ವಿಧಾನ ಮಂಡಲದ ಅಧಿವೇಶನ ಇಂದಿನಿಂದ (ಮಾ.3) ಆರಂಭವಾಗಲಿದೆ. ಸೋಮವಾರ (ಇಂದು) ಬೆಳಗ್ಗೆ ರಾಜ್ಯಪಾಲರ ಭಾಷಣದ ನಂತರ ವಿಧಾನಸಭೆ, ವಿಧಾನ ಪರಿಷತ್ ಪ್ರತ್ಯೇಕ ಸಮಾವೇಶಗೊಂಡು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಸೇರಿದಂತೆ ಇತ್ತೀಚೆಗೆ ನಿಧನರಾದ ಗಣ್ಯರಿಗೆ ಸಂತಾಪ ಸೂಚಿಸಲಿದೆ. ಅಲ್ಲದೇ ಕಲಾಪವನ್ನು ಸುಗಮವಾಗಿ ನಡೆಸುವ ಹಾಗೂ ಉಭಯ ಸದನಗಳ ನಡುವೆ ಸಮನ್ವಯ ಸಾಧಿಸುವ ಸಲುವಾಗಿ ಮಧ್ಯಾಹ್ನದ ನಂತರ ಜಂಟಿ ಕಲಾಪ ಸಲಹಾ ಸಮಿತಿ ಸಭೆಯೂ ನಡೆಯಲಿದೆ.
ಮಾ.4ರಿಂದ ಮಾ.6ರ ವರೆಗೆ ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ಮೇಲೆ ಚರ್ಚೆ ನಡೆಯಲಿದೆ. ಈ ವೇಳೆ ಆಡಳಿತ-ಪ್ರತಿಪಕ್ಷಗಳ ನಡುವೆ ಆರೋಪ-ಪ್ರತ್ಯಾರೋಪಗಳು ನಡೆಯುವ ನಿರೀಕ್ಷೆ ಇದೆ.
ಈಗಾಗಲೇ ಪ್ರತಿಪಕ್ಷ ಬಿಜೆಪಿ ಹಾಗೂ ಜೆಡಿಎಸ್ ಪ್ರಸ್ತಾಪಿಸಿರುವಂತೆ ಸಾಲ ನೀಡುವ ನೆಪದಲ್ಲಿ ಮೈಕ್ರೋ ಫೈನಾನ್ಸ್ ಕಂಪೆನಿಗಳ ಕಿರುಕುಳ, ಸರಕಾರಿ ಆಸ್ಪತ್ರೆಗಳಲ್ಲಿ ಬಾಣಂತಿಯರ ಸರಣಿ ಸಾವು,ಕಾನೂನು ಮತ್ತು ಸುವ್ಯವಸ್ಥೆ ವಿಚಾರ, ನಮ್ಮ ಮೆಟ್ರೋ ರೈಲು ಪ್ರಯಾಣ ದರ ಏರಿಕೆ ಸೇರಿದಂತೆ ಇನ್ನಿತರ ವಿಚಾರಗಳನ್ನು ಪ್ರಸ್ತಾಪಿಸಿ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಸನ್ನದ್ದವಾಗಿವೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಮೋದಿಯ ‘ಗುಜರಾತ್ ಮಾಡೆಲ್’ ಬಚ್ಚಿಟ್ಟ ಸತ್ಯಗಳು!
ಮೈಸೂರಿನ ಉದಯಗಿರಿ ಪೊಲೀಸ್ ಠಾಣೆ ಮೇಲೆ ಕಲ್ಲು ತೂರಾಟದ ಘಟನೆ, ಬೆಳಗಾವಿಯಲ್ಲಿ ಕನ್ನಡ ಮಾತನಾಡಿದ ನಿರ್ವಾಹಕನ ಮೇಲೆ ಹಲ್ಲೆ, ಮಸಿ ಬಳಿದಿರುವ ಪ್ರಕರಣ ಸದನದಲ್ಲಿ ಪ್ರತಿಧ್ವನಿಸುವ ಸಾಧ್ಯತೆಗಳಿವೆ. ಜತೆಗೆ ಬಿಬಿಎಂಪಿ ವಿಭಜಿಸಿ ‘ಗ್ರೇಟರ್ ಬೆಂಗಳೂರು ಪ್ರಾಧಿಕಾರ’ ರಚನೆ ಮಾಡುವುದು, ಬಿಬಿಎಂಪಿಯನ್ನು ವಿಭಜಿಸಲು ಶಾಸಕ ರಿಝ್ವಾನ್ ಅರ್ಶದ್ ನೇತೃತ್ವದ ಜಂಟಿ ಪರಿಶೀಲನಾ ಸಮಿತಿ ನೀಡಿರುವ ವರದಿಯೂ ಚರ್ಚೆಗೆ ಬರಲಿದೆ ಎಂದು ಹೇಳಲಾಗುತ್ತಿದೆ.
ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾ.7ಕ್ಕೆ 2025-26ನೇ ಸಾಲಿನ ಆಯವ್ಯಯ ಮಂಡನೆ ಮಾಡಲಿದ್ದು, ಮಾ.10ರಿಂದ ಬಜೆಟ್ ಮೇಲಿನ ಚರ್ಚೆ ನಡೆಯಲಿದೆ. ಇಲಾಖೆವಾರು ಬೇಡಿಕೆಗಳ ಮೇಲೆ ಚರ್ಚೆ ನಡೆಯಲಿದ್ದು, ಆಡಳಿತ ಮತ್ತು ಪ್ರತಿಪಕ್ಷಗಳ ಶಾಸಕರು ಚರ್ಚೆಯಲ್ಲಿ ಭಾಗವಹಿಸಲಿದ್ದಾರೆ.
ಅಧಿವೇಶನ ಆರಂಭದ ಬಳಿಕ ಸ್ಪೀಕರ್ ಅಧ್ಯಕ್ಷತೆಯಲ್ಲಿ ಸಿಎಂ, ವಿಪಕ್ಷ ನಾಯಕರ ಉಪಸ್ಥಿತಿಯಲ್ಲಿ ಕಲಾಪ ಸಲಹಾ ಸಮಿತಿ(ಬಿಎಸ್‍ಸಿ) ಸಭೆ ನಡೆಯಲಿದೆ. ಆ ನಂತರ ಪ್ರಶ್ನೋತ್ತರ ಕಲಾಪವೂ ಸೇರಿದಂತೆ ಇನ್ನಿತರ ವಿಚಾರಗಳು ಚರ್ಚೆಗೆ ಸಮಯ ನಿಗದಿಯಾಗಲಿದೆ. ನಾಳೆಯಿಂದ ಮಾ.21ರವರೆಗೆ ಒಟ್ಟು 14 ದಿನಗಳ ಕಾಲ ಅಧಿವೇಶನ ಕಾರ್ಯಕಲಾಪಗಳು ಜರುಗಲಿವೆ.
