ಎರಡನೇ ಬಾರಿಗೆ ಸಿಎಂ ಆಗಿದ್ದಕ್ಕೆ ಸಿದ್ದರಾಮಯ್ಯ ಅವರಿಗೆ ಅಭಿನಂದನೆ ತಿಳಿಸಿ ಮತ್ತು ಸಾಮಾಜಿಕ ಕಳಕಳಿಯ ಅಂಶದೊಂದಿಗೆ ಪತ್ರ ಬರೆದಿದ್ದ 8ನೇ ತರಗತಿ ವಿದ್ಯಾರ್ಥಿನಿಗೆ ಸಿಎಂ ಸಿದ್ದರಾಮಯ್ಯ ಮರಳಿ ಪತ್ರ ಬರೆದು ಧನ್ಯವಾದ ತಿಳಿಸಿದ್ದಾರೆ.
ಕೊಪ್ಪಳದ ಮಾಸ್ತಿ ಪಬ್ಲಿಕ್ ಸ್ಕೂಲ್‌ನ 8ನೇ ತರಗತಿಯ ಶ್ರೆಯಾಂಕ ವಿ ಮೆಣಸಗಿ ಎಂಬ ವಿದ್ಯಾರ್ಥಿನಿ ಸಿಎಂ ಸಿದ್ದರಾಮಯ್ಯರಿಗೆ ಅಭಿನಂದನಾ ಪತ್ರ ಬರೆದಿದ್ದರು. ಇದಕ್ಕೆ ಸಿಎಂ ಪ್ರತಿಕ್ರಿಯಿಸಿದ್ದು, ವಿದ್ಯಾರ್ಥಿನಿ ಸಂತಸ ವ್ಯಕ್ತಪಡಿಸಿದ್ದಾರೆ.
ಮೇ 29 ರಂದು ಕೊಪ್ಪಳದ ಮಾಸ್ತಿ ಶಾಲೆಯ ಎಂಟನೇ ತರಗತಿ ವಿದ್ಯಾರ್ಥಿನಿ ಶ್ರೇಯಾಂಕ ಮೆಣಸಿಗೆ ಪತ್ರ ಬರೆದು ಅಭಿನಂದಿಸಿದ್ದರು. “ರಾಜ್ಯದಲ್ಲಿ ಎರಡನೇ ಬಾರಿಗೆ ಸಿಎಂ ಆಗುತ್ತಿದ್ದೀರಿ. ಕಳೆದ ಬಾರಿಯಂತೆ ಈ ಬಾರಿಯೂ ಉತ್ತಮ, ಕಳಂಕ ರಹಿತ ಆಡಳಿತ ನೀಡಿ. ಬಡವರು, ದೀನದಲಿತರ ಆಶಾಕಿರಣವಾಗಿರೋ ತಮಗೆ ಅಭಿನಂದನೆಗಳು” ಎಂದು ವಿದ್ಯಾರ್ಥಿನಿ ಪತ್ರದಲ್ಲಿ ಬರೆದಿದ್ದರು.

“2013 ರಿಂದ 18 ರವೆಗೆ ಕಳಂಕ ರಹಿತ ಆಡಳಿತ ನೀಡಿ ಭೇಷ್ ಎನ್ನಿಸಿಕೊಂಡಿದ್ದೀರಿ, ಮತ್ತೊಮ್ಮೆ ರಾಜ್ಯದ ಜನಮೆಚ್ಚಿದ ನಾಯಕರಾಗಿ ಹೊರಹೊಮ್ಮಿ. ಈ ಬಾರಿಯೂ ಜನಮೆಚ್ಚುವ ಕೆಲಸ ಮಾಡಿ” ಎಂದು ಶುಭ ಹಾರೈಸಿದ್ದರು.
ಈ ಸುದ್ದಿ ಓದಿದ್ದೀರಾ? ಡ್ರಗ್ಸ್ ಹಾವಳಿ ತಡೆಗೆ ವಿಶೇಷ ತಂಡ ರಚಿಸಲು ಮುಖ್ಯಮಂತ್ರಿ ಸೂಚನೆ
ಬಾಲಕಿ ಪತ್ರ ಸಿಎಂ ಸಿದ್ದರಾಮಯ್ಯ ಕಚೇರಿಗೆ ತಲುಪುತ್ತಿದ್ದಂತೆ. ಪುಟ್ಟ ಬಾಲಕಿಯ ಪತ್ರ ಓದಿರುವ ಸಿಎಂ ಸಿದ್ದರಾಮಯ್ಯ ಖುದ್ದು ತಾವೇ ಬಾಲಕಿಗೆ ಪತ್ರ ಬರೆದು ಶುಭ ಹಾರೈಸಿದ್ದಾರೆ. “ಇಂದಿನ ಮಕ್ಕಳೇ ನಾಳಿನ ರಾಷ್ಟ್ರ ನಿರ್ಮಾತೃಗಳು. ಚಿಕ್ಕ ವಯಸ್ಸಿನಲ್ಲೆ ನಿನಗಿರೋ ಸಾಮಾಜಿಕ ಕಾಳಜಿ ಮೆಚ್ಚುವಂತದ್ದು. ಜೀವನದಲ್ಲಿ ಶ್ರದ್ದೆಯಿಂದ ವಿದ್ಯೆ ಕಲಿತು ಸಮಾಜಕ್ಕೆ ಒಳ್ಳೆಯ ಕೊಡುಗೆ ನೀಡು” ಎಂದು ಸಿಎಂ ಸಿದ್ದರಾಮಯ್ಯ ವಿದ್ಯಾರ್ಥಿನಿಗೆ ಶುಭ ಹಾರೈಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತನ್ನ ಪತ್ರಕ್ಕೆ ಪ್ರತಿಕ್ರಿಯೆ ನೀಡಿರುವುದಕ್ಕೆ ವಿದ್ಯಾರ್ಥಿನಿ ಖುಷಿ ಪಟ್ಟಿದ್ದಾರೆ. ಹಾಗೆಯೇ ಪಾಲಕರೂ ಕೂಡ ಹರ್ಷ ವ್ಯಕ್ತಪಡಿಸಿದ್ದಾರೆ.