- ಸರ್ಕಾರ ಅಸ್ತಿತ್ವಕ್ಕೆ ಬಂದು ನೂರು ದಿನ ಕಳೆದರೂ ವಿರೋಧ ಪಕ್ಷ ನಾಯಕರಿಲ್ಲ
- ವಿರೋಧ ಪಕ್ಷ ನಾಯಕ ಇಲ್ಲದಿರುವುದು ಕರ್ನಾಟಕ ವಿಧಾನಸಭೆಗೆ ಅವಮಾನ
ರಾಜ್ಯದಲ್ಲಿ ಒಂದು ಸರ್ಕಾರ ಅಸ್ತಿತ್ವಕ್ಕೆ ಬಂದು ನೂರು ದಿನ ಕಳೆದರೂ ವಿರೋಧ ಪಕ್ಷ ನಾಯಕರನ್ನು ಆಯ್ಕೆ ಮಾಡದ ಬಿಜೆಪಿ ಪಕ್ಷದಿಂದ ಕರ್ನಾಟಕ ವಿಧಾನಸಭೆಗೆ ಹಾಗೂ ರಾಜ್ಯದ ಜನತೆಗೆ ಅವಮಾನ ಆಗ್ತಾ ಇದೆ, ಮೊದಲು ಇದರಿಂದ ಮುಕ್ತಿ ನೀಡಲಿ ಎಂದು ಕಂದಾಯ ಸಚಿವ ಕೃಷ್ಣಭೈರೇಗೌಡ ಹೇಳಿದರು.
ಬೀದರ್ ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, “ರಾಜ್ಯದಲ್ಲಿ ಬಿಜೆಪಿ ನಾವಿಕನಿಲ್ಲದ ದೋಣಿಯಾಗಿದೆ, ಅದು ಅಲುಗಾಡುತ್ತಿದೆ, ಹೀಗಾಗಿ ರಾಜ್ಯದಲ್ಲಿ ಹೊಸ ಸರ್ಕಾರ ರಚನೆಯಾಗಿ ನೂರು ದಿನ ಕಳೆದರೂ, ಕರ್ನಾಟಕದಲ್ಲಿ ಒಬ್ಬ ವಿರೋಧ ಪಕ್ಷದ ನಾಯಕರನ್ನು ನೇಮಕ ಮಾಡಲು ಆಗದೇ ಇರುವಷ್ಟು ದುಸ್ಥಿತಿಯಲ್ಲಿ ಬಿಜೆಪಿ ಪಕ್ಷದವರಿದ್ದಾರೆ. ನಾಯಕನಿಲ್ಲದೇ ಇವ್ರು ಹೇಗೆ ಕೆಲಸ ಮಾಡ್ತಾರೆ” ಎಂದು ಪ್ರಶ್ನಿಸಿದರು.
“ಸರ್ಕಾರ ರಚನೆಯಾಗಿ ನೂರು ದಿನ ಕಳೆದರೂ ಸಾಂವಿಧಾನಿಕ ಹುದ್ದೆ ವಿರೋಧ ಪಕ್ಷವನ್ನು ಭರ್ತಿ ಮಾಡಲು ಸಾಧ್ಯವಾಗಿಲ್ಲ. ನಾವು ಸಚಿವ ಸಂಪುಟ ರಚಿಸಿ ಬಜೆಟ್ ಕೂಡ ಮಂಡಿಸಿದ್ದೇವೆ, ಆದರೂ ವಿರೋಧ ಪಕ್ಷದ ಖುರ್ಚಿ ಖಾಲಿ ಬಿದ್ದಿದೆ. ಬಿಜೆಪಿ ಪಕ್ಷದ ಅಂತರೀಕ ಕಚ್ಚಾಟದಿಂದ ಅವರ ಪಕ್ಷದ ಶಾಸಕರೇ ಪಕ್ಷದ ಮೇಲೆ ವಿಶ್ವಾಸ ಕಳೆದುಕೊಂಡು ಬೇರೆ ಕಡೆ ಮುಖ ಮಾಡಿದ್ದಾರೆ. ಈ ಎಲ್ಲಾ ಕಾರಣದಿಂದ ಬಿಜೆಪಿ ಗೊಂದಲದ ಗೂಡಾಗಿದೆ. ರಾಜ್ಯದಲ್ಲಿ ಸುಭದ್ರ ಹಾಗೂ ದೃಢ ಆಡಳಿತ ನೀಡಲು ಮುಂದಾದ ಕಾಂಗ್ರೇಸ್ ನೇತ್ರತ್ವದ ಸರ್ಕಾರದ ಕಡೆ ವಿವಿಧ ಪಕ್ಷಗಳ ಶಾಸಕರು ಕಾಂಗ್ರೇಸ್ ಸೇರಲು ಬಯಸಿರಬಹುದು” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ ? ಬೀದರ್ | ಪ್ರಕೃತಿ ವಿಕೋಪ ಪರಿಹಾರಕ್ಕೆ 21.34 ಕೋಟಿ ಅನುದಾನ ಲಭ್ಯ: ಸಚಿವ ಕೃಷ್ಣ ಭೈರೇಗೌಡ
“ಉಳಿದ ಪಕ್ಷದಗಳ ಶಾಸಕರು ಕಾಂಗ್ರೇಸ್ ಸೇರುವ ಬಗ್ಗೆ ನನಗೆ ಅಧಿಕೃತ ಮಾಹಿತಿ ಇಲ್ಲ, ಬಂದರೆ ಅದರ ಸಾಧಕ-ಭಾದಕವನ್ನು ಪಕ್ಷದ ಅಧ್ಯಕ್ಷರು, ಮುಖ್ಯಮಂತ್ರಿಗಳು ತೀರ್ಮಾನ ಮಾಡುವುದು. ಬರದೇ ಇದ್ರೂ ನಮಗೇನು ಕೊರತೆ ಇಲ್ಲ. ರಾಜ್ಯದ ಜನತೆ ಕಾಂಗ್ರೇಸ್ ಗೆ ಅಭೂತಪೂರ್ವ ಬಹುಮತ ನೀಡಿದ್ದಾರೆ. ನಾವು ಸುಭದ್ರ ಸರ್ಕಾರ ನಡೆಸುತ್ತಿದ್ದೇವೆ” ಎಂದರು.