2019ರಲ್ಲಿ ಅಮೇಠಿಯಲ್ಲಿ ತಮ್ಮನ್ನು ಸೋಲಿಸಿದ್ದ ಮತ್ತು ಈ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಸೋತಿರುವ ಮಾಜಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ಬಗ್ಗೆ ‘ಅವಹೇಳನ’ ಬೇಡ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮನವಿ ಮಾಡಿದ್ದಾರೆ. 2024ರ ಲೋಕಸಭಾ ಚುನಾವಣೆಯಲ್ಲಿ ಗಾಂಧಿ ಕುಟುಂಬದ ನಿಷ್ಠಾವಂತ ಬೆಂಬಲಿಗ ಕಿಶೋರಿ ಲಾಲ್ ಶರ್ಮಾ ಅವರ ವಿರುದ್ಧ ಬಿಜೆಪಿಯಿಂದ ಸ್ಪರ್ಧಿಸಿದ್ದ ಸ್ಮೃತಿ ಇರಾನಿ 1.6 ಲಕ್ಷಕ್ಕೂ ಹೆಚ್ಚು ಮತಗಳ ಅಂತರದಲ್ಲಿ ಸೋಲುಂಡಿದ್ದಾರೆ.
ಸೋಲುಂಡ ಇರಾನಿ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಕೆಲವು ಕಾಂಗ್ರೆಸ್ ಕಾರ್ಯಕರ್ತರು ವ್ಯಂಗ್ಯ ಮತ್ತು ನಿಂದನೆಗಳನ್ನು ಮಾಡುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ವಿಪಕ್ಷ ನಾಯಕ ರಾಹುಲ್ ಗಾಂಧಿ, “ಗೆಲುವು ಮತ್ತು ಸೋಲುಗಳು ಜೀವನದಲ್ಲಿ ಸಂಭವಿಸುತ್ತವೆ. ಅವಹೇಳನಕಾರಿ ಭಾಷೆಯನ್ನು ಬಳಸುವುದನ್ನು ಮತ್ತು ಶ್ರೀಮತಿ ಸ್ಮೃತಿ ಇರಾನಿ ಬಗ್ಗೆ ಅಸಹ್ಯವಾಗಿ ವರ್ತಿಸುವುದನ್ನು ನಿಲ್ಲಿಸುವಂತೆ ನಾನು ಪ್ರತಿಯೊಬ್ಬರನ್ನು ಕೋರುತ್ತೇನೆ” ಎಂದು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
ಸೋಲಿನ ಕಾರಣಕ್ಕೆ ಇರಾನಿ ಅಥವಾ ಬೇರೆ ಯಾವುದೇ ನಾಯಕರನ್ನು ಅವಮಾನಿಸುವುದು ಮತ್ತು ನಿಂದಿಸುವುದು ದೌರ್ಬಲ್ಯದ ಸಂಕೇತವೇ ಹೊರತು, ಶಕ್ತಿಯ ಸಂಕೇತವಲ್ಲ” ಎಂದು ಅವರು ಹೇಳಿದ್ದಾರೆ.
ಬಿಜೆಪಿಯ ದ್ವೇಷ ರಾಜಕಾರಣದ ಬಗ್ಗೆ ಹಿಂದಿನಿಂದಲೂ ಮಾತನಾಡುತ್ತಲೇ ಬಂದಿರುವ ರಾಹುಲ್ ಗಾಂಧಿ, ‘ಮೊಹಬ್ಬತ್ ಕಿ ದುಕಾನ್’ (ಪ್ರೀತಿಯ ಅಂಗಡಿ) ತೆರೆಯಲು ಬಯಸುವುದಾಗಿ ಪದೇ ಪದೇ ಹೇಳಿದ್ದಾರೆ. ದ್ವೇಷವನ್ನು ತೊಡೆಯಬೇಕು ಎಂದಿದ್ದಾರೆ.
Winning and losing happen in life.
I urge everyone to refrain from using derogatory language and being nasty towards Smt. Smriti Irani or any other leader for that matter.
Humiliating and insulting people is a sign of weakness, not strength.
— Rahul Gandhi (@RahulGandhi) July 12, 2024
2024ರಲ್ಲಿ ಗಾಂಧಿ ಕುಟುಂಬದ ಭದ್ರಕೋಟೆ ಅಮೇಥಿಯಲ್ಲಿ ಸ್ಮೃತಿ ಇರಾನಿ ವಿರುದ್ಧ ರಾಹುಲ್ ಗಾಂಧಿ ಸ್ಪರ್ಧಿಸುತ್ತಾರೆ ಮತ್ತು ಅವರ ಸಹೋದರಿ ಪ್ರಿಯಾಂಕಾ ಗಾಂಧಿ ತಮ್ಮ ತಾಯಿ ಸೋನಿಯಾ ಗಾಂಧಿ ಪ್ರತಿನಿಧಿಸುತ್ತಿದ್ದ ಮತ್ತೊಂದು ಭದ್ರಕೋಟೆ ರಾಯ್ ಬರೇಲಿಯಿಂದ ಸ್ಪರ್ಧಿಸುತ್ತಾರೆ ಎಂದು ಹೇಳಲಾಗಿತ್ತು.
ಆದರೆ, ವಯನಾಡ್ ಮತ್ತು ರಾಯ್ ಬರೇಲಿಯಲ್ಲಿ ಸ್ಪರ್ಧಿಸಿದ ರಾಹುಲ್ ಗಾಂಧಿ, ಅಮೇಥಿಯಲ್ಲಿ ತಮ್ಮ ಕುಟುಂಬದ ಬೆಂಬಲಿಗ ಕಿಶೋರಿ ಲಾಲ್ ಶರ್ಮಾ ಅವರನ್ನು ಇರಾನಿ ವಿರುದ್ಧ ಅಮೇಥಿಯಲ್ಲಿ ಕಣಕ್ಕಿಳಿಸಿದ್ದರು. ಆಗ, ರಾಹುಲ್ ಗಾಂಧಿ ಅಮೇಥಿಯಿಂದ ಓಡಿ ಹೋಗಿದ್ದಾರೆ ಎಂದು ಇರಾನಿ ವ್ಯಂಗ್ಯವಾಡಿದ್ದರು.
ಆದರೆ, ಅಮೇಥಿಯಲ್ಲಿನ ಸೋಲು ಇರಾನಿಗೆ ಆಘಾತವನ್ನುಂಟುಮಾಡಿತು. “ಜೀವನ ಹೀಗಿದೆ… ನನ್ನ ಜೀವನದ ಒಂದು ದಶಕವು ಒಂದು ಹಳ್ಳಿಯಿಂದ ಇನ್ನೊಂದು ಹಳ್ಳಿಗೆ ಹೋಗುವುದು, ಜೀವನವನ್ನು ಕಟ್ಟುವುದು, ಭರವಸೆ ಮತ್ತು ಆಕಾಂಕ್ಷೆಗಳನ್ನು ಬೆಳೆಸುವುದು, ಮೂಲಭೂತ ಸೌಕರ್ಯಗಳನ್ನು – ರಸ್ತೆಗಳು, ನಾಲೆ, ಬೈಪಾಸ್, ವೈದ್ಯಕೀಯ ಕಾಲೇಜು ಮತ್ತು ಹೆಚ್ಚಿನವು – ಒದಗಿಸುವುದು. ನನ್ನ ಬೆಂಬಲಕ್ಕೆ ನಿಂತವರಿಗೆ ನಾನು ಕೃತಜ್ಞನಾಗಿದ್ದೇನೆ. ಕೆಲವರು ಜೋಶ್ ಹೇಗಿದೆ ಎಂದು ಪ್ರಶ್ನಿಸುತ್ತಿದ್ದಾರೆ. ನಾನ್ನ ಉತ್ತರ ಹೀಗಿದೆ- ಜೋಶ್ ಈಗಲೂ ಹೆಚ್ಚಿನದ್ದಾಗಿದೆ ಸರ್'” ಎಂದು ಇರಾನಿ ಟ್ವೀಟ್ ಮಾಡಿದ್ದರು.