ಕೋಮು ಕಲಹದಲ್ಲಿ ಬಿಜೆಪಿ, ಅಧಿಕಾರದ ಮದದಲ್ಲಿ ಕಾಂಗ್ರೆಸ್‌, ಅತಂತ್ರವಾದ ಜೆಡಿಎಸ್- ಜನರಿಗೆ ಸಿಕ್ಕಿದ್ದೇನು?

Date:

Advertisements
ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್‌ ಮತ್ತು ಬಿಜೆಪಿಯೊಳಗೆ ಬಗೆಬಗೆಯ ಬೇಗುದಿಗಳು ರಾಜಕಾರಣದ ನೈಜ ಆಶಯಗಳನ್ನು ಸಮಾಧಿ ಮಾಡುವತ್ತ ದಾಪುಗಾಲಿಟ್ಟಿವೆ. ರಾಜ್ಯ ರಾಜಕಾರಣ ಮಾತ್ರ ಜನಕೇಂದ್ರಿತವಾದ ಹಳಿಗೆ ಮರಳದೇ ಸ್ವಹಿತಾಸಕ್ತಿ ನೆರಳಲ್ಲಿ ನಲಗುತ್ತಿದೆ.

ರಾಜ್ಯ ರಾಜಕಾರಣದ ಪ್ರಸ್ತುತ ವಿದ್ಯಮಾನಗಳನ್ನು ಕಂಡಾಗ ರಾಜ್ಯದ ಜನತೆಗೆ ಸಮಾಧಾನ-ನೆಮ್ಮದಿಯ ಬದಲಿಗೆ ಜಿಗುಪ್ಸೆ, ತಾತ್ಸಾರ ಮೂಡುವುದೇ ಹೆಚ್ಚು! ರಾಜ್ಯ ವಿಧಾನಸಭಾ ಚುನಾವಣೆ ಮುಗಿದು, ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದು ಮೂರು ತಿಂಗಳಾಗುತ್ತ ಬಂದರೂ ಮೂರು ಪಕ್ಷಗಳದ್ದು ಒಂದೊಂದು ದಿಕ್ಕು. ರಾಜ್ಯ ರಾಜಕಾರಣ ಮಾತ್ರ ಜನಕೇಂದ್ರಿತ ಹಳಿಗೆ ಮರಳದೇ ಸ್ವಹಿತಾಸಕ್ತಿ ನೆರಳಲ್ಲಿ ನಲುಗುತ್ತಿದೆ.

ನಿತ್ಯ ಬೆಳಗು ಹರಿದರೆ ಸಾಕು ಕರ್ನಾಟಕದ ರಾಜಕಾರಣದೊಳಗೆ ಅಚ್ಚರಿ ಮತ್ತು ಅಸಹ್ಯ ಪಡುವಂತಹ ಬೆಳವಣಿಗೆಗಳೇ ಎದ್ದು ಕಾಣುತ್ತವೆ. ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್‌ ಮತ್ತು ಬಿಜೆಪಿಯೊಳಗೆ ಬಗೆಬಗೆಯ ಬೇಗುದಿಗಳು ಪ್ರಜಾಪ್ರಭುತ್ವದ ಆಶಯಗಳನ್ನು ಸಮಾಧಿ ಮಾಡುವತ್ತ ದಾಪುಗಾಲಿಟ್ಟಿವೆ. ಸೋತು ಸುಣ್ಣಾದ ಜೆಡಿಎಸ್‌ ಆಟಕ್ಕುಂಟು ಲೆಕ್ಕಕ್ಕಿಲ್ಲವಾಗಿದೆ. ಈ ಮೂರು ಪಕ್ಷಗಳಲ್ಲಿನ ಕೆಲವು ಜನಪ್ರತಿನಿಧಿಗಳ ನಡೆ ಕಂಡಾಗ ಎಂತವರನ್ನು ನಾವು ಆಯ್ಕೆ ಮಾಡಿದ್ದಿವಲ್ಲ ಎಂದು ಸಂಕಟ ಪಡಬೇಕಾದ ಸ್ಥಿತಿ ಜನರದ್ದಾಗಿದೆ.

ಕೋಮು ಕಲಹದಲ್ಲಿ ಕರಗಿಹೋದ ಬಿಜೆಪಿ!

Advertisements

ರಾಜ್ಯದಲ್ಲಿ ಈವರೆಗೂ ಬಹುಮತದಿಂದ ಅಧಿಕಾರಕ್ಕೆ ಬಂದ ಇತಿಹಾಸವೇ ಇಲ್ಲದ ಬಿಜೆಪಿ ಯಾವಾಗಲೂ ತಂತ್ರ, ಕುತಂತ್ರಗಳ ಮೂಲಕವೇ ಅಧಿಕಾರ ಅನುಭವಿಸಿದೆ. ಸದಾ ʼಆಪರೇಷನ್‌ ಕಮಲ’ ಎಂಬ ಕೆಸರಿನಲ್ಲಿ ಅಧಿಕಾರದ ಗದ್ದುಗೆ ಹುಡುಕುವ ಬಿಜೆಪಿಗೆ ರಾಜ್ಯದ ಜನತೆ ‘ನಿಮ್ಮ ಯೋಗ್ಯತೆಯೇ ಇಷ್ಟುʼ ಎಂದು ಅಣಕಿಸುವ ರೀತಿಯಲ್ಲಿ ಈ ಭಾರಿಯ ವಿಧಾನಸಭಾ ಚುನಾವಣೆಯಲ್ಲಿ ಉತ್ತರಿಸಿದೆ. ಆದರೂ ಬಿಜೆಪಿಯವರು ಇನ್ನೂ ಪಾಠ ಕಲಿತಂತೆ ಕಾಣುತ್ತಿಲ್ಲ ಅಥವಾ ಗೋವಿನ ರಾಜಕಾರಣ ಮಾಡಿ, ಮಾಡಿ ಅಭ್ಯಾಸವಾಗಿ ಇವರ ಚರ್ಮ ಕೂಡ ಗೋವಿನ ರೀತಿ ದಪ್ಪವಾಗಿ, ರಾಜ್ಯದ ಜನರ ಏಟು ನಾಟಿದಂತೆ ಕಾಣುತ್ತಿಲ್ಲವೇನೋ?!

ಈ ಭಾರಿಯ ಚುನಾವಣೆಯಲ್ಲಿ ರಾಜ್ಯದ ಜನತೆ ಯಾಕೆ ಇಷ್ಟು ಹೀನಾಯವಾಗಿ ತಮ್ಮನ್ನು ಸೋಲಿಸಿದರು ಎಂಬುದರ ಕುರಿತು ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಬಿಜೆಪಿಯವರು, ಅದನ್ನು ಬಿಟ್ಟು ಉಳಿದಿದ್ದೆಲ್ಲ ಮಾಡುತ್ತಿದ್ದಾರೆ. ಪ್ರತಿಪಕ್ಷಕ್ಕೆ ಇರಬೇಕಾದ ಘನತೆಯನ್ನು ರಾಷ್ಟ್ರೀಯ ವರಿಷ್ಠರ ಕಾಲಡಿಗೆ ಇಟ್ಟು, ಬೆನ್ನುಮೂಳೆ ಇಲ್ಲದವರಂತೆ ನಡೆದುಕೊಳ್ಳುತ್ತಿದ್ದಾರೆ.  

ಬಜೆಟ್ ಅಧಿವೇಶನ ವಿರೋಧ ಪಕ್ಷದ ನಾಯಕನಿಲ್ಲದೇ ನಡೆದುಹೋಯಿತು. ಪ್ರಜಾಪ್ರಭುತ್ವದಲ್ಲಿ ಪ್ರತಿಪಕ್ಷದ ಆಶಯವೇ ಬಿಜೆಪಿ ನಡೆಯಿಂದ ಮಣ್ಣಾಯಿತು. ಈವರೆಗೂ ಒಬ್ಬ ನಾಯಕನನ್ನು ಆಯ್ಕೆ ಮಾಡಿಕೊಳ್ಳಲಾಗದ ಬಿಜೆಪಿ ಹೇಗೆ ರಾಜ್ಯದ ಜನರಿಗೆ ಮುಖ ತೋರಿಸುತ್ತಿದೆಯೋ?

ಪ್ರತಿಪಕ್ಷದ ಸ್ಥಾನದಲ್ಲಿ ನಿಂತು ತನ್ನ ಜವಾಬ್ದಾರಿ ಮೆರೆಯಬೇಕಾದ ಬಿಜೆಪಿ, ಆ ಕೆಲಸ ಬಿಟ್ಟು, ರಾಜ್ಯದ ಯಾವುದೇ ಮೂಲೆಯಲ್ಲಿ ಕಾಣುವ ಕೊಲೆ, ಸಾವು, ನೋವು ಹಾಗೂ ಗಲಭೆಗಳಲ್ಲಿ ಕೋಮು ಕಲಹ ಕಂಡುಹಿಡಿಯುವುದರಲ್ಲಿ ನಿರತವಾಗಿ, ರಾಜ್ಯದ ಮುಂದೆ ಬೆತ್ತಲಾಗಿದೆ!

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ವಂಚಕರು, ನಂಬಿಕೆದ್ರೋಹಿಗಳು ಕೇವಲ ಒಂದು ಸಮುದಾಯಕ್ಕೆ ಸೇರಿದವರೇ?

ಕ್ಷಣಕ್ಕೊಂದು ವೇಷ, ದಿನಕ್ಕೊಂದು ಹೆಸರು!

ರಾಜ್ಯ ಸರ್ಕಾರದ ನ್ಯೂನತೆಗಳ ಬಗ್ಗೆ ಕಟುವಾಗಿ ಟೀಕಿಸಿ, ಜನರ ಧ್ವನಿಯಾಗಬೇಕಿದ್ದ ಬಿಜೆಪಿಯವರು, ಕ್ಷಣಕ್ಕೊಂದು ವೇಷ ತೊಟ್ಟು ವೇಷಕ್ಕೆ ತಕ್ಕ ಮಾತುಗಳನ್ನಾಡುತ್ತಿದ್ದಾರೆ. ಬಿಜೆಪಿ ನಾಯಕರ ಮಾತಲ್ಲಿ ತರ್ಕ, ತತ್ವ ದಾರಿದ್ರ್ಯ ಎದ್ದು ಕಾಣುತ್ತಿದೆ. ರಾಜ್ಯ ಸರ್ಕಾರವನ್ನು ಸಮರ್ಥವಾಗಿ ಟೀಕಿಸಲು ಇವರಿಂದಾಗುತ್ತಿಲ್ಲ. ಇರುವುದರಲ್ಲಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಕ್ಕಮಟ್ಟಿಗೆ ಪ್ರತಿಪಕ್ಷ ನಾಯಕ ಸ್ಥಾನ ತುಂಬಬಲ್ಲರು ಎಂಬ ಮಾತುಗಳು ರಾಜಕೀಯ ಪಡಸಾಲೆಯಲ್ಲಿ ಕೇಳಿಬಂದರೂ ಬಿಜೆಪಿಯಲ್ಲಿ ಬೊಮ್ಮಾಯಿ ಅವರಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ.

ಈ ನಡುವೆ ಪ್ರತಿಪಕ್ಷ ನಾಯಕ ಮತ್ತು ಬಿಜೆಪಿ ರಾಜ್ಯ ಘಟದ ಅಧ್ಯಕ್ಷ ಸ್ಥಾನಕ್ಕೆ ದಿನಕ್ಕೊಂದು ಹೆಸರು ತೇಲಿಬರುತ್ತಿವೆ. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಕೈಬಿಡಲಾಗಿರುವ ಸಿಟಿ ರವಿ ರಾಜ್ಯ ಬಿಜೆಪಿ ಸಾರಥ್ಯ ವಹಿಸಲಿದ್ದಾರೆ ಎನ್ನುವ ಮಾತುಗಳು ಮುನ್ನೆಲೆಗೆ ಬಂದಿವೆ. ಹೊಂದಾಣಿಕೆ ರಾಜಕಾರಣ ಆರೋಪ ಹೊತ್ತ ಆರ್ ಅಶೋಕ ಕೂಡ ಅಧ್ಯಕ್ಷರಾಗಲಿದ್ದಾರೆ ಎನ್ನಲಾಗುತ್ತಿದೆ. ಹಾಗೆಯೇ ಹರಕುಬಾಯಿ ಖ್ಯಾತಿಹೊತ್ತ, ಹೆಣರಾಜಕಾರಣದ ನಾಯಕಿ ಶೋಭಾ ಕರಂದ್ಲಾಜೆ ಹೆಸರು ಕೂಡ ಮುಂಚೂಣಿಯಲ್ಲಿದೆ.  

ಗೃಹಲಕ್ಷ್ಮಿ

ಹಾಗಾದರೆ ಬಿಜೆಪಿಯೊಳಗಡೆ ಮಾಜಿ ಮುಖ್ಯಮಂತ್ರಿಗಳಾದ ಬಿ ಎಸ್ ಯಡಿಯೂರಪ್ಪ‌ ಮತ್ತು ಬಸವರಾಜ ಬೊಮ್ಮಾಯಿ ಅವರ ಪಾತ್ರವೇನು? ಎಂಬುದು ರಾಜಕೀಯ ಆಸಕ್ತರಲ್ಲಿ ಕುತೂಹಲ ಮೂಡಿಸಿದೆ. ಒಂದು ವೇಳೆ ಸಿಟಿ ರವಿ ರಾಜ್ಯ ಘಟಕದ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾದಲ್ಲಿ ಅದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ ಎಲ್‌ ಸಂತೋಷ್‌ ಹಿಡಿತಕ್ಕೆ ಪಕ್ಷ ಮರುಳಿದಂತೆಯೇ ಅರ್ಥ. ಇದನ್ನು ಮೀರಿ ಆರ್‌ ಅಶೋಕ ಅಥವಾ ಶೋಭಾ ಕರಂದ್ಲಾಜೆ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಬಂದರೆ ಯಡಿಯೂರಪ್ಪ ಅವರ ಹಿಡಿತ ಪಕ್ಷದಲ್ಲಿ ಇನ್ನೂ ಜೀವಂತ ಇದೆ ಎನ್ನುವುದರ ಸೂಚನೆ ಸಿಗುತ್ತದೆ.

ಇನ್ನು, ಮುಖ್ಯಮಂತ್ರಿ ಸ್ಥಾನ ಅನುಭವಿಸಿ ಕೆಳಗಿಳಿದಿರುವ ಬಸವರಾಜ ಬೊಮ್ಮಾಯಿ ಕಥೆ ಹೇಳತೀರದು. ಬಿಜೆಪಿ ಹೈಕಮಾಂಡ್‌ಗೆ ನಿಜಕ್ಕೂ ಬೊಮ್ಮಾಯಿ ಬಗ್ಗೆ ಒಲವು ಇದ್ದಿದ್ದರೆ ಅವರನ್ನು ಪ್ರತಿಪಕ್ಷ ನಾಯಕರನ್ನಾಗಿ ಮಾಡಲು ಇಷ್ಟು ಸಮಯ ತೆಗೆದುಕೊಳ್ಳುತ್ತಿರಲಿಲ್ಲ. ವರಿಷ್ಠರ ನಡೆ ಬೊಮ್ಮಾಯಿಗೂ ಅರ್ಥವಾಗದ ಸಂಗತಿಯೇನಲ್ಲ! ಆರ್‌ಎಸ್‌ಎಸ್‌ ಕೈಗೊಂಬೆಯಂತೆ ನಡೆದುಕೊಂಡ ಬೊಮ್ಮಾಯಿ ಈಗ ಪಕ್ಷಕ್ಕೆ ಬೇಡವಾದ ನಾಯಕರಾಗಿದ್ದಾರೆ.

ರಾಜ್ಯ ಬಿಜೆಪಿ ನಾಯಕರು ಅಸಮರ್ಥರಾದರೇ?

ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಸ್ಥಾನ ಮತ್ತು ಮುಖ್ಯವಾಗಿ ಪ್ರತಿಪಕ್ಷ ನಾಯಕರನ್ನು ಈವರೆಗೂ ಆಯ್ಕೆ ಮಾಡದ ಬಿಜೆಪಿ ವರಿಷ್ಠರ ನಡೆ ಹಿಂದೆ ರಾಜ್ಯ ಬಿಜೆಪಿಗೆ ದಟ್ಟವಾದ ಸಂದೇಶವಿದೆ. ಈಗಿರುವ ರಾಜ್ಯ ಬಿಜೆಪಿ ನಾಯಕರು ಯಾವುದಕ್ಕೂ ಸಮರ್ಥರಲ್ಲ ಎಂಬುದನ್ನು ಬಿಜೆಪಿ ವರಿಷ್ಠರೇ ತಮ್ಮ ನಡೆಯಿಂದ ಬಯಲು ಮಾಡಿದ್ದಾರೆ. ಕೇವಲ 19 ಶಾಸಕರ ಬಲ ಹೊಂದಿರುವ ಮಾಜಿ ಸಿಎಂ ಎಚ್‌ ಡಿ ಕುಮಾರಸ್ವಾಮಿ ಪ್ರತಿಪಕ್ಷದ ನಾಯಕರಾಗಲಿದ್ದಾರೆ ಎನ್ನುವ ಮಾತುಗಳು ಕೇಳಿಬಂದಾಗ ರಾಜ್ಯ ಬಿಜೆಪಿ ನಾಯಕರು ಸಹಿಸಲಸಾಧ್ಯವಾದ ಸಂಕಟಕ್ಕಿಟ್ಟುಕೊಂಡಿತ್ತು. ಬಸವರಾಜ ಬೊಮ್ಮಾಯಿ ಅವರಂತೂ ಕುಮಾರಸ್ವಾಮಿ ಜೊತೆಗೆ ಹೋಗಿ ಸುದ್ದಿಗೋಷ್ಠಿ ಮಾಡಿದ್ದು, ಆ ಬೆಳವಣಿಗೆಗೆ ಮತ್ತಷ್ಟು ಪುಷ್ಟಿ ಸಿಕ್ಕಿತು. ಅಷ್ಟೇ ವೇಗವಾಗಿ ಆರಂಭ ಶೂರತ್ವ ಮೆರೆದ ಕುಮಾರಸ್ವಾಮಿ ಈಗ ಸೈಲೆಂಟ್‌ ಆಗಿದ್ದಾರೆ.

ಕಾಂಗ್ರೆಸ್ಸಿಗೆ ಅಧಿಕಾರದ ಮದವೇರಿತೆ?

ಬಿಜೆಪಿ ದುರಾಡಳಿತದಿಂದ ಬೇಸತ್ತಿದ್ದ ರಾಜ್ಯದ ಮತದಾರರು ಕಾಂಗ್ರೆಸ್‌ಗೆ 135 ಸ್ಥಾನಗಳ ಸ್ಪಷ್ಟ ಬಹುಮತ ನೀಡಿ ಆಶೀರ್ವಾದ ಮಾಡಿದರು. ಇದು ಕಾಂಗ್ರೆಸ್‌ ಗೆಲುವು ಎನ್ನುವುದಕ್ಕಿಂತ ಬೆಲೆ ಏರಿಕೆಯಿಂದ ಹತಾಶರಾಗಿದ್ದ ಜನರ ತೀರ್ಪು! ಜನರ ಆಶೀರ್ವಾದವನ್ನು ಗೌರವಿಸಿ ವಿನಯವಂತಿಕೆಯಿಂದ ನಡೆದುಕೊಳ್ಳಬೇಕಾದ ಕಾಂಗ್ರೆಸ್‌ನವರ ಸದ್ಯದ ನಡವಳಿಕೆ ನೋಡಿದರೆ ಅಧಿಕಾರದ ಮದವೇರಿದಂತೆ ಕಾಣುತ್ತಿದೆ.

ಕಾಂಗ್ರೆಸ್‌ ಗೆಲುವಿನೊಂದಿಗೆ ಆರಂಭವಾದ ಸ್ವಪಕ್ಷದ ನಾಯಕರ ಅಡೆತಡೆಗಳು ಪಕ್ಷದೊಳಗೆ ಇನ್ನೂ ನಿವಾರಣೆಯಾದಂತೆ ಕಾಣುತ್ತಿಲ್ಲ. ಮುಖ್ಯಮಂತ್ರಿ ಆಯ್ಕೆಯಿಂದ ಶುರುವಾದ ಮನಸ್ತಾಪ ಇದೀಗ ಸಚಿವರ ವಿರುದ್ಧ ಶಾಸಕರ ಅಸಮಾಧಾನದವರೆಗೂ ಬಂದು ತಲುಪಿದೆ. ಸಚಿವರ ವಿರುದ್ಧ 30ಕ್ಕೂ ಹೆಚ್ಚು ತಮ್ಮದೇ ಪಕ್ಷದ ಶಾಸಕರು ಅಸಮಾಧಾನ ವ್ಯಕ್ತಪಡಿಸಿದ್ದು, ಪತ್ರ ಪ್ರಕರಣ ಬಯಲಾಗಿದ್ದು ಹಾಗೂ ಕಾಂಗ್ರೆಸ್‌ ಶಾಸಕರಿಂದಲೇ ವ್ಯಕ್ತವಾದ ವರ್ಗಾವಣೆ ಆರೋಪ ಎಲ್ಲವನ್ನು ನೋಡಿದಾಗ ಕಾಂಗ್ರೆಸ್‌ ಒಳಗಿನ ಅಸಮಾಧಾನ ದಿನೇ ದಿನೇ ಬಿಗಡಾಯಿಸುತ್ತಲೇ ಇದೆ.   

ಅಸಮಾಧಾನದ ಸೂಕ್ಷ್ಮತೆ ಅರಿತ ಹೈಕಮಾಂಡ್‌ ಶಾಸಕಾಂಗ ಪಕ್ಷದ ಸಭೆ ನಡೆಸಲು ಸೂಚಿಸಿತು. ಆ ಪ್ರಕಾರ ಸಿಎಂ ಸಿದ್ದರಾಮಯ್ಯ ಶಾಸಕಾಂಗ ಸಭೆ ನಡೆಸಿ, ಅಸಮಾಧಾನಿತರ ಸಮಸ್ಯೆ ಆಲಿಸಿ, ಕೆಲವು ಶಾಸಕರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು. ಆ ಸಭೆಯಲ್ಲಿ ಆಳಂದ ಶಾಸಕ ಬಿ ಆರ್ ಪಾಟೀಲ್ ಅವರು ನೇರವಾಗಿಯೇ ಸಿಎಂ ಅವರಿಗೆ ರಾಜೀನಾಮೆ ನೀಡಲು ನಾನು ಸಿದ್ಧ ಎಂದು ಹೇಳಿರುವುದು ಅಚ್ಚರಿಗೆ ಕಾರಣವಾಗಿದೆ. ಇತ್ತ ಸಚಿವ ಸ್ಥಾನ ಸಿಗದೇ ಬಿ ಕೆ ಹರಿಪ್ರಸಾದ್‌ ಕೂಡ ಸಿದ್ದರಾಮಯ್ಯ ವಿರುದ್ಧ ಬಹಿರಂಗವಾಗಿ ಹೇಳಿಕೆ ನೀಡಿ, ಪಕ್ಷಕ್ಕೆ ಮತ್ತಷ್ಟು ಮುಜುಗರ ತಂದಿಟ್ಟಿದ್ದಾರೆ.

ಒಬ್ಬ ರಾಷ್ಟ್ರೀಯ ನಾಯಕರಾಗಿ ಮಿಂಚಿ, ರಾಜ್ಯ ರಾಜಕಾರಣಕ್ಕೆ ಮರಳಿರುವ ಬಿ ಕೆ ಹರಿಪ್ರಸಾದ್‌ ನಡೆ ಎಳಸುತನದ ರಾಜಕಾರಣದಂತೆ ಕಾಣುತ್ತಿದೆ. ಹೈಕಮಾಂಡ್‌ ಜೊತೆ ನೇರ ಸಂಪರ್ಕದಲ್ಲಿರುವ ಬಿ ಕೆ ಹರಿಪ್ರಸಾದ್‌ ಅವರು ತಮ್ಮ ಅಸಮಾಧಾನಗಳನ್ನು ಎಲ್ಲಿ, ಹೇಗೆ ಹೇಳಬೇಕೆನ್ನುವುದನ್ನು ಬಿಟ್ಟು, ರಾಜಕೀಯ ಅನುಭವವೇ ಇಲ್ಲದ ರಾಜಕಾರಣಿಗಳ ತರ ಬಹಿರಂಗವಾಗಿ ಮಾಧ್ಯಮಗಳ ಮುಂದೆ ಹೇಳಿ, ತಮ್ಮ ಘನತೆಗೆ ತಾವೇ ಕಪ್ಪು ಚುಕ್ಕೆ ಇಟ್ಟುಕೊಂಡಿದ್ದಾರೆ.

ಇನ್ನು ಕಾಂಗ್ರೆಸ್‌ ಶಾಸಕಾಂಗ ಸಭೆಯ ಬಳಿಕವೂ ಸಚಿವರು ಹಾಗೂ ಶಾಸಕರ ಮನಸ್ತಾಪ ಮುಂದುವರೆದಿದ್ದು, ಇದೀಗ ಸಚಿವರ ಹಾಗೂ ಶಾಸಕರ ಅಸಮಾಧಾನವನ್ನು ಶಮನಗೊಳಿಸಲು ಕಾಂಗ್ರೆಸ್‌ ಹೈಕಮಾಂಡ್‌ ಮಧ್ಯ ಪ್ರವೇಶಿಸಿದೆ. ಹೀಗಾಗಿ ಸರ್ಕಾರದ ವಿರುದ್ಧ, ಮಂತ್ರಿಗಳ ವಿರುದ್ಧ ಅಸಮಾಧಾನಗೊಂಡ ನಾಯಕರಿಗೆ ದೆಹಲಿಗೆ ಬರುವಂತೆ ಹೈಕಮಾಂಡ್‌ ಬುಲಾವ್‌ ನೀಡಿದೆ.

ಆಗಸ್ಟ್ 02 ರಂದು ಆಹ್ವಾನಿತ ಮುಖಂಡರು ನವದೆಹಲಿಗೆ ತೆರಳಲಿದ್ದಾರೆ. ಆಡಳಿತಾರೂಢ ಪಕ್ಷದಲ್ಲಿ ಅಸಮಾಧಾನ ತಲೆದೋರಿರುವ ಲಕ್ಷಣಗಳು ಗೋಚರಿಸಿರುವ ಬೆನ್ನಲ್ಲೇ ನಡೆಯುತ್ತಿರುವ ಈ ಸಭೆ ರಾಜಕೀಯ ಕುತೂಹಲಕ್ಕೆ ಕಾರಣವಾಗಿದೆ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್​, ಸಚಿವರಾದ ಜಿ. ಪರಮೇಶ್ವರ್, ಎಂ.ಬಿ ಪಾಟೀಲ್, ಸತೀಶ್ ಜಾರಕಿಹೊಳಿ, ರಾಮಲಿಂಗಾರೆಡ್ಡಿ,  ಈಶ್ವರ್ ಖಂಡ್ರೆ, ಹೆಚ್. ಕೆ ಪಾಟೀಲ್, ಮುನಿಯಪ್ಪ, ದಿನೇಶ್ ಗುಂಡೂರಾವ್, ಕೃಷ್ಣಭೈರೇಗೌಡ, ಜಮೀರ್ ಅಹ್ಮದ್, ಚಲುವರಾಯಸ್ವಾಮಿ, ಶಿವಾನಂದ ಪಾಟೀಲ್, ಎಸ್ ಎಸ್ ಮಲ್ಲಿಕಾರ್ಜುನ, ಮಧು ಬಂಗಾರಪ್ಪ, ಎನ್. ಎಸ್ ಬೋಸರಾಜು, ಪ್ರಿಯಾಂಕ್ ಖರ್ಗೆಗೆ ಬುಲಾವ್​ ಬಂದಿದೆ ಎನ್ನಲಾಗಿದೆ.

ರಾಜ್ಯ ರಾಜಕಾರಣ

ಸಮನ್ವಯ ಸಮಿತಿ ರಚನೆ ಸಾಧ್ಯತೆ

ಸರ್ಕಾರದೊಳಗೆ ಶಾಸಕರು ಹಾಗೂ ಸಚಿವರ ನಡುವೆ ಅಸಮಾಧಾನ ದೊಡ್ಡದಾಗಿರುವ ಹಿನ್ನೆಲೆಯಲ್ಲಿ ಶಾಸಕರ ಸಮಸ್ಯೆಗಳನ್ನು ಪರಿಹರಿಸಲು ಕಾಂಗ್ರೆಸ್ ಹೈಕಮಾಂಡ್ ಸಮನ್ವಯ ಸಮಿತಿ ರಚಿಸುವ ಸಾಧ್ಯತೆ ಇದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಅಲ್ಲದೇ ಸರ್ಕಾರ ಮತ್ತು ಪಕ್ಷದ ನಾಯಕರ ನಡುವೆ ಸೇತುವೆಯಾಗಿ ಕೆಲಸ ಮಾಡುವ ನಾಯಕರೊಬ್ಬರ ನೇತೃತ್ವದಲ್ಲಿ ಈ ಸಮಿತಿಯನ್ನು ರಚಿಸಬಹುದು ಎಂದು ಹೇಳಲಾಗುತ್ತಿದೆ.

ಹಾಗೆಯೇ ಸಚಿವ ಸ್ಥಾನದಿಂದ ವಂಚಿತರಾದ ನಾಯಕರನ್ನು ಮಂಡಳಿ ಮತ್ತು ನಿಗಮಗಳ ಮುಖ್ಯಸ್ಥರನ್ನಾಗಿ ನೇಮಕ ಮಾಡುವ ಬಗ್ಗೆ ಸಭೆಯಲ್ಲಿ ಕಾಂಗ್ರೆಸ್​​ ನಾಯಕರು ಚರ್ಚಿಸಬಹುದು. ಮುಂದುವರಿದು, ಸ್ಥಳೀಯ ಮತ್ತು ಲೋಕಸಭೆ ಚುನಾವಣೆ ಕಾರ್ಯತಂತ್ರದ ಬಗ್ಗೆ ಗಂಭೀರ ಚರ್ಚೆ ನಡೆಯಲಿದೆ ಎನ್ನಲಾಗಿದೆ.

ಗ್ಯಾರಂಟಿ ಜಾರಿ ಉತ್ಸಾಹ ಎಲ್ಲಿ ಹೋಯಿತು?

ಸರ್ಕಾರದೊಳಗೆ ಸಚಿವರ ಮತ್ತು ಶಾಸಕ ನಡುವೆ ಅಸಮಾಧಾನ ಗ್ಯಾರಂಟಿ ಯೋಜನೆಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಕಂಡುಬರುತ್ತಿದೆ. ಸರ್ಕಾರ ರಚನೆಯಾಗುತ್ತಿದ್ದಂತೆ ಐದು ಗ್ಯಾರಂಟಿಗಳ ಜಾರಿಯಲ್ಲಿ ಆರಂಭಿಕವಾಗಿ ತೋರಿದ ಉತ್ಸಾಹ ಕಾಂಗ್ರೆಸ್‌ ನಾಯಕರಲ್ಲಿ ಬರುಬರುತ್ತ ಕಡಿಮೆಯಾದಂತೆ ಕಾಣುತ್ತಿದೆ. ರಾಜ್ಯಾದ್ಯಂತ ಮಳೆಯಾಗುತ್ತಿದ್ದು, ಸೂಕ್ತ ಕ್ರಮಗಳ ಬಗ್ಗೆ ಯೋಚಿಸುವ ಬದಲು ಒಳ ಬೇಗುದಿ ಮುಖ್ಯಮಂತ್ರಿ ಅವರಿಗೆ ತಲೆನೋವಾಗಿದೆ. ಇದರ ಪರಿಣಾಮ ಗ್ಯಾರಂಟಿ ಯೋಜನೆಗಳ ಜಾರಿ ವೇಗ ಕುಂಠಿತವಾಗಿದ್ದು, ಹಣಕಾಸು ಸಮಸ್ಯೆ ತಲೆದೋರಿರುವ ಬಗ್ಗೆ ರಾಮಲಿಂಗಾರೆಡ್ಡಿಯಂತ ಸಚಿವರು ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದ್ದಾರೆ.

ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಯಾಗಲು ಉಂಟಾಗಿರುವ ಸಮಸ್ಯೆಗಳನ್ನು ಬಗೆಹರಿಸುವ ಬಗ್ಗೆ ಸಚಿವರಾಗಲಿ ಅಥವಾ ಸರ್ಕಾರವಾಗಲಿ ಏನು ಕ್ರಮಕೈಗೊಂಡಿದೆ ಎಂಬುದರ ಬಗ್ಗೆ ಜನರಿಗೆ ಮಾಹಿತಿಯೇ ಇಲ್ಲ. ಮೂರು ಲಕ್ಷಕ್ಕೂ ಹೆಚ್ಚು ಪಡಿತರ ಚೀಟಿಗಳ ಅರ್ಜಿ ವಿಲೇವಾರಿಯಾಗಬೇಕಿದೆ. ಹೊಸದಾಗಿ ಪಡಿತರ ಚೀಟಿಗಳಿಗೆ ಸದಸ್ಯರ ಹೆಸರು ಸೇರ್ಪಡೆಯಾಗಬೇಕಿದೆ. ಇದೆಲ್ಲ ಕಾರ್ಯ ಮೂರು ವರ್ಷದಿಂದ ಬಾಕಿ ಇದೆ. ಈ ಬಗ್ಗೆ ಸ್ಪಷ್ಟ ರೂಪುರೇಷ ಕೊಡಬೇಕಾದ ಸರ್ಕಾರ ಜಾಣಮೌನ ವಹಿಸಿರುವುದು ದುರಂತ!

ಬೆಲೆ ಕಳೆದುಕೊಂಡ ಜೆಡಿಎಸ್‌

ಜೆಡಿಎಸ್‌ನದ್ದು ಇನ್ನೊಂದು ಕಥೆ. ಹೀನಾಯ ಸೋಲು ಕಂಡ ಜೆಡಿಎಸ್‌ ಈಗ ಆಟಕ್ಕುಂಟು ಲೆಕ್ಕಕ್ಕಿಲ್ಲವಾದ ಪಕ್ಷ. ಆದರೆ, ರಾಜಕೀಯ ತಂತ್ರ ಹೆಣೆಯುವಲ್ಲಿ ಹಿಂದೆ ಬಿದ್ದಿಲ್ಲ. ಪ್ರಧಾನಿ ನರೇಂದ್ರ ಮೋದಿ ಜೊತೆಗೆ ಕುಚುಕು ಗೆಳೆಯರಂತೆ ಎಚ್‌ ಡಿ ದೇವೇಗೌಡರು ನಡೆದುಕೊಂಡರೆ, ಅತ್ತ ಎಚ್‌ ಡಿ ಕುಮಾರಸ್ವಾಮಿ ಅಮಿತ್‌ ಶಾ ಜೊತೆ ಕೈ ಕುಲುಕುತ್ತಾರೆ. ಈ ಪಕ್ಷದ್ದು ಒಂದು ರೀತಿ ಅರ್ಥವಾಗದ ರಾಜಕಾರಣ. ಈಗಲು ಕೂಡ ಜೆಡಿಎಸ್ ನೈಜ ಕಾಳಜಿಯಿಂದ ಜನರಿಗೆ ಹತ್ತಿರವಾದರೆ, ಕಾಂಗ್ರೆಸ್-ಬಿಜೆಪಿಗಳೆಂಬ ಕೊಬ್ಬಿದ ರಾಷ್ಟ್ರೀಯ ಪಕ್ಷಗಳೆದುರು ಪುಟಿದೆದ್ದು ನಿಲ್ಲಬಹುದು.

WhatsApp Image 2023 04 01 at 3.53.40 PM e1680350106945
+ posts

ಶರಣು ಚಕ್ರಸಾಲಿ ಅವರು ಬಾದಾಮಿ ತಾಲ್ಲೂಕಿನ ತಳಕವಾಡ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಕಳೆದ 10 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಸದ್ಯ 'ಈ ದಿನ.ಕಾಮ್‌' ಮಾಧ್ಯಮ ಸಂಸ್ಥೆಯಲ್ಲಿ ಹಿರಿಯ ವರದಿಗಾರರಾಗಿ 2022 ಮಾರ್ಚ್‌1ರಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜಕೀಯ, ಸಚಿವಾಲಯದ ವರದಿಗಾರಿಕೆ ಹಾಗೂ ಕೃಷಿ ಸಂಬಂಧಿತ ಸ್ಟೋರಿಗಳನ್ನು ಬರೆಯುವುದು ಇವರ ಆಸಕ್ತಿ. ಟಿವಿ ನಿರೂಪಣೆ, ವಿಡಿಯೋ ಸಂದರ್ಶನ, ವಿಡಿಯೋ ಸ್ಟೋರಿ, ತನಿಖಾ ವರದಿಗಾರಿಕೆ ಹಾಗೂ ನುಡಿ ಬರಹ ಬರೆಯುವುದು ಇವರ ಅಚ್ಚುಮೆಚ್ಚಿನ ಕ್ಷೇತ್ರ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಶರಣು ಚಕ್ರಸಾಲಿ
ಶರಣು ಚಕ್ರಸಾಲಿ
ಶರಣು ಚಕ್ರಸಾಲಿ ಅವರು ಬಾದಾಮಿ ತಾಲ್ಲೂಕಿನ ತಳಕವಾಡ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಕಳೆದ 10 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಸದ್ಯ 'ಈ ದಿನ.ಕಾಮ್‌' ಮಾಧ್ಯಮ ಸಂಸ್ಥೆಯಲ್ಲಿ ಹಿರಿಯ ವರದಿಗಾರರಾಗಿ 2022 ಮಾರ್ಚ್‌1ರಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜಕೀಯ, ಸಚಿವಾಲಯದ ವರದಿಗಾರಿಕೆ ಹಾಗೂ ಕೃಷಿ ಸಂಬಂಧಿತ ಸ್ಟೋರಿಗಳನ್ನು ಬರೆಯುವುದು ಇವರ ಆಸಕ್ತಿ. ಟಿವಿ ನಿರೂಪಣೆ, ವಿಡಿಯೋ ಸಂದರ್ಶನ, ವಿಡಿಯೋ ಸ್ಟೋರಿ, ತನಿಖಾ ವರದಿಗಾರಿಕೆ ಹಾಗೂ ನುಡಿ ಬರಹ ಬರೆಯುವುದು ಇವರ ಅಚ್ಚುಮೆಚ್ಚಿನ ಕ್ಷೇತ್ರ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X