ಕಳೆದೊಂದು ತಿಂಗಳಿನಿಂದ ಕರಾವಳಿ ಮತ್ತು ಮಲೆನಾಡು ಪ್ರದೇಶದಲ್ಲಿ ಭಾರೀ ಮಳೆಯಾಗಿದ್ದು, ಅತೀವೃಷ್ಟಿ ಎದುರಾಗಿದೆ. ನಾನಾ ಹಳ್ಳಿಗಳ ಜನರು ತಮ್ಮ ಆಸ್ತಿ, ಬೆಳೆಗಳನ್ನು ಕಳೆದುಕೊಂಡಿದ್ದಾರೆ. ಆದರೂ, ಜನರ ಸಂಕಷ್ಟನ್ನು ಆಲಿಸದೆ ನಿರ್ಲಕ್ಷ್ಯ ಧೋರಣೆ ತಳೆದಿದ್ದ ಬೆಳ್ತಂಗಡಿಯ ಬಿಜೆಪಿ ಶಾಸಕ ಹರೀಶ್ ಪೂಂಜಾಗೆ ರೈತರು ತರಾಟೆ ತೆಗೆದುಕೊಂಡಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಸವಾಣಾಲು ಗ್ರಾಮದಲ್ಲಿ ಭಾರೀ ಮಳೆಯಿಂದಾಗಿ ರಸ್ತೆ ಬಿರುಕು ಬಿಟ್ಟಿದ್ದು, ವಾಸಹ ಸಂಚಾರಕ್ಕೆ ಅಡ್ಡಿಯಾಗಿದೆ. ರಸ್ತೆ ಬಿರುಕು ಬಿಟ್ಟು, ಹಲವಾರು ದಿನಗಳೇ ಕಳೆದಿದ್ದು, ಗ್ರಾಮಕ್ಕೆ ಶಾಸಕ ಹರೀಶ್ ಪೂಂಜಾ ಶನಿವಾರ ಭೇಟಿ ನೀಡಿದ್ದಾರೆ. ತಡವಾಗಿ ಗ್ರಾಮಕ್ಕೆ ಬಂದ ಪೂಂಜಾ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಮ್ಮನ್ನು ತರಾಟೆಗೆ ತೆಗೆದುಕೊಂಡ ಗ್ರಾಮಸ್ಥರನ್ನೇ ಪೂಂಜಾ ನಿಂದಿಸಿದ್ದಾರೆ ಎಂದು ಆರೋಪಿಸಲಾಗಿದೆ.
“ಶಾಸಕರನ್ನು ಯಾಕೆ ತಡವಾಗಿ ಬಂದೆ ಎಂದು ಪ್ರಶ್ನಿಸುವ ಹಕ್ಕು ನಿಮಗಿಲ್ಲ” ಎಂದಿರುವ ಪೂಂಜಾ, ಗ್ರಾಮಸ್ಥರು ನಾಯಿ ಎಂದು ಅವಾಚ್ಯವಾಗಿ ನಿಂದಿದ್ದಾರೆ ಎಂದು ವರದಿಯಾಗಿದೆ. ಪೂಂಜಾ ವರ್ತನೆಯಿಂದಾಗಿ ಗ್ರಾಮಸ್ಥರು ಮತ್ತು ಬಿಜೆಪಿಗರ ನಡುವೆ ಚಕಮಕಿ ನಡೆದಿದೆ. ಗ್ರಾಮಸ್ಥರ ಆಕ್ರೋಶದಿಂದ ಕಂಗಾಲಾದ ಪೂಂಜಾ ಸ್ಥಳದಿಂದ ಕಾಲ್ಕಿತ್ತಿದ್ದಾರೆ.
ಅಂದಹಾಗೆ, ಮೊನ್ನೆಯಷ್ಟೇ ನಡೆದ ಸ್ವಾತಂತ್ರ್ಯ ದಿನಾಚರಣೆಯ ವೇಳೆ ಸ್ವಾತಂತ್ರ್ಯ ಹೋರಾಟವನ್ನು ಇದೇ ಬಿಜೆಪಿ ಶಾಸಕ ಹರೀಶ್ ಪೂಜಾ ಟೀಕೆ ಮಾಡಿದ್ದರು. “ಈ ದೇಶಕ್ಕೆ ಕೇವಲ ಶಾಂತಿಯಿಂದ, ಕೇವಲ ಚರಕ ತಿರುಗಿಸಿದರಿಂದ ಈ ದೇಶಕ್ಕೆ ಸ್ವಾತಂತ್ಯ್ರ ಬಂದಿಲ್ಲ” ಎಂದು ಹೇಳುವ ಮೂಲಕ ಮಹಾತ್ಮ ಗಾಂಧಿ ಅವರನ್ನು ನಿಂದಿಸಿದ್ದರು. ಗಾಂಧಿ ಅವರ ಹೋರಾಟವನ್ನು ಟೀಕಿಸಿದ್ದರು. ಈ ಕಾರಣಕ್ಕಾಗಿ ಅವರ ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.