ಇತ್ತೀಚೆಗೆ ಮಧ್ಯಂತರ ಬಜೆಟ್ ಮಂಡಿಸಿರುವ ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಕೇವಲ 44,485 ಕೋಟಿ ರೂ.ಗಳನ್ನಷ್ಟೇ ಕೊಟ್ಟಿದೆ. ದೇಶದಲ್ಲಿಯೇ ಕೇಂದ್ರಕ್ಕೆ ತೆರಿಗೆ ಮೂಲಕ ಅತೀ ಹೆಚ್ಚು ಆದಾಯ ಒದಗಿಸುವ ರಾಜ್ಯಗಳಲ್ಲಿ 2ನೇ ಸ್ಥಾನದಲ್ಲಿರುವ ಕರ್ನಾಟಕಕ್ಕೆ ಕೇಂದ್ರ ಅನ್ಯಾಯ ಮಾಡಿದೆ ಎಂದು ಆರೋಪಿಸಿ ಕೇಂದ್ರ ಸರ್ಕಾರದ ವಿರುದ್ಧ ಕನ್ನಡಿಗರು ‘ಎಕ್ಸ್’ ಸಾಮಾಜಿಕ ಜಾಲತಾಣದಲ್ಲಿ #SouthTaxMovement #ನನ್ನತೆರಿಗೆನನ್ನಹಕ್ಕು ಅಭಿಯಾನ ನಡೆಸುತ್ತಿದ್ದಾರೆ. ಎಕ್ಸ್‌ನಲ್ಲಿ ಅಭಿಯಾನವು #SouthTaxMovement ಹ್ಯಾಶ್ ಟ್ಯಾಗ್ ಟ್ರೆಂಡ್ ಆಗುತ್ತಿದೆ. ಕನ್ನಡಿಗರು ಈ ಅಭಿಯಾನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಬಲ ನೀಡಿದ್ದಾರೆ.
ಅಭಿಯಾನವನ್ನು ಬೆಂಬಲಿಸಿ ‘ಎಕ್ಸ್’ನಲ್ಲಿ ಪೋಸ್ಟ್ ಹಾಕಿರುವ ಸಿದ್ದರಾಮಯ್ಯ, “ತೆರಿಗೆ ಹಂಚಿಕೆಯಲ್ಲಿ ಕೇಂದ್ರ ಸರ್ಕಾರದಿಂದ ಕರ್ನಾಟಕಕ್ಕೆ ಆಗುತ್ತಿರುವ ಅನ್ಯಾಯ ಖಂಡಿಸಿ ಕನ್ನಡಿಗರು ನಡೆಸುತ್ತಿರುವ #ನನ್ನತೆರಿಗೆನನ್ನಹಕ್ಕು ಟ್ವಿಟ್ಟರ್ ಅಭಿಯಾನಕ್ಕೆ ನನ್ನ ಪೂರ್ಣ ಬೆಂಬಲವಿದೆ. ಕನ್ನಡಿಗರು ಬೆವರು ಸುರಿಸಿ ಕಟ್ಟುವ ತೆರಿಗೆ ನಮ್ಮವರ ಕಷ್ಟಕಾಲಕ್ಕೆ ಉಪಯೋಗಕ್ಕೆ ಬರದೆ ಉತ್ತರದ ರಾಜ್ಯಗಳ ಪಾಲಾಗುತ್ತಿದೆ” ಎಂದು ಹೇಳಿದ್ದಾರೆ.
“ದಕ್ಷಿಣ ಭಾರತದ ರಾಜ್ಯಗಳ ತೆರಿಗೆಯ ಋಣದಲ್ಲಿರುವ ಉತ್ತರದ ರಾಜ್ಯಗಳು ಎಂದಿಗೂ ನಮಗೆ ಮಾಡೆಲ್ ಆಗಲಾರವು. ಈ ಹುಸಿ ಕಲ್ಪನೆಯಿಂದ ಎಲ್ಲರೂ ಹೊರಬರಬೇಕು. ಶ್ರಮದಿಂದ ಸದೃಢ ರಾಷ್ಟ್ರ ಕಟ್ಟುತ್ತಿರುವ ಕರ್ನಾಟಕವೇ ಭಾರತಕ್ಕೆ ಮಾಡೆಲ್” ಎಂದಿದ್ದಾರೆ.
“ಕೂತು ತಿನ್ನುವವನಿಗೆ ಮೃಷ್ಟಾನ್ನ ಕೊಟ್ಟು, ದುಡಿಯುವ ಮಗನಿಗೆ ಬರೆ ಎಳೆದರು ಎಂಬಂತಿದೆ ದೇಶದಲ್ಲಿ ಕನ್ನಡಿಗರ ಸ್ಥಿತಿ. ಇದು ಬದಲಾಗಲೇಬೇಕು. ನ್ಯಾಯಕ್ಕಾಗಿ ಧ್ವನಿಯೆತ್ತಿರುವ ನಾಡಿನ ಪ್ರಜ್ಞಾವಂತರಿಗೆ ನನ್ನ ಧನ್ಯವಾದಗಳು. ನಿಮ್ಮ ಜೊತೆ ನಾನಿದ್ದೇನೆ, ನಮ್ಮೆಲ್ಲರ ಧ್ವನಿ ಒಟ್ಟಾದರೆ ದಿಲ್ಲಿವರೆಗೆ ಕೇಳುವುದು ಶತಸಿದ್ಧ. #SouthTaxMovement” ಎಂದು ಪೋಸ್ಟ್ ಮಾಡಿದ್ದಾರೆ.
ತೆರಿಗೆ ಹಂಚಿಕೆಯಲ್ಲಿ ಕೇಂದ್ರ ಸರ್ಕಾರದಿಂದ ಕರ್ನಾಟಕಕ್ಕೆ ಆಗುತ್ತಿರುವ ಅನ್ಯಾಯ ಖಂಡಿಸಿ ಕನ್ನಡಿಗರು ನಡೆಸುತ್ತಿರುವ #ನನ್ನತೆರಿಗೆನನ್ನಹಕ್ಕು ಟ್ವಿಟ್ಟರ್ ಅಭಿಯಾನಕ್ಕೆ ನನ್ನ ಪೂರ್ಣ ಬೆಂಬಲವಿದೆ. ಕನ್ನಡಿಗರು ಬೆವರು ಸುರಿಸಿ ಕಟ್ಟುವ ತೆರಿಗೆ ನಮ್ಮವರ ಕಷ್ಟಕಾಲಕ್ಕೆ ಉಪಯೋಗಕ್ಕೆ ಬರದೆ ಉತ್ತರದ ರಾಜ್ಯಗಳ ಪಾಲಾಗುತ್ತಿದೆ.
ದಕ್ಷಿಣ ಭಾರತದ…— Siddaramaiah (@siddaramaiah) February 4, 2024
ಭಾನುವಾರ ಸಂಜೆ 5 ಗಂಟೆಯಿಂದ ‘ಎಕ್ಸ್’ನಲ್ಲಿ ಕೇಂದ್ರದ ವಿರುದ್ಧ ಅಭಿಯಾನ ನಡೆಯುತ್ತಿದ್ದು, ನಿಟ್ಟಿಗರು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಕರ್ನಾಟಕವು 4.5 ಲಕ್ಷ ಕೋಟಿ ತೆರಿಗೆ ಸಂಗ್ರಹಿಸಿಕೊಡುವ ಮೂಲಕ ಅತಿ ಹೆಚ್ಚು ತೆರಿಗೆ ಕಟ್ಟುವ ಎರಡನೇ ರಾಜ್ಯವಾಗಿದೆ. ಆದರೆ ವಾಪಸ್ ಚಿಲ್ಲರೆ ಹಣ ಸಾಕೆ?” ಎಂದು ಕಿಡಿಕಾರಿದ್ದಾರೆ.
“ಕರ್ನಾಟಕ ರಾಜ್ಯ ನೀಡುವ 1 ರೂಪಾಯಿ ತೆರಿಗೆಯಲ್ಲಿ, ಮೋದಿ ಸರ್ಕಾರ ವಾಪಾಸು ನೀಡುವುದು ಜುಜುಬಿ 35 ಪೈಸೆ! ಆದರೆ ಉತ್ತರ ಪ್ರದೇಶ ನೀಡುವ 1 ರೂಪಾಯಿಗೆ ಬದಲಾಗಿ ಮೋದಿ ಸರ್ಕಾರ ವಾಪಾಸು ನೀಡುವುದು 2.73 ರೂಪಾಯಿ! ಕರ್ನಾಟಕ ವಿರೋಧಿ ಮೋದಿ ಸರ್ಕಾರ ಕನ್ನಡಿಗರು ಒಗ್ಗಟ್ಟಾಗಿ ಹೇಳಿ ಧಿಕ್ಕಾರ” ಎಂದು ಕಿಡಿಕಾರಿದ್ದಾರೆ.
“14 ನೇ ಹಣಕಾಸು ಆಯೋಗ ಕರ್ನಾಟಕಕ್ಕೆ ನೀಡಿದ್ದ ಪಾಲು 4.72%. 15 ನೇ ಹಣಕಾಸು ಆಯೋಗದಲ್ಲಿ ಮೋದಿ ನೀಡಿದ ಪಾಲು 3.64%. ರಾಜ್ಯಕ್ಕಾದ ಅನ್ಯಾಯ ಬರೋಬ್ಬರಿ 45 ಸಾವಿರ ಕೋಟಿ! ಕರ್ನಾಟಕ ವಿರೋಧಿ ಮೋದಿ ಸರ್ಕಾರ ಕನ್ನಡಿಗರು ಒಗ್ಗಟ್ಟಾಗಿ ಹೇಳಿ ಧಿಕ್ಕಾರ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಅದಾನಿ ಆಸ್ಟ್ರೇಲಿಯಾದಲ್ಲಿ ಗಣಿಗಾರಿಕೆ ಮಾಡಲು SBI ನಿಂದ ಪ್ರಧಾನಿ ಮೋದಿ 4000ಕೋಟಿ ಸಾಲ ಕೊಡಿಸುತ್ತಾರೆ. ನಮ್ಮ ಕರ್ನಾಟಕದ ನ್ಯಾಯಯುತ ಜಿಎಸ್ಟಿ ಪಾಲು ಕೊಡುವುದಿಲ್ಲ ಏಕೆ?” ಎಂದು ಕೇಂದ್ರದ ವಿರುದ್ಧ ಗುಡುಗಿದ್ದಾರೆ.