ಲೋಕಸಭೆಯಲ್ಲಿ ಇಂದು ನಡೆದ ಭದ್ರತಾ ವೈಫಲ್ಯ ಘಟನೆಗೆ ಸಂಬಂಧಿಸಿದಂತೆ ಸಂಸತ್ನ ಒಳಗೆ ಹೋಗಲು ಪಾಸ್ ಕೊಟ್ಟ ಕಾರಣಕ್ಕೆ ಇದೀಗ ಸಂಸದ ಪ್ರತಾಪ್ ಸಿಂಹ ಸಮಸ್ಯೆಯಲ್ಲಿ ಸಿಲುಕಿದ್ದಾರೆ.
ಈ ನಡುವೆ ಸಂಸದ ಪ್ರತಾಪ್ ಸಿಂಹ ಅವರ ವಿರುದ್ಧವೂ ಸೂಕ್ತ ಕ್ರಮ ಕೈಗೊಳ್ಳಬೇಕು ಹಾಗೂ ಬಂಧಿಸುವಂತೆ ಆಗ್ರಹಿಸಿ ಮೈಸೂರಿನಲ್ಲಿರುವ ಅವರ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಲಾಯಿತು.
ಮೈಸೂರಿನ ಜಲದರ್ಶಿನಿ ಅತಿಥಿಗೃಹದಲ್ಲಿರುವ ಕಚೇರಿ ಮುಂಭಾಗ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಪ್ರತಾಪ್ ಸಿಂಹ ಪಾಸ್ ಕೊಟ್ಟಿರುವುದನ್ನು ಖಂಡಿಸಿ ಪ್ರತಿಭಟಿಸಿದ ಕಾಂಗ್ರೆಸ್ ಕಾರ್ಯಕರ್ತರು, ಸಂಸದರ ಕಚೇರಿಯ ಕಾಂಪೌಡ್ ಗೋಡೆ ಏರಿ ಒಳಗೆ ನುಗ್ಗಲು ಯತ್ನಿಸಿದ್ದಾರೆ. ಈ ವೇಳೆ ಪೊಲೀಸರು ಹಾಗೂ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಜಟಾಪಟಿ, ವಾಗ್ವಾದವೂ ನಡೆದಿದೆ.
Members and Supporters of #Congress, protested against #BJP MP #PratapSimha ,outside his office in #Mysuru… @INCKarnataka @mepratap @INCIndia @BJP4Karnataka pic.twitter.com/i6Mo30klq8
— Yasir Mushtaq (@path2shah) December 13, 2023
ಪ್ರತಿಭಟನೆಯಲ್ಲಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ವಕ್ತಾರ ಎಂ.ಲಕ್ಷ್ಮಣ್, ಪ್ರತಾಪ್ ಸಿಂಹ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
“ಘಟನೆಯಲ್ಲಿ ಭಾಗಿಯಾಗಿರುವ ಆರೋಪಿಗಳು ಪ್ರತಾಪ್ ಸಿಂಹ ಅವರ ಆತ್ಮೀಯರು. ಸಂಸತ್ಗೆ ಇಂದು ಒಟ್ಟು ಆರು ಜನ ನುಗ್ಗಿದ್ದಾರೆ ಅಂತ ಮಾಹಿತಿ ಇದೆ. ಅವರೆಲ್ಲರೂ ಪ್ರತಾಪ್ ಸಿಂಹ ಜೊತೆಗೆ ಸಭೆ ನಡೆಸಿದ್ದಾರೆ. ಇದರ ಸಿಸಿಟಿವಿ ದೃಶ್ಯವನ್ನು ಪೊಲೀಸರು ಪತ್ತೆ ಹಚ್ಚಬೇಕು” ಎಂದು ಗಂಭೀರ ಆರೋಪ ಮಾಡಿದರು.
“ಒಂದು ವೇಳೆ ಘಟನೆಯಲ್ಲಿ ಭಾಗಿಯಾದವರ ಪೈಕಿ ಅಥವಾ ಪಾಸ್ ನೀಡಿದ್ದು ಮುಸ್ಲಿಂ ಸಂಸದನೇನಾದರೂ ಆಗಿದ್ದಿದ್ದರೆ ಬಿಜೆಪಿಯವರು ಈಗ ಇಡೀ ದೇಶಕ್ಕೆ ಬೆಂಕಿ ಹಚ್ಚುತ್ತಿದ್ದರು. ಆದ್ದರಿಂದ ಈ ಪ್ರಕರಣದಲ್ಲಿ ಪ್ರತಾಪ್ ಸಿಂಹ ಅವರ ಪಾತ್ರದ ಬಗ್ಗೆಯೂ ತನಿಖೆ ನಡೆಯಬೇಕು” ಎಂದು ಆಗ್ರಹಿಸಿದರು.