ಆರ್‌ಎಸ್‌ಎಸ್ ತೊರೆದು ಸಾಮಾಜಿಕ ಜಾಗೃತಿಯಲ್ಲಿ ಸಕ್ರಿಯವಾಗಿರುವ ಹಲವು ಮುಖಂಡರು ಜಾಗೃತ ಕರ್ನಾಟಕ ಸಂಘಟನೆ ಹಮ್ಮಿಕೊಂಡಿದ್ದ ’ಕರ್ನಾಟಕ ಪಣ’ ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ಕಹಿ ಅನುಭವಗಳನ್ನು ಹಂಚಿಕೊಂಡಿದ್ದಾರೆ
“ಆಧ್ಯಾತ್ಮಿಕ ಅರಿವು ಇದ್ದವರು ಮಾತ್ರ ಆರ್‌ಎಸ್‌ಎಸ್‌ನಿಂದ ಹೊರಬರಲು ಸಾಧ್ಯ. ನಾವು ಉಪನಿಷತ್ತುಗಳ ವಿರೋಧಿಗಳಲ್ಲ. ದಾಸರು, ಶರಣರು ಸೂಫಿಗಳ ಧರ್ಮವನ್ನು ಅರಿತಿದ್ದೆವು. ನಾನು ನೀನು ಬೇರೆಯಲ್ಲ, ಒಂದೇ ಎಂಬ ಅರಿವು ಆಳವಾಗಿ ಯಾರಿಗೆ ಮೂಡುತ್ತೋ ಅವರಿಗೆ ಮಾತ್ರ ಧರ್ಮ ಅರ್ಥವಾಗುತ್ತದೆ. ಇದು ಆರ್‌ಎಸ್‌ಎಸ್‌ನವರಿಗೆ ಸಾಧ್ಯವಿಲ್ಲ” ಎಂದು ಯುವ ವಾಗ್ಮಿ, ಆರ್‌ಎಸ್‌ಎಸ್ ಮಾಜಿ ಮುಖಂಡ ನಿಕೇತ್ ರಾಜ್ ಮೌರ್ಯ ಹೇಳಿದರು.
ಬೆಂಗಳೂರು ಫ್ರೀಡಂ ಪಾರ್ಕಿನ ಕುವೆಂಪು ಪ್ರತಿಮೆಯ ಬಳಿ ಜಾಗೃತ ಕರ್ನಾಟಕ ಸಂಘಟನೆ ಹಮ್ಮಿಕೊಂಡಿದ್ದ ‘ಕರ್ನಾಟಕ ಪಣ – ನಾಡ ಅರಿವು’ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
“ಈ ಸಭೆಯಲ್ಲಿ ಭಾರಿಸಿದ ಘಂಟೆ ನನ್ನದೇ ಸರಿ, ಬೇರೆಯದೆಲ್ಲವೂ ತಪ್ಪು ಎನ್ನುವ ಅಲ್ಪಮತಿಗಳಿಗೆ ಸಾವಿನ ಕರೆಘಂಟೆಯಾಗಬೇಕು ಎಂದು ಚಿಕಾಗೋ ಸಮ್ಮೇಳನದಲ್ಲಿ ಸ್ವಾಮಿ ವಿವೇಕಾನಂದರು ಸಾರಿದರು. ಭಾರತ ದೇಶದ ಅಧ್ಯಾತ್ಮ ಪ್ರತಿನಿಧಿಯಾಗಿದ್ದ ಅವರು ಅಲ್ಲಿ ನೆರೆದಿದ್ದ ವಿಭಿನ್ನ ಸಂಸ್ಕೃತಿಯ ಜನರನ್ನು ಸಹೋದರ, ಸಹೋದರಿಯರೆ ಎಂದು ಸಂಭೋದಿಸಿದರು. ಅಂತಹ ವಿವೇಕಾನಂದರ ವಿಚಾರಗಳನ್ನು ಈ ಆರ್‌ಎಸ್‌ಎಸ್ ಮಾತನಾಡುವುದಿಲ್ಲ” ಎಂದು ಟೀಕಿಸಿದರು.

“ವಿವೇಕಾನಂದರು ಸನ್ಯಾಸತ್ವ ಸ್ವೀಕರಿಸಿದ್ದು ಕ್ರಿಸ್ತ ಹುಟ್ಟಿದ ದಿನ. ಶ್ರೀರಾಮಕೃಷ್ಣ ಪರಮಹಂಸರು ಜಗತ್ತಿನ ಎಲ್ಲಾ ಧರ್ಮಗಳ ಮೂಲಕವೂ ಮೋಕ್ಷ ಸಾಧಿಸಬಹುದು ಎಂದು ಸಾರಿದರು. ಒಟ್ಟಾಗಿ ಬಾಳುವುದನ್ನು ಕಲಿಸಿ ಎಂದರು. ಆದರೆ ಅದನ್ನು ಆರ್‌ಎಸ್‌ಎಸ್ ಹೇಳುವುದಿಲ್ಲ” ಎಂದು ಕುಟುಕಿದರು.
“ಹೊಟ್ಟೆಯ ಕಿಚ್ಚಿಗೆ ಕಣ್ಣೀರ್ ಸುರಿಸು, ಒಟ್ಟಿಗೆ ಬಾಳುವ ತೆರದಲ್ಲಿ ಹರಸು ಎಂದು ರಾಷ್ಟ್ರಕವಿ ಕುವೆಂಪು ಹೇಳಿದರು. ನಮ್ಮನ್ನು ಒಡೆಯುವ ಪ್ರಯತ್ನವೇ ಅಧರ್ಮ. ನಮ್ಮನ್ನು ಜೋಡಿಸುವುದೇ ಧರ್ಮ. ನಮ್ಮೊಳಗೆ ಇರುವ ಕೆಡಕನ್ನು ಕಳೆದುಕೊಳ್ಳಲು ಇರುವ ಆದರ್ಶವೇ ರಾಮ. ಗಾಂಧಿಗಿಂತ ದೊಡ್ಡ ಹಿಂದೂ ಇರಲು ಸಾಧ್ಯವೇ? ಅವರನ್ನೇ ಹಿಂದೂ ವಿರೋಧಿ ಎಂದು ಈ ಆರ್‌ಎಸ್‌ಎಸ್‌ನವರು ಕರೆದರಲ್ಲ” ಎಂದು ಬೇಸರ ವ್ಯಕ್ತಪಡಿಸಿದರು.
“ಪ್ರಶ್ನೆ ಮಾಡದೇ ಹೋದರೆ ಧರ್ಮಕ್ಕೆ ಅರ್ಥವಿದೆಯೇ? ದ್ವೇಷ ಮಾಡುವುದು ಧರ್ಮವಲ್ಲ, ದ್ವೇಷ ಕಲಿಸುವುದು ಧಾರ್ಮಿಕ ಸಂಘಟನೆಯಲ್ಲ. ಹಾಗಾಗಿ ಗಾಂಧಿ, ಕುವೆಂಪು, ಕನಕದಾಸ, ದಾರ್ಶನಿಕರು, ಸೂಫಿಗಳು, ನಾರಾಯಣ ಗುರುಗಳು ಮಾತಾಡಿದ್ದು ನಮ್ಮ ಧರ್ಮ, ಆರ್‌ಎಸ್‌ಎಸ್‌ನದು ಅಧರ್ಮ” ಎಂದು ಅಭಿಪ್ರಾಯಪಟ್ಟರು.
ಆರ್‌ಎಸ್‌ಎಸ್ ವೇದ ಮತ್ತು ಉಪನಿಷತ್ತನ್ನು ಹೇಳುವುದಿಲ್ಲ: ಎಂ.ಜಿ ಹೆಗಡೆ
ಆರ್‌ಎಸ್‌ಎಸ್‌ನ ಮಾಜಿ ಮುಖಂಡರು ಹಾಗೂ ಶಿಕ್ಷಣತಜ್ಞರಾದ ಎಂ.ಜಿ.ಹೆಗಡೆಯವರು ಮಾತನಾಡಿ, “ಆರ್‌ಎಸ್‌ಎಸ್ ವೇದ ಮತ್ತು ಉಪನಿಷತ್ತನ್ನು ಹೇಳುವುದಿಲ್ಲ. ಏಕೆಂದರೆ ಅದರಲ್ಲಿ ಬರೆದಿರುವುದು ಆರ್‌ಎಸ್‌ಎಸ್ ಸಿದ್ದಾಂತಕ್ಕೆ ವಿರುದ್ಧವಾಗಿದೆ” ಎಂದು ಎಚ್ಚರಿಸಿದರು.
“ಯಾರೂ ಕೂಡ ಶ್ರೇಷ್ಟರಲ್ಲ, ಯಾರೂ ಕನಿಷ್ಟರಲ್ಲ ಎಂದು ಉಪನಿಷತ್ತು ಹೇಳುತ್ತದೆ. ಇವೆಲ್ಲವನ್ನೂ ಮೂಲೆಗೆ ಸರಿಸಿ, ಬದಿಗೆ ಇಟ್ಟರು. ಉಪನಿಷತ್ತು ಇರುವುದು ಪ್ರಶ್ನೆಗಳ ಆಧಾರದ ಮೇಲೆ. ಯಮನ ಹತ್ತಿರ ಹೋಗಿ ನಚಿಕೇತ ಪ್ರಶ್ನೆ ಕೇಳುತ್ತಾನೆ. ಪ್ರಶ್ನೆ ಕೇಳುವುದರಿಂದಲೇ ಚಿಂತನೆ ಹುಟ್ಟಿದ್ದು. ವೇದಗಳು ಹೇಳುವುದು ಪ್ರಕೃತಿಯ ಆರಾಧನೆ. ಇವು ಯಾವುವು ಆರ್‌ಎಸ್‌ಎಸ್‌ಗೆ ಬೇಕಿಲ್ಲ” ಎಂದು ತಿಳಿಸಿದರು.
“ಆರ್‌ಎಸ್‌ಎಸ್‌ನ ಯಾರೂ ಹಿಂದೂ ಧರ್ಮದ ಅಧ್ಯಯನ ಮಾಡುವುದಿಲ್ಲ. ನಮಸ್ತೆ ಸದಾ ವಸ್ತಲೇ ಎಂಬ ಪ್ರಾರ್ಥನೆ ಕೂಡ ಕೇಸರಿ ಶಾಲು ಹಾಕಿ ಓಡಾಡುವ ಕಾರ್ಯಕರ್ತರಿಗೆ ಬರುವುದಿಲ್ಲ” ಎಂದರು.
“ಹಿಂದೂ ಅಂದರೆ ನಮ್ಮದು ಆರಾಧನಾ ಪದ್ದತಿ. ಹಿಂದುತ್ವ ಎಂದರೆ ವ್ಯಾಪಾರ, ವ್ಯವಹಾರ ಮತ್ತು ಅಧಿಕಾರ ಅಷ್ಟೆ. ಹಿಂದೂ ನಾಯಕರು ಎನ್ನುವವರು ಈಗ 200 ಕೋಟಿ ರೂ. ಆಸ್ತಿಯನ್ನು ಹೇಗೆ ಮಾಡಿಕೊಂಡರು ಎಂದು ನನ್ನ ಜೊತೆಗೆ ಚರ್ಚೆಗೆ ಬರುವರೆ?” ಎಂದು ಸವಾಲು ಹಾಕಿದರು.
“ಸಮಾನವಾಗಿ ಎಲ್ಲರನ್ನು ಒಟ್ಟಿಗೆ ಕೊಂಡೊಯ್ಯುವವರು ಹಿಂದೂ ಆಗಿರುತ್ತಾರೆ. ಆದರೆ ಬಡ, ಹಿಂದುಳಿದ, ದಲಿತ ಯುವಕರನ್ನು ಮುಂದೆ ತಳ್ಳಿ ಜೈಲು ಪಾಲು ಮಾಡುವವರು ಹಿಂದುತ್ವವಾದಿಗಳು. ಧರ್ಮದ ಸಮಸ್ಯೆ ಇಡೀ ಜಗತ್ತಿಗೆ ಇರಬೇಕು. ಬಡವರಿಗೆ ಮಾತ್ರ ಏಕೆ? ಇವರ ಕುರಿತು ಯುವಕರು ಎಚ್ಚರದಿಂದ ಇರಬೇಕು” ಎಂದು ಮನವಿ ಮಾಡಿದರು.
ಮಾಡಿದ ತಪ್ಪಿಗೆ ಪಶ್ಚಾತ್ತಾಪ ಪಡುತ್ತಿದ್ದೇನೆ: ಲಕ್ಷ್ಮೀಶ ಗಬ್ಬಲಡ್ಕ
ಆರ್‌ಎಸ್‌ಎಸ್‌ನಲ್ಲಿದ್ದು ಮಾಡಿದ ತಪ್ಪುಗಳಿಗೆ ಈಗ ಪಶ್ಚಾತ್ತಾಪ ಅನುಭವಿಸುತ್ತಿರುವ ಆರ್‌ಎಸ್‌ಎಸ್ ಮಾಜಿ ಮುಖಂಡ ಲಕ್ಷ್ಮೀಶ ಗಬ್ಬಲಡ್ಕ ಅವರು ಮಾತನಾಡಿ, “ನಮ್ಮೊಳಗಿನ ಬೆಂಕಿ ಕಡಿಮೆಯಾಗಿ ತಂಪು ಬಂದ ಕಾರಣ ನಾವು ಆರ್‌ಎಸ್‌ಎಸ್‌ನಿಂದ ಹೊರಗೆ ಬಂದಿದ್ದೇವೆ. ಆರ್‌ಎಸ್‌ಎಸ್‌ನಲ್ಲಿ ಆಟದ ಹೆಸರಿನಲ್ಲಿ, ಹಾಡು, ಚಾರಣ, ಬೆಳದಿಂಗಳ ಊಟ, ಕಥೆ ಹೆಸರಿನಲ್ಲಿ ಒಟ್ಟು ಸೇರಿಸಿ ಒಂದು ಸಿದ್ದಾಂತ ತುಂಬಿಸುವ ಕೆಲಸ ಶುರು ಆಗುತ್ತದೆ. ಯೋಜಿತ ಕಾರ್ಯಪದ್ದತಿ ಅಲ್ಲಿ ಇದೆ. ಪೊಲೀಸ್, ನ್ಯಾಯಾಂಗದವರೆಗೂ ಇದು ಹಬ್ಬಿದೆ” ಎಂದು ವಿಷಾದ ವ್ಯಕ್ತಪಡಿಸಿದರು.

“ವ್ಯವಸ್ಥಿತವಾದ ಕಾರ್ಯಯೋಜನೆ ನಮಗೆ ಬೇಕು. ನಾವು ಭಯ, ಅಸಹನೆ ಹುಟ್ಟಿಸದೇ ಭಾವ ಜಾಗೃತಿಯನ್ನು ಉಂಟು ಮಾಡಬೇಕು ಎಂದು ಅರಿತಿದ್ದೇನೆ. 15 ವರ್ಷಗಳ ಹಿಂದೆ ಶಿರಾದಲ್ಲಿ ನನ್ನ ಭಾಷಣ ಕೇಳಿ ಜನ ಮುಸ್ಲಿಮರ ಅಂಗಡಿಗೆ ಬೆಂಕಿ ಹಾಕಿದರು. ಜೊತೆಗೆ ಚೂರಿ ಇರಿತವೂ ಆಯಿತು. ಆ ಪಾಪ ನನ್ನ ಮೇಲಿದೆ. ಅದಕ್ಕೆ ಪ್ರಾಯಶ್ಚಿತ ಪಟ್ಟಿಕೊಳ್ಳಲು ನಾನು ಇವತ್ತು ಇಲ್ಲಿಗೆ ಬಂದಿದ್ದೇನೆ” ಎಂದು ತಿಳಿಸಿದರು.
“ಭಾರತದ ಭವ್ಯ ಪರಂಪರೆಯನ್ನು ಕೇವಲ ಒಂದು ಮತಕ್ಕೆ ಸೀಮಿತಗೊಳಿಸಿ ಭವಿಷ್ಯದಲ್ಲಿ ಆತಂಕದಿಂದ ಬದುಕುವ ದುಸ್ಥಿತಿಯನ್ನು ಆರ್‌ಎಸ್‌ಎಸ್ ಸೃಷ್ಟಿಸಿದೆ. ಆರ್‌ಎಸ್‌ಎಸ್ ಹಿಂದೂ ಧರ್ಮದ ಪ್ರಾತಿನಿಧಿಕ ಸಂಸ್ಥೆ ಅಲ್ಲ. ಅದನ್ನು ತ್ಯಜಿಸಿ ಜಗತ್ತಿನ ಎಲ್ಲದರಿಂದ ಒಳ್ಳೆಯದನ್ನು ನಾವು ತೆಗೆದುಕೊಳ್ಳೋಣ” ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಪಣ ಪ್ರತಿಜ್ಞೆ ಮಾಡಲಾಯಿತು.
ಆರ್‌ಎಸ್‌ಎಸ್ ತೊರೆದು ಜನಜಾಗೃತಿಯಲ್ಲಿ ತೊಡಗಿರುವ ವಕೀಲರಾದ ಸುಧೀರ್ ಕುಮಾರ್ ಮುರೊಳ್ಳಿ, ಹನುಮೇಗೌಡ, ಹಿರಿಯ ಸಾಹಿತಿ ಎಲ್.ಎನ್.ಮುಕುಂದರಾಜ್ ಮಾತನಾಡಿದರು. ಜಾಗೃತ ಕರ್ನಾಟಕದ ಸದಸ್ಯರಾದ ರಾಜಶೇಖರ್ ಅಕ್ಕಿ ಪ್ರಾಸ್ತಾವಿಕವಾಗಿ ಮಾತುಗಳನ್ನಾಡಿದರು. ಎಎಪಿ ನಾಯಕ ರಮೇಶ್ ಬೆಲ್ಲಂಕೊಂಡ, ಜಾಗೃತ ಕರ್ನಾಟಕ ಸಂಘಟನೆಯ ಸಂಚಾಲಕರಾದ ಬಿ.ಸಿ.ಬಸವರಾಜು, ಹಿರಿಯ ಪತ್ರಕರ್ತೆ ಹೇಮಾ ವೆಂಕಟ್ ಕಾರ್ಯಕ್ರಮದಲ್ಲಿ ಹಾಜರಿದ್ದರು. ಸಾಮಾಜಿಕ ಕಾರ್ಯಕರ್ತರಾದ ಡಾ.ಎಚ್.ವಿ.ವಾಸು ಕಾರ್ಯಕ್ರಮದ ನಿರೂಪಣೆ ಮಾಡಿದರು.
ಇದನ್ನೂ ಓದಿರಿ: ಅನಂತಕುಮಾರ್ ಹೆಗಡೆ ರಕ್ತದಲ್ಲಿಯೇ ‘ಸಂವಿಧಾನ ದ್ವೇಷ’ ಇದೆ: ಸುಧೀರ್ ಮುರೊಳ್ಳಿ
ಜಾಗೃತಿ ಕರ್ನಾಟಕ ಕೈಗೊಂಡಿರುವ ಕರ್ನಾಟಕ ಪಣವೇನು?
ಜಾಗೃತ ಕರ್ನಾಟಕದ ಸಂಚಾಲಕರಾದ ಬಿ.ಸಿ.ಬಸವರಾಜು ಅವರು ಕರ್ನಾಟಕ ಪಣದ ಗುರಿಯನ್ನು ಓದಿ ತಿಳಿಸಿದರು.
“ಕರ್ನಾಟಕದ ನಾಗರಿಕರಾದ ನಾವು ಈ ನೆಲದ ನಿಜವಾದ ವಿವೇಕದಲ್ಲಿ ವಿಶ್ವಾಸವಿಟ್ಟಿದ್ದೇವೆ. ಆ ವಿವೇಕವೆಂದರೆ, ಮಾನವ ಜಾತಿ ತಾನೊಂದೆ ವಲಂ ಎನ್ನುವ ವಿಶಾಲ ದೃಷ್ಟಿ. ನಾವು ಇವನಾರವ ಇವನಾರವ ಎಂದರೆ 12ನೇ ಶತಮಾನದ ಚಾರಿತ್ರಿಕ ಶರಣ ಚಳವಳಿಗೆ ಅಪಮಾನ ಬಗೆದಂತೆ. ಇವ ನಮ್ಮವ ಇವ ನಮ್ಮವನೆಂದು ಬಗೆದು, ಕಾಯಕವನ್ನೂ ದಾಸೋಹವನ್ನೂ ಮಾಡುವುದೇ ಕನ್ನಡ ಧರ್ಮ. ಈ ಕನ್ನಡ ನಾಡು ಇಂದಿನ ರಾಜ್ಯದ ಸ್ವರೂಪ ಪಡೆದುಕೊಳ್ಳುವಾಗ ಸರ್ವ ಜನಾಂಗದ ಶಾಂತಿಯ ತೋಟದ ಕನಸು ಕಂಡವರು ನಾವು. ಭಾರತ ಒಕ್ಕೂಟದೊಳಗೆ ಐಕ್ಯರಾದಾಗ ಸಂವಿಧಾನದ ಆಶಯಗಳಾದ ನ್ಯಾಯ, ಸಮಾನತೆ, ಸ್ವಾತಂತ್ರ್ಯ, ಸೋದರತೆಗಳ ಮೌಲ್ಯಗಳನ್ನು ಒಪ್ಪಿಕೊಂಡವರು ನಾವು.
ಈ ನಾಡಿನ, ದೇಶದ ಎಲ್ಲಾ ಧರ್ಮಗಳ ಸಂತರೂ, ಸೂಫಿಗಳೂ, ಶರಣರೂ ಹೇಳಿದ್ದು ಸತ್ಯ ಮತ್ತು ಪ್ರೀತಿಯ ಧರ್ಮವನ್ನು. ಉಪನಿಷತ್ತುಗಳು ಸಾರಿದ್ದು ವಸುಧೈವ ಕುಟುಂಬಕಂ ಮತ್ತು ಸತ್ಯಮೇವ ಜಯತೆಗಳನ್ನು. ಹೌದು ಸತ್ಯವೇ ಗೆಲ್ಲುತ್ತದೆ. ಸುಳ್ಳು, ದ್ವೇಷ ಮತ್ತು ಕಪಟತನಗಳನ್ನೇ ಉಸಿರಾಗಿಸಿಕೊಂಡ ಬಿಜೆಪಿ ಮತ್ತು ಆರೆಸ್ಸೆಸ್‌ಗಳು ಯಾವ ಧರ್ಮವನ್ನೂ ಪ್ರತಿನಿಧಿಸುವುದಿಲ್ಲ. ನಮ್ಮ ಧರ್ಮವು ನಮಗೆ ನೆರೆಯವರನ್ನು ಪ್ರೀತಿಸಲು, ಎಲ್ಲಾ ಜಾತಿ-ಧರ್ಮದವರನ್ನು ಸಮಾನವಾಗಿ ಕಾಣಲು ಬೋಧಿಸುತ್ತದೆ. ಬಿಜೆಪಿ – ಆರೆಸ್ಸೆಸ್‌ಗಳು ಅದಕ್ಕೆ ವಿರುದ್ಧವಾಗಿದೆ.
ಹಾಗಾಗಿ ನಾವು ಸತ್ಯ, ನ್ಯಾಯ, ಪ್ರೀತಿಗಳ ಧರ್ಮವನ್ನು ಎತ್ತಿ ಹಿಡಿಯುತ್ತೇವೆ. ಸಮಾನತೆಯ ಮೌಲ್ಯದ ಸಂವಿಧಾನವನ್ನು ಪಾಲಿಸುತ್ತೇವೆ. ಇದಕ್ಕೆ ವಿರುದ್ಧವಾಗಿರುವ ದ್ವೇಷ, ಅಸತ್ಯದ ಸಿದ್ಧಾಂತವನ್ನು ಸೋಲಿಸುತ್ತೇವೆ” ಎಂದು ವಿವರಿಸಿದರು.
