ಲೋಕಸಭೆಯಲ್ಲಿ ಮಾತನಾಡಲು ನಮಗೆ ಸ್ಪೀಕರ್ ಓಂ ಬಿರ್ಲಾ ಅವರು ಅವಕಾಶ ನೀಡುತ್ತಿಲ್ಲ. ಅವಕಾಶ ಕೇಳಿದರೆ ಅವರು ಓಡಿ ಹೋಗುತ್ತಾರೆ ಎಂದು ವಿಪಕ್ಷ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ. ಸ್ಪೀಕರ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಲೋಕಸಭೆಯಲ್ಲಿ ಮಾತನಾಡಿದ ರಾಹುಲ್ ಗಾಂಧಿ, “ಸರ್ಕಾರವು ವಿರೋಧ ಪಕ್ಷಗಳ ಧ್ವನಿಯನ್ನು ಹತ್ತಿಕ್ಕುತ್ತಿದೆ. ವಿಪಕ್ಷಗಳಿಗೆ ಸದನದಲ್ಲಿ ಮಾತನಾಡಲು ಸ್ಪೀಕರ್ ಅವಕಾಶ ಕೊಡುತ್ತಿಲ್ಲ. ನನಗೆ ಮಾತನಾಡಲು ಅವಕಾಶ ಕೊಡಬೇಕೆಂದು ಕೇಳಿದರೆ, ಅವರು ಓಡಿಹೋದರು. ಇದು ಸದನ ನಡೆಸುವ ಮಾರ್ಗವಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ವಿಪಕ್ಷ ನಾಯಕನಾಗಿ ನಾನು ಮಾತನಾಡಲು ಕಳೆದ ವಾರವೂ ನನಗೆ ಅವಕಾಶ ಕೊಡಲಿಲ್ಲ. ಈ ವಾರ ಅವಕಾಶ ಕೇಳಿದಾಗ, ಅವರು ನನಗೆ ಅವಕಾಶ ಕೊಡಲಿಲ್ಲ. ಮಾತನಾಡಲು ಬಿಡಲಿಲ್ಲ. ಬದಲಾಗಿ, ನನ್ನ ಬಗ್ಗೆ ಆಧಾರವಿಲ್ಲದ ಹೇಳಿಕೆ ನೀಡಿದರು. ಅನಗತ್ಯವಾಗಿ ಸದನ ಮುಂದೂಡಿದರು” ಎಂದು ಆರೋಪಿಸಿದ್ದಾರೆ.
“ಸದನದಲ್ಲಿ ವಿಪಕ್ಷ ನಾಯಕನಿಗೆ ಮಾತನಾಡಲು ಹೆಚ್ಚು ಅವಕಾಶ ನೀಡಬೇಕು. ನಾನು ಕುಂಭಮೇಳ, ನಿರುದ್ಯೋಗ ಸೇರಿದಂತೆ ಹಲವಾರು ವಿಚಾರಗಳ ಬಗ್ಗೆ ಚರ್ಚಿಸಲು ಬಯಸಿದ್ದೆ. ಆದರೆ, ನನಗೆ ಮಾತನಾಡಲು ಬಿಡುತ್ತಿಲ್ಲ. ಪ್ರತಿ ಬಾರಿಯೂ ನಾನು ಮಾತನಾಡಲು ಆರಂಭಿಸಿದಾಗ, ನನ್ನನ್ನು ತಡೆಯಲಾಗುತ್ತಿದೆ. ಪ್ರಜಾಪ್ರಭುತ್ವಕ್ಕೆ ಅವಕಾಶವೇ ಇಲ್ಲದಂತಾಗಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ರಾಹುಲ್ ಮಾತಿಗೆ ಪ್ರತಿಕ್ರಿಯಿಸಿರುವ ಸ್ಪೀಕರ್, “ಸದನದಲ್ಲಿ ಸದಸ್ಯರ ನಡವಳಿಕೆಯು ಮಾನದಂಡಗಳಿಗೆ ಅನುಗುಣವಾಗಿ ಇಲ್ಲದ ಹಲವಾರು ನಿರ್ದರ್ಶನಗಳಿವೆ” ಎಂದು ಹೇಳಿದ್ದಾರೆ.