- ವಿಧಾನಸಭಾ ಚುನಾವಣೆ; ಜೆಡಿಎಸ್-ಕಾಂಗ್ರೆಸ್ ಹೊಂದಾಣಿಕೆ
- ನಮ್ಮ ಪಕ್ಷದಲ್ಲಿ ಒಳಒಪ್ಪಂದ ಆಗಿಯೇ ಇಲ್ಲ ಎಂದು ಹೇಳಲ್ಲ
ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಹೊಂದಾಣಿಕೆ ರಾಜಕಾರಣ ಮಾಡಿಕೊಂಡಿದ್ದರಿಂದ ನಮ್ಮ ಪಕ್ಷದ ಅಭ್ಯರ್ಥಿಗಳ ಸೋಲಿಗೆ ಕಾರಣವಾಯಿತು. ಉದಾಹರಣಗೆ ಹಾಸನ ಮತ್ತು ಚಿಕ್ಕಮಗಳೂರು ಕ್ಷೇತ್ರಗಳಲ್ಲಿ ಹೊಂದಾಣಿಕೆ ರಾಜಕಾರಣ ಕಾಣಬಹುದು ಎಂದು ಬಿಜೆಪಿ ಸಂಸದ ಡಿ ವಿ ಸದಾನಂದಗೌಡ ಹೇಳಿದರು.
ಬೆಂಗಳೂರಿನಲ್ಲಿ ಮಂಗಳವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, “ಹೊಂದಾಣಿಕೆ ರಾಜಕಾರಣಕ್ಕೆ ಹಾಸನದಲ್ಲಿ ನಮ್ಮ ಅಭ್ಯರ್ಥಿ ಸೋಲಬೇಕಾಯಿತು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಮತಗಳನ್ನು ನೋಡಿದರೆ ಹೊಂದಾಣಿಕೆ ರಾಜಕಾರಣ ಅರ್ಥವಾಗುತ್ತದೆ” ಎಂದರು.
“ಹಾಗೆಯೇ ಸಿಟಿ ರವಿ ಕ್ಷೇತ್ರದಲ್ಲೂ ಈ ಹೊಂದಾಣಿಕೆ ರಾಜಕಾರಣ ನೋಡಬಹುದು. ಇಲ್ಲಿ ಜೆಡಿಎಸ್ ಅಧಿಕೃತವಾಗಿ ಘೋಷಣೆ ಮಾಡಿದೆ. ಇದಲ್ಲದೇ ಬೇರೆ ಬೇರೆ ವಿಧಾನಸಭಾ ಕ್ಷೇತ್ರಗಳಲ್ಲಿ ಜೆಡಿಎಸ್ ನಾಯಕರು ಅಧಿಕೃತವಾಗಿ ಕಾಂಗ್ರೆಸ್ ಬೆಂಬಲಿಸಿದ್ದಾರೆ. ಇದು ಒಳ ಒಪ್ಪಂದದ ರಾಜಕಾರಣಕ್ಕೆ ಉಂಟಾದ ಸೋಲು ನಮ್ಮದು” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಮೋದಿಯವರನ್ನು ಪ್ರಶ್ನಿಸಿದ್ದ ಪತ್ರಕರ್ತೆಗೆ ಹಿಂದುತ್ವವಾದಿಗಳಿಂದ ಕಿರುಕುಳ : ವೈಟ್‌ಹೌಸ್ ಖಂಡನೆ
ನಮ್ಮ ಪಕ್ಷದಲ್ಲಿ ಒಳಒಪ್ಪಂದ ಆಗಿಯೇ ಇಲ್ಲ ಎಂದು ಹೇಳುವುದಿಲ್ಲ. ಕೆಲವರು ವೈಯಕ್ತಿಕ ದ್ವೇಷಕ್ಕಾಗಿ ಒಳ ಒಪ್ಪಂದ ಮಾಡಿಕೊಂಡಿದ್ದಾರೆ. ಅಂತವರ ಬಗ್ಗೆ ಈಗಾಗಲೇ ಪಕ್ಷ ಒಂದು ನಿರ್ಧಾರಕ್ಕೆ ಬಂದಿದೆ. ಈಗ ರಾಜ್ಯಾದ್ಯಂತ ಜಿಲ್ಲಾ ಮಟ್ಟದ ಸಭೆಗಳು ನಡೆಯುತ್ತಿವೆ. ಈ ಸಭೆಯಲ್ಲಿ ಸೋಲಿನ ಪರಾಮರ್ಶೆ ನಡೆಯುತ್ತಿದೆ. ಒಳ ಒಪ್ಪಂದ ಮಾಡಿಕೊಂಡವರ ಬಗ್ಗೆ ಪಕ್ಷ ಖಂಡಿತ ನಿರ್ಧಾರ ತೆಗೆದುಕೊಳ್ಳುತ್ತದೆ. ಸಂಘಟನೆಯಲ್ಲಿ ತಪ್ಪು ಮಾಡಿದವರನ್ನು ತಿದ್ದುವ ಕೆಲಸವನ್ನು ಮಾಡುತ್ತೆ” ಎಂದರು.