ರೈತರ ಭೂಮಿ ಕಸಿಯಲೆಂದೇ ಬಂದ ಸ್ಮಾರ್ಟ್ ಸಿಟಿ ಯೋಜನೆ: ಹೆಚ್‌ಡಿಡಿ-ಡಿಕೆಶಿ ಪಾತ್ರವೇನು?

Date:

Advertisements
ಬಿಡದಿ ಸ್ಮಾರ್ಟ್‌ ಸಿಟಿ ಯೋಜನೆಗೆ ಭೂಸ್ವಾಧೀನ ಪಡಿಸಿಕೊಳ್ಳಲು ಗ್ರೇಟರ್‌ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಮುಂದಾಗಿರುವ ಬೆನ್ನಲ್ಲೇ, ದೇವೇಗೌಡರಿಂದ ವಿರೋಧ ವ್ಯಕ್ತವಾಗಿರುವುದು ಸ್ವಾರ್ಥ ರಾಜಕಾರಣದ ಭಾಗವೇ ಆಗಿದೆ. ಡಿ ಕೆ ಶಿವಕುಮಾರ್‌ ಮತ್ತು ದೇವೇಗೌಡರ ಕುಟುಂಬದ ಆಸ್ತಿಗಳು ನೈಸ್‌ ಮತ್ತು ಗ್ರೇಟರ್‌ ಬೆಂಗಳೂರು-ಬಿಡದಿ ಸ್ಮಾರ್ಟ್‌ ಸಿಟಿ ಯೋಜನೆಯ ವ್ಯಾಪ್ತಿಗೆ ಒಳಪಡುತ್ತವೆ ಎಂಬುದನ್ನು ಗಮನಿಸಿದರೆ ಇವರ ಸ್ವಾರ್ಥ ರಾಜಕಾರಣ ಬೇಗ ಅರ್ಥವಾಗುತ್ತದೆ.  

ನೈಸ್‌ ರಸ್ತೆ ವಿವಾದ ಮಾದರಿಯಲ್ಲಿಯೇ ಗ್ರೇಟರ್‌ ಬೆಂಗಳೂರು-ಬಿಡದಿ ಸ್ಮಾರ್ಟ್‌ ಸಿಟಿ ಯೋಜನೆ ರಾಜಕೀಯ ಸಂಘರ್ಷಕ್ಕೆ ದಾರಿಮಾಡಿಕೊಟ್ಟಿದೆ. ರಾಮನಗರ ಜಿಲ್ಲೆಯ ಬಿಡದಿ ಹೋಬಳಿ ವ್ಯಾಪ್ತಿಯಲ್ಲಿ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ಟೌನ್ ಶಿಪ್ ನಿರ್ಮಾಣಕ್ಕೆ ರೈತರ ಭೂಮಿಯನ್ನು ಸ್ವಾಧೀನ ಮಾಡಿಕೊಳ್ಳುವುದಕ್ಕೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಹಿಂದೆ ಇದ್ದ ಬಿಡದಿ ಸ್ಮಾರ್ಟ್ ಸಿಟಿ ಯೋಜನಾ ಪ್ರಾಧಿಕಾರದ ಹೆಸರನ್ನು ಬದಲಾಯಿಸಿ, ಗ್ರೇಟರ್ ಬೆಂಗಳೂರು-ಬಿಡದಿ ಸ್ಮಾರ್ಟ್‌ಸಿಟಿ ಯೋಜನೆ ಎಂದು ಘೋಷಿಸುವುದಾಗಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು 2023ರಲ್ಲಿ ಅಧಿಕೃತವಾಗಿ ಘೋಷಿಸಿದ್ದರು. ತದನಂತರದಲ್ಲಿ ರಾಮನಗರ ಜಿಲ್ಲೆಯ ಪ್ರಮುಖ ಕೈಗಾರಿಕಾ ಪ್ರದೇಶ ನೆಲೆಸಿರುವ ಬಿಡದಿಯನ್ನು ಗ್ರೇಟರ್ ಬೆಂಗಳೂರು-ಬಿಡದಿ ಸ್ಮಾರ್ಟ್‌ಸಿಟಿ ಯೋಜನೆ(ಜಿಬಿಡಿಎ) ಎಂದು ಘೋಷಿಸಿ ನಗರಾಭಿವೃದ್ಧಿ ಇಲಾಖೆ ನವೆಂಬರ್‌ 18, 2023ರಲ್ಲೇ ಆದೇಶ ಹೊರಡಿಸಿತ್ತು.

ಹಾಗೆ ನೋಡಿದರೆ 2006ರಲ್ಲೇ ಬಿಡದಿ ಸ್ಮಾರ್ಟ್‌ಸಿಟಿ ಯೋಜನೆ ರೂಪಿಸಲಾಗಿತ್ತು. ಬಿಡದಿ ಹೋಬಳಿಯ 29 ಗ್ರಾಮಗಳ 10 ಸಾವಿರ ಎಕರೆಯನ್ನು ಯೋಜನೆಯ ಉದ್ದೇಶಕ್ಕಾಗಿ ಸ್ವಾಧೀನಪಡಿಸಿಕೊಂಡಿದ್ದು, ಸ್ಮಾರ್ಟ್‌ಸಿಟಿ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿತ್ತು. ಕಾರಣಾಂತರಗಳಿಂದ ಈ ಯೋಜನೆ ನನೆಗುದಿಗೆ ಬಿದ್ದಿತ್ತು. ಇದೀಗ 19 ವರ್ಷಗಳ ಬಳಿಕ ಹೊಸ ಹೆಸರಿನ ರೂಪದಲ್ಲಿ ಯೋಜನೆಗೆ ಮರು ಚಾಲನೆ ಸಿಕ್ಕಿದೆ. ಬೆಂಗಳೂರು ಮಹಾನಗರ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ (ಬಿಎಂಆರ್‌ಡಿಎ) ಆಯುಕ್ತರನ್ನು ಜಿಬಿಡಿಎ ಮುಖ್ಯಸ್ಥರನ್ನಾಗಿ ಮತ್ತು ಬಿಎಂಆರ್‌ಡಿಎ ಯೋಜನಾ ನಿರ್ದೇಶಕರನ್ನು ಸದಸ್ಯ ಕಾರ್ಯದರ್ಶಿಯಾಗಿ ನೇಮಕ ಸಹ ಮಾಡಲಾಗಿದೆ.

Advertisements

ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ಟೌನ್ ಶಿಪ್ ನಿರ್ಮಾಣಕ್ಕೆ ಭೂಸ್ವಾಧೀನಕ್ಕೆ ವಿರೋಧ ವ್ಯಕ್ತಪಡಿಸಿರುವ ದೇವೇಗೌಡ ಅವರು ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದು, ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದ ಬಿಡದಿ ಹೋಬಳಿಯ ಬೈರಮಂಗಲ, ಕಂಚುಗಾರನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ 24 ಗ್ರಾಮಗಳಲ್ಲಿನ ಹಲವಾರು ಸರ್ವೆ ನಂಬರುಗಳಲ್ಲಿರುವ ಸುಮಾರು 10 ಸಾವಿರ ಎಕರೆ ಜಮೀನನ್ನು ಸರ್ಕಾರವು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಟೌನ್‌ಶಿಪ್ ಯೋಜನೆ ನಿರ್ಮಾಣಕ್ಕೆ ಭೂಸ್ವಾಧೀನ ಪ್ರಕ್ರಿಯೆ ಪ್ರಾರಂಭಿಸಿರುವುದು ವರದಿಯಾಗಿದೆ. ಸಾವಿರಾರು ಕುಟುಂಬಗಳ ಜೀವನ ನಿರ್ವಹಣೆಗೆ ಧಕ್ಕೆ ಉಂಟಾಗಿ, ರೈತ ಕುಟುಂಬದ ಯುವಕರು ನಿರುದ್ಯೋಗಿಗಳಾಗಿ ಬೀದಿಪಾಲಾಗುತ್ತಾರೆ. ಈ ಬಡ ರೈತರ ಜೀವನೋಪಾಯಕ್ಕೆ ಕೃಷಿ ಭೂಮಿಯೇ ಆಧಾರವಾಗಿದೆ. ಆದ್ದರಿಂದ ರಾಜ್ಯ ಸರ್ಕಾರ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ನಿರ್ಮಿಸುತ್ತಿರುವ ಟೌನ್‌ಶಿಪ್ ಯೋಜನೆಗೆ ಸ್ವಾಧೀನಪಡಿಸಿಕೊಳ್ಳುತ್ತಿರುವ ರೈತರ ಭೂಮಿಯನ್ನು ಭೂಸ್ವಾಧೀನ ಪ್ರಕ್ರಿಯೆಯಿಂದ ಬಡ ರೈತರ ಹಿತದೃಷ್ಟಿಯಿಂದ ಕೈಬಿಡಬೇಕು” ಎಂದು ಆಗ್ರಹಿಸಿದ್ದಾರೆ.

“ರಾಮನಗರ ಜಿಲ್ಲೆಯ ರಾಮನಗರ ಮತ್ತು ಕನಕಪುರ ತಾಲ್ಲೂಕುಗಳಲ್ಲಿ ಈಗಾಗಲೇ ರಾಜ್ಯ ಸರ್ಕಾರ ಕೈಗಾರಿಕಾಭಿವೃದ್ಧಿಗಾಗಿ ಸಾವಿರಾರು ಎಕರೆ ರೈತರ ಭೂಮಿಯನ್ನು ವಶಪಡಿಸಿಕೊಂಡು ಕೈಗಾರಿಕಾಭಿವೃದ್ಧಿ ಪ್ರದೇಶವನ್ನು ಸ್ಥಾಪಿಸಿದೆ. ರಾಮನಗರ ಜಿಲ್ಲೆ ಬೆಂಗಳೂರು ಮಹಾನಗರಕ್ಕೆ ಹೊಂದಿಕೊಂಡಂತೆ ಇದ್ದು, ಇಂದು ಹಲವಾರು ಉದ್ಯಮಗಳು ಖಾಸಗಿಯಾಗಿ ಕೈಗಾರಿಕೆಗಳನ್ನು ಸ್ಥಾಪಿಸಿದ್ದಾರೆ. ಉಳಿದಂತೆ ಇರುವ ಕೃಷಿ ಭೂಮಿಯಲ್ಲಿ ರೈತರು ತಮ್ಮ ಜೀವನ ನಿರ್ವಹಣೆಗೆ ಹೈನುಗಾರಿಕೆ, ರೇಷ್ಮೆ, ತೋಟಗಾರಿಕೆ, ಕೃಷಿಗಾಗಿ ಅವಲಂಬಿತರಾಗಿದ್ದಾರೆ. ಬಹುಪಾಲು ರೈತರು ಅತೀ ಸಣ್ಣ ಮತ್ತು ಸಣ್ಣ ಹಿಡುವಳಿದಾರರಾಗಿದ್ದು ಬಡ ಕುಟುಂಬಕ್ಕೆ ಸೇರಿದವರಾಗಿದ್ದಾರೆ. ರೈತರು ತಮ್ಮ ಜಮೀನಿನಲ್ಲಿ ಮತ್ತು ಜಮೀನಿನ ಸುತ್ತ ಲಕ್ಷಾಂತರ ಮರ-ಗಿಡಗಳನ್ನು ಬೆಳೆಸಿದ್ದಾರೆ. ಇಂತಹ ಪ್ರದೇಶವನ್ನು ಟೌನ್‌ಶಿಪ್ ಯೋಜನೆಗೆ ಸ್ವಾಧೀನ ಪಡಿಸಿಕೊಂಡರೆ ಪರಿಸರಕ್ಕೆ ಅಪಾರ ಹಾನಿ ಉಂಟಾಗುತ್ತದೆ” ಎಂದು ದೇವೇಗೌಡರು ಕಳವಳ ವ್ಯಕ್ತಪಡಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಭಾಷಾ ವೈಷಮ್ಯ ಬಿತ್ತಿದ ಭಂಡರು, ಬಿತ್ತರಿಸಿದ ಬುದ್ಧಿಗೇಡಿಗಳು

ದೇವೇಗೌಡರ ಮಾತಿಗೆ ತಿರುಗೇಟು ನೀಡಿರುವ ಡಿ ಕೆ ಶಿವಕುಮಾರ್‌, ”ಬಿಡದಿ ಸೇರಿದಂತೆ ಏಳು ಕಡೆ ಟೌನ್ ಶಿಪ್ ಮಾಡಲು ಹೊರಟಿದ್ದವರು ಹಾಗೂ ಈ ಯೋಜನೆಯ ಪಿತಾಮಹರೇ ನಿಮ್ಮ ಮಗ ಕುಮಾರಸ್ವಾಮಿ. ಈಗ ಅವರ ಕುಟುಂಬದವರೇ ವಿರೋಧ ಮಾಡಿದರೆ ಯಾವ ನ್ಯಾಯ? ದೇವೇಗೌಡರು ದೊಡ್ಡವರು. ಪಾಪ ಅವರು ಮರೆತಿರಬೇಕು. ಬಿಡದಿ, ಸಾತನೂರು, ನಂದಗುಡಿ ಈ ಭಾಗದಲ್ಲಿ ಟೌನ್ ಶಿಪ್‌ಗೆ ನೋಟಿಫಿಕೇಶನ್ ಹೊರಡಿಸಿದ್ದು ಅವರ ಸುಪುತ್ರ ಕುಮಾರಸ್ವಾಮಿ. ಅವರೇ ಈ ತೀರ್ಮಾನ ಮಾಡಿ ಡಿಎಲ್ ಎಫ್ ಅವರಿಂದ 300 ಕೋಟಿ ರೂ. ಹಣ ಕಟ್ಟಿಸಿಕೊಂಡಿದ್ದರು. ಆನಂತರ ಬಿಜೆಪಿ ಸರ್ಕಾರ ಬಂದಾಗ ಯೋಜನೆ ಮಾಡಲು ಸಾಧ್ಯವಿಲ್ಲ ಎಂದು ಹಣ ವಾಪಸ್ ನೀಡಿದ್ದರು” ಎಂದು ನೆನಪಿಸಿದ್ದಾರೆ.

“ನಾನು ಈಗ ಯಾವುದೇ ಜಮೀನು ಡಿನೋಟಿಫಿಕೇಷನ್ ಮಾಡಲು ತಯಾರಿಲ್ಲ. ಇದು ಮಾಡಿದ ತಕ್ಷಣ ದುಡ್ಡು-ಕಾಸು ಹೊಡೆದರು ಎನ್ನುವ ಆರೋಪ ಬರುತ್ತದೆ. ಈಗಾಗಲೇ ನಾನು ಕೋರ್ಟ್, ಕಚೇರಿ ಅಲೆದು, ಜೈಲು ವಾಸವನ್ನೂ ಅನುಭವಿಸಿದ್ದೇನೆ. ನನ್ನ ಸ್ವಂತ ಜಮೀನಿನ ಬಗ್ಗೆಯೂ ಇವರುಗಳೇ ಆರೋಪ ಮಾಡಿದ್ದಾರೆ. ದೇವೇಗೌಡರೇ ನಿಮ್ಮ ಮಗ ಎರಡು ಬಾರಿ ಮುಖ್ಯಮಂತ್ರಿಯಾಗಿದ್ದಾಗ ಅವರೇ ಯಾಕೆ ಈ ಜಮೀನು ಡಿನೋಟಿಫಿಕೇಷನ್ ಮಾಡಲಿಲ್ಲ. ಈಗೇಕೆ ಮಾತನಾಡುತ್ತಿದ್ದೀರಿ? ನಾನು ಎಲ್ಲಾ ರೈತರ ಬಳಿ ಮಾತನಾಡಿದ್ದೇನೆ. ಗ್ರೇಟರ್ ಬೆಂಗಳೂರು ನಗರ ಇಡೀ ದೇಶಕ್ಕೇ ಮಾದರಿಯಾಗುವಂತಹ ನಗರವನ್ನಾಗಿ ಮಾಡುತ್ತೇವೆ. ದೆಹಲಿ‌, ಚಂಡೀಗಡ್ ಮಾದರಿಗಿಂತ ಉತ್ತಮವಾಗಿ 10 ಸಾವಿರ ಎಕರೆಯಲ್ಲಿ ಬೆಂಗಳೂರು ನಗರಕ್ಕಿಂತ ಚೆನ್ನಾಗಿ ರೂಪಿಸಲಾಗುವುದು. ಇದಕ್ಕಾಗಿ ಯೋಜನೆ ಸಿದ್ಧವಾಗುತ್ತಿದೆ” ಎಂದಿದ್ದಾರೆ.

“ಇಲ್ಲಿ ರೈತರು ತಮ್ಮ ಭೂಮಿ ಮಾರಲೂ ಆಗದೆ, ಅಭಿವೃದ್ಧಿಯನ್ನು ಮಾಡಲಾಗದೇ ಪರದಾಡುತ್ತಿದ್ದಾರೆ. ಏನಾದರೂ ಒಂದು ತೀರ್ಮಾನ ಮಾಡಿ ಎಂದು ರೈತರೇ ನನ್ನ ಬಳಿ ಬಂದು ಮನವಿ ಮಾಡಿದ್ದಾರೆ. ಅವರು ತಮ್ಮ ಆಸ್ತಿ ಕಳೆದುಹೋಯಿತು ಎನ್ನಬಾರದು, ಜತೆಗೆ ಖುಷಿ ಪಡಬೇಕು. ಭೂಮಿ ಹೋದರೂ ಉತ್ತಮ ಪರಿಹಾರ‌ ನೀಡಿದ್ದಾರೆ ಎನ್ನಬೇಕು. ರೈತರ ಮುಂದೆ ಎರಡು ಆಯ್ಕೆಗಳನ್ನು ನೀಡಿದ್ದು ಭೂಮಿಗೆ ಹಣದ ಪರಿಹಾರ ಅಥವಾ ಅಭಿವೃದ್ಧಿ ಪಡಿಸಿದ ಪರಿವರ್ತಿತ ಭೂಮಿ ಪಡೆಯಬಹುದು ಎಂದು ತಿಳಿಸಿದ್ದೇವೆ. ರಾಜಕೀಯವಾಗಿ ನಾವು ಏನೇ ಮಾಡಿದರೂ ವಿರೋಧ ಮಾಡುತ್ತಾರೆ. ಕೇಳಿದಾಗ, ಏನಾದರೂ ಅಂದುಕೊಳ್ಳಲಿ, ನನ್ನ ಕಂಡರೆ ಅವರಿಗೆ ಪ್ರೀತಿ ಜಾಸ್ತಿ. ದೇವೇಗೌಡರ ಬಳಿ ನಮ್ರತೆಯಿಂದ ಬೇಡಿಕೊಳ್ಳುತ್ತೇನೆ; ಬಿಡದಿ ಟೌನ್ ಶಿಪ್ ನಿಮ್ಮ ಮಗನೇ ಮಾಡಿದ್ದು, ನಿಮ್ಮ ಕಾಲದಲ್ಲಿಯೇ ಆಗಿದ್ದು. ನಾವು ನೀವು ಹಾಕಿದ್ದನ್ನು ಮುಂದುವರೆಸುತ್ತಿದ್ದೇವೆ” ಎಂದು ಸ್ಪಷ್ಟಪಡಿಸಿದ್ದಾರೆ.

ಹೆಚ್‌ ಡಿ ದೇವೇಗೌಡ ಮತ್ತು ಡಿ ಕೆ ಶಿವಕುಮಾರ್‌ ಅವರು ಮೇಲ್ನೋಟಕ್ಕೆ ರೈತರ ಪರವಾಗಿಯೇ ಮಾತನಾಡುತ್ತಿದ್ದಾರೆ ಅಂತ ಅನ್ನಿಸಿದರೂ ವಾಸ್ತವದಲ್ಲಿ ಅವರಿಬ್ಬರ ಕುಟುಂಬದ ಸ್ವಾರ್ಥ ರಾಜಕಾರಣವೇ ಮೇಲಾಟವಾಗುತ್ತಿದೆ. 2007ರಲ್ಲಿ ಹೆಚ್‌.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಉಪನಗರ(ಟೌನ್‌ಶಿಪ್‌) ನಿರ್ಮಿಸಲು ಯೋಜನೆ ರೂಪಿಸಿ, ರಾಮನಗರ ತಾಲೂಕಿನ ಬಿಡದಿ ಹೋಬಳಿ, ಕೈಲಾಂಚ ಹೋಬಳಿ, ಕಸಬಾ ಹೋಬಳಿ ಮತ್ತು ಹಾರೋಹಳ್ಳಿ ತಾಲೂಕಿನ ಸುಮಾರು 38 ಹಳ್ಳಿಗಳನ್ನು ಒಳಗೊಂಡ ಸುಮಾರು 10,000 ಎಕರೆ ಭೂಮಿಯನ್ನು ಗುರುತಿಸಿ ರೆಡ್‌ ಜೋನ್‌ ಎಂದು ಘೋಷಿಸಲಾಗಿತ್ತು.

ಬಳಿಕ ಅಧಿಕಾರಕ್ಕೆ ಬಂದ ಕಾಂಗ್ರೆಸ್‌ ಸರ್ಕಾರ 2016 ಜೂನ್‌ 3 ರಂದು ಗ್ರೇಟರ್‌ ಬೆಂಗಳೂರು-ಬಿಡದಿ ಸ್ಮಾರ್ಟ್‌ಸಿಟಿ ಯೋಜನಾ ಪ್ರದೇಶವನ್ನು ಘೋಷಿಸಿದ ಆಗಿನ ಕಾಂಗ್ರೆಸ್ ಸರಕಾರ, ಅಕ್ಟೋಬರ್‌ 21ರಂದು ಯೋಜನಾ ಪ್ರಾಧಿಕಾರ ರಚನೆ ಮಾಡಿತ್ತು. ಬಿಡದಿ ಹೋಬಳಿಯ ಸುಮಾರು 10 ಸಾವಿರ ಎಕರೆಯನ್ನು ಸ್ಮಾರ್ಟ್‌ ಸಿಟಿ ನಿರ್ಮಾಣದ ಉದ್ದೇಶಕ್ಕಾಗಿ ಭೂಸ್ವಾಧೀನಪಡಿಸಿಕೊಂಡು ಯೋಜನೆ ರೂಪಿಸಿತ್ತು. ಆದರೆ ಕಾರಣಾಂತರಗಳಿಂದ ಈ ಯೋಜನೆ ಮತ್ತೆ ಅಲ್ಲಿಗೇ ನಿಂತಿತ್ತು. 2023ರಲ್ಲಿ ಮತ್ತೆ ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಬೆಂಗಳೂರು ನಗರ ಅಭಿವೃದ್ಧಿ ಸಚಿವ ಖಾತೆ ಪಡೆದ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌ ಅವರು ಗ್ರೇಟರ್‌ ಬೆಂಗಳೂರು ಎಂದು ಕನವರಿಸತೊಡಗಿದರು. ಪರಿಣಾಮ ಗ್ರೇಟರ್‌ ಬೆಂಗಳೂರು ಬಿಡದಿ ಸ್ಮಾರ್ಟ್‌ಸಿಟಿ ಯೋಜನಾ ಪ್ರಾಧಿಕಾರವನ್ನು(ಜಿಬಿಬಿಎಸ್‌ಸಿಪಿಎ) ಗ್ರೇಟರ್‌ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವೆಂದು(ಜಿಬಿಡಿಎ) ಹೆಸರು ಬದಲಾಯಿಸಿ ಆದೇಶ ಹೊರಡಿಸುವಲ್ಲಿಯೂ ಸಫಲರಾಗಿದ್ದಾರೆ.

ನಗರಗಳನ್ನು ಯೋಜನಾಬದ್ಧವಾಗಿ ಅಭಿವೃದ್ಧಿಗೊಳಿಸುವ ಉದ್ದೇಶದಿಂದ ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರಗಳ ಅಧಿನಿಯಮ 1987ರ ಕಲಂ 3ರ ಉಪ ಕಲಂ(1)ರ ಅಡಿ, ದತ್ತವಾಗಿರುವ ಅಧಿಕಾರ ಚಲಾಯಿಸಿ ಗ್ರೇಟರ್‌ ಬೆಂಗಳೂರು-ಬಿಡದಿ ಸ್ಮಾರ್ಟ್‌ಸಿಟಿ ಯೋಜನಾ ಪ್ರದೇಶಕ್ಕೆ ರಚಿಸಲಾಗಿರುವ ಗ್ರೇಟರ್‌ ಬೆಂಗಳೂರು-ಬಿಡದಿ ಸ್ಮಾರ್ಟ್‌ಸಿಟಿ ಯೋಜನಾ ಪ್ರಾಧಿಕಾರವನ್ನು ಗ್ರೇಟರ್‌ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವನ್ನಾಗಿ ಮೇಲ್ದರ್ಜೆಗೇರಿಸಲಾಗಿದೆ.

“ಬಿಡದಿ ಸಮೀಪ ಈಗಾಗಲೇ ಸಾವಿರಾರು ಎಕರೆ ಸ್ವಾಧೀನಕ್ಕೆ ಗುರುತಿಸಿರುವ ಭೂಮಿಯನ್ನು ಯಾವುದೇ ಉದ್ದೇಶಕ್ಕೆ ಬಳಕೆ ಮಾಡಿಲ್ಲ. ಹೀಗಾಗಿ ಬೆಂಗಳೂರಿನಲ್ಲಿ ಸಿಗುವ ಸೌಲಭ್ಯ ಬಿಡದಿ ಭಾಗದಲ್ಲೂ ಸಿಗಬೇಕೆನ್ನುವ ಉದ್ದೇಶ ನಮ್ಮದು. ಈ ಯೋಜನೆ ಮೂಲಕ ಬಿಡದಿ ಭಾಗ ಅಭಿವೃದ್ಧಿಯಾಗಬೇಕು. ಈ ವ್ಯಾಪ್ತಿಯ ಜನರ ಆಸ್ತಿ ಮೌಲ್ಯ ಹೆಚ್ಚಾಗಬೇಕು. ನಾವೆಲ್ಲ ಬೆಂಗಳೂರಿನವರು. ನಮ್ಮ ಮೂಲ ಹೆಸರನ್ನು ನಾವು ಕಳೆದುಕೊಳ್ಳುವುದಿಲ್ಲ. ಹೀಗಾಗಿ ಇನ್ನು ಮುಂದೆ ಗ್ರೇಟರ್‌ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವೆಂದು ಹೆಸರು ಬದಲಾಗಲಿದೆ” ಎಂದು ಡಿ.ಕೆ. ಶಿವಕುಮಾರ್‌ ಸಮರ್ಥಿಸಿಕೊಂಡಿದ್ದು ಇದೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯನ್ನು ವಿಸ್ತರಿಸುವುದು ಹಾಗೂ ಬೆಂಗಳೂರಿಗೆ ಸಂಬಂಧಿಸಿದಂತೆ ಗರಿಷ್ಠ ಏಳು ನಗರ ಪಾಲಿಕೆಗಳನ್ನು ಸ್ಥಾಪಿಸುವ ಉದ್ದೇಶವನ್ನು ಹೊಂದಿರುವ ಗ್ರೇಟರ್ ಬೆಂಗಳೂರು ಆಡಳಿತ ವಿಧೇಯಕ-2024ಕ್ಕೆ ಬುಧವಾರ (ಏ.23) ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಒಪ್ಪಿಗೆ ನೀಡಿದ್ದಾರೆ. ತಿಂಗಳ ಹಿಂದೆ ರಾಜ್ಯಪಾಲರು ಈ ಮಸೂದೆ ಬಗ್ಗೆ ಕೆಲವು ಸ್ಪಷ್ಟನೆಗಳನ್ನು ಕೇಳಿದ್ದರು. ಸರ್ಕಾರ ಉತ್ತರಿಸಿದ ಬಳಿಕ ಮಸೂದೆಗೆ ರಾಜ್ಯಪಾಲರು ಒಪ್ಪಿಗೆ ನೀಡಿದ್ದಾರೆ. ಹೀಗಾಗಿ ಗುರುವಾರ ಸಂಜೆಯೇ ‘ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆ-2024’ ಅನ್ನು ಅಧಿಸೂಚಿಸಿ, ರಾಜ್ಯಪತ್ರದಲ್ಲಿ ಪ್ರಕಟಿಸಲಾಗಿದೆ.

‘ಗ್ರೇಟ‌ರ್ ಬೆಂಗಳೂರು ಆಡಳಿತ ಕಾಯ್ದೆ-2024’ಯಂತೆ ಸರ್ಕಾರ ‘ಗ್ರೇಟರ್ ಬೆಂಗಳೂರು’ ಪ್ರದೇಶದ ವ್ಯಾಪ್ತಿಯನ್ನು ಘೋಷಿಸಲಿದೆ. ಬೆಂಗಳೂರು ನಗರ ಜಿಲ್ಲೆ ಮಾತ್ರವಲ್ಲ, ಬೆಂಗಳೂರು ಗ್ರಾಮಾಂತರ, ರಾಮನಗರ ಜಿಲ್ಲೆಯ ಕೆಲವು ಪ್ರದೇಶಗಳು ಸೇರಿದಂತೆ ಸರ್ಕಾರ ಅಧಿಸೂಚಿಸುವ ಪ್ರದೇಶಗಳೂ ‘ಗ್ರೇಟರ್ ಬೆಂಗಳೂರು’ ವ್ಯಾಪ್ತಿಗೆ ಬರಲಿವೆ. ಇದು ಅಸ್ತಿತ್ವಕ್ಕೆ ಬಂದ ಬಳಿಕ, ಅದರ ವ್ಯಾಪ್ತಿಯಲ್ಲಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ), ನಗರಪಾಲಿಕೆ, ಗ್ರಾಮ ಪಂಚಾಯಿತಿಗಳು ರದ್ದಾಗಲಿವೆ.

ಬಿಡದಿ ಸ್ಮಾರ್ಟ್‌ ಸಿಟಿ ಯೋಜನೆಗೆ ಭೂಸ್ವಾಧೀನ ಪಡಿಸಿಕೊಳ್ಳಲು ಗ್ರೇಟರ್‌ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಮುಂದಾಗಿರುವ ಬೆನ್ನಲ್ಲೇ, ದೇವೇಗೌಡರಿಂದ ವಿರೋಧ ವ್ಯಕ್ತವಾಗಿರುವುದು ಸ್ವಾರ್ಥ ರಾಜಕಾರಣದ ಭಾಗವೇ ಆಗಿದೆ. ಜೊತೆಗೆ ‘ಬಿಡದಿ ಟೌನ್ ಶಿಪ್ ನಿಮ್ಮ ಮಗನೇ ಮಾಡಿದ್ದು, ನಾವು ನೀವು ಹಾಕಿದ್ದನ್ನು ಮುಂದುವರೆಸುತ್ತಿದ್ದೇವೆ. ರೈತರ ಜಮೀನಿಗೆ ಚಿನ್ನದ ಬೆಲೆ ಕಲ್ಪಿಸುತ್ತೇವೆ” ಎಂದು ಡಿ ಕೆ ಶಿವಕುಮಾರ್‌ ಹೇಳುತ್ತಿರುವುದು ಸಹ ಭಿನ್ನವಾಗಿಲ್ಲ.

ರಾಮನಗರ ಜಿಲ್ಲೆಯಾಗುವುದಕ್ಕಿಂತ ಮೊದಲಿನಿಂದಲೂ ದಳಪತಿಗಳು ಮತ್ತು ಡಿ.ಕೆ.ಶಿವಕುಮಾರ್‌ ನಡುವಿನ ರಾಜಕೀಯ ಸಂಘರ್ಷ ಇದೆ. 1985ರಲ್ಲಿ ದೇವೇಗೌಡರ ವಿರುದ್ಧ ಡಿ.ಕೆ.ಶಿವಕುಮಾರ್‌ ಸ್ಪರ್ಧೆ ಮಾಡಿದಾಗಿನಿಂದ ಶುರುವಾರ ಇವರಿಬ್ಬರ ನಡುವಿನ ರಾಜಕೀಯ ಕದನ ಇಂದಿಗೂ ಮುಂದುವರಿದಿದೆ. ಚನ್ನಪಟ್ಟಣದಲ್ಲಿ 2021ರಲ್ಲಿ ನಡೆದ ನೀರಾ ಹೋರಾಟ, ನೈಸ್‌ ವಿರುದ್ಧದ ಹೋರಾಟ ಸೇರಿದಂತೆ ಹಲವು ಹೋರಾಟಗಳಲ್ಲಿ ದಳಪತಿಗಳು ಡಿ.ಕೆ.ಶಿವಕುಮಾರ್‌ ವಿರುದ್ಧ ಸೆಟೆದು ನಿಂತಿದ್ದರು. ಇದೀಗ ಬಿಡದಿ ಸ್ಮಾರ್ಟ್‌ಸಿಟಿ ಹೋರಾಟ ಈ ಪಟ್ಟಿಗೆ ಸೇರ್ಪಡೆಯಾಗುವ ಸಾಧ್ಯತೆ ಹೆಚ್ಚಿದೆ.

ಡಿ ಕೆ ಶಿವಕುಮಾರ್‌ ಮತ್ತು ದೇವೇಗೌಡರ ಕುಟುಂಬದ ಆಸ್ತಿಗಳು ನೈಸ್‌ ಮತ್ತು ಗ್ರೇಟರ್‌ ಬೆಂಗಳೂರು-ಬಿಡದಿ ಸ್ಮಾರ್ಟ್‌ ಸಿಟಿ ಯೋಜನೆಯ ವ್ಯಾಪ್ತಿಗೆ ಒಳಪಡುತ್ತವೆ ಎಂಬುದನ್ನು ಗಮನಿಸಿದರೆ ಇವರ ಸ್ವಾರ್ಥ ರಾಜಕಾರಣ ಬೇಗ ಅರ್ಥವಾಗುತ್ತದೆ. ನೈಸ್‌ ಯೋಜನೆ ಆರಂಭಿಸಿದ್ದು ದೇವೇಗೌಡರು. ಈಗ ಅದರ ಬೆನ್ನು ಬಿದ್ದಿರುವುದು ಡಿ ಕೆ ಶಿವಕುಮಾರ್.‌ ಈಗ ಗ್ರೇಟರ್‌ ಬೆಂಗಳೂರು-ಬಿಡದಿ ಸ್ಮಾರ್ಟ್‌ ಸಿಟಿ ಯೋಜನೆಗೆ ದೇವೇಗೌಡರಿಂದ ಅಡ್ಡಿ. ಆದರೂ ಯೋಜನೆ ಜಾರಿ ಮಾಡಿಯೇ ಸಿದ್ಧ ಎಂಬ ಹಠದಲ್ಲಿ ಡಿ ಕೆ ಶಿವಕುಮಾರ್‌.

ದೇವೇಗೌಡ ಮತ್ತು ಸಂಬಂಧಿಕರ ನೂರಾರು ಎಕರೆ ಭೂಮಿ ಗ್ರೇಟರ್‌ ಬೆಂಗಳೂರು-ಬಿಡದಿ ಸ್ಮಾರ್ಟ್‌ ಸಿಟಿ ಯೋಜನೆಯ ಪಾಲಾಗಲಿದೆ. ಜೊತೆಗೆ ಡಿ ಕೆ ಶಿವಕುಮಾರ್‌ ಅವರ ಸಾಕಷ್ಟು ಭೂಮಿಯು ಇದರ ಪಾಲಾಗಲಿದ್ದು, ಹಣದ ಹೊಳೆಯೇ ಇಲ್ಲಿ ಹರಿಯಲಿದೆ. ರೈತರನ್ನು ಮುಂದು ಮಾಡಿ ದೇವೇಗೌಡರು ತಮ್ಮ ಮತ್ತು ಸಂಬಂಧಿಕರ ಆಸ್ತಿಯ ಉಳಿವಿಗಾಗಿ ಧ್ವನಿ ಎತ್ತುತ್ತಿದ್ದಾರೆ.

ರೈತರ ಭೂಮಿ ಕಸಿಯಲೆಂದೇ ನೈಸ್‌ ಯೋಜನೆ, ಸ್ಮಾರ್ಟ್ ಸಿಟಿ ಯೋಜನೆ ಎಂದು ಹೆಸರುಗಳನ್ನು ಇಡುತ್ತ ಬರಲಾಗಿದೆ. ದೇವೇಗೌಡ ಮತ್ತು ಡಿ ಕೆ ಶಿವಕುಮಾರ್‌ ಕುಟುಂಬದ ನಡುವಿನ ಸ್ವಾರ್ಥ ರಾಜಕಾರಣಕ್ಕೆ ಬಲಿಯಾಗುವುದು ಭೂ ಕಳೆದುಕೊಳ್ಳುವ ಅನ್ನದಾತರು ಎಂಬುದನ್ನು ಮರೆಯುವಂತಿಲ್ಲ. ಭೂ ಸ್ವಾಧೀನ ಪ್ರಕ್ರಿಯೆ ವಿರೋಧಿಸಿ ದೇವೇಗೌಡರು ಹೋರಾಟ ನಡೆಸುವ ಸಾಧ್ಯತೆಗಳಿವೆ. ಹೀಗಾಗಿ ಗ್ರೇಟರ್‌ ಬೆಂಗಳೂರು-ಬಿಡದಿ ಸ್ಮಾರ್ಟ್‌ ಸಿಟಿ ಯೋಜನೆಯು ಮತ್ತೊಂದು ನೈಸ್‌ ಯೋಜನೆಯಂತಾದರೂ ಆಶ್ಚರ್ಯ ಪಡಬೇಕಿಲ್ಲ.

WhatsApp Image 2023 04 01 at 3.53.40 PM e1680350106945
+ posts

ಶರಣು ಚಕ್ರಸಾಲಿ ಅವರು ಬಾದಾಮಿ ತಾಲ್ಲೂಕಿನ ತಳಕವಾಡ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಕಳೆದ 10 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಸದ್ಯ 'ಈ ದಿನ.ಕಾಮ್‌' ಮಾಧ್ಯಮ ಸಂಸ್ಥೆಯಲ್ಲಿ ಹಿರಿಯ ವರದಿಗಾರರಾಗಿ 2022 ಮಾರ್ಚ್‌1ರಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜಕೀಯ, ಸಚಿವಾಲಯದ ವರದಿಗಾರಿಕೆ ಹಾಗೂ ಕೃಷಿ ಸಂಬಂಧಿತ ಸ್ಟೋರಿಗಳನ್ನು ಬರೆಯುವುದು ಇವರ ಆಸಕ್ತಿ. ಟಿವಿ ನಿರೂಪಣೆ, ವಿಡಿಯೋ ಸಂದರ್ಶನ, ವಿಡಿಯೋ ಸ್ಟೋರಿ, ತನಿಖಾ ವರದಿಗಾರಿಕೆ ಹಾಗೂ ನುಡಿ ಬರಹ ಬರೆಯುವುದು ಇವರ ಅಚ್ಚುಮೆಚ್ಚಿನ ಕ್ಷೇತ್ರ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಶರಣು ಚಕ್ರಸಾಲಿ
ಶರಣು ಚಕ್ರಸಾಲಿ
ಶರಣು ಚಕ್ರಸಾಲಿ ಅವರು ಬಾದಾಮಿ ತಾಲ್ಲೂಕಿನ ತಳಕವಾಡ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಕಳೆದ 10 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಸದ್ಯ 'ಈ ದಿನ.ಕಾಮ್‌' ಮಾಧ್ಯಮ ಸಂಸ್ಥೆಯಲ್ಲಿ ಹಿರಿಯ ವರದಿಗಾರರಾಗಿ 2022 ಮಾರ್ಚ್‌1ರಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜಕೀಯ, ಸಚಿವಾಲಯದ ವರದಿಗಾರಿಕೆ ಹಾಗೂ ಕೃಷಿ ಸಂಬಂಧಿತ ಸ್ಟೋರಿಗಳನ್ನು ಬರೆಯುವುದು ಇವರ ಆಸಕ್ತಿ. ಟಿವಿ ನಿರೂಪಣೆ, ವಿಡಿಯೋ ಸಂದರ್ಶನ, ವಿಡಿಯೋ ಸ್ಟೋರಿ, ತನಿಖಾ ವರದಿಗಾರಿಕೆ ಹಾಗೂ ನುಡಿ ಬರಹ ಬರೆಯುವುದು ಇವರ ಅಚ್ಚುಮೆಚ್ಚಿನ ಕ್ಷೇತ್ರ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪಟ್ಟಣ ಪಂಚಾಯತ್ ಚುನಾವಣೆ: ಮೂರರಲ್ಲಿ ಕಾಂಗ್ರೆಸ್‌ಗೆ ಮೇಲುಗೈ; ಎರಡರಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಗೆ ಜಯ

ಕರ್ನಾಟಕದಲ್ಲಿ ಐದು ಪ್ರದೇಶಗಳು ತಾಲೂಕು ಸ್ಥಾನಕ್ಕೇರಿದ ಬಳಿಕ ರಚನೆಯಾದ ಪಟ್ಟಣ ಪಂಚಾಯಿತಿಗೆ...

ಅಲೆಮಾರಿಗಳಿಗೆ ಅನ್ಯಾಯ; ಸರ್ಕಾರದ ವಿರುದ್ಧ ಭುಗಿಲೆದ್ದ ಜನಾಕ್ರೋಶ

ಮೀಸಲು ಹಂಚಿಕೆಯ ವಿವರಗಳು ಸ್ಪಷ್ಟವಾಗುತ್ತಿದ್ದಂತೆ ಸಂಭ್ರಮದ ಮನೆಯಲ್ಲಿ ಸಾವಿನ ಸೂತಕ ಆವರಿಸತೊಡಗಿತು....

2029ರ ಚುನಾವಣೆಯಲ್ಲಿ ರಾಹುಲ್ ಗಾಂಧಿ ಇಂಡಿಯಾ ಒಕ್ಕೂಟದ ಪ್ರಧಾನಿ ಅಭ್ಯರ್ಥಿ: ತೇಜಸ್ವಿ ಯಾದವ್

2029ರ ಲೋಕಸಭೆ ಚುನಾವಣೆಯಲ್ಲಿ ಸದ್ಯ ಲೋಕಸಭೆ ವಿಪಕ್ಷ ನಾಯಕರಾಗಿರುವ ರಾಹುಲ್ ಗಾಂಧಿ...

Download Eedina App Android / iOS

X