ರೇಷನ್ ಕಾರ್ಡ್ ರದ್ದು ಪ್ರಕ್ರಿಯೆಯನ್ನು ಕೂಡಲೇ ಸ್ಥಗಿತಗೊಳಿಸಿ, ಕಾರ್ಡ್ ಕೊಟ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡು ಅವರನ್ನು ಜೈಲಿಗಟ್ಟಿ ಎಂದು ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಆಗ್ರಹಿಸಿದ್ದಾರೆ.
ಚಿಕ್ಕಮಗಳೂರಿನಲ್ಲಿ ಸಂಸದ ಡಾ.ಕೆ.ಸುಧಾಕರ್ ಅವರೊಂದಿಗೆ ಜಂಟಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಆರ್. ಅಶೋಕ್ ಅವರು, “ಎಲ್ಲರಿಗೂ ಉಚಿತ ಉಚಿತ ಎಂದು ಹೇಳಿ ಈಗ ರೇಷನ್ ಕಾರ್ಡ್ ಅನ್ನು ರದ್ದುಪಡಿಸಲಾಗುತ್ತಿದೆ. ಈವರೆಗೆ 11-12 ಲಕ್ಷ ರೇಷನ್ ಕಾರ್ಡ್‌ಗಳನ್ನು ರದ್ದು ಮಾಡಲಾಗಿದೆ” ಎಂದು ಹೇಳಿದರು.
“ಗುಡಿಸಲಲ್ಲಿ ವಾಸಿಸುವ ಜನರ ಪಡಿತರ ಚೀಟಿ ಕೂಡ ರದ್ದಾಗಿದೆ. ಗ್ಯಾರಂಟಿಯಿಂದಾಗಿ ಖಜಾನೆ ಖಾಲಿಯಾಗಿ ಶಾಸಕರು ದಂಗೆ ಏಳುತ್ತಿದ್ದಾರೆ. ಅದಕ್ಕಾಗಿ ಹಣ ಉಳಿಸಲು ಸರ್ಕಾರ ರೇಷನ್ ಕಾರ್ಡ್ ರದ್ದು ಮಾಡುತ್ತಿದೆ” ಎಂದು ದೂರಿದರು.
“ರೇಷನ್ ಕಾರ್ಡ್ ರದ್ದು ಮಾಡಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳುತ್ತಾರೆ. ಆದರೆ ಅವರು ಹೇಳುವುದೆಲ್ಲ ಸುಳ್ಳಾಗುತ್ತಿದೆ. ಜನರು ಸರ್ಕಾರಕ್ಕೆ ಶಾಪ ಹಾಕುತ್ತಿದ್ದಾರೆ” ಎಂದರು.
ಇದನ್ನು ಓದಿದ್ದೀರಾ? ಬಳ್ಳಾರಿ | ರೇಷನ್ ಕಾರ್ಡ್ ತಿದ್ದುಪಡಿಗೆ ಸರ್ವರ್ ಡೌನ್; ಇನ್ನಷ್ಟು ಕಾಲಾವಕಾಶಕ್ಕೆ ಬೇಡಿಕೆ
ಇನ್ನು “ವಕ್ಫ್ ಮಂಡಳಿ ಮಾಡುತ್ತಿರುವ ಲ್ಯಾಂಡ್ ಜಿಹಾದ್ ವಿರುದ್ಧ ಬಿಜೆಪಿ ಇನ್ನಷ್ಟು ಹೋರಾಟ ಮಾಡಲಿದೆ. ಎಲ್ಲಾ ಜಿಲ್ಲೆಗಳಲ್ಲಿ ಪ್ರವಾಸ ಮಾಡಿ ಪರಿಶೀಲನೆ ನಡೆಸಲಾಗುತ್ತಿದೆ” ಎಂದು ತಿಳಿಸಿದರು.
“ಕರ್ನಾಟಕದ ವಕ್ಫ್ ಬೋರ್ಡ್ ತಿಮಿಂಗಿಲದಂತಿದೆ. ಇದು ದೇವಸ್ಥಾನ, ಶಾಲೆ, ಕೃಷಿ ಜಮೀನುಗಳನ್ನು ನುಂಗಿ ಹಾಕುತ್ತಿದೆ. ಸಂವಿಧಾನದಲ್ಲಿ ಎಲ್ಲರೂ ಒಂದೇ ಎಂದು ಹೇಳಿದ್ದರೂ, ವಕ್ಫ್ ಮಂಡಳಿಗೆ ಮಾತ್ರ ಪ್ರತ್ಯೇಕ ಸಂವಿಧಾನವಿದೆ. ಬೌದ್ಧರು, ಕ್ರೈಸ್ತರಿಗೆ ಇಲ್ಲದ ನ್ಯಾಯಾಂಗದ ಅಧಿಕಾರ ವಕ್ಫ್ ಮಂಡಳಿಗಿದೆ. ಸಂವಿಧಾನದ ಆಶಯಕ್ಕೆ ವಿರುದ್ಧವಾಗಿ ಕಾಂಗ್ರೆಸ್ ವರ್ತಿಸುತ್ತಿದೆ” ಎಂದು ಆರೋಪಿಸಿದರು.
