ವಿಮಾನ ಯಾನದ ಅನುಭವವನ್ನು ಕಂಡಿರದ ಕೇರಳ ರಾಜ್ಯದ ಕುನ್ನಮಂಗಲಂ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಡಮಕ್ಕಳು ಹಾಗೂ ಸ್ಥಳೀಯರು ವಿಧಾನಸೌಧದ ವೀಕ್ಷಣೆಗಾಗಿ ಆಗಮಿಸಿದ ಸಂದರ್ಭದಲ್ಲಿ ಸ್ಪೀಕರ್ ಯು ಟಿ ಖಾದರ್ ಅವರು ಆತ್ಮೀಯವಾಗಿ ಬರಮಾಡಿಕೊಂಡರು.
ಇದೇ ವೇಳೆ ಮಾತನಾಡಿದ ಯು.ಟಿ.ಖಾದರ್, ಕೇರಳದ ಕುನ್ನಮಂಗಲಂ ಗ್ರಾಮ ಪಂಚಾಯಿತಿಯ ಸದಸ್ಯರು ಬಡ ಮಕ್ಕಳು ಹಾಗೂ ಸ್ಥಳೀಯರಿಗೆ ವಿಧಾನಸೌಧದ ವೀಕ್ಷಣೆಗಾಗಿ ಅನುಮತಿ ಕೋರಿ ಪತ್ರವನ್ನು ಬರೆದಿದ್ದರು. ಕರ್ನಾಟಕ ರಾಜ್ಯದ ಪ್ರಮುಖ ಪ್ರವಾಸ ತಾಣವಾದ ವಿಧಾನಸೌಧದ ವೀಕ್ಷಣೆಯನ್ನು ಪ್ರತಿಯೊಬ್ಬರೂ ಮಾಡಲಿ ಎಂದು ಮುಕ್ತವಾಗಿ ಒಪ್ಪಿ, ಅನುಮತಿಯನ್ನು ನೀಡಲಾಯಿತು. ವಿಧಾನಸೌಧದ ಇತಿಹಾಸವನ್ನು ಎಲ್ಲರೂ ಅರಿಯಬೇಕು. ಇತರೆ ರಾಜ್ಯಗಳು ಸೇರಿದಂತೆ ವಿದೇಶದಲ್ಲೂ ಈ ಭವ್ಯ ಸೌಧದ ಕುರಿತು ಮಾಹಿತಿ ಪಸರಿಸಬೇಕು ಎಂದು ಹೇಳಿದರು.

ವಿಧಾನಸೌಧದ ವೀಕ್ಷಣೆಗಾಗಿ ಆಗಮಿಸಿದ ಕೇರಳ ರಾಜ್ಯದ ಈ ಬಡಮಕ್ಕಳು ಹಾಗೂ ಸ್ಥಳೀಯರಿಗೆ ಅನುಕೂಲ ಮಾಡಿಕೊಡಲು ಗೈಡ್ ವ್ಯವಸ್ಥೆಯನ್ನು ಸಹ ಮಾಡಲಾಗಿದ್ದು, ಮುಂದಿನ ದಿನಗಳಲ್ಲಿ ಪ್ರವಾಸಿಗರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಕ್ರಮವಹಿಸಲಾಗುವುದು ಎಂದು ಸ್ಪೀಕರ್ ತಿಳಿಸಿದರು.
ಕೇರಳ ರಾಜ್ಯದ ಕುನ್ನಮಂಗಲಂ ಗ್ರಾಮ ಪಂಚಾಯಿತಿ ಸದಸ್ಯರುಗಳೇ ದೇಣಿಗೆಯ ಮೂಲಕ ಸಂಗ್ರಹಿಸಿದ ಹಣ ಸೇರಿದಂತೆ ಇತರೆ ವಿಶೇಷ ಅನುದಾನದಲ್ಲಿ ವಿಮಾನ ಪ್ರಯಾಣವನ್ನು ಮಾಡದಿರುವ ನೂರೈವತ್ತಕ್ಕೂ ಹೆಚ್ಚು ಬಡ ಮಕ್ಕಳು ಹಾಗೂ ಸ್ಥಳೀಯರಿಗೆ ವಿಮಾನ ಯಾನದ ಉಚಿತ ಪ್ರಯಾಣವನ್ನು ಮಾಡಿಸಿದರು.