ಚಿಕ್ಕಮಗಳೂರು-ಉಡುಪಿ ಜಿಲ್ಲೆಗಳಲ್ಲಿ ಅಲ್ಲಿನ ಸಂಸದೆ, ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ವಿರುದ್ಧ ‘ಗೋ ಬ್ಯಾಕ್ ಶೋಭಾ!’ ಅಭಿಯಾನ ನಡೆಯುತ್ತಿದೆ. ಕರಂದ್ಲಾಜೆ ವಿರುದ್ಧ ಅಸಮಾಧಾನಗೊಂಡಿರುವ ಕ್ಷೇತ್ರದ ಜನರು ಅವರ ವಿರುದ್ಧ ಅಭಿಯಾನ ನಡೆಸುತ್ತಿದ್ದಾರೆ. ಆದರೆ, ಈ ಅಭಿಯಾನ ಪ್ರಾಯೋಜಿತವಾದದ್ದು, ಇದು ಅವಕಾಶವಾದಿ ರಾಜಕಾರಣ ಎಂದು ಕರಂದ್ಲಾಜೆ ಹೇಳಿದ್ದಾರೆ.
ಉಡುಪಿ-ಚಿಕ್ಕಮಗಳೂರು ಕ್ಷೇತ್ರದಿಂದ ಮೂರನೇ ಅವಧಿಗೆ ಸ್ಪರ್ಧಿಸಲು ಕರಂದ್ಲಾಜೆ ಬಿಜೆಪಿ ಟಿಕೆಟ್ ರೇಸ್‌ನಲ್ಲಿದ್ದಾರೆ. ಅವರು ಆ ಕ್ಷೇತ್ರ ಬಿಟ್ಟು ಬೇರೆ ಕ್ಷೇತ್ರಗಳಿಗೆ ಹೋಗಬಹುದು ಎಂಬ ಊಪಾಪೋಹಗಳು ಇದ್ದವು. ಆದರೆ, ಎಲ್ಲಿಯೂ ಹೋಗುವುದಿಲ್ಲ. ಇಲ್ಲಿಯೇ ಸ್ಪರ್ಧಿಸುತ್ತೇನೆ ಎಂದಿರುವ ಕರಂದ್ಲಾಜೆ, ‘ನನ್ನ ವಿರುದ್ಧ ಪ್ರಯೋಜಿತ ಅಪಪ್ರಚಾರ ನಡೆಯುತ್ತಿದೆ’ ಎಂದಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಶೋಭಾ ಕರಂದ್ಲಾಜೆ, “ನನ್ನ ಕ್ಷೇತ್ರದಲ್ಲಿ ನಡೆದಿರುವ ಅಭಿವೃದ್ಧಿ ಕಾರ್ಯಗಳು ಕಂಡು, ಮತದಾರರು ನನ್ನನ್ನು ಬೆಂಬಲಿಸುವುದು ಖಚಿತ. ನನ್ನ ವಿರುದ್ಧ ವದಂತಿಗಳನ್ನು ಹರಡುತ್ತಿವೆ. ಇಂತಹ ವಿಚಾರಗಳು ರಾಜಕೀಯದಲ್ಲಿ ಸಾಮಾನ್ಯ. ಅವುಗಳನ್ನು ಹೇಗೆ ಎದುರಿಸಬೇಕೆಂದು ನನಗೆ ತಿಳಿದಿದೆ” ಎಂದು ಹೇಳಿದ್ದಾರೆ.
“ಬೇರೆಯವರ ಚಾರಿತ್ರ್ಯ ಹರಣ ಮಾಡಿ, ಅವಮಾನಿಸಿ, ದುರುದ್ದೇಶಪೂರಿತ ಅಪಪ್ರಚಾರದಲ್ಲಿ ತೊಡಗಿ ಟಿಕೆಟ್ ಕೇಳಬಾರದು. ಪಕ್ಷದ ನಿಷ್ಠಾವಂತ ಕಾರ್ಯಕರ್ತರು ಈ ಮಟ್ಟಕ್ಕೆ ಇಳಿಯುವುದಿಲ್ಲ. ಅವರು ನಿಜವಾದ ಪಕ್ಷದ ಕಾರ್ಯಕರ್ತರಾಗಿದ್ದರೆ, ನನ್ನ ಅಧಿಕಾರಾವಧಿಯಲ್ಲಿ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ನನ್ನೊಂದಿಗೆ ಬಹಿರಂಗ ಚರ್ಚೆಗೆ ಬರಲಿ” ಎಂದಿದ್ದಾರೆ.
ಈ ಸುದ್ದಿ ಓದಿದ್ದೀರಾ?: 2013ರಲ್ಲಿ ಯುಪಿಎ ಸ್ಥಾಪಿಸಿದ್ದ ಚುನಾವಣಾ ಟ್ರಸ್ಟ್ ಯೋಜನೆಯಿಂದ ಬಿಜೆಪಿ ಫಲಾನುಭವಿಯಾಗಿದ್ದು ಹೇಗೆ?
ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ಆಕಾಂಕ್ಷಿಗಳ ರೇಸ್‌ನಲ್ಲಿ ಪ್ರಮೋದ್ ಮಧ್ವರಾಜ್ ಮುಂಚೂಣಿಯಲ್ಲಿದ್ದಾರೆ. “ಕ್ಷೇತ್ರದಲ್ಲಿ ಸಮೀಕ್ಷೆ ನಡೆದಿದೆ. ಸಮೀಕ್ಷೆಯಲ್ಲಿ ನಾನೇ ಮುಂಚೂಣಿಯಲ್ಲಿದ್ದೇನೆ. ನನ್ನ ಅರ್ಹತೆಯನ್ನು ನಿರ್ಣಯಿಸಿ ಟಿಕೆಟ್ ಕೇಳಿದ್ದೇನೆ. ನಾನು ಪಕ್ಷದ ಕಾರ್ಯಕರ್ತರ ಅಭಿಪ್ರಾಯವನ್ನು ಸಂಗ್ರಹಿಸಿದ್ದೇನೆ” ಎಂದು ಮಧ್ವರಾಜ್ ಹೇಳಿದ್ದಾರೆ.
ಕ್ಷೇತ್ರದಿಂದ ಸ್ಪರ್ಧಿಸುವ ಹಕ್ಕಿನ ವಿಚಾರದಲ್ಲಿ ಕರಂದ್ಲಾಜೆ ಅವರ ಸಮರ್ಥನೆ ಬಗ್ಗೆ ಪ್ರತಿಕ್ರಿಯಿಸಿದ ಅವರು, “ಶೋಭಾ ವಿರುದ್ಧ ದುರುದ್ದೇಶಪೂರಿತ ಪ್ರಚಾರ ನಡೆಯುತ್ತಿದೆ ಎಂಬುದರಲ್ಲಿ ನನಗೆ ನಂಬಿಕೆ ಇಲ್ಲ. ಟಿಕೆಟ್ ಕೇಳುವ ಹಕ್ಕು ಶೋಭಾ ಅವರಿಗೆ ಇದೆ. ಸಾಮಾನ್ಯ ಕಾರ್ಯಕರ್ತನಾಗಿ ನನಗೂ ಹಕ್ಕಿದೆ. ಅಂತಿಮವಾಗಿ ಪಕ್ಷದ ಹೈಕಮಾಂಡ್ ನಿರ್ಧರಿಸಲಿದೆ. ಯಾವ ಅಭ್ಯರ್ಥಿಗೆ ಟಿಕೆಟ್ ನೀಡಿದರೂ ಆ ವ್ಯಕ್ತಿಯ ಪರವಾಗಿ ಕೆಲಸ ಮಾಡುತ್ತೇನೆ’’ ಎಂದಿದ್ದಾರೆ.