ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಸುರ್ಜೇವಾಲ ಭೇಟಿ; ಪಕ್ಷದ ಒಳಜಗಳಕ್ಕೆ ಸಿಗುವುದೇ ಪರಿಹಾರ?

Date:

Advertisements

ರಾಜ್ಯ ಕಾಂಗ್ರೆಸ್‌ನಲ್ಲಿ ಆಂತರಿಕ ಭಿನ್ನಮತಕ್ಕೆ ಬ್ರೇಕ್ ಹಾಕಲು ಹೈಕಮಾಂಡ್ ಮುಂದಾಗಿದ್ದು, ರಾಜ್ಯದ ಉಸ್ತುವಾರಿಯಾಗಿದ್ದರೂ ದೆಹಲಿಯಲ್ಲಿಯೇ ಠಿಕಾಣಿ ಹೂಡುತ್ತಿದ್ದ ರಣದೀಪ್ ಸಿಂಗ್ ಸುರ್ಜೇವಾಲ ಕೊನೆಗೂ ಹೈಕಮಾಂಡ್ ಸೂಚನೆಯಂತೆ ಕರ್ನಾಟಕಕ್ಕೆ ಆಗಮಿಸಿದ್ದಾರೆ.

ಸೋಮವಾರ, ಮಂಗಳವಾರ ಹಾಗೂ ಬುಧವಾರ 3 ದಿನಗಳ ಕಾಲ ಕೆಪಿಸಿಸಿ ಕಚೇರಿಯಲ್ಲಿ ಶಾಸಕರ ಜತೆಗೆ ಒನ್ ಟು ಒನ್ ಮಾತುಕತೆ ನಡೆಸುತ್ತಿದ್ದು, ಈ ಮೂಲಕ ಅಸಮಾಧಾನಕ್ಕೆ ಮದ್ದು ನೀಡುವ ಪ್ರಯತ್ನ ನಡೆಸಲಿದ್ದಾರೆ ಎನ್ನಲಾಗಿದೆ.

ರಾಜ್ಯಕ್ಕೆ ಸುರ್ಜೇವಾಲ ಮೂರು ದಿನಗಳ ಭೇಟಿಗೆ ಪ್ರಮುಖ ಕಾರಣವಾಗಿರುವುದು ಬಿ ಆರ್ ಪಾಟೀಲ್. ಅಳಂದ ಶಾಸಕರಾಗಿರುವ ಬಿ ಆರ್ ಪಾಟೀಲ್ ಅವರು ರಾಜ್ಯ ಸರ್ಕಾರದ ವಿರುದ್ಧ ಪದೇ ಪದೆ ಆರೋಪ ಮಾಡುತ್ತ ಬಂದಿದ್ದರು. ಇತ್ತೀಚೆಗೆ ಸಚಿವ ಜಮೀರ್ ಅಹ್ಮದ್ ಖಾನ್ ಅವರ ಇಲಾಖೆಯ ವಿರುದ್ಧ ಗಂಭೀರ ಆರೋಪ ಮಾಡಿದ್ದರು. ಜಮೀರ್ ಆಪ್ತ ಕಾರ್ಯದರ್ಶಿ ಸರ್ಫರಾಜ್ ಜತೆಗಿನ ಆಡಿಯೋ ಕೂಡ ವೈರಲ್ ಆಗಿತ್ತು. ಇದರಿಂದ ಸರ್ಕಾರಕ್ಕೆ ತೀವ್ರ ಮುಜುಗರವನ್ನೂ ಉಂಟುಮಾಡಿತ್ತು.

Advertisements

ಕಾಗವಾಡ ಶಾಸಕ ರಾಜು ಕಾಗೆ ಅವರು ಅಭಿವೃದ್ಧಿ ವಿಳಂಬ ಮತ್ತು ಅಧಿಕಾರಶಾಹಿ ವೈಫಲ್ಯಗಳ ಬಗ್ಗೆ ದೂರಿದ ಹಿನ್ನೆಲೆಯಲ್ಲಿ ಆಡಳಿತ ಪಕ್ಷ ಇಕ್ಕಟ್ಟಿಗೆ ಸಿಲುಕುವಂತಾಗಿತ್ತು. ಕೆ ಎನ್ ರಾಜಣ್ಣ ಅವರು ಸೆಪ್ಟಂಬರ್ ಕ್ರಾಂತಿಯ ಬಗ್ಗೆ ಹೇಳಿಕೆ ನೀಡಿ ಕುತೂಹಲ ಕೆರಳಿಸಿದ್ದರು. ಅಲ್ಲದೆ ಅನುದಾನ ಕೊರತೆ ಎಂದವರಿಗೆ ತಲೆ ಕೆಟ್ಟಿರಬೇಕು ಎಂದು ಬೇಳೂರು ಗೋಪಾಲಕೃಷ್ಣ ಅವರೂ ಕೂಡ ಮಾತನಾಡಿದ್ದರು. ಶಾಸಕ ಇಗ್ಬಾಲ್‌ ಹುಸೇನ್‌ ಕೂಡ ಪಕ್ಷದ ವಿರುದ್ಧವಾಗಿ ಮಾತನಾಡಿದ್ದರು. ಜತೆಗೆ ಬಿಜೆಪಿ ಮತ್ತು ಜೆಡಿಎಸ್ ಸೇರಿದಂತೆ ವಿರೋಧ ಪಕ್ಷಗಳು ವ್ಯಾಪಕ ಭ್ರಷ್ಟಾಚಾರವನ್ನು ಆರೋಪಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ವಸತಿ ಸಚಿವ ಬಿ ಜೆಡ್ ಜಮೀರ್ ಅಹ್ಮದ್ ಖಾನ್ ಅವರ ರಾಜೀನಾಮೆಗೆ ಒತ್ತಾಯಿದ್ದವು.

ಈ ನಿಟ್ಟಿನಲ್ಲಿ ಸರ್ಜೇವಾಲ ಅವರು 3 ದಿನಗಳ ಸಭೆಯಲ್ಲಿ ಬಿ ಆರ್ ಪಾಟೀಲ್ ಸೇರಿದಂತೆ 137 ಮಂದಿ ಶಾಸಕರ ಜತೆಗೂ ಮಾತುಕತೆ ನಡೆಸಿ, ಅವರ ಸಮಸ್ಯೆಯನ್ನು ಆಲಿಸುತ್ತಿದ್ದಾರೆ. ಜತೆಗೆ ಆರೋಪಗಳ ಬಗ್ಗೆ ದಾಖಲೆಗಳನ್ನು ಪಡೆದುಕೊಂಡು ಮುಂದಿನ ದಿನಗಳಲ್ಲಿ ಬಹಿರಂಗ ಆರೋಪ ಮಾಡದಂತೆ ಎಚ್ಚರಿಕೆ ನೀಡುವ ಸಾಧ್ಯತೆ ಅಲ್ಲಗಳೆಯುವ ಹಾಗಿಲ್ಲ ಎನ್ನಲಾಗಿತ್ತು.

ಕರ್ನಾಟಕದಲ್ಲಿ ಪಕ್ಷದ ವ್ಯವಹಾರಗಳನ್ನು ನೋಡಿಕೊಳ್ಳುತ್ತಿರುವ ಅಖಿಲ ಭಾರತ ಕಾಂಗ್ರೆಸ್ ಸಮಿತಿ(ಎಐಸಿಸಿ) ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಸೋಮವಾರ ರಾಜ್ಯ ಕಾಂಗ್ರೆಸ್ ಶಾಸಕರೊಂದಿಗೆ ಒಂದು ಸುತ್ತಿನ ಸಭೆಗಳನ್ನು ಪ್ರಾರಂಭಿಸಿದ್ದು, ನಾಯಕತ್ವದಲ್ಲಿನ ಸಂಭವನೀಯ ಬದಲಾವಣೆಗಳು ಮತ್ತು ಆಡಳಿತ ಪಕ್ಷದೊಳಗಿನ ಆಂತರಿಕ ಅಸಮಾಧಾನದ ಬಗ್ಗೆ ಹೊಸ ಚರ್ಚೆಗಳು ನಡೆಯುತ್ತಿವೆ. ಇಂತಹ ಸಭೆ ಮಂಗಳವಾರವೂ ಕೂಡ ಮುಂದುವರೆದಿದೆ.

ಸೋಮವಾರ ಅವರು ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳ ಶಾಸಕರೊಂದಿಗೆ ಸಭೆ ನಡೆಸಿದರು. ಅಂದು ಸುರ್ಜೇವಾಲಾ ಅವರನ್ನು ಭೇಟಿಯಾದವರಲ್ಲಿ ಆಳಂದ್ ಶಾಸಕ ಬಿ ಆರ್ ಪಾಟೀಲ್ ಕೂಡ ಒಬ್ಬರು, ಅವರು ಇತ್ತೀಚೆಗೆ ವಸತಿ ಇಲಾಖೆಯಲ್ಲಿನ ಅಕ್ರಮಗಳ ಆರೋಪಗಳನ್ನು ಎತ್ತಿದ್ದರು. ಪಾಟೀಲ್ ಅವರು 35 ನಿಮಿಷಗಳ ಕಾಲ ಸುರ್ಜೇವಾಲಾ ಅವರೊಂದಿಗೆ ಮಾತನಾಡಿದ್ದು, ಸಂಬಂಧಿತ ದಾಖಲೆಗಳನ್ನು ಹಂಚಿಕೊಂಡಿದ್ದಾರೆ.

“ನಾನು ಸುರ್ಜೇವಾಲಾ ಅವರನ್ನು ಭೇಟಿ ಮಾಡಿದ್ದೇನೆ ಮತ್ತು ನಾನು ಎಲ್ಲ ವಿಷಯಗಳನ್ನು ಅವರ ಮುಂದೆ ತಂದಿದ್ದೇನೆ. ಅವರು ಅದನ್ನು ಗಮನಿಸಿದ್ದಾರೆ. ಅವರು ಯಾವ ಕ್ರಮ ತೆಗೆದುಕೊಳ್ಳುತ್ತಾರೆ ಎಂಬುದು ಹೈಕಮಾಂಡ್‌ಗೆ ಬಿಟ್ಟದ್ದು. ನಾನು ಹೋರಾಟಗಾರ ಮತ್ತು ನನಗೆ ಯಾವುದೇ ಅಸಮಾಧಾನವಿಲ್ಲ. ನಾನು ವ್ಯವಸ್ಥೆಯನ್ನು ಸರಿಪಡಿಸಲು ಮಾತನಾಡುತ್ತೇನೆ” ಎಂದು ಹೇಳಿದ ಅವರು, ಸಭೆಯು ತೃಪ್ತಿಪಡಿಸಿದೆಯೇ ಎಂಬ ವಿಷಯಕ್ಕೆ “ನಾನು ರಾಜಕಾರಣಿ, ಏನಾಯಿತು ಎಂಬುದರ ಬಗ್ಗೆ ನನಗೆ ಸಂತೋಷವೂ ಇಲ್ಲ ಅಥವಾ ದುಃಖವೂ ಇಲ್ಲ” ಎಂದು ಉತ್ತರಿಸಿದ್ದಾರೆ.

ನಾಯಕತ್ವ ಬದಲಾವಣೆಯ ಸಾಧ್ಯತೆಯ ಬಗ್ಗೆ ಸುರ್ಜೇವಾಲ್‌ ಮಾತನಾಡಿದ್ದು, “ಮಾಧ್ಯಮಗಳಲ್ಲಿ ವರದಿಯಾಗುತ್ತಿರುವ ನಾಯಕತ್ವ ಬದಲಾವಣೆಯು ಕೇವಲ ಊಹಾಪೋಹ. ಇದೆಲ್ಲವೂ ನಿಮ್ಮ ಕಲ್ಪನೆಯಷ್ಟೇ. ಪಕ್ಷವು ವಿವಿಧ ರಂಗಗಳಲ್ಲಿ ಮಾಹಿತಿ ಸಂಗ್ರಹಿಸುತ್ತಿದೆ. ಕಾಂಗ್ರೆಸ್ ಗ್ಯಾರಂಟಿ ಯೋಜನೆಯ ಬಗ್ಗೆ ನಾವು ಶಾಸಕರಿಂದ ಮಾಹಿತಿಯನ್ನು ಪಡೆಯುತ್ತಿದ್ದೇವೆ. ಅವರ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಸಂಘಟನೆ ಹೇಗೆ ಕಾರ್ಯನಿರ್ವಹಿಸುತ್ತಿದೆ ಎಂಬುದರ ಕುರಿತು ನಮಗೆ ವರದಿಗಳು ಬರುತ್ತಿವೆ. ಮುಂಚೂಣಿ ಘಟಕಗಳು ಹೇಗೆ ಕಾರ್ಯನಿರ್ವಹಿಸುತ್ತಿವೆ ಎಂಬುದರ ಕುರಿತು ಮಾಹಿತಿಯನ್ನು ಪಡೆಯುತ್ತಿದ್ದೇವೆ. ಯಾವ ಪ್ರದೇಶಗಳಲ್ಲಿ ಎಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗುತ್ತಿದೆ ಎಂಬುದರ ಕುರಿತು ನಮಗೆ ಮಾಹಿತಿ ಸಿಗುತ್ತಿದೆ. ಇದು ಮುಖ್ಯಮಂತ್ರಿ ಮತ್ತು ಉಪಮಂತ್ರಿಗಳಿಗೆ ಮಾಹಿತಿಯನ್ನು ಒದಗಿಸಲು ಮತ್ತು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ” ಎಂದು ಹೇಳಿದ್ದಾರೆ.

“ಸರ್ಕಾರಿ ಮಟ್ಟದಲ್ಲಿ ಮಾಡಬೇಕಾದ ಕೆಲಸದ ಬಗ್ಗೆ ನಾವು ಶಾಸಕರಿಂದ ಮಾಹಿತಿಯನ್ನು ಪಡೆಯುತ್ತಿದ್ದೇವೆ. ಇದು ಎಐಸಿಸಿ ಮತ್ತು ಕೆಪಿಸಿಸಿ ಜಂಟಿಯಾಗಿ ಮಾಡಬೇಕಾದ ಸಾಂಸ್ಥಿಕ ಚಟುವಟಿಕೆಯಾಗಿದೆ. ಶಾಸಕರು ಪಕ್ಷದ ಸಂಘಟನೆಗಾಗಿ ಕೆಲಸ ಮಾಡುತ್ತಿದ್ದಾರೆ. ಒಂದೇ ರಾಜ್ಯವು ಇಡೀ ದೇಶದ ಜನರ ಖಾತೆಗಳಿಗೆ ನೇರವಾಗಿ ₹52,000 ಕೋಟಿ ಜಮಾ ಮಾಡುತ್ತಿದೆ. ನಾವು ಗೃಹಲಕ್ಷ್ಮಿಯ ಖಾತೆಗಳಿಗೆ ವಾರ್ಷಿಕ ₹24,000 ಜಮಾ ಮಾಡುತ್ತಿದ್ದೇವೆ. ಮೋದಿ ಮತ್ತು ಬಿಜೆಪಿ ಸೃಷ್ಟಿಸಿರುವ ಹಣದುಬ್ಬರಕ್ಕೆ ನಾವು ಪರಿಹಾರ ನೀಡಿದ್ದೇವೆ. ನಾವು 4 ಕೋಟಿ ಜನರಿಗೆ ಅಕ್ಕಿ ನೀಡುತ್ತಿದ್ದೇವೆ” ಎಂದು ಹೇಳಿಕೊಂಡಿದ್ದರು.

ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸುರ್ಜೇವಾಲಾ ಅವರ ಭೇಟಿಯನ್ನು ಒಪ್ಪಿಕೊಂಡಿದ್ದು, “ಸುರ್ಜೇವಾಲಾ ಅವರು ರಾಜ್ಯಕ್ಕೆ ಬಂದಿದ್ದಾರೆ. ಸಂಗ್ರಹಿಸಿದ ಇನ್‌ಪುಟ್‌ಗಳನ್ನು ಮೌಲ್ಯಮಾಪನ ಮಾಡಿದ ನಂತರ ಮುಂದಿನ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುವುದು. ಅವರ ವರದಿ ಮತ್ತು ಅವರು ಸಂಗ್ರಹಿಸುವ ಪ್ರತಿಕ್ರಿಯೆಯ ಆಧಾರದ ಮೇಲೆ, ಯಾವ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ನಾವು ನಿರ್ಧರಿಸುತ್ತೇವೆ” ಎಂದು ಹೇಳಿದ್ದಾರೆ.

ಮೈಸೂರಿನಿಂದ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, “ಪಕ್ಷದ ಆಂತರಿಕ ಆರೋಗ್ಯವನ್ನು ಪರಿಶೀಲಿಸುವುದು ಪ್ರಧಾನ ಕಾರ್ಯದರ್ಶಿಯ ಪಾತ್ರ. ಅವರು ಎಐಸಿಸಿ ಪ್ರಧಾನ ಕಾರ್ಯದರ್ಶಿಯಾಗಿ ಜವಾಬ್ದಾರಿ ವಹಿಸಿದ್ದಾರೆ. ಅವರು ಶಾಸಕರ ಅಭಿಪ್ರಾಯ ಪಡೆಯುತ್ತಾರೆ, ಅವರ ಕಳವಳಗಳನ್ನು ಆಲಿಸುತ್ತಾರೆ ಮತ್ತು ಸಂಘಟನೆಯನ್ನು ಬಲಪಡಿಸಲು ಏನು ಮಾಡಬೇಕೆಂದು ನಿರ್ಣಯಿಸುತ್ತಾರೆ. ಅವರು ಅವರ ಕೆಲಸವನ್ನು ಮಾಡುತ್ತಾರೆ” ಎಂದಿದ್ದಾರೆ.

“ನಾನು ಹಾಗೂ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಇಬ್ಬರೂ ಒಟ್ಟಾಗಿದ್ದೇವೆ. ಯಾರೂ ಏನೇ ಹೇಳಿದರು ನಮ್ಮ ಮಧ್ಯೆ ಭಿನ್ನಾಭಿಪ್ರಾಯವಿಲ್ಲ, ಕೇಳುವುದಿಲ್ಲ. ಸರ್ಕಾರ ಐದು ವರ್ಷ ಬಂಡೆಯಂತೆ ಭದ್ರವಾಗಿರುತ್ತದೆ” ಎಂದು ಸ್ಪಷ್ಟಪಡಿಸಿದರು.

ಗೃಹ ಸಚಿವ ಜಿ ಪರಮೇಶ್ವರ ಕೂಡ ಸುರ್ಜೇವಾಲಾ ಅವರ ಭೇಟಿಯನ್ನು ನಿಯಮಿತ ಭೇಟಿಯೆಂದು ಬಣ್ಣಿಸಿದ್ದು, “ಅವರು ರಾಜಕೀಯ ಅಂಶಗಳು, ಪಕ್ಷದ ಕಾರ್ಯಕ್ರಮಗಳನ್ನೂ ಕೂಡ ಪರಿಶೀಲಿಸುತ್ತಾರೆ. ಪಕ್ಷ ಅಥವಾ ಸರ್ಕಾರದೊಳಗೆ ಗೊಂದಲಗಳಿದ್ದರೆ, ಅವರು ಉಸ್ತುವಾರಿ ಪ್ರಧಾನ ಕಾರ್ಯದರ್ಶಿಯಾಗಿ ನಮಗೆ ಮಾರ್ಗದರ್ಶನ ನೀಡುತ್ತಾರೆ. ಅಲ್ಲದೆ ಈ ಸುತ್ತಿನ ಸಭೆಗಳಲ್ಲಿ ಕೆಲವು ಶಾಸಕರು ಎತ್ತಿರುವ ಸಮಸ್ಯೆಗಳನ್ನೂ ಕೂಡ ಪರಿಹರಿಸಬಹುದು” ಎಂದರು.

ಮೂರು ದಿನಗಳ ಕಾಲ ಶಾಸಕರೊಂದಿಗಿನ ತಮ್ಮ ಏಕದಿನ ಸಭೆಯ ಮೊದಲ ಹಂತದ ಭಾಗವಾಗಿ, ಸುರ್ಜೇವಾಲ ಇಂದು ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ದಕ್ಷಿಣ, ಚಾಮರಾಜನಗರ, ಮೈಸೂರು ಜಿಲ್ಲೆಗಳ ಸುಮಾರು 20 ಶಾಸಕರನ್ನು ಹಾಗೂ ದಕ್ಷಿಣ ಕನ್ನಡ ಮತ್ತು ಕೋಲಾರದ ಸುಮಾರು 20 ಶಾಸಕರನ್ನು ಭೇಟಿ ಮಾಡಿದ್ದಾರೆ.

ಸರ್ಕಾರವು ಎರಡು ವರ್ಷಗಳನ್ನು ಪೂರೈಸಿರುವುದರಿಂದ ವಿಧಾನಸಭಾ ಕ್ಷೇತ್ರಗಳಲ್ಲಿನ ಕಾಂಗ್ರೆಸ್‌ನ ಐದು ಗ್ಯಾರಂಟಿ ಯೋಜನೆಗಳ ಸ್ಥಿತಿಯನ್ನು ಅರ್ಥಮಾಡಿಕೊಳ್ಳಲು ಮತ್ತು ಶಾಸಕರ ಆಯಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಸಂಘಟನೆಯ ಸ್ಥಿತಿಯನ್ನು ನಿರ್ಣಯಿಸಲು ಸಭೆಗಳು ನಡೆಯುತ್ತಿವೆ. ಪ್ರತಿಯೊಬ್ಬ ಶಾಸಕರು ತಮ್ಮ ಕ್ಷೇತ್ರಗಳಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯಗಳನ್ನು ಮೌಲ್ಯಮಾಪನ ಮಾಡಲು ಮತ್ತು ಬಾಕಿ ಇರುವ ಅಭಿವೃದ್ಧಿ ಯೋಜನೆಗಳನ್ನು ಗುರುತಿಸಲು ಪಕ್ಷವು ಪ್ರಯತ್ನಿಸುತ್ತಿದೆ. ಸರ್ಕಾರದ ಪ್ರಗತಿಯ ಕುರಿತು ಶಾಸಕರಿಂದ ಪ್ರತಿಕ್ರಿಯೆ ಪಡೆಯಲು ನಾವು ಬಯಸುತ್ತೇವೆ ಎಂದು ನಾಮಕಾವಸ್ಥೆಗೆ ಮಾತನಾಡಿದ್ದಾರೆ.

ಸುರ್ಜೇವಾಲಾ ಅವರ ಭೇಟಿಯಿಂದ ಕಾಂಗ್ರೆಸ್ ಶಾಸಕರಲ್ಲಿ ಕೆಲವು ಭರವಸೆಯನ್ನು ಮೂಡಿಸಿದ್ದರೂ, ಈ ಭೇಟಿಯಿಂದ ಗಣನೀಯ ಬದಲಾವಣೆಗಳಾಗುವ ಸಾಧ್ಯತೆ ಕಡಿಮೆ. ಇಲ್ಲಿಂದ ಹೋದ ಬಳಿಕ ಯಾವುದೇ ರೀತಿ ಬದಲಾವಣೆಗಳಾಗಲಿ, ಅಭಿವೃದ್ಧಿಗಳಾಗಲಿ ಅಥವಾ ಅನುದಾನಗಳಾಗಲಿ ಬಿಡುಗಡೆಯಾಗುವುದಿಲ್ಲ. ಸುರ್ಜೇವಾಲಾ ಅವರು ಶಾಸಕರೊಂದಿಗೆ ಸಭೆಗಳನ್ನು ನಡೆಸಿ, ಅವರ ದೂರುಗಳನ್ನು ಆಲಿಸಿದ್ದಾರೆ ಮತ್ತು ಮುಂದಿನ ಕ್ರಮಗಳ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೊಂದಿಗೆ ಚರ್ಚಿಸುವ ಭರವಸೆ ನೀಡಿದ್ದಾರೆ. ಆದರೆ, ಈ ರೀತಿಯ ಭೇಟಿಗಳು ಈ ಹಿಂದೆಯೂ ನಡೆದಿದ್ದು, ಆಗಲೂ ಯಾವುದೇ ದೊಡ್ಡ ಬದಲಾವಣೆಗಳಾಗಿಲ್ಲ. ಹಾಗಾಗಿ ಈಗಲೂ ಇದೇ ಮುಂದುವರೆಯುತ್ತದೆ.

ಕಾಂಗ್ರೆಸ್‌ನ ಆಂತರಿಕ ವಿವಾದಗಳು ಮತ್ತು ಶಾಸಕರ ಅಸಮಾಧಾನವು ರಾಜಕೀಯವಾಗಿ ದೊಡ್ಡ ಸವಾಲಾಗಿದೆ. ಸುರ್ಜೇವಾಲಾ ಅವರ ಈ ಭೇಟಿಯು ತಾತ್ಕಾಲಿಕವಾಗಿ ಶಾಸಕರನ್ನು ಸಮಾಧಾನಗೊಳಿಸುವುದು ಒಂದು ತಂತ್ರಗಾರಿಕೆಯಾಗಿದೆ. ದೀರ್ಘಕಾಲೀನ ಪರಿಹಾರವಾಗಿ ಕಾರ್ಯನಿರ್ವಹಿಸದಿದ್ದರೆ, ಕಾಂಗ್ರೆಸ್‌ಗೆ ರಾಜಕೀಯವಾಗಿ ಮುಜುಗರವಾಗಬಹುದು. ಶಾಸಕರ ದೂರುಗಳಾದ ಅಭಿವೃದ್ಧಿ ಅನುದಾನಗಳ ಕೊರತೆ, ಭ್ರಷ್ಟಾಚಾರದ ಆರೋಪಗಳು ಮತ್ತು ಸಂಘಟನೆಯ ದೌರ್ಬಲ್ಯಗಳನ್ನು ಗಂಭೀರವಾಗಿ ಪರಿಗಣಿಸದಿದ್ದರೆ, ಇದು ಪಕ್ಷದ ಒಗ್ಗಟ್ಟಿನ ಮೇಲೆ ಪರಿಣಾಮ ಬೀರಬಹುದು.‌

ಇದನ್ನೂ ಓದಿದ್ದೀರಾ? ಮೈಸೂರು | ಸಚಿವ ಮಹದೇವಪ್ಪ ಸುತ್ತ ಜಾತೀಯತೆ ಆರೋಪ; ಕಾಂಗ್ರೆಸ್ಸಿಗರು ಹೇಳಿದ್ದೇನು?

ಒಟ್ಟಾರೆಯಾಗಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರ ಭೇಟಿಯು ಕರ್ನಾಟಕ ಕಾಂಗ್ರೆಸ್‌ನ ಆಂತರಿಕ ಸಮಸ್ಯೆಗಳನ್ನು ತಾತ್ಕಾಲಿಕವಾಗಿ ನಿಯಂತ್ರಿಸುವ ಪ್ರಯತ್ನವಾಗಿದೆ. ಆದರೆ, ಈ ಭೇಟಿಯಿಂದ ಗಮನಾರ್ಹ ಬದಲಾವಣೆಗಳಾಗದಿದ್ದರೆ, ಶಾಸಕರ ಅಸಮಾಧಾನವು ಮತ್ತಷ್ಟು ತೀವ್ರಗೊಳ್ಳಬಹುದು. ಕಾಂಗ್ರೆಸ್‌ಗೆ ಈಗ ಅಗತ್ಯವಿರುವುದು ಕೇವಲ ಭರವಸೆಯ ಮಾತುಗಳಲ್ಲ, ಬದಲಿಗೆ ಶಾಸಕರ ದೂರುಗಳಿಗೆ ಒಂದು ರಚನಾತ್ಮಕ ಪರಿಹಾರ ಮತ್ತು ಸರ್ಕಾರದ ಕಾರ್ಯಕ್ಷಮತೆಯನ್ನು ಸುಧಾರಿಸುವ ಕಡೆಗೆ ಗಮನಹರಿಸಬೇಕು. ಒಂದು ವೇಳೆ ಈ ಸಮಸ್ಯೆಗಳನ್ನು ಪರಿಹರಿಸದಿದ್ದರೆ, ಕಾಂಗ್ರೆಸ್‌ಗೆ ರಾಜಕೀಯವಾಗಿ ದೊಡ್ಡ ಮುಜುಗರವಾಗಬಹುದು, ವಿಶೇಷವಾಗಿ ವಿರೋಧ ಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ಈ ಸಂದರ್ಭವನ್ನು ತಮ್ಮ ಲಾಭಕ್ಕೆ ಬಳಸಿಕೊಳ್ಳಲು ಕಾಯುತ್ತಿರುವಾಗ ಪಕ್ಷದ ಹೈಕಮಾಂಡ್‌ ಇದನ್ನು ಗಂಭಿರವಾಗಿ ಪರಿಗಣಿಸಬೇಕಾಗಿದೆ.

ಕೊನೆಯದಾಗಿ, ಸುರ್ಜೇವಾಲಾ ಅವರ ಭೇಟಿಯು ಕಾಂಗ್ರೆಸ್‌ಗೆ ಒಂದು ಅವಕಾಶವಾದರೂ, ಇದರಿಂದ ಯಾವುದೇ ಗಮನಾರ್ಹ ಫಲಿತಾಂಶವು ದೊರಕದಿದ್ದರೆ, ಶಾಸಕರಲ್ಲಿ ಅಸಮಾಧಾನ ಮತ್ತಷ್ಟು ತೀವ್ರಗೊಳ್ಳಬಹುದು. ಈಗ ಕಾಂಗ್ರೆಸ್‌ಗೆ ತನ್ನ ಒಳಗಿನ ಒಗ್ಗಟ್ಟನ್ನು ಕಾಪಾಡಿಕೊಂಡು, ಜನರಿಗೆ ಭರವಸೆ ನೀಡಿದ ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸುವುದು ದೊಡ್ಡ ಸವಾಲಾಗಿದೆ.

WhatsApp Image 2025 07 12 at 17.38.34 e1752322718567
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪಟ್ಟಣ ಪಂಚಾಯತ್ ಚುನಾವಣೆ: ಮೂರರಲ್ಲಿ ಕಾಂಗ್ರೆಸ್‌ಗೆ ಮೇಲುಗೈ; ಎರಡರಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಗೆ ಜಯ

ಕರ್ನಾಟಕದಲ್ಲಿ ಐದು ಪ್ರದೇಶಗಳು ತಾಲೂಕು ಸ್ಥಾನಕ್ಕೇರಿದ ಬಳಿಕ ರಚನೆಯಾದ ಪಟ್ಟಣ ಪಂಚಾಯಿತಿಗೆ...

ಅಲೆಮಾರಿಗಳಿಗೆ ಅನ್ಯಾಯ; ಸರ್ಕಾರದ ವಿರುದ್ಧ ಭುಗಿಲೆದ್ದ ಜನಾಕ್ರೋಶ

ಮೀಸಲು ಹಂಚಿಕೆಯ ವಿವರಗಳು ಸ್ಪಷ್ಟವಾಗುತ್ತಿದ್ದಂತೆ ಸಂಭ್ರಮದ ಮನೆಯಲ್ಲಿ ಸಾವಿನ ಸೂತಕ ಆವರಿಸತೊಡಗಿತು....

2029ರ ಚುನಾವಣೆಯಲ್ಲಿ ರಾಹುಲ್ ಗಾಂಧಿ ಇಂಡಿಯಾ ಒಕ್ಕೂಟದ ಪ್ರಧಾನಿ ಅಭ್ಯರ್ಥಿ: ತೇಜಸ್ವಿ ಯಾದವ್

2029ರ ಲೋಕಸಭೆ ಚುನಾವಣೆಯಲ್ಲಿ ಸದ್ಯ ಲೋಕಸಭೆ ವಿಪಕ್ಷ ನಾಯಕರಾಗಿರುವ ರಾಹುಲ್ ಗಾಂಧಿ...

Download Eedina App Android / iOS

X