- ಕಾಂತರಾಜ ವರದಿ ಸಿದ್ದಪಡಿಸಿಕೊಡಿ ಎಂದು ಈಗಾಗಲೇ ಸೂಚಿಸಿದ್ದೇನೆ
- ಜಾತಿಗಣತಿ ಸಮಾಜ ವಿಂಗಡಿಸುವುದಿಲ್ಲ, ಮೋದಿ ವಿರೋಧಕ್ಕೆ ಅರ್ಥವಿಲ್ಲ
ನವೆಂಬರ್‌ನಲ್ಲಿ ಕರ್ನಾಟಕದ ಜಾತಿಗಣತಿ ವರದಿ ನನ್ನ ಕೈ ಸೇರಬಹುದು. ಕಾಂತರಾಜ ವರದಿಯನ್ನು ಸಿದ್ದಪಡಿಸಿ ಕೊಡಿ ಎಂದು ಈಗಾಗಲೇ ಸೂಚಿಸಿದ್ದೇನೆ. ವರದಿ ಕೈ ಸೇರಿದ ಬಳಿಕ ಪರಿಶೀಲಿಸಿ ತೀರ್ಮಾನ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಮೈಸೂರಿನಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಜಾತಿಗಣತಿ ಸಮಾಜವನ್ನು ವಿಂಗಡಿಸುವುದಿಲ್ಲ. ಯಾವ ಸಮಾಜ ಆರ್ಥಿಕವಾಗಿ, ಸಾಮಾಜಿಕವಾಗಿ ಹಾಗೂ ಶೈಕ್ಷಣಿಕವಾಗಿ ಹಿಂದುಳಿದಿದೆ ಎಂಬುದನ್ನು ತಿಳಿದುಕೊಳ್ಳಲು ಅಂಕಿ ಅಂಶಗಳು ಸರ್ಕಾರಕ್ಕೆ ಬೇಕು. ಹೀಗಾಗಿ ನಾನೇ ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆ ನಡೆಸುವಂತೆ ಸೂಚಿಸಿದ್ದೆ” ಎಂದರು.
“ಪ್ರಧಾನಿ ಮೋದಿ ಬಾಯಲ್ಲಿ ಮಾತ್ರ ‘ಸಬ್ ಕಾ ಸಾಥ್ ಸಬ್ ಕಾ ವಿಕಾಸ್’ ಅನ್ನುತ್ತಾರೆ. ಆದರೆ ಅವರ ನಡೆನುಡಿಗೆ ಬಹಳ ವ್ಯತ್ಯಾಸಗಳಿವೆ. ಹೀಗಾಗಿ ಜಾತಿ ಗಣತಿ ವಿರೋಧಿಸುತ್ತಾರೆ. ʼಸಬ್ ಕಾ ಸಾಥ್ ಸಬ್ ಕಾ ವಿಕಾಸ್’ ಎನ್ನುವವರು ಮುಸ್ಲಿಂ ಸಮುದಾಯಕ್ಕೆ ಟಿಕೆಟ್ ಕೊಡಲಿ ನೋಡೋಣ” ಎಂದು ಕುಟುಕಿದರು.
ಹಣದ ಕೊರತೆ ಇಲ್ಲ
“ಗ್ಯಾರಂಟಿ ಯೋಜನೆಗಳಿಗೆ ಹಣದ ಕೊರತೆ ಇಲ್ಲ. ಬರಗಾಲಕ್ಕೆ ನಾವು ಕೇಂದ್ರ ಸರ್ಕಾರದ ಬಳಿ 4,860 ಕೋಟಿ ರೂ ಅನುದಾನ ಕೇಳಿದ್ದೇವೆ. ಬೆಳೆ ನಾಶ ಆಗಿರುವುದು 40 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಇದಕ್ಕೆ ಲೆಕ್ಕ ಹಾಕಿದರೆ 30 ಸಾವಿರಕ್ಕೂ ಹೆಚ್ಚು ಕೋಟಿ ಬೇಕಾಗುತ್ತದೆ. ಎನ್‌ಡಿಆರ್‌ಎಫ್ ನಿಯಮಾವಳಿ ಪ್ರಕಾರ 4,860 ಕೋಟಿ ಕೇಳಿದ್ದೇವೆ” ಎಂದು ತಿಳಿಸಿದರು.
“ಬರ ವೀಕ್ಷಣೆಗೆ ಕೇಂದ್ರ ಸರ್ಕಾರದ ತಂಡ ಬಂದಿದೆ. ಮೂರು ಟೀಮ್ ಮಾಡಿಕೊಂಡು ಬಂದಿದ್ದಾರೆ. ಸುಮಾರು ಹನ್ನೊಂದು ಜಿಲ್ಲೆಗಳಿಗೆ ಭೇಟಿ ನೀಡಿದ್ದಾರೆ. ಅವರು ವರದಿ ಸಲ್ಲಿಸಿದ ಬಳಿಕ ಕೇಂದ್ರ ಸರ್ಕಾರ ಹಣ ಕೊಡುವ ಬಗ್ಗೆ ನಿರ್ಧರಿಸುತ್ತದೆ” ಎಂದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಭಾರತದಲ್ಲಿ ಸ್ವತಂತ್ರ ಮಾಧ್ಯಮದ ಪಾಲಿಗೆ ಇದು ಅತ್ಯಂತ ಕರಾಳ ಕಾಲ
ಮದ್ಯದಂಗಡಿ ಪ್ರಸ್ತಾವ ಇಲ್ಲ
ರಾಜ್ಯದಲ್ಲಿ ಹೊಸ ಮದ್ಯದಂಗಡಿ ತೆರೆಯುವ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮತ್ತೆ ತಮ್ಮ ನಿಲುವು ಸ್ಪಷ್ಟಪಡಿಸಿದ್ದಾರೆ. ಹೊಸ ಬಾರ್ ಲೈಸನ್ಸ್ ಕೊಡುವ ವಿಚಾರ ಸರ್ಕಾರದ ಮುಂದೆ ಇಲ್ಲ. ಡಿ.ಕೆ ಶಿವಕುಮಾರ್ ಎಲ್ಲೂ ಕೂಡ ಹೊಸ ಲೈಸನ್ಸ್ ಕೊಡುತ್ತೇವೆಂದು ಹೇಳಿಲ್ಲ. ಸದ್ಯಕ್ಕೆ ಆ ವಿಚಾರದಲ್ಲಿ ಯಾವ ಚರ್ಚೆಗಳು ಬೇಡ. ಜನರ ಭಾವನೆಗಳನ್ನು ಕೇಳಬೇಕು, ಗೌರವಿಸಬೇಕು. ನಾನು ಸ್ಪಷ್ಟವಾಗಿ ಹೇಳುತ್ತಿದ್ದೇನೆ ಹೊಸ ಲೈಸನ್ಸ್‌ಗಳು ಯಾವುದು ಇಲ್ಲ” ಎಂದರು.
“ಮಹಿಷ ದಸರಾವನ್ನು ಸರ್ಕಾರ ಮಾಡಿಲ್ಲ. ನಾವು ಹಿಂದೆಯೂ ಮಾಡಿಲ್ಲ ಈಗಲೂ ಮಾಡುತ್ತಿಲ್ಲ. ಯಾರೋ ಹಿಂದಿನಿಂದ ಮಹಿಷ ದಸರಾ ಮೈಸೂರಿನಲ್ಲಿ ಮಾಡುತ್ತಿದ್ದಾರೆ. ಚಾಮುಂಡಿ ಬೆಟ್ಟದಲ್ಲಿ ಏನು ಮಾಡಿಲ್ಲ. ಈಗ ಆ ವಿಚಾರದಲ್ಲಿ ಜಿಲ್ಲಾಡಳಿತ ತೀರ್ಮಾನ ಕೈಗೊಳ್ಳುತ್ತದೆ” ಎಂದರು.
ಶಾಮನೂರು ಶಿವಶಂಕರಪ್ಪ ಹೇಳಿಕೆ ವಿಚಾರಕ್ಕೆ ಕೇಳಿದ ಪ್ರಶ್ನೆಗೆ ನಾನು ಈ ವಿಚಾರದಲ್ಲಿ ಯಾವ ಪ್ರತಿಕ್ರಿಯೆಯನ್ನು ನೀಡಲ್ಲ ಎಂದರು.