ರಾಷ್ಟ್ರೀಯ ಶಿಕ್ಷಣ ನೀತಿ(ಎನ್‌ಇಪಿ)ಯಲ್ಲಿ ತ್ರಿಭಾಷಾ ಸೂತ್ರವನ್ನು ಅಳವಡಿಸಿ, ದಕ್ಷಿಣದ ರಾಜ್ಯಗಳ ಮೇಲೆ ಹಿಂದಿ ಹೇರಿಕೆ ಮಾಡಲು ಕೇಂದ್ರ ಸರ್ಕಾರ ಹವಣಿಸುತ್ತಿದೆ. ತ್ರಿಭಾಷಾ ನೀತಿಯ ವಿರುದ್ಧ ದಕ್ಷಿಣದ ರಾಜ್ಯಗಳು ವಿರೋಧ ವ್ಯಕ್ತಪಡಿಸುತ್ತಿವೆ. ಎನ್‌ಪಿಇ ಜಾರಿ ಮಾಡಲ್ಲವೆಂದು ಹೇಳಿವೆ. ಅದಕ್ಕೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್, ದಕ್ಷಿಣ ರಾಜ್ಯಗಳ ಜನರನ್ನು ಅನಾಗರಿಕರು ಎಂದು ಹೇಳಿದ್ದೂ ಇದೆ. ಈ ನಡುವೆ, ಇನ್ಫೋಸಿಸ್ ಸಂಸ್ಥೆಯ ಮುಖ್ಯಸ್ಥೆ, ರಾಜ್ಯಸಭಾ ಸದಸ್ಯೆ ಸುಧಾ ಮೂರ್ತಿ ತ್ರಿಭಾಷಾ ನೀತಿಯನ್ನು ಬೆಂಬಲಿಸಿದ್ದಾರೆ.
“ವಿದ್ಯಾರ್ಥಿಗಳು ವಿವಿಧ ಭಾಷೆಗಳನ್ನು ಕಲಿಯಬೇಕು. ಅದನ್ನು ತ್ರಿಭಾಷಾ ನೀತಿ ಉತ್ತೇಜಿಸುತ್ತದೆ. ಒಬ್ಬ ವ್ಯಕ್ತಿ ಹಲವು ಭಾಷೆಗಳನ್ನು ಕಲಿಯಲು ಸಾಧ್ಯ ಎಂಬುದನ್ನು ನಾನು ಎಂದಿಗೂ ನಂಬುತ್ತೇನೆ” ಎಂದಿದ್ದಾರೆ.
“ನಾನು 8 ಭಾಷೆಗಳನ್ನು ಕಲಿತಿದ್ದೇನೆ. ಕಲಿಕೆಯನ್ನು ಆನಂದಿಸುತ್ತೇನೆ. ಬಹುಭಾಷೆ ಕಲಿಕೆಯಿಂದ ಮಕ್ಕಳು ಕೂಡಾ ಬಹಳಷ್ಟು ಜ್ಞಾನ ಸಂಪಾದನೆ ಮಾಡಲು ಸಾಧ್ಯವಾಗುತ್ತದೆ” ಎಂದು ಸುಧಾ ಮೂರ್ತಿ ಹೇಳಿದ್ದಾರೆ.
ಸದ್ಯ, ಜನಸಂಖ್ಯೆ ಆಧಾರದ ಮೇಲೆ ಲೋಕಸಭಾ ಕ್ಷೇತ್ರಗಳನ್ನು ಮರುವಿಂಗಡಣೆ ಮಾಡಲು ಮುಂದಾಗಿರುವ ಕೇಂದ್ರದ ನಡೆಯಿಂದ ದಕ್ಷಿಣದ ರಾಜ್ಯಗಳಿಗೆ ಅನ್ಯಾಯವಾಗುತ್ತದೆ ಎಂದು ಹೇಳಲಾಗುತ್ತಿದೆ. ಹೀಗಾಗಿ, ಕ್ಷೇತ್ರ ಮರುವಿಂಗಣೆ ಮತ್ತು ಹಿಂದಿ ಹೇರಿಕೆಯ ಹುನ್ನಾರವಿರುವ ಎನ್‌ಇಪಿ ವಿರುದ್ಧ ತಮಿಳುನಾಡಿನ ಡಿಎಂಕೆ ಸರ್ಕಾರ ಬೃಹತ್ ಹೋರಾಟಗಳನ್ನು ರೂಪಿಸುತ್ತಿದೆ. ಈ ಹೋರಾಟದಲ್ಲಿ ದಕ್ಷಿಣದ ಎಲ್ಲ ರಾಜ್ಯಗಳು ಕೈಜೋಡಿಸಬೇಕು, ಒಗ್ಗೂಡಬೇಕು ಎಂದು ಅವರು ಮನವಿ ಮಾಡಿದ್ದಾರೆ. ಈ ಹಿನ್ನೆಲೆ ತಮಿಳುನಾಡು ಸರ್ಕಾರದ ನಿಯೋಗವು ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಬುಧವಾರ ಭೇಟಿ ಮಾಡಿದೆ. ಹೋರಾಟಕ್ಕೆ ಬೆಂಬಲಿಸುವುದಾಗಿ ಸಿದ್ದರಾಮಯ್ಯ ಘೋಷಿಸಿದ್ದಾರೆ.
ಈ ವರದಿ ಓದಿದ್ದೀರಾ?: ಉದ್ಯೋಗಿಗಳ ಸಾಮೂಹಿಕ ವಜಾ: ಇನ್ಫೋಸಿಸ್ ವಿರುದ್ಧ ಕ್ರಮಕ್ಕೆ ಕೇಂದ್ರ ಸೂಚನೆ
ಇಂತಹ ಸಂದರ್ಭದಲ್ಲಿ, ಬಿಜೆಪಿಯ ಕೃಪಾಕಟಾಕ್ಷದಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ಸುಧಾ ಮೂರ್ತಿ ಅವರು ತ್ರಿಭಾಷಾ ಸೂತ್ರವನ್ನು ಬೆಂಬಲಿಸಿದ್ದಾರೆ. ಕನ್ನಡಿಗರೂ ಸೇರಿದಂತೆ ದಕ್ಷಿಣ ರಾಜ್ಯಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಸುಧಾ ಮೂರ್ತಿ ಅವರ ಪತಿ, ಇನ್ಫೋಸಿಸ್ ಸಂಸ್ಥಾಪಕದ ನಾರಾಯಣ ಮೂರ್ತಿ ಅವರು ಇತ್ತೀಚೆಗೆ ಉದ್ಯೋಗಿಗಳು ವಾರಕ್ಕೆ 70 ಗಂಟೆ ಕೆಲಸ ಮಾಡಬೇಕು ಎಂದು ಹೇಳಿದ್ದರು. ಅವರ ಹೇಳಿಕೆ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಅಲ್ಲದೆ, ನಾರಾಯಣ ಮೂರ್ತಿ ಅವರ ಹೇಳಿಕೆ ಬಂದ ಕೆಲವೇ ದಿನಗಳಲ್ಲಿ 300ಕ್ಕೂ ಹೆಚ್ಚು ಉದ್ಯೋಗಿಗಳನ್ನು ಇನ್ಫೋಸಿಸ್ ಸಾಮೂಹಿಕವಾಗಿ ವಜಾಗೊಳಿಸಿತ್ತು. ಈ ರೀತಿ ವಜಾಗೊಳಿಸುವಿಕೆಯು 1947ರ ಕೈಗಾರಿಕಾ ವಿವಾದ ಕಾಯ್ದೆ ಮತ್ತು ಇತರ ಕಾರ್ಮಿಕ ಕಾನೂನುಗಳ ನಿಬಂಧನೆಗಳ ಉಲ್ಲಂಘನೆಯಾಗಿದೆ. ಇನ್ಫೋಸಿಸ್ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ‘ನಸೆಂಟ್ ಇನ್ಫರ್ಮೇಷನ್ ಟೆಕ್ನಾಲಜಿ ಉದ್ಯೋಗಿಗಳ ಸೆನೆಟ್’ (NITES) ಕಾರ್ಮಿಕ ಸಚಿವಾಲಯಕ್ಕೆ ದೂರು ನೀಡಿದೆ.
ಈ ವರದಿ ಓದಿದ್ದೀರಾ?: 70 ಗಂಟೆ, 90 ಗಂಟೆ ಕೆಲಸ: ಉದ್ಯೋಗಿಗಳ ರಕ್ತ ಹೀರುವುದು ಲಾಭಕೋರ ಬಂಡವಾಳಿಗರ ಸಂಚು