ಮನಮೋಹನಸಿಂಗ್ ದುರ್ಬಲ ಪ್ರಧಾನಿ ಎಂದೂ, ಮಾತು ಮಾತಿಗೆ ಸೋನಿಯಾ ಆಣತಿಗೆ ಕಾಯುತ್ತಾರೆಂದೂ ಟೀಕಿಸುತ್ತಲೇ ಬಂದಿದ್ದರು ಬಿಜೆಪಿಯ ಮಹಾರಥಿ ಎಲ್.ಕೆ.ಆಡ್ವಾಣಿ. ಆದರೆ, ಅಂತಿಮವಾಗಿ ಮನಮೋಹನ್ ಗೆದ್ದಿದ್ದರು. ಆಡ್ವಾಣಿ ಸೋತಿದ್ದರು.
1991ರಲ್ಲಿ ಪಿವಿ ನರಸಿಂಹರಾವ್ ಸಂಪುಟದ ಅರ್ಥಮಂತ್ರಿಯಾಗಿ ಉದಾರೀಕರಣ ಖಾಸಗೀಕರಣ ಹಾಗೂ ಮೋದಿ ಯುಗದ ಕಾರ್ಪೋರೇಟೀಕರಣಕ್ಕೆ ಅಡಿಪಾಯವನ್ನು ಹಾಕಿದವರೇ ಮನಮೋಹನ್ ಸಿಂಗ್. ಆದರೆ, ಉದಾರವಾದ ಮತ್ತು ಜಾಗತೀಕರಣ ಅರ್ಥವ್ಯವಸ್ಥೆಯ ಮಹಾನ್ ಪೂಜಾರಿಗಳ ಪ್ರಕಾರ 1991ರಲ್ಲಿ ಮನಮೋಹನ್ ಮಂಡಿಸಿದ ಬಜೆಟ್ಟು ಭಾರತದ ಅರ್ಥವ್ಯವಸ್ಥೆಗೆ ತೊಡಿಸಿದ್ದ ಬೇಡಿಗಳನ್ನು ಕಳಚಿ ಹಾಕಿತು.
“ಆಧುನಿಕ ಸಮಾಜ ಮತ್ತು ಆಧುನಿಕ ಆರ್ಥಿಕ ವ್ಯವಸ್ಥೆಯನ್ನು ನಡೆಸಲು ಸಾಮಾಜಿಕ ಸಮಾನತೆ ಮತ್ತು ನ್ಯಾಯಯುತ ಹಂಚಿಕೆಯ ಬುನಾದಿಯ ಮೇಲೆ ಆಧುನಿಕ ಸಮಾಜ ಮತ್ತು ಆಧುನಿಕ ಆರ್ಥಿಕವ್ಯವಸ್ಥೆಗಳು ಸಾಗಬೇಕು ಎಂದು ನಂಬುವವನು ನಾನು. ಮೂಲಭೂತ ಅರಸುವ ಸಮಾಜವಾದಿ ನಾನು. ಆದರೆ ಎಲ್ಲವನ್ನೂ ಸರ್ಕಾರವೇ ಮಾಡಬೇಕೆಂಬ ಸಮಾಜವಾದ ನನ್ನದಲ್ಲ. ಬೆಳೆಯುತ್ತಿರುವ ಅಸಮಾನತೆ, ಶಾಲಾ ಶಿಕ್ಷಣದಿಂದ ಹೊರಗುಳಿದಿರುವ ಕೋಟ್ಯಂತರ ಬಡ ಮಕ್ಕಳು, ಕೋಟ್ಯಂತರ ಜನರಿಗೆ ಸುರಕ್ಷಿತ ಕುಡಿಯುವ ನೀರಿನ ಸೌಲಭ್ಯ ಇಲ್ಲದಿರುವುದು ನನ್ನನ್ನು ಬಾಧಿಸಿದೆ. ಮೋದಿ ಸರ್ಕಾರ ತುಳಿದಿರುವ ಸಾರ್ವಜನಿಕ ಉದ್ದಿಮೆಗಳ ಖಾಸಗೀಕರಣದ ಹಾದಿ ನನಗೆ ಒಪ್ಪಿಗೆಯಿಲ್ಲ. ಸಾರ್ವಜನಿಕ ಮತ್ತು ಖಾಸಗಿ ಉದ್ಯಮಗಳು ಜೊತೆ ಜೊತೆಯಾಗಿ ನಡೆಯಬೇಕು” ಎಂದಿದ್ದರು.
2005ರಲ್ಲಿ ಜೆ.ಎನ್.ಯು.ಗೆ ಭೇಟಿ ನೀಡಿದ್ದ ಮನಮೋಹನ್ ಸಿಂಗ್ ತಮ್ಮ ಆರ್ಥಿಕ ನೀತಿಗಳಿಗಾಗಿ ಕಪ್ಪು ಬಾವುಟಗಳನ್ನು ಎದುರಿಸಬೇಕಾಗಿತ್ತು. ದೊಡ್ಡ ಸುದ್ದಿಯೇ ಆಯಿತು. ಜೆ.ಎನ್.ಯು. ಆಡಳಿತ ವಿದ್ಯಾರ್ಥಿಗಳಿಗೆ ನೋಟಿಸು ನೀಡಿತು. ಮರುದಿನವೇ ಪ್ರಧಾನಮಂತ್ರಿ ಕಾರ್ಯಾಲಯ ಮಧ್ಯಪ್ರವೇಶಿಸಿತು. ಪ್ರತಿಭಟನೆಯು ವಿದ್ಯಾರ್ಥಿಗಳ ಜನತಾಂತ್ರಿಕ ಹಕ್ಕು ಎಂದೂ, ಅವರ ವಿರುದ್ಧ ಯಾವುದೇ ಕ್ರಮ ಜರುಗಿಸಕೂಡದು ಎಂದು ತಾಕೀತು ಮಾಡಿತು ಎಂದು ಜೆ.ಎನ್.ಯು.ನಲ್ಲಿ ಓದಿರುವ ಹೋರಾಟಗಾರ ಉಮರ್ ಖಾಲೀದ್ ನೆನಪಿಸಿಕೊಂಡಿದ್ದುಂಟು.
“ನಾನು ದುರ್ಬಲ ಪ್ರಧಾನಿ ಅಲ್ಲ. ಅಹಮದಾಬಾದಿನ ಹಾದಿ ಬೀದಿಗಳಲ್ಲಿ ಅಮಾಯಕರ ನರಮೇಧ ಮಾಡಿಸುವುದೇ ಶಕ್ತಿಯುತ ಪ್ರಧಾನಿಯ ಅರ್ಥವೆಂದಾದರೆ ಅಂತಹ ಶಕ್ತಿಯುತ ಪ್ರಧಾನಿಯ ಪಟ್ಟ ನನಗೆ ಬೇಕಿಲ್ಲ. ಭಾರತಕ್ಕೂ ಅಂತಹ ಪ್ರಧಾನಿಯ ಅಗತ್ಯವಿಲ್ಲ” ಎಂದು ಅವರು ಪ್ರಧಾನಿಯಾಗಿದ್ದಾಗಲೇ ಪತ್ರಿಕಾಗೋಷ್ಠಿಯಲ್ಲಿ ಉತ್ತರ ನೀಡಿದ್ದರು.
ಸುದ್ದಿಮಾಧ್ಯಮಗಳ ಕಠಿಣ ಪ್ರಶ್ನೆಗಳಿಗೆ ಅವರು ಎಂದೂ ಅಳುಕಲಿಲ್ಲ. ಹತ್ತು ವರ್ಷಗಳ ಕಾಲ ಪ್ರಧಾನಿಯಾಗಿದ್ದ ಅವರು ಒಟ್ಟು 116 ಪತ್ರಿಕಾಗೋಷ್ಠಿಗಳನ್ನು ನಡೆಸಿದ್ದರು. ತಮ್ಮ ವಿದೇಶಯಾತ್ರೆಗಳಿಂದ ಮರಳುವಾಗ ವಿಮಾನದಲ್ಲೇ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರ ನೀಡುವ ವಾಡಿಕೆಯನ್ನು ಕಡೆಯತನಕ ಪಾಲಿಸಿದರು. ಈಗಿನ ಪ್ರಧಾನಿ ಕೂಡ ಹತ್ತು ವರ್ಷಗಳ ಅಧಿಕಾರಾವಧಿಯನ್ನು ದಾಟಿದ್ದಾರೆ. ಒಂದೇ ಒಂದು ಪತ್ರಿಕಾಗೋಷ್ಠಿಯನ್ನೂ ಎದುರಿಸಿಲ್ಲ. ಬೂಟುನೆಕ್ಕುವ ಆಯ್ದ ಮಾಧ್ಯಮಗಳಿಗೆ ಪೂರ್ವಯೋಜಿತ ಸಂದರ್ಶನಗಳನ್ನು ನೀಡಿದ್ದಾರೆ.
ಇದನ್ನು ಓದಿದ್ದೀರಾ?: ದೇಶ ಕಂಡ ಪರಮ ಪ್ರಾಮಾಣಿಕ ಪ್ರಧಾನಿ ಮನಮೋಹನ್ ಸಿಂಗ್
2005ರ ಮಾಹಿತಿ ಹಕ್ಕು ಕಾಯಿದೆ ಮತ್ತು ನರೇಗಾ (ಮನರೇಗಾ), 2009ರ ಶಿಕ್ಷಣದ ಹಕ್ಕು, 2013ರ ಭೂಸ್ವಾಧೀನ ಕಾಯಿದೆ, ಆಹಾರದ ಹಕ್ಕು ಮತ್ತು ಅರಣ್ಯ ಹಕ್ಕುಗಳಂತಹ ಜನಪರ ಕಾಯಿದೆಗಳು ಬಂದದ್ದು ಮನಮೋಹನ್ ಅವಧಿಯಲ್ಲಿಯೇ. ಆದರೆ ಈ ಕಾಯಿದೆಗಳ ಜಾರಿಗೆ ಎಡಪಕ್ಷಗಳು ಮತ್ತು ಸೋನಿಯಾ ನೇತೃತ್ವದ ಜನಪರರನ್ನು ಒಳಗೊಂಡಿದ್ದ ರಾಷ್ಟ್ರೀಯ ಸಲಹಾ ಸಮಿತಿ ಒತ್ತಡವೇ ಮುಖ್ಯ ಕಾರಣ ಎನ್ನುವ ವಾದದಲ್ಲಿ ಹುರುಳಿದೆ.
ದೇಶದ ಅರ್ಥವ್ಯವಸ್ಥೆಯ ಗಾಯದ ಮೇಲೆ ಬರೆ ಎಳೆದ ಮೋದಿಯವರ ನೋಟು ರದ್ದು ಕ್ರಮ ಕುರಿತು ಮನಮೋಹನ್ ರಾಜ್ಯಸಭೆಯಲ್ಲಿ ಮೋದಿಯವರ ಮುಖಕ್ಕೇ ಹೇಳಿದ್ದ ನಿಷ್ಠುರ ನುಡಿಗಳು- ನೋಟು ರದ್ದು ಕ್ರಮವು ಒಂದು ಸುಸಂಘಟಿತ ಲೂಟಿ, ಕಾನೂನುಬದ್ಧ ಕೊಳ್ಳೆ ಹಾಗೂ ಬೃಹತ್ ವಿನಾಶ. ಕೃಷಿ ಕೈಗಾರಿಕೆ ಹಾಗೂ ಅಸಂಘಟಿತ ವಲಯಗಳನ್ನು ಬಹುವಾಗಿ ಬಾಧಿಸಿದ ಕ್ರಮವಿದು. ಪ್ರಧಾನಿಯಾಗಿ ಮೋದಿಯವರು ಭಾರತಕ್ಕೆ ಬಡಿದಿರುವ ವಿನಾಶ.
“ಭ್ರಷ್ಟಾಚಾರದ ಕಳಂಕ ಅಂಟದಂತೆ ಸ್ನಾನದ ಕೋಣೆಯಲ್ಲೂ ರೈನ್ ಕೋಟ್ ತೊಟ್ಟು ಜಳಕ ಮಾಡುವ ಕಲೆಯೇನಾದರೂ ಇದ್ದರೆ ಅದು ಡಾಕ್ಟರ್ ಸಾಬ್‌ಗೆ (ಮನಮೋಹನ್ ಸಿಂಗ್) ಮಾತ್ರ ಗೊತ್ತು” ಎಂದು ಮೋದಿ ಮಾತಿನ ಚೂರಿ ಇರಿದು ತಿರುವಿದ್ದರು.
ಚಿಕ್ಕಂದಿನಲ್ಲೇ ತಾಯಿಯನ್ನು ಕಳೆದುಕೊಂಡು ವಿದ್ಯುತ್ ದೀಪವಿಲ್ಲದ ಹಳ್ಳಿಯಿಂದ (ಈಗಿನ ಪಾಕಿಸ್ತಾನೀ ಪಂಜಾಬಿನ ಗಾಹ್) ಮೈಲುಗಟ್ಟಲೆ ದೂರದ ಶಾಲೆಗೆ ನಡೆದು ಓದಿ ಮೇಲೆ ಬಂದ ಮನಮೋಹನ ಸಿಂಗ್ ತಮ್ಮ ಬಡತನದ ಮತ್ತು ತಬ್ಬಲಿ ಸ್ಥಿತಿಗತಿಯ ಕುರಿತು ಈಗಿನ ಪ್ರಧಾನಿಯಂತೆ ಭಾಷಣಗಳನ್ನು ಬಿಗಿಯಲಿಲ್ಲ. ಪ್ರತಿಪಕ್ಷಗಳನ್ನು ಮತ್ತು ರಾಜಕೀಯ ಪ್ರತಿಸ್ಪರ್ಧಿಗಳನ್ನು ಬೆನ್ನಟ್ಟಿ ಬೇಟೆಯಾಡಲಿಲ್ಲ. ರೈತರು, ವಿದ್ಯಾರ್ಥಿಗಳು- ನಿರುದ್ಯೋಗಿಗಳ ಚಳವಳಿಗಳ ಉಗ್ರ ದಮನಕ್ಕೆ ಮುಂದಾಗಲಿಲ್ಲ. ಅವರಿಗೆ ದೇಶದ್ರೋಹಿಗಳು ಎಂಬ ಹಣೆಪಟ್ಟಿ ಕಟ್ಟಲಿಲ್ಲ. ಜನಪರ ಹೋರಾಟಗಾರರನ್ನು ಜೈಲುಗಳಿಗೆ ತಳ್ಳಿ ಕೊಲ್ಲಲಿಲ್ಲ. ಅಲ್ಪಸಂಖ್ಯಾತರನ್ನು ಹರಿದು ಬಹುಸಂಖ್ಯಾಕ ಬೇಟೆ ನಾಯಿಗಳಿಗೆ ಉಣಬಡಿಸಲಿಲ್ಲ.

ಮನಮೋಹನ್ ಅವರ ಎರಡನೆಯ ಅವಧಿಯಲ್ಲಿ ಜರುಗಿತೆನ್ನಲಾದ 2ಜಿ ಹಗರಣಕ್ಕೆ ಪುರಾವೆಗಳೇ ಇಲ್ಲ ಎಂದಿತು ಸರ್ವೋಚ್ಚ ನ್ಯಾಯಾಲಯ. ಮನಮೋಹನ್ ಸಿಂಗ್ ಆಗ ಇನ್ನೂ ಪ್ರಧಾನಿ ಆಗಿರಲಿಲ್ಲ. ಕಾಂಗ್ರೆಸ್ ಪಕ್ಷ ದೆಹಲಿ ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಅವರನ್ನು ಚುನಾವಣೆ ಕಣಕ್ಕೆ ಇಳಿಸಿರುತ್ತದೆ. ಎದುರಾಳಿ ಸುಷ್ಮಾ ಸ್ವರಾಜ್ ಮುಂದೆ ಸಿಂಗ್ ಸೋಲುತ್ತಾರೆ. ಕೆಲ ದಿನಗಳ ನಂತರ ಖ್ಯಾತ ಪತ್ರಕರ್ತ ಮತ್ತು ಬರೆಹಗಾರ ಖುಷ್ವಂತ್ ಸಿಂಗ್ ಭೇಟಿಗೆ ಸಮಯಾವಕಾಶ ಗೊತ್ತು ಮಾಡಿಕೊಳ್ಳುತ್ತಾರೆ. ಖುಷ್ವಂತ್ ಹೇಳಿದ ಸಮಯಕ್ಕೆ ಸರಿಯಾಗಿ ಅವರ ಮನೆಗೆ ಹೋಗಿ ಕೖತಜ್ಞತೆ ತಿಳಿಸಿ ಎರಡು ಲಕ್ಷ ರೂಪಾಯಿಗಳಿದ್ದ ಪೊಟ್ಟಣವನ್ನು ಕೈಗಿಡುತ್ತಾರೆ.
ನಿಮ್ಮಿಂದ ಕಡ ಪಡೆದ ಈ ಹಣ ಖರ್ಚಾಗಲೇ ಇಲ್ಲ. ದಯಮಾಡಿ ತೆಗೆದುಕೊಳ್ಳಿ ಎಂದು ವಾಪಸು ನೀಡುವ ಈ ಪ್ರಸಂಗವನ್ನು ಖುಷ್ವಂತ್ ಸಿಂಗ್ ತಮ್ಮ ‘Absolute Khushwant’ ಕೖತಿಯಲ್ಲಿ ನೆನೆದಿದ್ದಾರೆ. ಚುನಾವಣೆಗಳಲ್ಲಿ ಟ್ಯಾಕ್ಸಿ ಖರ್ಚಿಗೆಂದು
ಮನಮೋಹನ್ ಸಿಂಗ್ ಅವರ ಅಳಿಯ ಬಂದು ತಮ್ಮಿಂದ ಪಡೆದಿದ್ದ ಹಣವನ್ನು ಮತದಾನ ಮುಗಿದ ಕೆಲವೇ ದಿನಗಳಲ್ಲಿ ಮನಮೋಹನ್ ಖುದ್ದಾಗಿ ಬಂದು ವಾಪಸು ಮಾಡಿದ ಈ ಉದಾಹರಣೆ ರಾಜಕಾರಣಿಗಳಲ್ಲಿ ವಿರಳಾತಿವಿರಳ ಎಂಬುದು ಖುಷ್ವಂತ್ ಬಣ್ಣನೆ.
ದಿಲ್ಲಿಯ ಸಿಟಿ ಬಸ್ಸುಗಳಲ್ಲಿ ಆನಂತರ ಬಹುಕಾಲ ಮಾರುತಿ-800 ಕಾರಿನಲ್ಲಿ ಓಡಾಡುತ್ತಿದ್ದ ಮನಮೋಹನ್ ಅವರ ವ್ಯಕ್ತಿಗತ ಪ್ರಾಮಾಣಿಕತೆಯನ್ನು ಇಂದಿಗೂ ಯಾರೂ ಪ್ರಶ್ನಿಸಲಾರರು. 2004ರಲ್ಲಿ ಸೋನಿಯಾ ಗಾಂಧೀ ಒಲ್ಲೆನೆಂದಾಗ ಆಕಸ್ಮಿಕವಾಗಿ ಪ್ರಧಾನಿ ಪದವಿಯನ್ನೇರಿದ ಮನಮೋಹನ್ ತಮ್ಮ ಮೊದಲ ಅಧಿಕಾರಾವಧಿಯಲ್ಲಿ ಅತ್ಯುತ್ತಮ ಮತ್ತು ಸಚ್ಚಾರಿತ್ರ್ಯದ ಪ್ರಧಾನಿ ಎಂದು ದೇಶದ ಒಳಗೆ ಮತ್ತು ಹೊರಗೆ ಹೆಸರು ಮಾಡಿದರು. ನ್ಯೂಸ್ ವೀಕ್, ಟೈಮ್ ಹಾಗೂ ಫೋರ್ಬ್ಸ್‌ನಂತಹ ಅಮೆರಿಕೆಯ ನಿಯತಕಾಲಿಕಗಳು ನೆಹರೂ ನಂತರ ಭಾರತ ಕಂಡ ಅತ್ಯುತ್ತಮ ಪ್ರಧಾನಿ ಎಂದೆಲ್ಲ ಹೊಗಳಿದ್ದವು. ಈ ಮೆಚ್ಚುಗೆಯ ಬರೆಹಗಳ ಅಚ್ಚಿನ ಮಸಿ ಆಗಷ್ಟೇ
ಆರಿರಬೇಕು. ಅಷ್ಟರಲ್ಲಾಗಲೇ ಅದೇ ಟೈಮ್ ನಿಯತಕಾಲಿಕ ಮನಮೋಹನ್ ಅವರನ್ನು ‘under achiever’ ಎಂದು ಜರೆದಿತ್ತು.
ಎರಡನೆಯ ಅಧಿಕಾರಾವಧಿಯಲ್ಲಿ ಯುಪಿಎ ಸರ್ಕಾರ ಎದುರಿಸಿರುವ ಹಗರಣಗಳ ಸರಣಿ ಮನಮೋಹನ್ ಅವರ ವರ್ಚಸ್ಸಿಗೆ ಗ್ರಹಣ ಹಿಡಿಸಿದ್ದು ವಾಸ್ತವ. ಎಂಬತ್ತರ ದಶಕದ ಆರಂಭದಲ್ಲಿ ರಾಜ್ಯ ರಾಜಕಾರಣದಲ್ಲಿ ಹೊಸ ಗಾಳಿಯಂತೆ ಬೀಸಿದ ರಾಮಕೖಷ್ಣ ಹೆಗಡೆ ಸರ್ಕಾರ ಒಂದೂವರೆ ವರ್ಷಗಳ ಅತ್ಯುತ್ತಮ ಆಡಳಿತದ ನಂತರ ಎರಡನೆಯ ಅವಧಿಯಲ್ಲಿ ಹಗರಣಗಳ ಸುಳಿಗೆ ಸಿಲುಕಿದ ಮಾದರಿಯಲ್ಲಿ ಮನಮೋಹನ್ ಎರಡನೆಯ ಇನ್ನಿಂಗ್ಸ್ ದಾರಿ ತಪ್ಪಿತು.
ಟೂಜಿ ತರಂಗಾಂತರ ಗುಚ್ಛಗಳ ಹಂಚಿಕೆಯ 1.76 ಲಕ್ಷ ಕೋಟಿ ರೂಪಾಯಿಗಳ ಹಗರಣ, ಕಾಮನ್ಸೆಲ್ತ್ ಕ್ರೀಡೆಗಳ 70 ಸಾವಿರ ಕೋಟಿ ರೂಪಾಯಿಗಳ ಹಗರಣ, ಆದರ್ಶ್ ಸೊಸೈಟಿ ಹಗರಣ, ಭಾರತೀಯ ಸೇನೆಯ ಶಸ್ತ್ರಾಸ್ತ್ರ ಮತ್ತು ಯುದ್ಧೋಪಕರಣಗಳ ಖರೀದಿಯಲ್ಲಿ ಹಗರಣಗಳು ನಡೆಯುತ್ತಿವೆ ಎಂದು ಖುದ್ದು ಅಂದಿನ ಭಾರತೀಯ ಸೇನಾ ಮುಖ್ಯಸ್ಥ ವಿಜಯಕುಮಾರ್ ಸಿಂಗ್ ಸಿಡಿಸಿದ ಹಗರಣ, ಕಳಂಕಿತರೆಂಬ ದಾಖಲೆ ಇದ್ದರೂ ಪಿ.ಎಸ್.ಥಾಮಸ್ ಅವರನ್ನು ಸಿ.ವಿ.ಸಿ.ಯನ್ನಾಗಿ ನೇಮಕ ಮಾಡಿ ಸುಪ್ರೀಮ್ ಕೋರ್ಟ್‌ನಿಂದ ಮಾಡಿಸಿಕೊಂಡ ಭಾರೀ ಮುಖಭಂಗ, ವರ್ಷಗಟ್ಟಲೆ ನಿಯಂತ್ರಣಕ್ಕೆ ಬಾರದೆ ಬಡವರ ಬದುಕುಗಳನ್ನು ಸುಡುತ್ತಿರುವ ಬೆಲೆ ಏರಿಕೆ, ದಿನಂಪ್ರತಿ 26 ರೂಪಾಯಿಗಳನ್ನು ವೆಚ್ಚ ಮಾಡುವ ಜನ ಬಡವರಲ್ಲ ಎಂಬ ಯೋಜನಾ ಆಯೋಗದ ವ್ಯಾಖ್ಯೆಯ
ಕುರಿತು ಎದ್ದ ಸರ್ವವ್ಯಾಪೀ ಟೀಕೆ…
ನಿರ್ಗತಿಕರು ತುತ್ತಿಗಿಲ್ಲದೆ ಸಾಯುತ್ತಿದ್ದರೂ ಹಂಚಿಕೆ ಮಾಡಲು ಒಪ್ಪದೆ, ಸರ್ಕಾರಿ ಗೋದಾಮುಗಳಲ್ಲಿ ಅಕ್ಷರಶಃ ಕೊಳೆಯಲು ಬಿಟ್ಟ ಲಕ್ಷಾಂತರ ಟನ್ ಆಹಾರ ಧಾನ್ಯ, ಇವೆಲ್ಲವುಗಳ ಜೊತೆಗೆ ಈಗಷ್ಟೇ ಸಿಡಿದಿರುವ 1.86 ಲಕ್ಷ ಕೋಟಿ ರುಪಾಯಿಗಳ ಕಲ್ಲಿದ್ದಿಲು ಖಾನೆ ಹಂಚಿಕೆಯ ಅವ್ಯವಹಾರ ಯುಪಿಎ ಸರ್ಕಾರದ ಬುಡವನ್ನೇ ಅಲುಗಿಸಿತ್ತು. ದಿಲ್ಲಿ ವಿಮಾನ ನಿಲ್ದಾಣವನ್ನು 60 ವರ್ಷಗಳ ತನಕ ನಿರ್ವಹಿಸುವ ಹಕ್ಕನ್ನು ಖಾಸಗಿ ಸಂಸ್ಥೆ ಡಿಐಎಎಲ್‌ಗೆ ನೀಡಿರುವ ಹಗರಣದ ಮೊತ್ತ 1.64 ಲಕ್ಷ ಕೋಟಿ ರೂಪಾಯಿಗಳು ಹಾಗೂ ತನ್ನ ಒಂದು ಘಟಕದ ಬಳಕೆಗೆಂದು ನೀಡಿದ್ದ ಕಲ್ಲಿದ್ದಿಲು ಖಾನೆಯ ಹೆಚ್ಚುವರಿ ಕಲ್ಲಿದ್ದಿಲನ್ನು ರಿಲಯನ್ಸ್ ಪವರ್ ಕಂಪನಿ ಅಕ್ರಮವಾಗಿ ಇತರೆ ಉದ್ದೇಶಕ್ಕೆ ಬಳಕೆ ಮಾಡಿಕೊಂಡಿರುವ 29,033 ಕೋಟಿ ರೂಪಾಯಿ ಹಗರಣ ಕುರಿತು ಸಿಎಜಿ ವರದಿಗಳನ್ನು ನೀಡಿತ್ತು. ಹೀಗೆ ವರದಿ ನೀಡಿದ ಸಿಎಜಿ ವಿನೋದ್ ರೈ ಇದೀಗ ಆಳುವವರ ಮಡಿಲಿನಲ್ಲಿ ಹಾಯಾಗಿ ಪವಡಿಸಿರುವುದೂ ವಾಸ್ತವವೇ.
ಕಾಂಗ್ರೆಸ್ -ಯುಪಿಎ ರಾಜಕಾರಣದ ಪರಮಾಧಿಕಾರವನ್ನು ಸೋನಿಯಾಗಾಂಧೀ ಮತ್ತು ಸರ್ಕಾರದ ಆಡಳಿತವನ್ನು ಮನಮೋಹನ್ ಸಿಂಗ್ ಅವರೂ ನಿಭಾಯಿಸುತ್ತಾರೆ ಎಂಬುದು ಅಂದಿನ ಅಲಿಖಿತ ಒಪ್ಪಂದವಾಗಿತ್ತು. ಈ ಒಪ್ಪಂದದ ಲಕ್ಷ್ಮಣರೇಖೆಗಳ ಉಲ್ಲಂಘನೆ ದೊಡ್ಡ ಪ್ರಮಾಣದಲ್ಲಿ ಆದ ಉದಾಹರಣೆಗಳು ವಿರಳ. ಮನಮೋಹನ್ ಸಿಂಗ್ ಪ್ರಾಮಾಣಿಕತೆ ಯುಪಿಎ-1 ಸರ್ಕಾರದ ಬಲು ದೊಡ್ಡ ಆಸ್ತಿಯಾಗಿದ್ದದ್ದು ಹೌದು. ಇಂತಹುದೊಂದು ಸಾರ್ವಜನಿಕ ಗ್ರಹಿಕೆ ವ್ಯಾಪಕವಾಗಿದ್ದದ್ದೂ ನಿಜ. ಈ ಗ್ರಹಿಕೆಯನ್ನು ಮುಕ್ಕು ಮಾಡಲು ಬಿಜೆಪಿ ಬಹುವಾಗಿ ಪ್ರಯತ್ನಿಸಿತ್ತು. ಮನಮೋಹನಸಿಂಗ್ ದುರ್ಬಲ ಪ್ರಧಾನಿ ಎಂದೂ, ಮಾತು ಮಾತಿಗೆ ಸೋನಿಯಾ ಆಣತಿಗೆ ಕಾಯುತ್ತಾರೆಂದೂ ಟೀಕಿಸುತ್ತಲೇ ಬಂದಿದ್ದರು ಬಿಜೆಪಿಯ ಮಹಾರಥಿ ಎಲ್.ಕೆ.ಆಡ್ವಾಣಿ. ಯುಪಿಎ ಎರಡನೆಯ ಬಾರಿಗೆ ಜನಾದೇಶ ಬಯಸಿದ ಲೋಕಸಭಾ ಚುನಾವಣೆಗಳಲ್ಲಿ ಆಡ್ವಾಣಿ ಇಂತಹ ಪ್ರಚಾರವನ್ನು ತಾರಕಕ್ಕೆ ಒಯ್ದರು. ಮನಮೋಹನ್ ಅವರನ್ನು ಶಿಖಂಡಿ ಎಂದೂ ಕರೆದುಬಿಟ್ಟರು.
ಆದರೆ, ಅಂತಿಮವಾಗಿ ಮನಮೋಹನ್ ಗೆದ್ದಿದ್ದರು. ಆಡ್ವಾಣಿ ಸೋತಿದ್ದರು. ಈ ಸರ್ಕಾರ ಆಧರಿಸಿರುವ ಸಚ್ಚಾರಿತ್ರ್ಯದ
ಹೆಗ್ಗಳಿಕೆಯ ಸ್ತಂಭವನ್ನು ಕೆಡವಿಬಿಟ್ಟರೆ ಸೌಧ ತಾನಾಗಿಯೇ ಉರುಳುವುದು ಎಂಬ ಲೆಕ್ಕಾಚಾರ ಬಿಜೆಪಿಯದು.
ಕೇಂದ್ರದಲ್ಲಿ ಅಧಿಕಾರ ಹಿಡಿಯುವ ತನ್ನ ಕನಸು ಕಳೆದ ಲೋಕಸಭೆ ಚುನಾವಣೆಯಲ್ಲಿ ನುಚ್ಚುನೂರಾದದ್ದನ್ನು ಕಂಡು ಹತಾಶಗೊಂಡಿತ್ತು ಬಿಜೆಪಿ. ಆಡ್ವಾಣಿ ಅವರನ್ನು ಪ್ರಧಾನಿ ಗದ್ದುಗೆಯಲ್ಲಿ ನೋಡುವುದನ್ನು ತಪ್ಪಿಸಿದ ಅಪರಾಧಿ ಎಂದೇ ಕಾಂಗ್ರೆಸ್ಸನ್ನು
ಬಗೆದಿತ್ತು. ಅಮೆರಿಕೆಯ ಜೊತೆ ಮಾಡಿಕೊಂಡ ನಾಗರಿಕ ಪರಮಾಣು ಒಪ್ಪಂದಕ್ಕೆ ಸಂಸತ್ತಿನ ಸಮ್ಮತಿ ಪಡೆಯಲು ಅಧಿಕಾರ ಕಳೆದುಕೊಳ್ಳಲೂ ಸಿದ್ಧರಾಗಿದ್ದರು ಯುಪಿಎ-1ರ ಮನಮೋಹನ್ ಸಿಂಗ್. ಎಡಪಕ್ಷಗಳು ಬೆಂಬಲವನ್ನು ವಾಪಸು ತೆಗೆದುಕೊಂಡವು. ಆದರೂ ಬದುಕಿತ್ತು ಸಿಂಗ್ ಸರ್ಕಾರ.
ಸಭೆ ಸಮ್ಮೇಳನಗಳಲ್ಲಿ ಭಾಗವಹಿಸುವ ಪ್ರತಿನಿಧಿಗಳಿಗೆ ತಮ್ಮ ತಮ್ಮ ಮೊಬೈಲ್ ಫೋನ್‌ಗಳನ್ನು ಮನಮೋಹನ್ ಸಿಂಗ್ ಸೈಲೆಂಟ್ ಮೋಡ್‌ನಲ್ಲಿ ಇಡುವಂತೆ ಸೂಚನೆ ನೀಡಲಾಗುತ್ತಿತ್ತು! ಕಡೇ ಪಕ್ಷ ನನ್ನ ಕ್ಲಿನಿಕ್ಕಿನಲ್ಲಾದರೂ ನಿಮ್ಮ ಬಾಯಿ ತೆರೆಯಿರಿ ಎಂದು ದಂತವೈದ್ಯ ತಮ್ಮ ಮುಂದೆ ಹಲ್ಲು ಪರೀಕ್ಷೆಗೆಂದು ಕುಳಿತಿದ್ದ ಮನಮೋಹನ್ ಸಿಂಗ್ ಅವರನ್ನು ಉದ್ದೇಶಿಸಿ ಹೇಳಿದ್ದರಂತೆ!
ಇದನ್ನು ಓದಿದ್ದೀರಾ?: ಡಾ. ಸಿಂಗ್‌ರೊಂದಿಗೆ ಅತೀಕ್ ಕೆಲಸ: ದೂರದೃಷ್ಟಿ, ಸಮರ್ಪಣಾ ಭಾವ, ಸಮಗ್ರತೆಯ ನೆನಪುಗಳು
ಮನಮೋಹನ್ ಮೌನ ಧಾರಣೆಯ ಕುರಿತು ವಾಷಿಂಗ್ಟನ್ ಪೋಸ್ಟ್ ಅಚ್ಚು ಮಾಡಿದ್ದ ವರದಿಯೊಂದರಲ್ಲಿ ಈ ಎರಡು ಜೋಕುಗಳನ್ನು ಪೋಣಿಸಲಾಗಿತ್ತು. ಭಾರತೀಯ ಜನತಾ ಪಾರ್ಟಿಯ ನಾಯಕರು ಪ್ರಧಾನಿಯವರ ಮೌನವನ್ನು ಮೆದು ಸ್ವಭಾವವನ್ನು ಕಟು
ಟೀಕೆಗೆ ಲೇವಡಿಗೆ ಗುರಿಪಡಿಸಿದ್ದು ಉಂಟು. ನರೇಂದ್ರ ಮೋದಿ- ಆಡ್ವಾಣಿ ಜೋಡಿಯಂತೂ ಮನಮೋಹನ್ ಅವರನ್ನು ಅತೀ ದುರ್ಬಲ, ನಿಕಮ್ಮಾ ಎಂದೆಲ್ಲ ಜರೆದಿದ್ದರು. ‘ನನ್ನ ಮೌನ ಸಾವಿರ ಉತ್ತರಗಳಿಗಿಂತ ಲೇಸು. ಲೆಕ್ಕವಿಲ್ಲದಷ್ಟು ಪ್ರಶ್ನೆಗಳ ಮರ್ಯಾದೆಯನ್ನು ಕಾಪಾಡುತ್ತದೆ. ವೈಯಕ್ತಿಕವಾಗಿ ನನ್ನ ವಿರುದ್ಧ ಗುರಿ ಇಟ್ಟ ದುರುದ್ದೇಶಪೂರಿತ ಟೀಕೆಗೆ ಕಿವುಡಾಗುವುದು ತಮ್ಮ ಸಾಮಾನ್ಯ ಪ್ರವೖತ್ತಿ’ ಎಂದು ಅವರು ಒಮ್ಮೆ ತಮ್ಮ ಮೌನವನ್ನು ಸಮರ್ಥಿಸಿಕೊಂಡದ್ದು ಉಂಟು.
2009ರ ಲೋಕಸಭಾ ಚುನಾವಣೆಗಳತ್ತ ಹಿನ್ನೋಟ ಹರಿಸುವುದಾದರೆ ಭಾರತೀಯ ಜನತಾ ಪಾರ್ಟಿಯ ‘ಉಕ್ಕಿನ ಮನುಷ್ಯ’ ಎಂದು ಅಭಿದಾನ ಗಳಿಸಿದ್ದ ಆಡ್ವಾಣಿ ಅವರಂತೂ ಮನಮೋಹನ್ ಅವರನ್ನು ಮರ್ಮಾಘಾತ ಶಬ್ದಗಳಲ್ಲಿ ಹಂಗಿಸಿದ್ದರು ಮೋದಿ ಅವರು ಕಾಂಗ್ರೆಸ್ಸನ್ನು ಗೆದ್ದಲು ಎಂದೂ ಸಿಂಗ್ ಅವರನ್ನು ರಾಹುಲ್‌ಗೆ ಪ್ರಧಾನಿ ಗದ್ದುಗೆಯನ್ನು ಕಾದಿರಿಸಿರುವ ನೈಟ್ ವಾಚ್ ಮನ್ ಎಂದೂ ಅವಮಾನಿಸಿದ್ದರು.
ಲೋಕಸಭೆಯಲ್ಲಿ ಮತ್ತು ರಾಜ್ಯಸಭೆಯಲ್ಲಿ ಪ್ರತಿಪಕ್ಷದ ನಾಯಕರಾದ ಸುಷ್ಮಾ ಸ್ವರಾಜ್ ಮತ್ತು ಅರುಣ್ ಜೇಟ್ಲಿ ಅವರ ಪಾಲಿಗೆ ಕೂಡ ಮನಮೋಹನ್ ಸಿಂಗ್ ಸಲೀಸು ಪ್ರಹಾರಕ್ಕೆ ಸಿಕ್ಕುವ, ಉಸಿರೆತ್ತದೆ ಹೊಡೆತ ತಿನ್ನುವ ಕಾಂಗ್ರೆಸ್ಸಿನ ಮೆದು ಆಸಾಮಿಯಾಗಿದ್ದರು. ಆಗಾಗ ತಿರುಗೇಟು ನೀಡುತ್ತಿದ್ದುದೂ ಉಂಟು.
‘2009ರಲ್ಲಿ ಈ ಮನಮೋಹನ್ ಸಿಂಗ್ ಎಂಬ ಕುರಿಮರಿಯ ವಿರುದ್ಧ ಬಿಜೆಪಿ ತನ್ನ ಉಕ್ಕಿನ ಮನುಷ್ಯ ಆಡ್ವಾಣೀಜೀ ಅವರನ್ನು ಹೂಡಿತ್ತು. ಫಲಿತಾಂಶ ಏನಾಯಿತೆಂದು ಜಗತ್ತಿಗೇ ಗೊತ್ತು’ ಎಂದು ಲೋಕಸಭೆಯಲ್ಲಿ ತಣ್ಣನೆಯ ವ್ಯಂಗ್ಯದ ಚೂರಿಯನ್ನು ಆಳಕ್ಕೆ ಇಳಿಸಿ ಮೀಟಿ ಹೊರತೆಗೆದರೆ, ನೋವನ್ನು ಮರೆ ಮಾಡುವ ಪ್ರಯತ್ನದಲ್ಲಿದ್ದರು ಬಿಜೆಪಿ ನಾಯಕರು.
ನೀವು ಬಳಸಿದ ಬೈಗುಳದ ಭಾಷೆಯಲ್ಲೇ ಉತ್ತರ ನೀಡುವ ಉದ್ದೇಶ ನನಗಿಲ್ಲ… ಸಿಡಿಲಬ್ಬರದ ಆಕಾಶ ಮಳೆಗರೆಯುವುದಿಲ್ಲ (ಜೋ ಗರಜ್ ತೇ ಹೈ ವೋ ಬರಸ್ತೇ ನಹೀ) ಎಂದಿದ್ದರು.

ಡಿ ಉಮಾಪತಿ
ಹಿರಿಯ ಪತ್ರಕರ್ತರು