ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ಜೆಡಿಎಸ್ ಅಭ್ಯರ್ಥಿಯಾಗಿರುವ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಅವರು ಗುರುವಾರ ಮಂಡ್ಯ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿದರು. ಈ ವೇಳೆ ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ, ಮೈಸೂರು ಕ್ಷೇತ್ರದ ಅಭ್ಯರ್ಥಿ ಯದುವೀರ್ ಒಡೆಯರ್ ಜೊತೆಗಿದ್ದರು.
ನಾಮಪತ್ರ ಸಲ್ಲಿಕೆಗೂ ಮುನ್ನ ಎಚ್ ಡಿ ಕುಮಾರಸ್ವಾಮಿ ಅವರು ಮಂಡ್ಯ ನಗರದ ಅರ್ಕೇಶ್ವರ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದರು. ಈ ವೇಳೆ ಪಕ್ಷದ ನೂರಾರು ಕಾರ್ಯಕರ್ತರು ಕುಮಾರಸ್ವಾಮಿ ಜೊತೆಗಿದ್ದರು. ನಂತರ ಅಂಬೇಡ್ಕರ್, ಕಾವೇರಿ, ವಿಶ್ವೇಶ್ವರಯ್ಯ ಪ್ರತಿಮೆಗೆ ಕುಮಾರಸ್ವಾಮಿ ಮಾಲಾರ್ಪಣೆ ಮಾಡಿದರು.
ಮಂಡ್ಯ ವಿವಿ ಆವರಣದಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿ ಸಮಾವೇಶ ನಡೆಯಲಿದೆ. ಗೋವಾ ಸಿಎಂ ಪ್ರಮೋದ್ ಸಾವಂತ್, ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ, ಮೈಸೂರು ಅಭ್ಯರ್ಥಿ ಯದುವೀರ್, ನಿಖಿಲ್ ಕುಮಾರಸ್ವಾಮಿ, ಜಿಲ್ಲೆಯ ಮಾಜಿ ಸಚಿವರು, ಶಾಸಕರು, ಸ್ಥಳೀಯ ಮುಖಂಡರು ಸಮಾವೇಶದಲ್ಲಿ ಭಾಗಿಯಾಗುತ್ತಿದ್ದಾರೆ.
ಸುಮಲತಾ ಅಂಬರೀಶ್ ಅವರು ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸದೆ ಬಿಜೆಪಿ ಸೇರುವ ಘೊಷಣೆ ನಿನ್ನೆ ಮಾಡಿದ್ದು ಕುಮಾರಸ್ವಾಮಿ ಅವರನ್ನು ನಿರಾಳವಾಗಿಸಿದೆ. ಆದಾಗ್ಯೂ ಪ್ರತಿಷ್ಠಿತ ಕಣವಾಗಿ ಮಾರ್ಪಟ್ಟಿರುವ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಕುಮಾರಸ್ವಾಮಿಯವರ ಎದುರಾಳಿ ಕಾಂಗ್ರೆಸ್ ಪಕ್ಷದ ಸ್ಟಾರ್ ಚಂದ್ರು ಆಗಿದ್ದಾರೆ. ಚಂದ್ರು ಒಬ್ಬ ಉದ್ಯಮಿಯೂ ಆಗಿದ್ದು ರಾಜಕಾರಣಕ್ಕೆ ಹೊಸಬರು. ಡಿಸಿಎಂ ಡಿ ಕೆ ಶಿವಕುಮಾರ್ ಮತ್ತು ಟೀಮ್ ಹೇಗಾದ್ರೂ ಮಾಡಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಿಸಲು ರೋಚಕ ತಂತ್ರಗಳನ್ನು ಹೆಣೆಯುತ್ತಿದೆ.
ಬೆಂಗಳೂರು ಗ್ರಾಮಾಂತರ
ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಬಿಜೆಪಿಯ ಡಾ.ಸಿ ಎನ್ ಮಂಜುನಾಥ್ ಮತ್ತು ಕಾಂಗ್ರೆಸ್ ಅಭ್ಯರ್ಥಿ ಡಿ ಕೆ ಸುರೇಶ್ ನಾಮಪತ್ರ ಸಲ್ಲಿಸಿದರು. ಅವರು ತಮ್ಮ ನಾಮಪತ್ರ ಸಲ್ಲಿಸುವ ಪರಸ್ಪರ ಎದುರಾದರು.
ಬಳಿಕ ಜಿಲ್ಲಾಧಿಕಾರಿ ಕಚೇರಿ ಮುಂದೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಸುರೇಶ್, “ಇವತ್ತು ಒಳ್ಳೇ ಗಳಿಗೆ ಮತ್ತು ಶುಭ ಮುಹೂರ್ತವಾಗಿದ್ದ ಕಾರಣ ನಾಮಪತ್ರ ಸಲ್ಲಿಸಿದ್ದೇನೆ. ನಾಮಪತ್ರ ಸಲ್ಲಿಸುವಾಗ ಮಂಜುನಾಥ್ ಅವರು ಭೇಟಿಯಾಗಿದ್ದರು. ಅವರ ಆರೋಗ್ಯ ವಿಚಾರಿಸಿ ಶುಭ ಹಾರೈಸಿದೆ” ಎಂದರು.
ಪ್ರಜ್ವಲ್ ರೇವಣ್ಣ ನಾಮಪತ್ರ ಸಲ್ಲಿಕೆ
ಜೆಡಿಎಸ್ ಅಭ್ಯರ್ಥಿಯಾಗಿ ಪ್ರಜ್ವಲ್ ರೇವಣ್ಣ ಹಾಸನ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದರು. ಮೊಮ್ಮಗ ಪ್ರಜ್ವಲ್ ನಾಮಪತ್ರ ಸಲ್ಲಿಕೆ ವೇಳೆ ದೇವೇಗೌಡರು ಹಾಜರಿದ್ದರು. ಜೊತೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ, ಶಾಸಕ ಹೆಚ್ ಡಿ ರೇವಣ್ಣ, ಹಾಲಿ ಸಂಸದ ಡಿ ವಿ ಸದಾನಂದ ಗೌಡ ಹಾಜರಿದ್ದರು.
