ಕೇಂದ್ರ ಸರ್ಕಾರವು ಜಾರಿಗೊಳಿಸಲು ಮುಂದಾಗಿರುವ ವಕ್ಫ್ ತಿದ್ದುಪಡಿ ಕಾಯ್ದೆ-2025ರಲ್ಲಿ ವಕ್ಫ್ ಮಂಡಳಿಗಳಲ್ಲಿ ಮುಸ್ಲಿಮೇತರರನ್ನು (ಹಿಂದು) ನೇಮಿಸುವುದ ಉದ್ದೇಶವೂ ಒಂದಾಗಿದೆ. ಈ ವಿಚಾರದ ಬಗ್ಗೆ ಕೇಂದ್ರ ಸರ್ಕಾರಕ್ಕೆ ಛಾಟಿ ಬೀಸಿರುವ ಸುಪ್ರೀಂ ಕೋರ್ಟ್, “ಹಿಂದು ಮಂಡಳಿಗಳಲ್ಲಿ ಮುಸ್ಲಿಮರು ಇರುತ್ತಾರೆಯೇ?” ಬಹಿರಂಗವಾಗಿ ಹೇಳಿ ಎಂದು ತಾಕೀತು ಮಾಡಿದೆ.
ವಕ್ಫ್ ತಿದ್ದುಪಡಿ ಕಾಯ್ದೆ-2025ಯನ್ನು ಪ್ರಶ್ನಿಸಿ ಕಾಂಗ್ರೆಸ್, ಡಿಎಂಕೆ, ಟಿಎಂಸಿ ಸೇರಿದಂತೆ ಹಲವು ಪಕ್ಷಗಳು ಹಾಗೂ ಸಾರ್ವಜನಿಕರು ಸುಪ್ರೀಂ ಕೋರ್ಟ್‌ನಲ್ಲಿ ಪಿಐಎಲ್ ಸಲ್ಲಿಸಿದ್ದಾರೆ. ಅಂತಹ 73 ಅರ್ಜಿಗಳನ್ನು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ, ನ್ಯಾಯಮೂರ್ತಿ ಸಂಜಯ್ ಕುಮಾರ್ ಮತ್ತು ನ್ಯಾಯಮೂರ್ತಿ ಕೆ.ವಿ. ವಿಶ್ವನಾಥನ್ ಅವರಿದ್ದ ಪೀಠವು ವಿಚಾರಣೆ ನಡೆಸಿದೆ. “ಕೇಂದ್ರ ವಕ್ಫ್ ಮಂಡಳಿಗಳನ್ನು ಮುಸ್ಲಿಮೇತರರನ್ನು ನೇಮಿಸುವ ನಿಬಂಧನೆಯನ್ನು ಕಾಯ್ದೆಯು ಒಳಗೊಂಡಿದೆ ಎಂಬುದನ್ನು ನ್ಯಾಯಾಲಯ ಗುರುತಿಸಿದೆ. ವಕ್ಫ್ ಮಂಡಳಿಗಳಲ್ಲಿ ಮುಸ್ಲಿಮೇತರರನ್ನು ನೇಮಿಸುವಾಗ, ಹಿಂದು ದತ್ತಿ ಮಂಡಳಿಗಳಲ್ಲಿ ಮುಸ್ಲಿಮರು ಸೇರಲು, ನೇಮಿಸಲು ಅವಕಾಶ ಇದೆಯೇ ಅಥವಾ ಅವಕಾಶ ನೀಡಲಾಗುತ್ತದೆಯೇ” ಎಂದು ಸರ್ಕಾರವನ್ನು ಪ್ರಶ್ನಿಸಿದೆ.
ಅರ್ಜಿದಾರರ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಕಪಿಲ್ ಸಿಬಲ್, “ಹೊಸ ಕಾಯ್ದೆಯಲ್ಲಿನ ಹಲವು ನಿಬಂಧನೆಗಳು ಧಾರ್ಮಿಕ ವ್ಯವಹಾರಗಳನ್ನು ನಿರ್ವಹಿಸುವ ಸ್ವಾತಂತ್ರ್ಯವನ್ನು ಖಾತರಿಪಡಿಸುವ ಸಂವಿಧಾನದ 26ನೇ ವಿಧಿಯನ್ನು ಉಲ್ಲಂಘಿಸುತ್ತವೆ. ಜಿಲ್ಲಾಧಿಕಾರಿಗೆ ಅಧಿಕಾರ ನೀಡಿ, ವಕ್ಫ್ ಆಸ್ತಿಯ ಮೇಲೆ ಕೇಂದ್ರ ಸರ್ಕಾರದ ಅಧಿಕಾರ ಸಾಧಿಸಲು ಮುಂದಾಗಿದೆ. ಕೇಂದ್ರ ಸರ್ಕಾರದ ಭಾಗವಾಗಿರುವ ಜಿಲ್ಲಾಧಿಕಾರಿಗಳು ನ್ಯಾಯಾಧೀಶರ ಪಾತ್ರವನ್ನು ನಿರ್ವಹಿಸುವುದು ಸಂವಿಧಾನಬಾಹಿರ” ಎಂದಿದ್ದಾರೆ.
ಈ ವರದಿ ಓದಿದ್ದೀರಾ?: ವಕ್ಫ್ ತಿದ್ದುಪಡಿ ಕಾಯ್ದೆ | ಮೂಗಿಗೆ ತುಪ್ಪ ಹಚ್ಚಲು ಮನೆ ಬಾಗಿಲಿಗೆ ಬರುತ್ತಿದೆ ಬಿಜೆಪಿ!
“ಔಪಚಾರಿಕ ದಾಖಲೆಗಳಿಲ್ಲದೆ ಇದ್ದರೂ ಸಹ ಧಾರ್ಮಿಕ ಅಥವಾ ದತ್ತಿ ಉದ್ದೇಶಗಳಿಗಾಗಿ ದೀರ್ಘಕಾಲದಿಂದ ಬಳಕೆ ಮಾಡಲಾಗಿರುವ ಆಧಾರದ ಮೇಲೆ ಆಸ್ತಿಗಳನ್ನು ‘ಬಳಕೆದಾರರಿಂದ ವಕ್ಫ್’ ಎಂದು ಪರಿಗಣಿಸಲಾಗುತ್ತದೆ. ಆದರೆ, ಹೊಸ ಕಾನೂನು ಔಪಚಾರಿಕ ದಾಖಲೆಗಳಿಲ್ಲದ ಆಸ್ತಿಗಳನ್ನು ಸರ್ಕಾರದ ಸುಪರ್ದಿಗೆ ತೆಗೆದುಕೊಳ್ಳಲು ಅವಕಾಶ ಮಾಡಿಕೊಡುತ್ತದೆ. ಮುಸ್ಲಿಂ ಸಮುದಾಯದ ಪ್ರಗತಿಗೆ ಅಡ್ಡಿ ಉಂಟು ಮಾಡುತ್ತದೆ” ಎಂದು ವಾದಿಸಿದ್ದಾರೆ.
ವಾದ ಆಲಿಸಿದ ನ್ಯಾಯಮೂರ್ತಿಗಳು, “ಹೊಸ ಕಾನೂನಿನಲ್ಲಿ ‘ಬಳಕೆದಾರರಿಂದ ವಕ್ಫ್’ ನಿಬಂಧನೆಗಳ ಮೇಲೆ ಗಮನಹರಿಸುವ ಅಗತ್ಯವಿದೆ. ನ್ಯಾಯಾಲಯದ ತೀರ್ಪಿನಿಂದ ಅಥವಾ ಇನ್ಯಾವುದೇ ರೀತಿಯಲ್ಲಿ ‘ಬಳಕೆದಾರರಿಂದ ವಕ್ಫ್’ ಸ್ಥಾಪಿಸಲ್ಪಟ್ಟಿದ್ದರೆ, ಅದು ಈಗ ಈಗ ಅನೂರ್ಜಿತವೆಂದು ಸರ್ಕಾರ ಹೇಳುತ್ತದೆ. ಆದರೆ, ವಕ್ಫ್‌ನ ಭಾಗವಾಗಿರುವ ಅನೇಕ ಮಸೀದಿಗಳನ್ನು 13, 14 ಮತ್ತು 15ನೇ ಶತಮಾನಗಳಲ್ಲಿಯೇ ನಿರ್ಮಿಸಲಾಗಿದೆ. ಅವುಗಳಿಗೆ ದಾಖಲೆಗಳನ್ನು ಒದಗಿಸುವುದು ಅಸಾಧ್ಯ” ಎಂದು ಹೇಳಿದ್ದಾರೆ. ಇದು ದುರುಪಯೋಗದ ನಿದರ್ಶನದಂತೆ ಕಾಣುತ್ತದೆ ಎಂದಿದ್ದಾರೆ.