ಬಿಜೆಪಿ-ಜೆಡಿಎಸ್ ಮೈತ್ರಿಯದ ಬಳಿಕ ಮಂಡ್ಯ ಲೋಕಸಭಾ ಕ್ಷೇತ್ರವನ್ನು ಯಾರಿಗೆ ಕೊಡಬೇಕೆಂಬ ಕಗ್ಗಂಟು ಎದುರಾಗಿದೆ. ಬಿಜೆಪಿಗೆ ಬೆಂಬಲ ನೀಡಿದ್ದ ಸಂಸದೆ ಸುಮಲತಾ ಮಂಡ್ಯದಲ್ಲಿಯೇ ಸ್ಪರ್ಧಿಸುತ್ತೇನೆಂದು ಹೇಳುತ್ತಿದ್ದಾರೆ. ಆದರೆ, ಜೆಡಿಎಸ್ ಮಂಡ್ಯ ನಮಗೇ ಬೇಕೆಂದು ಪಟ್ಟು ಹಿಡಿದಿದೆ. ಈ ನಡುವೆ, ಬಿಜೆಪಿ ನಾಯಕರೊಂದಿಗೆ ಸುಮಲತಾ ಸಭೆ ನಡೆಸಿದ್ದು, ಬಿಜೆಪಿಯಿಂದ ಸ್ಪರ್ಧಿಸಲು ನಿರ್ಧರಿಸಿದ್ದಾರೆ. ಆದರೆ, ಮಂಡ್ಯ ಕ್ಷೇತ್ರವಲ್ಲದೆ, ಬೇರಾವುದೇ ಕ್ಷೇತ್ರ ನೀಡಿದರೂ ನಾನು ಸ್ಪರ್ಧಿಸುವುದಿಲ್ಲ. ಮಂಡ್ಯ ಕೊಡದಿದ್ದರೆ, ನನಗೆ ರಾಜಕೀಯವೇ ಬೇಡ ಎಂದಿದ್ದಾರೆ ಎಂದು ತಿಳಿದುಬಂದಿದೆ.
ಸಭೆಯ ಬಳಿಕ ಸುದ್ದಿಗಾರರೊಂದಿಗೆ ಸುಮಲತಾ ಮಾತನಾಡಿದ್ದು, “ನನ್ನ ಬಗ್ಗೆ ಯಾವುದೇ ಕಳಂಕ ಇಲ್ಲ. ಮಂಡ್ಯ ಕ್ಷೇತ್ರವನ್ನು ಬಿಜೆಪಿ ಉಳಿಸಿಕೊಳ್ಳುತ್ತದೆ ಎನ್ನಿಸುತ್ತಿದೆ. ನನ್ನ ಬೆಂಬಲಿಗರಲ್ಲಿ ಹಲವರು ಕಾಂಗ್ರೆಸ್ ಕಾರ್ಯಕರ್ತರಿದ್ದಾರೆ. ಅವರು ಕಾಂಗ್ರೆಸ್‌ಗೆ ಬನ್ನಿ ಎಂದು ಕರೆಯುತ್ತಿದ್ದಾರೆ. ಆದರೆ, ಕಾಂಗ್ರೆಸ್‌ನಿಂದ ಸ್ಪರ್ಧಿಸಲು ನಾನು ಪ್ರಯತ್ನಿಸಿಲ್ಲ. ಮೋದಿ ನೇತೃತ್ವವೇ ಸರಿಯೆಂದು ನಾನು ಭಾವಿಸಿದ್ದೇನೆ” ಎಂದು ಹೇಳಿದ್ದು, ಬಿಜೆಪಿಯಿಂದ ಸ್ಪರ್ಧಿಸುವ ಮಾತನಾಡಿದ್ದಾರೆ.
“ಸಭೆಯಲ್ಲಿ ಬಿಜೆಪಿ ಏನು ನಿರ್ಧಾರ ತೆಗೆದುಕೊಳ್ಳಬೇಕು. ಏನು ಮಾಡಬೇಕು ಎಂಬುದರ ಬಗ್ಗೆ ಚರ್ಚಿಸಿದ್ದೇವೆ. ಅಧಿಕೃತವಾಗಿ ಮಂಡ್ಯ ಬಿಜೆಪಿಗಾ ಅಥವಾ ಜೆಡಿಎಸ್‌ಗಾ ಎಂಬ ಎಂಬ ಬಗ್ಗೆ ಮಾತು ಬಂದಿಲ್ಲ” ಎಂದು ಹೇಳಿದ್ದಾರೆ.