ರಾಜ್ಯದ44 ಇಲಾಖೆಗಳಲ್ಲಿ ಖಾಲಿ ಇರುವ 2.72 ಲಕ್ಷಕ್ಕೂ ಹೆಚ್ಚು ಹುದ್ದೆಗಳಿಗ ನೇಮಕಾತಿ ಮಾಡುವ ಕುರಿತು ರಾಜ್ಯ ಬಜೆಟ್ ನಲ್ಲಿ ಯಾವುದೇ ಕ್ರಮಗಳಿಲ್ಲ. ಯುವಜನರಿಗೆ ಉದ್ಯೋಗದ ಭರವಸೆ ನೀಡಿಲ್ಲ. ಇದು ಯುವಜನ ವಿರೋಧಿ ಬಜೆಟ್ ಆಗಿದೆ ಎಂದು ಎಐಡಿವೈಒ ಅಸಮಾಧಾನ ವ್ಯಕ್ತಪಡಿಸಿದೆ.
2025-26ನೇ ಸಾಲಿನ ರಾಜ್ಯ ಬಜೆಟ್‌ಅನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ್ದಾರೆ. ಅವರ ಮಂಡಿಸಿದ ಬಜೆಟ್ ಕುರಿತು ಎಐಡಿವೈಒ ರಾಜ್ಯಾಧ್ಯಕ್ಷ ಶರಣಪ್ಪ ಉದ್ಬಾಳ್ ಮತ್ತು ರಾಜ್ಯ ಕಾರ್ಯದರ್ಶಿ ಸಿದ್ದಲಿಂಗ ಬಾಗೇವಾಡಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಬಜೆಟ್‌ನಲ್ಲಿ ಯುವಜನರಿಗೆ ಯಾವುದೇ ಭರವಸೆಗಳಿಲ್ಲ ಎಂದು ಹೇಳಿದ್ದಾರೆ.
“ಉನ್ನತ ಶಿಕ್ಷಣದಲ್ಲಿ ಕೇವಲ 2,000 ಬೋಧಕ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳುವುದನ್ನು ಹೊರತುಪಡಿಸಿ ಉಳಿದ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಯ ಕುರಿತು ಯಾವುದೇ ಪ್ರಸ್ತಾಪವಿಲ್ಲ. ನರ್ಸಿಂಗ್ ಕಲಿತ ವಿದ್ಯಾರ್ಥಿಗಳಿಗೆ ಆರೋಗ್ಯ ಇಲಾಖೆಯಲ್ಲಿ ಉದ್ಯೋಗ ನೀಡುವ ಬದಲು ಬಜೆಟ್‌ನಲ್ಲಿ ನರ್ಸಿಂಗ್ ವಿದ್ಯಾರ್ಥಿಗಳಿಗೆ ವಿದೇಶಿ ಭಾಷೆಗಳನ್ನು ಕಲಿಸಿ ವಿದೇಶದಲ್ಲಿ ಉದ್ಯೋಗ ಮಾಡಲು ಕಳಿಸುವ ಮೂಲಕ ಸರ್ಕಾರವೇ ಪ್ರತಿಭಾ ಪಲಾಯನಕ್ಕೆ ಎಡೆ ಮಾಡಿಕೊಡುತ್ತಿದೆ. ಸರ್ಕಾರದ ಈ ಧೋರಣೆ ಖಂಡಿನೀಯ” ಎಂದಿದ್ದಾರೆ.
“ಸರ್ಕಾರಿ ಇಲಾಖೆಗಳಲ್ಲಿ ಗುತ್ತಿಗೆ, ಹೊರಗುತ್ತಿಗೆ, ಗೌರವಧನದ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ೩ ಲಕ್ಷಕ್ಕೂ ಅಧಿಕ ಸಿಬ್ಬಂದಿಗಳಿಗೆ ಸೇವಾ ಭದ್ರತೆ ಹಾಗೂ ಉದ್ಯೋಗ ಭದ್ರತೆ ಒದಗಿಸುವ ಬದಲು, ನಗದುರಹಿತ ಚಿಕಿತ್ಸಾ ಸೌಲಭ್ಯದ ಹೆಸರಿನಲ್ಲಿ ಅವರಿಂದಲೇ ವಂತಿಕೆ ಸಂಗ್ರಹ ಮಾಡಲು ಹೊರಟಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ. 2023ರ ಚುನಾವಣೆಯಲ್ಲಿ ಕಾಂಗ್ರೆಸ್ ತಮ್ಮ ಪ್ರಣಾಳಿಕೆಯಲ್ಲಿ ಹೇಳಿದಂತೆ ಸರ್ಕಾರಿ ಇಲಾಖೆಗಳಲ್ಲಿ ಖಾಲಿ ಇರುವ ಎಲ್ಲಾ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳುವ ಕುರಿತು ಸೂಕ್ತಕ್ರಮಗಳು ಈ ಬಜೆಟ್‌ನಲ್ಲಿಯೂ ಇಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
“ವ್ಯಾಪಕವಾಗಿ ಬೆಳೆಯುತ್ತಿರುವ ಗಿಗ್ ಆರ್ಥಿಕತೆಗೆ, ಗಿಗ್ ಕಾರ್ಮಿಕರ ಹಿತ ಕಾಪಾಡಲು ಕಾನೂನು ರೂಪಿಸುವುದಾಗಿ ಹೇಳಿದ್ದ ಸರ್ಕಾರ ಅದರ ಕುರಿತು ಈ ಬಜೆಟ್‌ನಲ್ಲಿ ಯಾವುದೇ ಪ್ರಸ್ತಾಪವನ್ನು ಮಾಡದಿರುವುದು ಖಂಡನೀಯ. ಇತ್ತೀಚಿಗೆ ನಡೆದ ಇನ್ವೆಸ್ಟ್ ಕರ್ನಾಟಕ -2025ರ ಮೂಲಕ ಬಂಡವಾಳಗಾರರು ಲಕ್ಷಾಂತರ ಕೋಟಿ ರೂ. ಬಂಡವಾಳವನ್ನು ರಾಜ್ಯದಲ್ಲಿ ಹೂಡಿಕೆ ಮಾಡುತ್ತಿದ್ದಾರೆ. ಈ ಮೂಲಕ ಮುಂದಿನ 5 ವರ್ಷಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಉದ್ಯೋಗ ಸೃಷ್ಟಿಯಾಗಲಿದೆ ಹಾಗೂ ಹೊಸ ಕೈಗಾರಿಕಾ ನೀತಿಯಿಂದ ಮುಂದಿನ 5 ವರ್ಷಗಳಲ್ಲಿ 20 ಲಕ್ಷಕ್ಕೂ ಅಧಿಕ ಉದ್ಯೋಗ ಸೃಷ್ಟಿಯಾಗುವ ಸಾಧ್ಯತೆಗಳಿವೆ ಎಂದು ಆಶ್ವಾಸನೆಯ ಮಾತನ್ನಾಡಿ, ಬಂಡವಾಳಗಾರರಿಗೆ ವಿವಿಧ ಉತ್ತೇಜಕಗಳನ್ನು ನೀಡಲು ಹೊರಟಿರುವುದು ಸರ್ಕಾರ ಯಾರ ಪರವಾಗಿದೆ ಎಂಬುದನ್ನು ಸೂಚಿಸುತ್ತದೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ
“ನಿಜವಾಗಿಯೂ ಯಾರ ಪರವಾಗಿದೆ ಎನ್ನುವುದನ್ನು ತೋರಿಸುತ್ತದೆ. ಬಂಡವಾಳಶಾಹಿಗಳ ಉದ್ದೇಶ ಅತ್ಯಧಿಕ ಲಾಭವೇ ಹೊರತು ಉದ್ಯೋಗ ಸೃಷ್ಟಿ ಅವರ ಆದ್ಯತೆಯಲ್ಲ ಎನ್ನುವುದು ಜಗಜ್ಜಾಹೀರಾಗಿದೆ. ಈಗಾಗಲೇ ಮದ್ಯದ ಕುಡಿತದಿಂದಾಗಿ ಸಮಾಜದ ಸ್ವಾಸ್ಥ್ಯ ಹದಗೆಟ್ಟಿದೆ. ಬಹುದೊಡ್ಡ ಸಂಖ್ಯೆಯ ನಿರುದ್ಯೋಗಿ ಯುವಜನರೂ ಕುಡಿತಕ್ಕೆ ದಾಸರಾಗುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಸರ್ಕಾರವು ಮದ್ಯ ಮಾರಾಟವನ್ನು ನಿಯಂತ್ರಿಸಿ ಸಮಾಜದ ಸ್ವಾಸ್ಥ್ಯ ಕಾಪಾಡುವ ಬದಲು ಬಜೆಟ್‌ನಲ್ಲಿ ಇದರಿಂದಲೇ ಅಬಕಾರಿ ಇಲಾಖೆಗೆ ಹೆಚ್ಚಿನ ಆದಾಯ ನಿರೀಕ್ಷಿಸುತ್ತಿರುವುದು ಖಂಡನೀಯ” ಎಂದು ಹೇಳಿದ್ದಾರೆ.