ಇತ್ತೀಚೆಗಷ್ಟೇ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕುಟುಂಬದ ಬಗ್ಗೆ ಅವಹೇಳನಕಾರಿಯಾಗಿ ಟ್ವೀಟ್ ಮಾಡಿ, ಬಂಧನಕ್ಕೆ ಒಳಗಾಗಿ ಬಿಡುಗಡೆಯಾಗಿದ್ದ ತುಮಕೂರಿನ ಬಿಜೆಪಿ ಕಾರ್ಯಕರ್ತೆ ಶಕುಂತಲಾ ನಟರಾಜ್ ವಿರುದ್ಧ ರಾಷ್ಟ್ರಧ್ವಜದ ಬಗ್ಗೆ ಸುಳ್ಳು ಸುದ್ದಿ ಹಂಚಿದ್ದಕ್ಕಾಗಿ ಮತ್ತೆ ಎಫ್ಐಆರ್ ದಾಖಲಾಗಿದೆ. ಈ ಹಿನ್ನೆಲೆಯಲ್ಲಿ ಇದೀಗ ಮತ್ತೆ ಬಂಧನ ಭೀತಿ ಎದುರಾಗಿದೆ.
‘ಎಕ್ಸ್'(ಹಿಂದಿನ ಟ್ವಿಟ್ಟರ್) ಖಾತೆಯಲ್ಲಿ ನಕಲಿ ಪೋಸ್ಟ್ ಹಂಚಿಕೊಂಡ ಆರೋಪದ ಮೇಲೆ ತುಮಕೂರಿನ ಜಯನಗರ ಠಾಣಾ ಪೊಲೀಸರು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು, ಎಫ್ಐಆರ್ ದಾಖಲಿಸಿದ್ದಾರೆ.
Suo Moto FIR Registerd against BJP activist @ShakunthalaHS in Karnataka under IPC 153(B) for spreading fake news on National Flag in Lulu Mall. pic.twitter.com/HNH37leCG6
— Mohammed Zubair (@zoo_bear) October 14, 2023
ಬೆಂಗಳೂರಿನ ಲುಲು ಶಾಪಿಂಗ್ ಮಾಲ್ನಲ್ಲಿ ಭಾರತದ ಬಾವುಟಕ್ಕಿಂತ ಪಾಕಿಸ್ತಾನ ಬಾವುಟವನ್ನು ಎತ್ತರದಲ್ಲಿ ಹಾರಿಸಿದ್ದಾರೆ ಎಂದು ಫೋಟೋ ಜೊತೆಗೆ ಶಕುಂತಲಾ ನಟರಾಜ್ ಅ. 10ರಂದು ಪೋಸ್ಟ್ ಹಂಚಿಕೊಂಡಿದ್ದರು.
ಅಲ್ಲದೆ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಟ್ಯಾಗ್ ಮಾಡಿರುವ ಶಕುಂತಲಾ, ‘ಭಾರತದ ಬಾವುಟಕ್ಕಿಂತ ಬೇರೆ ಯಾವುದೇ ಬಾವುಟ ಎತ್ತರದಲ್ಲಿ ಇರಬಾರದು ಅನ್ನೋ ಸಾಮಾನ್ಯ ಜ್ಞಾನ ಇಲ್ಲವೇ? ನಿಮ್ಮ ಮಾಲ್ನವರಿಗೆ’ ಎಂದು ಪ್ರಶ್ನೆ ಮಾಡಿದ್ದಾರೆ. ಇದರ ಜತೆಗೆ ಬೆಂಗಳೂರಿನ ಲುಲು ಮಾಲ್ ಬಹಿಷ್ಕರಿಸಿ ಎಂದು ಹ್ಯಾಷ್ಟ್ಯಾಗ್ ಉಪಯೋಗಿಸಿದ್ದಾರೆ.
ಆದರೆ, ಶಕುಂತಲಾ ಪೋಸ್ಟ್ ಮಾಡಿರುವ ಫೋಟೋದ ಸತ್ಯಾಸತ್ಯತೆ ಏನು ಎಂಬುದನ್ನು ತಿಳಿದುಕೊಳ್ಳಲು ಅದರ ಮೂಲ ಹುಡುಕಿ ಫ್ಯಾಕ್ಟ್ಚೆಕ್ ಮಾಡಿದ ತುಮಕೂರು ಪೊಲೀಸರು, ಇದು ನಕಲಿ ಪೋಸ್ಟ್ ಎಂಬುದು ಗೊತ್ತಾಗಿದೆ. ಅಲ್ಲದೇ, ಈ ಫೋಟೋವನ್ನು ಎಡಿಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹಬ್ಬಿಸಿರುವುದು ಬೆಳಕಿಗೆ ಬಂದಿದೆ.
ಈ ಹಿನ್ನೆಲೆಯಲ್ಲಿ ನಕಲಿ ಪೋಸ್ಟ್ ಮೂಲಕ ಜನರ ಭಾವನೆಗಳನ್ನು ಕೆರಳಿಸುವ ಕೆಲಸ ಮಾಡಿದ್ದಾರೆಂಬ ಆರೋಪದಡಿ ಶಕುಂತಲಾ ನಟರಾಜ್ ವಿರುದ್ಧ ಭಾರತೀಯ ದಂಡಸಂಹಿತೆಯ ಸೆಕ್ಷನ್ 153 (ಬಿ) ಅಡಿಯಲ್ಲಿ ತುಮಕೂರಿನ ಜಯನಗರ ಠಾಣೆಯ ಪೊಲೀಸರು ಸ್ವಯಂಪ್ರೇರಿತ ಎಫ್ಐಆರ್ ದಾಖಲಿಸಿಕೊಂಡಿದ್ದಾರೆ. ಹೀಗಾಗಿ, ಶಕುಂತಲಾ ಅವರಿಗೆ ಮತ್ತೆ ಬಂಧನ ಭೀತಿ ಎದುರಾಗಿದೆ.
A lot of right wing influencers like @pradip103 @pratheesh_Hind have shared this image from Lulu Mall, Kochi, Kerala where a Pakistani flag looks* like it is placed higher than Indian Flag and it looks* bigger in size too. But this isn’t the case. All the flags were of same size… pic.twitter.com/YEmrGhgph0
— Mohammed Zubair (@zoo_bear) October 10, 2023
ಕೆಲ ತಿಂಗಳ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕುಟುಂಬದ ವಿರುದ್ಧ ಅವಹೇಳನಕಾರಿ ಪೋಸ್ಟ್ ಮಾಡಿದ್ದ ಹಿನ್ನೆಲೆಯಲ್ಲಿ ಬೆಂಗಳೂರಿನ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಶಕುಂತಲಾ ನಟರಾಜ್ ವಿರುದ್ಧ ಎಫ್ಐಆರ್ ದಾಖಲಾಗಿತ್ತು. ಠಾಣೆಗೆ ಕರೆದುಕೊಂಡು ಬಂದಿದ್ದ ಪೊಲೀಸರು, ಮುಚ್ಚಳಿಕೆ ಪತ್ರ ಬರೆಸಿಕೊಂಡು ಠಾಣಾ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದರು.
ಫ್ಯಾಕ್ಟ್ ಚೆಕ್ ನಡೆಸಿದ್ದ ಆಲ್ಟ್ ನ್ಯೂಸ್ನ ಮುಹಮ್ಮದ್ ಝುಬೇರ್
ಈ ಫೋಟೋ ಹರಿದಾಡಿದ ಬೆನ್ನಲ್ಲೇ ಫ್ಯಾಕ್ಟ್ ಚೆಕ್ ನಡೆಸಿದ್ದ ಆಲ್ಟ್ ನ್ಯೂಸ್ನ ಮುಹಮ್ಮದ್ ಝುಬೇರ್, ಈ ಫೋಟೋ ಕೇರಳದ ಲುಲು ಮಾಲ್ನ ದೃಶ್ಯ. ಅಲ್ಲಿ ಭಾರತದ ಭಾವುಟ ಸೇರಿದಂತೆ ವಿಶ್ವಕಪ್ನಲ್ಲಿ ಭಾಗವಹಿಸುತ್ತಿರುವ ಎಲ್ಲ ತಂಡಗಳ ಧ್ವಜಗಳನ್ನು ಸಮಾನವಾಗಿ ಹಾಕಲಾಗಿತ್ತು ಎಂಬುದನ್ನು ಪತ್ತೆ ಹಚ್ಚಿದ್ದರು.
ಸುಳ್ಳು ಸುದ್ದಿಗಳನ್ನು ಹಬ್ಬಿಸುವವರ ವಿರುದ್ಧ ಸರ್ಕಾರ ಕಠಿಣ ಕಾನೂನು ಕ್ರಮಗಳನ್ನು ನಿರ್ದಾಕ್ಷಿಣ್ಯವಾಗಿ ತೆಗೆದುಕೊಳ್ಳಬೇಕು.
ಮುಂದೆಂದೂ ಇಂತಹ ದುಷ್ಟ ಕೃತ್ಯಗಳಲ್ಲಿ ತೊಡಗಿಸಿಕೊಳ್ಳಲು ಭಯಪಡುವಂತಹ ಶಿಕ್ಷೆಯನ್ನೇ ಅವರಿಗೆ ವಿಧಿಸಬೇಕು.
ಒಂದು ಸುಳ್ಳು ಸುದ್ದಿಯನ್ನು ಹಬ್ಬಿಸಿ ಸಮಾಜದ ಶಾಂತಿಯನ್ನು ಅತಿ ಸುಲಭವಾಗಿ ಕದಡಬಹುದು. ಆದರೆ , ಅದು ಸುಳ್ಳು ಸುದ್ದಿ ಎಂಬುದನ್ನು ಜನರಿಗೆ ಮನವರಿಕೆ ಮಾಡುವುದು ಬಹಳ ಕಷ್ಟದ ಕೆಲಸ.
ಸುದ್ದಿಗಳ ಸತ್ಯಾಸತ್ಯತೆಗಳನ್ನು ತಿಳಿದು ಪರಿಶೀಲಿಸದೆ , ಯಾರಿಗೂ ಯಾವುದೇ ಸುದ್ದಿಗಳನ್ನು ಅವಸರದಿಂದ ನಾವು ಕಳುಹಿಸದಿರೋಣ.