ಬೆಳಗಾವಿ ಜಿಲ್ಲೆಯಲ್ಲಿ 18 ಕ್ಷೇತ್ರಗಳ ಪೈಕಿ 13 ಸ್ಥಾನ ಕಾಂಗ್ರೆಸ್ ಗೆಲ್ಲಲಿದೆ. ಈ ಬಾರಿ ರಾಜ್ಯದಲ್ಲಿಯೂ ಕಾಂಗ್ರೆಸ್ ಸರ್ಕಾರ ಬರುವುದು ಖಚಿತ. ನಾನು ಮಂತ್ರಿಯಾಗುವ ವಿಶ್ವಾಸ ಮೂಡಿದೆ ಎಂದು ಬೆಳಗಾವಿ ಗ್ರಾಮೀಣ ಅಭ್ಯರ್ಥಿ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದರು.
ಬೆಳಗಾವಿ ಜಿಲ್ಲೆಯ ವಿಜಯನಗರದ ಮತಗಟ್ಟೆಯಲ್ಲಿ ಬುಧವಾರ ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ಬಳಿಕ ಅವರು ಮಾಧ್ಯಮಗಳ ಜೊತೆ ಮಾತನಾಡಿದರು.
“ಕಳೆದ ಚುನಾವಣೆಯಲ್ಲಿ ಬಹಳ ಒತ್ತಡದಲ್ಲಿ ಮತ ಚಲಾಯಿಸಿದ್ದೆ. ಆದರೆ, ಈ ಬಾರಿ ಒತ್ತಡರಹಿತವಾಗಿ ಮತ ಚಲಾಯಿಸಿರುವೆ. ಇದಕ್ಕೆಲ್ಲ ಕಾರಣ ಜನರು ನೀಡಿದ ಆತ್ಮವಿಶ್ವಾಸ” ಎಂದರು.
ಹೆಬ್ಬಾಳ್ಕರ್ ಅವರನ್ನು ಸೋಲಿಸದಿದ್ದರೆ ನನಗೆ ಅವಮಾನ ಎಂದು ರಮೇಶ್ ಜಾರಕಿಹೊಳಿ ಹೇಳಿದ್ದಾರೆ. ಇದಕ್ಕೆ ನಿಮ್ಮ ಉತ್ತರ ಏನು ಎಂದು ಪತ್ರಕರ್ತರು ಪ್ರಶ್ನಿಸಿದಾಗ, “ನಾನು ಯಾರನ್ನೂ ಅವಮಾನ ಮಾಡುವವಳಲ್ಲ. ಆ ಉದ್ದೇಶವೂ ನನಗಿಲ್ಲ. ಆದರೆ ನನ್ನ ಜನ ನನ್ನನ್ನೇ ಗೆಲ್ಲಿಸುವ ನಂಬಿಕೆ ಇದೆ. ನನ್ನ ಗೆಲುವು ಇನ್ಯಾರಿಗೋ ಅವಮಾನ ಎಂದುಕೊಂಡರೆ ನಾನೇನು ಮಾಡಲಾಗುವುದಿಲ್ಲ” ಎಂದರು.