ವಿಧಾನಸಭಾ ಚುನಾವಣೆಯಲ್ಲಿ ಡಾ.ಕೆ ಸುಧಾಕರ್ ಅವರನ್ನು ಬೆಂಬಲಿಸಿದ ಆರೋಪದ ಮೇಲೆ ನಗರಸಭೆಯ ಐದು ಮಂದಿ ಕಾಂಗ್ರೆಸ್ ಸದಸ್ಯರನ್ನು ಕಾಂಗ್ರೆಸ್‌ನಿಂದ ಉಚ್ಚಾಟಿಸಲಾಗಿದೆ.
ಪಕ್ಷಾಂತರ ನಿಷೇಧ ಕಾಯ್ದೆ ಅನ್ವಯ ಐದು ಮಂದಿ ಸದಸ್ಯರ ಸದಸ್ಯತ್ವ ರದ್ದುಪಡಿಸಿ, ಆರು ವರ್ಷಗಳ ಕಾಲ ಪಕ್ಷದಿಂದ ಉಚ್ಚಾಟಿಸಲು ಕೆಪಿಸಿಸಿ ಶಿಸ್ತು ಸಮಿತಿ ಅಧ್ಯಕ್ಷ ಕೆ. ರೆಹಮಾನ್ ಅವರು ಪಕ್ಷದ ಜಿಲ್ಲಾ ಅಧ್ಯಕ್ಷ ಕೆ ಎನ್ ಕೇಶವರೆಡ್ಡಿ ಅವರಿಗೆ ಸೂಚಿಸಿದ್ದಾರೆ.
ಚಿಕ್ಕಬಳ್ಳಾಪುರ ನಗರದ 7ನೇ ವಾರ್ಡ್ ಸದಸ್ಯ ಸತೀಶ್, 13ನೇ ವಾರ್ಡ್‌ನ ನಿರ್ಮಲ ಪ್ರಭು, 15ನೇ ವಾರ್ಡ್‌ನ ಅಂಬರೀಷ್, 20ನೇ ವಾರ್ಡ್‌ನ ನರಸಿಂಹಮೂರ್ತಿ, 27ನೇ ವಾರ್ಡ್‌ನ ಎ.ನೇತ್ರಾವತಿ ಕಾಂಗ್ರೆಸ್‌ನಿಂದ ಉಚ್ಚಾಟಿತ ಸದಸ್ಯರು.
ಬಿಜೆಪಿ ಸರ್ಕಾರದಲ್ಲಿ ಬಿಎಂಟಿಸಿ ಉಪಾಧ್ಯಕ್ಷರಾಗಿದ್ದ ನವೀನ್ ಕಿರಣ್ ಅವರ ತಾಯಿ ಹಾಗೂ 13ನೇ ವಾರ್ಡ್ ಸದಸ್ಯೆ ನಿರ್ಮಲ ಪ್ರಭು ಹಾಗೂ 7ನೇ ವಾರ್ಡ್‌ನ ಸತೀಶ್ ಸಹ ಬಿಜೆಪಿ ಅಭ್ಯರ್ಥಿ ಡಾ.ಕೆ.ಸುಧಾಕರ್ ಪರವಾಗಿ ಕೆಲಸ ಮಾಡಿದ್ದರು.
ಕೆಪಿಸಿಸಿ ಸದಸ್ಯ ವಿನಯ್ ಎನ್.ಶ್ಯಾಮ್ ಅವರ ಬೆಂಬಲಿಗರಾಗಿದ್ದ ಅಂಬರೀಷ್, ನೇತ್ರಾವತಿ, ನರಸಿಂಹಮೂರ್ತಿ, ವಿನಯ್ ಶ್ಯಾಮ್ ಅವರಿಗೆ ಟಿಕೆಟ್ ದೊರೆಯದಿರುವುದಕ್ಕೆ ಅಸಮಾಧಾನಗೊಂಡು ಬಿಜೆಪಿ ಸೇರಿದ್ದರು. ವಿಧಾನಸಭೆ ಚುನಾವಣೆ ಸಮಯದಲ್ಲಿ ಈ ಸದಸ್ಯರ ಪಕ್ಷಾಂತರ ಚರ್ಚೆಗೆ ಕಾರಣವಾಗಿತ್ತು.