ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಆರ್.ಸಿ.ಬಿ ವಿಜಯೋತ್ಸವದ ಸಂದರ್ಭದಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಉಂಟಾದ ಕಾಲ್ತುಳಿತಕ್ಕೆ ಸಂಬಂಧಿಸಿದಂತೆ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಜಾನ್ ಮೈಕಲ್ ಕುನ್ಹಾ ಅವರ ನೇತೃತ್ವದಲ್ಲಿ ಏಕ ಸದಸ್ಯ ವಿಚಾರಣಾ ಆಯೋಗದ ವರದಿಯನ್ನು ಅಂಗೀಕರಿಸಲಾಗಿದೆ.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಉಂಟಾದ ಕಾಲ್ತುಳಿತಕ್ಕೆ ಸಂಬಂಧಿಸಿದಂತೆ ಸಲ್ಲಿಸಿಕೆಯಾದ ವರದಿಯಲ್ಲಿ ಉಲ್ಲೇಖಿಸಿರುವ ಖಾಸಗಿ ಸಂಸ್ಥೆಗಳ ಹಾಗೂ ಸರ್ಕಾರಿ ಅಧಿಕಾರಿಗಳ ವಿರುದ್ಧ ಕೈಗೊಳ್ಳಬೇಕಿರುವ ಕ್ರಮಗಳನ್ನು ಕಾನೂನು ರೀತ್ಯಾ ಕ್ರಮ ಕೈಗೊಳ್ಳಲು ಹಾಗೂ ಸರ್ಕಾರಿ ಅಧಿಕಾರಿಗಳ ವಿರುದ್ಧ ಇಲಾಖಾ ವಿಚಾರಣೆಯನ್ನು ನಡೆಸಲು ಸಚಿವ ಸಂಪುಟ ನಿರ್ಧರಿಸಿದೆ.
ಆರ್.ಸಿ.ಬಿ, ಡಿ.ಎನ್. ಎ ಎಂಟರ್ ಟೈನ್ ಮೆಂಟ್ ನೆಟ್ ವರ್ಕ್ಸ್ ಪ್ರೈವೇಟ್ ಲಿಮಿಟೆಡ್, ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್, , ಕೆ ಎಸ್. ಸಿ ಎ ಅಧ್ಯಕ್ಷ ರಘುರಾಮ್ ಭಟ್, ಕೆ ಎಸ್ ಸಿ ಎ ಮಾಜಿ ಅಧ್ಯಕ್ಷ, ಎ ಶಂಕರ್, ಕೆ ಎಸ್ ಸಿ ಎ ಮಾಜಿ ಖಜಾಂಚಿ ಜಯರಾಮ್
ಇ.ಎಸ್, ರಾಜೇಶ್ ಮೆನನ್, ಉಪಾಧ್ಯಕ್ಷರು, ಆರ್.ಸಿ.ಬಿ.ಎಸ್.ಪಿ ಎಲ್, ಡಾ: ವೆಂಕಟವರ್ಧನ್, ಎಂ.ಡಿ. ಡಿಎನ್ಎ ಎಂಟರ್ಟೈನ್ಮೆಂಟ್ ನೆಟ್ ವರ್ಕ್ಸ್ ಇವರ ಮೇಲೆ ಕ್ರಮ ಜರುಗಿಸಲು ತೀರ್ಮಾನಿಸಲಾಗಿದೆ.
ಸಚಿವ ಸಂಪುಟದ ಪ್ರಮುಖ ತೀರ್ಮಾನಗಳು
ಅಂಬ್ಯುಲೆನ್ಸ್ ನಿರ್ವಹಣೆಗೆ ತಿದ್ದುಪಡಿ ವಿಧೇಯಕ- “ಕರ್ನಾಟಕ ರಾಜ್ಯ ಖಾಸಗಿ ವೈದ್ಯಕೀಯ ಸಂಸ್ಥೆಗಳ (ತಿದ್ದುಪಡಿ) ವಿಧೇಯಕ, 2025”ಕ್ಕೆ ಅನುಮೋದನೆ ನೀಡಲಾಗಿದೆ.
ಔಷಧ ಖರೀದಿಗೆ ಅನುಮೋದನೆ: 2025-26ನೇ ಸಾಲಿಗೆ ಸಾರ್ವಜನಿಕ ಆರೋಗ್ಯ ಸಂಸ್ಥೆಗಳ ಬೇಡಿಕೆಗಳಿಗನುಸಾರವಾಗಿ 890 ಔಷಧಗಳು, ಉಪಭೋಗ್ಯ ವಸ್ತುಗಳು ಹಾಗೂ ರಾಸಾಯನಿಕಗಳನ್ನು ರೂ.880.68 ಕೋಟಿಗಳ ಅಂದಾಜು ವೆಚ್ಚದಲ್ಲಿ ಕೆಟಿಪಿಪಿ ಕಾಯ್ದೆ 1999 ಹಾಗೂ ಕೆಟಿಪಿಪಿ ನಿಯಮ 2000 ಗಳನ್ನು ಅನುಸರಿಸಿ ಟೆಂಡರ್ ಮೂಲಕ ಸಂಗ್ರಹಿಸಿ ಸರಬರಾಜು ಮಾಡಲು ಹಾಗೂ ಅಗತ್ಯ ವಿರುವ ಅನುದಾನವನ್ನು ಒದಗಿಸಲು ಸಚಿವ ಸಂಪುಟ ನಿರ್ಧರಿಸಿದೆ.
ಜೀವಾವಧಿ ಶಿಕ್ಷಾ ಬಂದಿಗಳ ಬಿಡುಗಡೆ: ರಾಜ್ಯದ ವಿವಿಧ ಕಾರಾಗೃಹಗಳಲ್ಲಿರುವ ನಮೂದಿಸಿರುವ 46 ಜೀವಾವಧಿ ಶಿಕ್ಷಾ ಬಂದಿಗಳನ್ನು ಸನ್ನಡತೆಯ ಆಧಾರದ ಮೇಲೆ ಅವಧಿಪೂರ್ವ ಬಿಡುಗಡೆಗೊಳಿಸಲು ಹಾಗೂ ರಾಜ್ಯದ ವಿವಿಧ ಕಾರಾಗೃಹಗಳಲ್ಲಿರುವ 03 ಶಿಕ್ಷಾ ಬಂದಿಗಳನ್ನು ಕೇಂದ್ರ ಗೃಹ ಮಂತ್ರಾಲಯದ ಸಹಮತಿ ದೊರಕಿದ ನಂತರ ಭಾರತ ಸಂವಿಧಾನದ ಅನುಚ್ಛೇದ-161ರ ಪ್ರಕಾರ ಸನ್ನಡತೆಯ ಆಧಾರದ ಮೇಲೆ ಅವಧಿಪೂರ್ವ ಬಿಡುಗಡೆಗೊಳಿಸಲು; ಸಚಿವ ಸಂಪುಟ ನಿರ್ಣಯಿಸಿದೆ.
ಗಿಗ್ ಕಾರ್ಮಿಕರ ಸುಗ್ರೀವಾಜ್ಞೆ ವಿಧೇಯಕವಾಗಿ ಪರಿವರ್ತಿಸಲು ನಿರ್ಣಯ
ಕರ್ನಾಟಕ ಪ್ಲಾಟ್‌ಫಾರ್ಮ್ ಆಧಾರಿತ ಗಿಗ್ ಕಾರ್ಮಿಕರ (ಸಾಮಾಜಿಕ ಭದ್ರತೆ ಹಾಗೂ ಕಲ್ಯಾಣ) ವಿಧೇಯಕ-2025 (Earlier Ordinance Dated: 30.05.2025) ಹಾಗೂ ಸದರಿ ವಿಧೇಯಕವನ್ನು ಮುಂಬರುವ ವಿಧಾನಮಂಡಲದ ಅಧಿವೇಶನದಲ್ಲಿ ಮಂಡಿಸಲು; ಸಚಿವ ಸಂಪುಟವು ನಿರ್ಣಯಿಸಿದೆ.
ಸೂಳೆಕೆರೆ ಆಧುನೀಕರಣ: ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಸೂಳೆಕೆರೆಯ ಜೀರ್ಣೋದ್ಧಾರ ಕಾಮಗಾರಿಯನ್ನು ರೂ.34.00 ಕೋಟಿಗಳ ಅಂದಾಜು ಮೊತ್ತದಲ್ಲಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡಲು; ಸಚಿವ ಸಂಪುಟ ನಿರ್ಧರಿಸಿದೆ.
ಮದಗ-ಮಾಸೂರು ಕೆರೆ ಆಧುನೀಕರಣ: ಹಾವೇರಿ ಜಿಲ್ಲೆ, ರಟ್ಟಿಹಳ್ಳಿ ತಾಲ್ಲೂಕು ಮದಗ-ಮಾಸೂರು ಕೆರೆಯ ಎಡದಂಡೆ ಹಾಗೂ ಬಲದಂಡೆ ಮುಖ್ಯ ನಾಲೆಗಳ ಆಧುನೀಕರಣ ಕಾಮಗಾರಿಯನ್ನು ರೂ.52.20 ಕೋಟಿಗಳ ಅಂದಾಜು ಮೊತ್ತದಲ್ಲಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡಲು; ಸಚಿವ ಸಂಪುಟ ನಿರ್ಣಯಿಸಿದೆ.
ನಂಜಾಪುರ ಏತ ನೀರಾವರಿ ಆಧುನೀಕರಣ: ಮೈಸೂರು ಜಿಲ್ಲೆ, ಟಿ.ನರಸೀಪುರ ತಾಲ್ಲೂಕಿನ ನಂಜಾಪುರ ಏತ ನೀರಾವರಿ ಯೋಜನೆಯ ಆಧುನೀಕರಣ ಕಾಮಗಾರಿಗಳ ರೂ.20.00 ಕೋಟಿಗಳ ಅಂದಾಜು ಮೊತ್ತದಲ್ಲಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡಲು; ಸಚಿವ ಸಂಪುಟ ನಿರ್ಧರಿಸಿದೆ.
ಸೂಳೆಕೆರೆ ಉತ್ತರ ನಾಲೆಗಳ ಅಭಿವೃದ್ಧಿ: ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಸೂಳೆಕೆರೆಯ ಉತ್ತರ ನಾಲೆಗಳ ಅಭಿವೃದ್ಧಿ ಕಾಮಗಾರಿಯನ್ನು ರೂ.47.75 ಕೋಟಿಗಳ ಅಂದಾಜು ಮೊತ್ತದಲ್ಲಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡಲು; ಸಚಿವ ಸಂಪುಟ ನಿರ್ಣಯಿಸಿದೆ.
ಬಾಲ್ಯವಿವಾಹ ಅಷ್ಟೇ ಅಲ್ಲ ನಿಶ್ಚಿತಾರ್ಥವು ಶಿಕ್ಷಾರ್ಹ
“ಬಾಲ್ಯವಿವಾಹ ನಿಷೇಧ (ಕರ್ನಾಟಕ ತಿದ್ದುಪಡಿ) ವಿಧೇಯಕ, 2025”ಕ್ಕೆ ಅನುಮೋದನೆ; ಮತ್ತು ಸದರಿ ವಿಧೇಯಕವನ್ನು ವಿಧಾನ ಮಂಡಲದಲ್ಲಿ ಮಂಡಿಸಲು; ಸಚಿವ ಸಂಪುಟ ನಿರ್ಧರಿಸಿದೆ.
215.37 ಕೋಟಿ ರೂ.ಗಳ ವೆಚ್ಚದಲ್ಲಿ ಸವದತ್ತಿ ಯಲ್ಲಮ್ಮ ಗುಡ್ಡ ಅಭಿವೃದ್ಧಿ
ಯಲ್ಲಮ್ಮನ ಗುಡ್ಡದ ಅಭಿವೃದ್ಧಿಗೆ ಸಂಬಂಧಿಸಿದಂತೆ ಸಾಸ್ಕಿ ಯೋಜನೆಯಡಿ 100 ಕೋಟಿ, ಪ್ರಸಾದ ಯೋಜನೆಯಡಿ 18 ಕೋಟಿ, ರೇಣುಕಾ ಯಲ್ಲಮ್ಮ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರದ ನಿಧಿಯಿಂದ 97 ಕೋಟಿ ಪ್ರವಾಸೋದ್ಯಮ ಇಲಾಖೆಯ 15 ಕೋಟಿ ಸೇರಿದಂತೆ 215.37 ಕೋಟಿ ರೂ.ಗಳ ಮೊತ್ತದಲ್ಲಿ ಕೆಟಿಟಿಪಿ ಕಾಯ್ದೆಯಡಿ ಅನುಷ್ಠಾನ ಗೊಳಿಸಲು ಡಿಪಿಎಆರ್ ಗೆ ಸರ್ಕಾರದ ಅನುಮೋದನೆ ನೀಡಲು ಪ್ರವಾಸೋದ್ಯಮ ಇಲಾಖೆಯ ಪ್ರಸ್ತಾವನೆಯನ್ನು ಸಲ್ಲಿಸಿತ್ತು. ಜಿಲ್ಲಾಧಿಕಾರಿಗಳನ್ನು ಅನುಷ್ಠಾನ ಅಧಿಕಾರಿಯನ್ನಾಗಿ ನೇಮಿಸಲು ಹಾಗೂ ಯೋಜನೆ ಕೈಗೆತ್ತಿಕೊಳ್ಳಲು ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.
ರಾಯಚೂರಿನ ರಾಜೀವ್ ಗಾಂಧಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಆವರಣದಲ್ಲಿ ಕಿದ್ವಾಯಿ ಪೆರಿಫೆರಲ್ ಕ್ಯಾನ್ಸರ್ ಚಿಕಿತ್ಸಾ ಘಟಕವನ್ನು 50.00 ಕೋಟಿಗಳ ವೆಚ್ಚದಲ್ಲಿ ಸ್ಥಾಪಿಸಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಬೆಂಗಳೂರಿನ ಇಂದಿರಾಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆಯ 450 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆಯನ್ನು ಸ್ಥಾಪಿಸಲು ಹೆಚ್ಚುವರಿಯಾಗಿ ಅವಶ್ಯವಿರುವ ವೈದ್ಯಕೀಯ ಉಪಕರಣ, ಪೀಠೋಪಕರಣ ಹಾಗೂ ಇತರೆ ಬಾಬುಗಳ ಒಟ್ಟಾರೆ ರೂ.62.00 ಕೋಟಿಗಳ ಅಂದಾಜು ವೆಚ್ಚಕ್ಕೆ ಆಡಳಿತಾತ್ಮಕ ಅನುಮೋದನೆಯನ್ನು ಸಚಿವ ಸಂಪುಟ ನೀಡಿದೆ.
ಬೆಳಗಾವಿ ಜಿಲ್ಲೆ, ಸವದತ್ತಿ ತಾಲ್ಲೂಕಿನಲ್ಲಿ ಅಸ್ತಿತ್ವದಲ್ಲಿರುವ ಯರಗಟ್ಟಿ ಏತನೀರಾವರಿ ಯೋಜನೆಯ ನವೀಕರಣ ಕಾಮಗಾರಿಗೆ 25 ಕೋಟಿ ರೂಗಳಲ್ಲಿ ಕೈಗೊಳ್ಳಲು ಹಾಗೂ ಇದೇ ತಾಲ್ಲೂಕಿನಲ್ಲಿ ರೇಣುಕಾ ಏತ ನೀರಾವರಿಯ ನವೀಕರಣ ಕಾಮಗಾರಿಗೆ 20 ಕೋಟಿ ರೂಗಳಲ್ಲಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆಯನ್ನು ಸಚಿವ ಸಂಪುಟ ನೀಡಿದೆ.