ಪೌರತ್ವ ತಿದ್ದುಪಡಿ ಕಾಯಿದೆ-2019 (ಸಿಎಎ)ಯ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳು ಇನ್ನೂ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆಗೆ ಬಾಕಿ ಇವೆ. ಇಂತಹ ಸಂದರ್ಭದಲ್ಲಿ ಸಿಎಎಯ 2024ರ ನಿಯಮಗಳನ್ನು ಅನುಷ್ಠಾನಗೊಳಿಸಲು ಕೇಂದ್ರ ಮುಂದಾಗಿದೆ. ಕೇಂದ್ರದ ನಡೆಯನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆ ನಡೆಸುವುದಾಗಿ ಸುಪ್ರೀಂ ಕೋರ್ಟ್ ಶುಕ್ರವಾರ ಹೇಳಿದೆ.
ಇತ್ತೀಚೆಗೆ, ಕೇಂದ್ರ ಸರ್ಕಾರವು ಸಿಎಎ ಜಾರಿಗೊಳಿಸಲು ಹೊರಡಿಸಿರುವ ಅಧಿಸೂಚನೆಯನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಅರ್ಜಿ ಸಲ್ಲಿಸಿದೆ. ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿ ಜೆ.ಬಿ ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರಿದ್ದ ಪೀಠವು ಅರ್ಜಿಯ ವಿಚಾರಣೆ ನಡೆಸಿದೆ. ಅರ್ಜಿದಾರರ ಪರವಾಗಿ ಹಿರಿಯ ವಕೀಲ ಕಪಿಲ್ ಸಿಬಲ್ ವಾದ ಮಂಡಿಸಿದ್ದು, “ಸಿಎಎ ಅನುಷ್ಠಾನದಲ್ಲಿ ಹಲವು ಸಮಸ್ಯೆಗಳಿವೆ. ಹೀಗಾಗಿ, ಆ ಬಗ್ಗೆ ಆರಂಭಿಕ ವಿಚಾರಣೆಯ ಅಗತ್ಯವಿದೆ” ಎಂದು ನ್ಯಾಯಾಲಯಕ್ಕೆ ವಿವರಿಸಿದ್ದಾರೆ.
ಅರ್ಜಿಯ ವಿಚಾರಣೆಗೆ ಒಪ್ಪಿಕೊಂಡಿರುವ ಪೀಠವು, “ನಾವು ಇದನ್ನು ಮಂಗಳವಾರ ಆಲಿಸುತ್ತೇವೆ. 190 ಪ್ಲಸ್ ಅರ್ಜಿಗಳಿವೆ. ಅವೆಲ್ಲವನ್ನೂ ಆಲಿಸಲಾಗುವುದು” ಎಂದು ಹೇಳಿದೆ.
ಕೇಂದ್ರ ಸರ್ಕಾರದ ಪರ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, “237 ಅರ್ಜಿಗಳಿದ್ದು, ಬಾಕಿ ಉಳಿದಿರುವ ಅರ್ಜಿಗಳಲ್ಲಿ ನಿಯಮಗಳ ಅನುಷ್ಠಾನದ ವಿರುದ್ಧ ನಾಲ್ಕು ಮಧ್ಯಂತರ ಅರ್ಜಿಗಳನ್ನು ಸಲ್ಲಿಸಲಾಗಿದೆ” ಎಂದು ಹೇಳಿದರು.
ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದಿಂದ ಬಂದ ದಾಖಲೆರಹಿತ ಮುಸ್ಲಿಮೇತರ ವಲಸಿಗರಿಗೆ ಪೌರತ್ವವನ್ನು ನೀಡುವುದಾಗಿ ಕೇಂದ್ರ ಸರ್ಕಾರವು ಸಿಎಎಯಲ್ಲಿ ಹೇಳಿದೆ. ಆದರೆ, ಕಾಯ್ದೆಯಿಂದ ಮುಸ್ಲಿಮರು, ಶ್ರೀಲಂಕನ್ ತಮಿಳರನ್ನು ಹೊರಗಿಡಲಾಗಿದೆ. ಈ ಕಾಯ್ದೆಯನ್ನು ವಿರೋಧಿಸಿ 2019-20ರಲ್ಲಿ ದೇಶಾದ್ಯಂತ ಭಾರೀ ಹೋರಾಟಗಳು ನಡೆದಿದ್ದವು. ಅಗ, ಕಾಯ್ದೆಯ ಅನುಷ್ಠಾನದಿಂದ ಹಿಂದೆ ಸರಿದಿದ್ದ ಕೇಂದ್ರ ಸರ್ಕಾರ, ಇದೀಗ ಚುನಾವಣಾ ಸಮಯದಲ್ಲಿ ಅನುಷ್ಠಾನಗೊಳಿಸಲು ಮುಂದಾಗಿದೆ.