- ‘ನಾನು ದ್ವೇಷ, ಗೂಂಡಾಗಿರಿ ರಾಜಕಾರಣ ಮಾಡಲ್ಲ’
- ‘ಗೂಂಡಾಗಿರಿ ರಾಜಕಾರಣ ಮಾಡುವರನ್ನು ಬಿಡಲ್ಲ’
ಮಾಜಿ ಸಚಿವ ಕೆ ಸುಧಾಕರ್ ಮತ್ತು ನೂತನ ಶಾಸಕ ಪ್ರದೀಪ್ ಈಶ್ವರ್ ನಡುವಿನ ಮಾತಿನ ಸಮರ ಮತ್ತಷ್ಟು ಜೋರಾಗಿದೆ. ಚಿಕ್ಕಬಳ್ಳಾಪುರದಲ್ಲಿ ಭಾನುವಾರ ಮಾತನಾಡಿದ ಪ್ರದೀಪ್ ಈಶ್ವರ್, “ಮಾಜಿ ಸಚಿವ ಸುಧಾಕರ್ ಬೆಂಬಲಿಗರು ಬಾಲ ಬಿಚ್ಚಿದರೆ ಕಟ್ ಮಾಡುತ್ತೇನೆ. ಬೇಕಾದರೆ ಟ್ರೈ ಮಾಡುವುದಕ್ಕೆ ಹೇಳಿ” ಎಂದು ಸವಾಲು ಹಾಕಿದ್ದಾರೆ.
ಈ ಮೂಲಕ ರಾಜ್ಯ ವಿಧಾನಸಭಾ ಚುನಾವಣೆ ಮುಗಿದು ಎರಡು ತಿಂಗಳಾದರೂ ಚಿಕ್ಕಬಳ್ಳಾಪುರದಲ್ಲಿ ಮಾತ್ರ ಶಾಸಕ ವರ್ಸಸ್ ಮಾಜಿ ಸಚಿವರ ನಡುವಿನ ವಾಕ್ಸಮರ ಮಾತ್ರ ನಿಲ್ಲುತ್ತಿಲ್ಲ.
“ನಾನು ದ್ವೇಷ ರಾಜಕಾರಣ, ಗೂಂಡಾಗಿರಿ ರಾಜಕಾರಣ ಮಾಡಲ್ಲ, ಆದರೆ, ಗೂಂಡಾಗಿರಿ ರಾಜಕಾರಣ ಮಾಡುವರನ್ನು ಬಿಡಲ್ಲ. ಕ್ಷೇತ್ರದಲ್ಲಿ ನನಗೆ ಸಿಕ್ಕ ಜನ ಬೆಂಬಲ ನೋಡಿ ಸಹಿಸಿಕೊಳ್ಳಲು ಆಗುತ್ತಿಲ್ಲ. ಸುಧಾಕರ್ ಸುಳ್ಳು ದೂರು ಕೊಡಿಸಿ ಗಲಭೆ ಸೃಷ್ಟಿಸುತ್ತಿದ್ದಾರೆ” ಎಂದು ಆರೋಪಿಸಿದ್ದಾರೆ.
“ಐದು ವರ್ಷದಲ್ಲಿ ಚಿಕ್ಕಬಳ್ಳಾಪುರವನ್ನು ಮಾದರಿ ಕ್ಷೇತ್ರ ಮಾಡುತ್ತೇನೆ. ಸುಧಾಕರ್ ರೀತಿಯಲ್ಲಿ ನಾನು ತಪ್ಪು ಮಾಡಲ್ಲ. ಪರ, ವಿರೋಧ ದೂರು ನೀಡಿದ್ದಾರೆ. ತನಿಖೆ ಆಗಿ ಸತ್ಯ ತಿಳಿಯಲಿ” ಎಂದು ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ‘ಈ ದಿನ’ ಸಂಪಾದಕೀಯ | ರಾಜ್ಯಪಾಲರ ‘ವಿಮಾನ ಪ್ರಕರಣ’; ಮಾಧ್ಯಮಗಳ ಗೊಂದಲಗಳು ಮತ್ತು ಜನಸಾಮಾನ್ಯರ ಪ್ರಶ್ನೆಗಳು
“ಉಳಿದ ಶಾಸಕರ ರೀತಿ ನನಗೆ ರಾಜಕೀಯ ಅಭದ್ರತೆ ಇಲ್ಲ. ನಾನು ಶಾಸಕನಾಗಿದ್ದೇ ಲಾಟರಿ. ನಾನು ಯಾವುದೇ ರಾಜಕೀಯ ಗಿಮಿಕ್ ಮಾಡಲ್ಲ. ಮುಂದೆ ಯಾರಾದರೂ ಒಳ್ಳೆ ಕೆಲಸ ಮಾಡುತ್ತಾರೆ ಅಂದರೆ ಅವರಿಗೆ ಓಟು ಹಾಕಿ ಗೆಲ್ಲಿಸಿ. ನಾನು ಒಳ್ಳೆ ಕೆಲಸ ಮಾಡಿದರೆ ಮುಂದೆ ನನ್ನನ್ನು ಗೆಲ್ಲಿಸಲಿ” ಎಂದು ಹೇಳಿದರು.
“ಬೇರೆ ಶಾಸಕರ ರೀತಿ ನಾನು 20-30 ವರ್ಷ ಕಡಿದು ಕಟ್ಟೆ ಹಾಕುತ್ತೇನೆ ಅಂತ ಹೇಳಲ್ಲ. ಕ್ಷೇತ್ರದಲ್ಲಿ ತಪ್ಪು ಯಾರು ಮಾಡಿದರೂ ತಪ್ಪೇ. ಸುಧಾಕರ್ ರೀತಿಯಲ್ಲಿ ನಾನು ತಪ್ಪು ಮಾಡಲ್ಲ” ಎಂದರು.