- ಶಾಸಕರಿಗೆ ತರಬೇತಿ ಶಿಬಿರ ನೋಡಿದ ಬಳಿಕ ಅಭಿಪ್ರಾಯ ಹೇಳಲಿ
- ಶಿಬಿರದಲ್ಲಿ ಭಾಗವಹಿಸುವ ಕೆಲವು ಭಾಷಣಕಾರರಿಗೆ ವಿರೋಧ ಹಿನ್ನೆಲೆ
ಆಯ್ಕೆಯಾಗಿರುವ ನೂತನ ಶಾಸಕರಿಗೆ ತರಬೇತಿ ಶಿಬಿರದಲ್ಲಿ ಭಾಗವಹಿಸುವ ಕೆಲವು ಭಾಷಣಕಾರರ ಬಗ್ಗೆ ವಿರೋಧ ವ್ಯಕ್ತವಾಗುತ್ತಿರುವ ಬಗ್ಗೆ ಮೌನ ಮುರಿದಿರುವ ವಿಧಾನಸಭೆಯ ಸಭಾಧ್ಯಕ್ಷ ಯು ಟಿ ಖಾದರ್, ‘ಪೂರ್ವಗ್ರಹ ಪೀಡಿತ ಚರ್ಚೆ ಸರಿಯಲ್ಲ’ ಎಂದಿದ್ದಾರೆ.
ಮಂಗಳೂರಿನಲ್ಲಿ ಶುಕ್ರವಾರ ಮಾತನಾಡಿದ ಅವರು, ಯಾವುದೇ ವಿಚಾರದ ಬಗ್ಗೆ ಈಗಲೇ ಪೂರ್ವಗ್ರಹ ಪೀಡಿತ ಚರ್ಚೆ ಸರಿಯಲ್ಲ. ಶಿಬಿರದ ಬಗ್ಗೆ ಆಕ್ಷೇಪಿಸುವವರು ಶಿಬಿರ ನೋಡಿದ ಬಳಿಕ ಅಭಿಪ್ರಾಯ ಹೇಳಲಿ. ವಿವಿಧ ವಿಷಯಗಳನ್ನು ಮುಂದಿಟ್ಟುಕೊಂಡು ಈ ತರಬೇತಿ ಶಿಬಿರ ಆಯೋಜಿಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.
ಶಿಬಿರದಲ್ಲಿ ಎಚ್.ಕೆ.ಪಾಟೀಲ್, ಕೃಷ್ಣ ಭೈರೇಗೌಡ, ಟಿ.ಬಿ.ಜಯಚಂದ್ರ, ಸುರೇಶ್ ಕುಮಾರ್ ಸೇರಿ ಸಂಸದೀಯ ಪಟುಗಳು ತರಬೇತಿ ನೀಡಲಿದ್ದಾರೆ. ಮಾಜಿ ಸ್ಪೀಕರ್‍ಗಳು, ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಎಚ್.ಡಿ.ಕುಮಾರಸ್ವಾಮಿ ಕೂಡ ನೂತನ ಶಾಸಕರೊಂದಿಗೆ ಸಂವಾದ ನಡೆಸಲಿದ್ದಾರೆ. ಅದರ ಜೊತೆಗೆ ಒತ್ತಡರಹಿತ ಕೆಲಸ ನಿರ್ವಹಣೆ ಬಗ್ಗೆ ತಿಳಿಸಲು ಕೆಲ ಆಧ್ಯಾತ್ಮಿಕ ವ್ಯಕ್ತಿಗಳನ್ನು ಕೂಡ ಕರೆದಿದ್ದೇವೆ ಎಂದು ತಿಳಿಸಿರುವ ಖಾದರ್, ಸಾಮಾಜಿಕ ತಾಣಗಳಲ್ಲಿ ಸ್ಪಷ್ಟನೆ ಇಲ್ಲದೇ ಬರೆಯುತ್ತಿರುವುದು ಅವರ ವ್ಯಕ್ತಿತ್ವಕ್ಕೆ ಬಿಟ್ಟ ವಿಚಾರ ಎಂದು ಹೇಳಿದ್ದಾರೆ.
ಶಿಬಿರದಲ್ಲಿ ಕರೆದಿರುವ ಅತಿಥಿಗಳಲ್ಲಿ ಕೆಲವರು ಆಗಮಿಸುವ ಬಗ್ಗೆ ಇನ್ನೂ ದೃಢಪಟ್ಟಿಲ್ಲ. ರವಿಶಂಕರ್ ಗುರೂಜಿಯವರು ಊರಲ್ಲೇ ಇಲ್ಲ, ಅವರು ಅಮೆರಿಕದಲ್ಲಿದ್ದಾರೆ ಎಂದು ಸ್ಪೀಕರ್ ಮಾಹಿತಿ ನೀಡಿದರು.
ಈ ಶಿಬಿರದ ಬಗ್ಗೆ ಯಾವುದೇ ವಿಚಾರ ಇದ್ದರೂ ಈಗಲೇ ಹೇಳೋದು ಪ್ರಭುತ್ವದ ಹೇಳಿಕೆ ಅಲ್ಲ. ತರಬೇತಿ ಶಿಬಿರ ನೋಡಿದ ಬಳಿಕ ಅದರ ಅಭಿಪ್ರಾಯ ಹೇಳಲಿ ಎಂದು ಯು ಟಿ ಖಾದರ್ ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಅಕ್ಕಿ ಕೊಡಲು ನಿರಾಕರಿಸಿದ ಕೇಂದ್ರ ಸರ್ಕಾರ: ಜಾರಿ ಖಚಿತ ಎಂದ ಸಚಿವ ಕೆ.ಎಚ್ ಮುನಿಯಪ್ಪ
16ನೇ ವಿಧಾನಸಭೆಗೆ ಆಯ್ಕೆಯಾಗಿರುವ 70 ಹೊಸ ಶಾಸಕರಿಗೆ ಜೂ.26ರಿಂದ ಮೂರು ದಿನಗಳ ಕಾಲ ಪ್ರಕೃತಿ ಚಿಕಿತ್ಸೆ ಮತ್ತು ತರಬೇತಿ ಶಿಬಿರವನ್ನು ನೆಲಮಂಗಲದ ಬಳಿ ಇರುವ ಧರ್ಮಸ್ಥಳದ ನ್ಯಾಚುರೋಪತಿ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿದೆ. ಶಿಬಿರದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗಡೆ, ಜಮಾಅತೆ ಇಸ್ಲಾಮೀ ಹಿಂದ್‌ನ ಮುಹಮ್ಮದ್ ಕುಂಞಿ, ಡಾ. ಗುರುರಾಜ್ ಕರ್ಜಗಿ, ಬ್ರಹ್ಮಕುಮಾರಿಯ ಆಶಾ ದೀದಿ ಹಾಗೂ ಆರ್ಟ್ ಆಫ್ ಲಿವಿಂಗ್‌ನ ರವಿಶಂಕರ್ ಗುರೂಜಿ ಪ್ರೇರಣಾ ಉಪನ್ಯಾಸ ನೀಡಲಿದ್ದಾರೆ ಎಂದು ಸ್ಪೀಕರ್ ಯು ಟಿ ಖಾದರ್ ಇತ್ತೀಚೆಗೆ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ್ದರು.
ಭಾಷಣಕಾರರ ಪೈಕಿ ಆರ್‍ಎಸ್‌ಎಸ್ ಹಾಗೂ ಬಲಪಂಥೀಯ ವಿಚಾರಧಾರೆಯವರು ಇರುವುದನ್ನು ಗಮನಿಸಿದ ಬಳಿಕ ನಾಡಿನ ಚಿಂತಕರು, ಗಣ್ಯರು ಸೇರಿದಂತೆ ಹಲವರು ಸಾಮಾಜಿಕ ಜಾಲತಾಣಗಳಲ್ಲಿ ಆಕ್ಷೇಪ ವ್ಯಕ್ತಪಡಿಸಿದ್ದರು. ಅಲ್ಲದೇ, ಸ್ಪೀಕರ್ ಯು ಟಿ ಖಾದರ್ ನಡೆ ಸಂವಿಧಾನ ವಿರೋಧಿ ಎಂದು ಆಕ್ರೋಶ ಹೊರಹಾಕಿ, ಭಾಷಣಕಾರರನ್ನು ಆಹ್ವಾನಿಸದಂತೆ ಒತ್ತಾಯಿಸಿದ್ದಾರೆ.