- ‘ನನ್ನನ್ನು ಪಕ್ಷದಿಂದ ಬಿಡಿಸಲು ರೆಡಿಯಾಗಿದ್ದಾರೆ’
- ಈಶ್ವರಪ್ಪನಿಗೆ ಯಾವುದೇ ಬೆಲೆ ಇಲ್ಲ: ವಾಗ್ದಾಳಿ
ಬಿಜೆಪಿಯವರು ಹೇಗೆ ಎಂದರೆ ಅಧಿಕಾರಕ್ಕಾಗಿ ತಮ್ಮ ಪಕ್ಷಕ್ಕೆ ಕರೆದುಕೊಳ್ಳುವಾಗ ಜಾಮೂನು ಕೊಡುತ್ತಾರೆ. ಬೇಡವಾದಾಗ ವಿಷ ಕೊಡುತ್ತಾರೆ ಎಂದು ಮಾಜಿ ಸಚಿವ ಮತ್ತು ಬಿಜೆಪಿ ಶಾಸಕ ಎಸ್ ಟಿ ಸೋಮಶೇಖರ್ ಹರಿಹಾಯ್ದರು.
ಮೈಸೂರಿನಲ್ಲಿ ಸುದ್ದಿಗಾರರ ಜೊತೆ ಬುಧವಾರ ಮಾತನಾಡಿದ ಅವರು, “ನನ್ನನ್ನು ಪಕ್ಷದಿಂದ ಬಿಡಿಸಲು ರೆಡಿಯಾಗಿದ್ದಾರೆ. ನಾನು ಕ್ಷೇತ್ರದ ಅನುಕೂಲಕ್ಕಾಗಿ ಕೆಲಸ ಮಾಡುತ್ತಿದ್ದೇನೆ. ನನ್ನ ಕ್ಷೇತ್ರದ ಅಭಿವೃದ್ಧಿಗೆ ಸಿಎಂ, ಡಿಸಿಎಂ ಹತ್ತಿರ ಹೋಗುತ್ತೇನೆ. ಇದರಲ್ಲಿ ತಪ್ಪೇನಿದೆ” ಎಂದು ಪ್ರಶ್ನಿಸಿದರು.
“ನಾನು ಕಾಂಗ್ರೆಸ್ ಪಕ್ಷದಲ್ಲಿದ್ದವನು. ಅವರಾಗಿಯೇ ಬಿಜೆಪಿಗೆ ಸೇರಿಸಿಕೊಂಡರು. ಈಗ ಎಸ್ ಟಿ ಸೋಮಶೇಖರ್ ಹೋದರೆ ಹೋಗಲಿ ಎಂದು ಮಾತನಾಡುತ್ತಿದ್ದಾರೆ. ನಾನು ಸಿಎಂ, ಡಿಸಿಎಂ ಹೊಗಳುವುದನ್ನು ಸಹಿಸುತ್ತಿಲ್ಲ. ನನ್ನ ಕಚೇರಿಯಿಂದ ಕಾಂಗ್ರೆಸ್ ಗ್ಯಾರಂಟಿ ಫಾಲೋ ಅಪ್ ಮಾಡಿದ್ದೇನೆ. ಇದರಿಂದ ನನ್ನ ಕ್ಷೇತ್ರದ ಜನರಿಗೆ ಅನುಕೂಲವಾಗಿದೆ. ಇದು ಬಿಜೆಪಿಗರಿಗೆ ಸಹಿಸಲು ಆಗುತ್ತಿಲ್ಲ” ಎಂದು ಆರೋಪಿಸಿದರು.
ಈ ಸುದ್ದಿ ಓದಿದ್ದೀರಾ? ಶಿವಮೊಗ್ಗ | ಕಾಂಗ್ರೆಸ್ ಸರ್ಕಾರ ದ್ವೇಷ ರಾಜಕಾರಣ ಮಾಡುತ್ತಿದೆ: ಸಂಸದ ಬಿ.ವೈ ರಾಘವೇಂದ್ರ
“ನಾನು ಕಾಂಗ್ರೆಸ್ ಸೇರುತ್ತೇನೆ ಎಂಬುದೆಲ್ಲಾ ಸುಳ್ಳು. ಯಡಿಯೂರಪ್ಪ ಅವರ ಮಾತು ನಂಬಿ ಬಿಜೆಪಿಯಲ್ಲಿದ್ದೇನೆ. ಆದರೆ ಕೆಲವರು ನನ್ನನ್ನು ಪಕ್ಷದಿಂದ ಓಡಿಸುವ ಕೆಲಸ ಮಾಡುತ್ತಿದ್ದಾರೆ. ಕಳೆದ ಚುನಾವಣೆಯಲ್ಲಿ ನಮ್ಮ ಪಕ್ಷದವರೇ ನನ್ನ ವಿರುದ್ಧ ಕೆಲಸ ಮಾಡಿದರು. ಈ ಬಗ್ಗೆ ದಾಖಲೆ ಸಮೇತ ದೂರು ಕೊಟ್ಟೆ, ಆದರೂ ಯಾವುದೇ ರೀತಿಯ ಪ್ರಯೋಜನವಾಗಲಿಲ್ಲ” ಎಂದು ಬೇಸರ ವ್ಯಕ್ತಪಡಿಸಿದರು.
ಈಶ್ವರಪ್ಪ ವಿರುದ್ಧ ಕಿಡಿ
ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ವಿರುದ್ಧ ಕಿಡಿಕಾರಿದ ಅವರು, “ಈಶ್ವರಪ್ಪನಿಗೆ ಯಾವುದೇ ಬೆಲೆ ಇಲ್ಲ. ಬೆಲೆ ಇಲ್ಲದವರ ಹೇಳಿಕೆಗಳಿಗೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ನನ್ನನ್ನು ಪಕ್ಷದಿಂದ ಬಿಟ್ಟು ಹೋಗಲಿ ಅಂತ ಹೇಳಲು ಈಶ್ವರಪ್ಪ ಯಾರು? ಅವರೇನು ರಾಜ್ಯಾಧ್ಯಕ್ಷನಾ? ಈಶ್ವರಪ್ಪನನ್ನು ನಂಬಿ ನಾನು ಪಕ್ಷಕ್ಕೆ ಬರಲಿಲ್ಲ. ನಾನು ಯಡಿಯೂರಪ್ಪರನ್ನು ನಂಬಿ ಪಕ್ಷಕ್ಕೆ ಬಂದಿದ್ದೇನೆ” ಎಂದು ತಿರುಗೇಟು ನೀಡಿದರು.