ಅತ್ತಿಬೆಲೆ ಪಟಾಕಿ ದುರಂತ ಪ್ರಕರಣ ನಮಗೆ ಪಾಠ ಕಲಿಸಿದ್ದು, ಹಾಗಾಗಿ ರಾಜ್ಯಾದ್ಯಂತ ಪಟಾಕಿ ನಿಷೇಧಕ್ಕೆ ಚಿಂತನೆ ಮಾಡಲಾಗುವುದು ಎಂದು ಗೃಹ ಸಚಿವ ಜಿ. ಪರಮೇಶ್ವರ್ ಹೇಳಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, “ಸಾಧಕ ಬಾಧಕ ಗಮನಿಸಿ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಪಟಾಕಿ ನಿಷೇಧ ಪ್ರಾಯೋಗಿಕ ಜಾರಿಗೊಳಿಸಿ ಯಶಸ್ವಿಯಾದರೆ ಇಡೀ ರಾಜ್ಯಕ್ಕೆ ವಿಸ್ತರಿಸಲಾಗುವುದು. ಇತ್ತೀಚೆಗೆ ಪಟಾಕಿ ಅವಘಡಗಳಲ್ಲಿ ಅಮಾಯಕರು ಮೃತಪಟ್ಟಿದ್ದಾರೆ. ದೆಹಲಿ ಮಾದರಿಯಲ್ಲಿ ರಾಜ್ಯದಲ್ಲಿ ಪಟಾಕಿ ನಿಷೇಧಕ್ಕೆ ಚಿಂತನೆ ಮಾಡಲಾಗುವುದು” ಎಂದು ಜಿ ಪರಮೇಶ್ವರ್ ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ವಿಷಾಹಾರ ಸೇವನೆ: ಅಲಿಗಢ ಮುಸ್ಲಿಂ ವಿವಿಯ 300ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಅಸ್ವಸ್ಥ
ಅಕ್ರಮ ದಸ್ತಾನು ಪರಿಶೀಲನೆ ವೇಳೆ ತಹಸೀಲ್ದಾರ್ ಸೇರಿದಂತೆ ಕಂದಾಯ ಅಧಿಕಾರಿಗಳು, ಪೊಲೀಸ್, ಅಗ್ನಿಶಾಮಕ ಮತ್ತು ಸಾರಿಗೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದು, ಗಡಿಯಲ್ಲಿ ಆರ್‌ಟಿಓ ಅಧಿಕಾರಿಗಳು ಪರಿಶೀಲಿಸಿ ಕ್ರಮ ವಹಿಸಿಲ್ಲ. ಹಾಗಾಗಿ ತಹಸೀಲ್ದಾರ್ ಸೇರಿದಂತೆ ಹಲವು ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಪರಮೇಶ್ವರ್ ಹೇಳಿದ್ದಾರೆ.
ದುರಂತ ನಡೆದ ಸ್ಥಳಕ್ಕೆ ಭೇಟಿ
ಅತ್ತಿಬೆಲೆ ಪಟಾಕಿ ಗೋದಾಮಿನಲ್ಲಿ ಅಗ್ನಿ ದುರಂತ ನಡೆದ ಸ್ಥಳಕ್ಕೆ ಗೃಹ ಇಲಾಖೆ ಸಚಿವ ಪರಮೇಶ್ವರ್ ಇಂದು ಭೇಟಿ ಮಾಡಿದ್ದು, ಘಟನೆ ಅಗ್ನಿಶಾಮಕ ಡಿಐಜಿ ಪಂತ್, ಐಜಿಪಿ ರವಿಕಾಂತೇಗೌಡರಿಂದ ಮಾಹಿತಿ ಪಡೆದುಕೊಂಡಿದ್ದಾರೆ. ಮಳಿಗೆ ಮಾಲೀಕನ ಬಗ್ಗೆ ಡಿಸಿ ದಯಾನಂದ್ ಅವರಿಂದ ಮಾಹಿತಿ ಪಡೆದರು.
ಸ್ಥಳದಲ್ಲಿ ಬೆಂಗಳೂರು ಜಿಲ್ಲಾಧಿಕಾರಿ ದಯಾನಂದ್, ಎಎಸ್ಪಿ ಪುರುಷೋತ್ತಮ್, ಡಿವೈಎಸ್ಪಿ ಮೋಹನ್, ತಹಸೀಲ್ದಾರ್ ಶಿವಪ್ಪ ಲಮ್ಹಾಣಿ ಸೇರಿದಂತೆ ಪ್ರಮುಖರು ಹಾಜರಿದ್ದರು.
ಅತ್ತಿಬೆಲೆ ಪಟಾಕಿ ದುರಂತದಲ್ಲಿ 17 ಮಂದಿ ಸಾವು ವಿಷಾದನೀಯ. ಪಟಾಕಿ ಮಳಿಗೆ ಮಾಲೀಕರು 2017 ರಿಂದ 2022 ವರೆಗೆ ನೂತನ ಪರವಾನಗಿ ನವೀಕರಣ ನಡುವೆ ನಕಲಿ ಲೈಸೆನ್ಸ್ ಸೃಷ್ಟಿ ಮಾಡಿದ್ದಾರೆ. ಕೇವಲ 1 ಸಾವಿರ ಕೆಜಿ ಪಟಾಕಿ ಮಾರಾಟಕ್ಕೆ ಪರವಾನಗಿ ನೀಡಲಾಗಿದೆ. ಆದರೆ 50 ಟನ್ಗೂ ಅಧಿಕ ಪಟಾಕಿ ಅಕ್ರಮವಾಗಿ ದಸ್ತಾನು ಮಾಡಲಾಗಿತ್ತು.