸುಪ್ರೀಂ ಕೋರ್ಟ್ ಒಳ ಮೀಸಲಾತಿ ಸಾಧ್ಯವಿಲ್ಲ ಎಂದಿತ್ತು ಎಂದು ತಿಳಿಸಿದರು.
ಪಂಜಾಬ್‍ನ ಇನ್ನೊಂದು ಕೇಸಿನಲ್ಲಿ 5 ಸದಸ್ಯರ ಸಂವಿಧಾನ ಪೀಠವು ವಿಸ್ತೃತವಾದ ಚರ್ಚೆಯ ಬಳಿಕ ಕೇವಲ ಕರ್ನಾಟಕದ ಒಳ ಮೀಸಲಾತಿ ಅಲ್ಲದೇ ದೇಶದಲ್ಲಿ ಮತ್ತೊಮ್ಮೆ ಮೀಸಲಾತಿ ಪರಿಷ್ಕರಣೆ ಆಗಬೇಕಿದೆ ಎಂದು ತಿಳಿಸಿತ್ತು. ಮೀಸಲಾತಿ ಸಿಗಬೇಕಾದ ಜನತೆಗೆ ಸಿಗುತ್ತಿಲ್ಲ. ಸಂವಿಧಾನದ ಆಶೋತ್ತರಗಳಡಿ, ಶೋಷಿತರಿಗೆ ಮೀಸಲಾತಿ ತಲುಪುತ್ತಿಲ್ಲ. ಆದ್ದರಿಂದ ಹಿಂದಿನ ತೀರ್ಪಿನ ಬಗ್ಗೆ ಹೇಳಿಕೆ ಕೊಡಲು ಅಸಾಧ್ಯ. 7 ಸದಸ್ಯರ ಅಥವಾ ದೊಡ್ಡ ಪೀಠ ರಚಿಸಿ ಅದಕ್ಕೆ ಕೇಸನ್ನು ವರ್ಗಾಯಿಸಲು ತಿಳಿಸಿದ್ದರು. ಅದನ್ನು ನಾನು ಪ್ರಸ್ತಾಪಿಸಿದ್ದೇನೆ ಎಂದರು.
ಮಾಜಿ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ, ಮಾಜಿ ಸಚಿವ ಹಾಲಪ್ಪ ಆಚಾರ್, ಎಸ್‍ಸಿ ಮೋರ್ಚಾ ರಾಜ್ಯ ಅಧ್ಯಕ್ಷ ಛಲವಾದಿ ನಾರಾಯಣಸ್ವಾಮಿ, ಹಿರಿಯ ಮುಖಂಡ ಸಚ್ಚಿದಾನಂದಮೂರ್ತಿ ಸುದ್ದಿಗೋಷ್ಠಿಯಲ್ಲಿ ಇದ್ದರು.