- ಕೆ ಎಂ ಜೋಸೆಫ್ ಹಾಗೂ ಕೆ ಎಸ್ ನಾಗರತ್ನ ನೇತೃತ್ವದ ದ್ವಿಸದಸ್ಯ ಪೀಠದ ವಿಚಾರಣೆ
- ಮೀಸಲಾತಿ ನಿರ್ಧಾರ ತೀರ ಕಳಪೆ ಹಾಗೂ ದೋಷಪೂರಿತ ಎಂದು ಹೇಳಿದ್ದ ಪೀಠ
ಮುಸ್ಲಿಮರಿಗೆ ನೀಡಲಾಗಿರುವ ಶೇ. 4ರಷ್ಟು ಮೀಸಲಾತಿ ರದ್ದುಗೊಳಿಸಿರುವ ಪ್ರಕರಣ ಸಂಬಂಧ ಪ್ರತಿಕ್ರಿಯಿಸಲು ಕರ್ನಾಟಕ ಸರ್ಕಾರವು ಸಮಯಾವಕಾಶ ಕೇಳಿದ್ದು, ಹೀಗಾಗಿ ಸುಪ್ರೀಂ ಕೋರ್ಟ್ ವಿಚಾರಣೆಯನ್ನು ಏಪ್ರಿಲ್ 25ಕ್ಕೆ ಮುಂದೂಡಿದೆ.
ಪ್ರಕರಣಕ್ಕೆ ಸಂಬಂಧಿಸಿ ರಾಜ್ಯ ಸರಕಾರವು ಉತ್ತರ ಸಲ್ಲಿಸಲು ಸಮಯ ಕೋರಿದ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಶೇ. 4ರಷ್ಟು ಮುಸ್ಲಿಂ ಮೀಸಲಾತಿ ರದ್ದುಗೊಳಿಸುವುದರ ವಿರುದ್ಧದ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಏಪ್ರಿಲ್ 25ರವರೆಗೆ ಮುಂದೂಡಿತು.
ಎಲ್ ಗುಲಾಮ್‌ರಸೂಲ್ ಮತ್ತು ಅಂಜುಮನ್-ಇ-ಇಸ್ಲಾಂ ಸರಕಾರಿ ಆದೇಶವನ್ನು ಪ್ರಶ್ನಿಸುವ ರಿಟ್ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಕೆ ಎಂ ಜೋಸೆಫ್ ಹಾಗೂ ಕೆ ಎಸ್ ನಾಗರತ್ನ ನೇತೃತ್ವದ ದ್ವಿಸದಸ್ಯ ಪೀಠವು ಮಂಗಳವಾರ ಕೈಗೆತ್ತಿಕೊಂಡಿತು. ಸಂವಿಧಾನವು ಧರ್ಮದ ಆಧಾರದ ಮೇಲೆ ಮೀಸಲಾತಿ ಅನುಮತಿಸುವುದಿಲ್ಲ ಎಂದು ರಾಜ್ಯವು ಪ್ರತಿಪಾದಿಸಿದೆ.
ಪೀಠದಲ್ಲಿದ್ದ ಮತ್ತೊಬ್ಬರು ನ್ಯಾಯಾಧೀಶರಾದ ನ್ಯಾಯಮೂರ್ತಿ ಬಿ ವಿ ನಾಗರತ್ನ ಅವರು, ಮಧ್ಯಂತರ ವರದಿಯ ಆಧಾರದ ಮೇಲೆ ಸರಕಾರಿ ಆದೇಶ ನೀಡುವ ಬದಲು ರಾಜ್ಯವು ಅಂತಿಮ ವರದಿಗಾಗಿ ಕಾಯಬಹುದಿತ್ತು ಹಾಗೂ “ಮಹಾತುರ್ತು” ತಿಳಿಯಲು ಪ್ರಯತ್ನಿಸಬಹುದಿತ್ತು ಎಂದರು.
ಈ ಸುದ್ದಿ ಓದಿದ್ದೀರಾ? ಮುಸ್ಲಿಂ ಮೀಸಲಾತಿ ರದ್ದು ತೀರ್ಮಾನ ತೀರ ಕಳಪೆ, ದೋಷಪೂರಿತ ನಿರ್ಧಾರ ಎಂದ ಸುಪ್ರೀಂ ಕೋರ್ಟ್
ಆದರೆ, ರಾಜ್ಯ ಸರಕಾರ ಹಾಗೂ ಒಕ್ಕಲಿಗ ಮತ್ತು ಲಿಂಗಾಯತ ಸಮುದಾಯಗಳ ಕೆಲವು ಮುಖಂಡರ ಪರ ವಾದ ಮಂಡಿಸಿದ ವಕೀಲರು ಯಾವುದೇ ತಡೆಯಾಜ್ಞೆ ವಿರೋಧಿಸಿದರು ಮತ್ತು ಉತ್ತರಿಸಲು ಕೆಲವು ದಿನಗಳ ಕಾಲಾವಕಾಶ ಕೋರಿದರು. ಅರ್ಜಿದಾರರು ಕೋರಿದ ಯಾವುದೇ ಮಧ್ಯಂತರ ಪರಿಹಾರವನ್ನು ನೀಡಲು ಪೀಠವು ನಿರಾಕರಿಸಿತು.
ಮೀಸಲಾತಿ ರದ್ದು ಸಂಬಂಧ ಸಲ್ಲಿಸಲಾಗಿರುವ ಮೇಲ್ಮನವಿಗಳ ವಿಚಾರಣೆಯನ್ನು ಏಪ್ರಿಲ್ 13ರಂದು ನಡೆಸಿದ್ದ ಸುಪ್ರೀಂ ಕೋರ್ಟ್‌ನ ಇದೇ ಪೀಠ, ಮುಸ್ಲಿಮರ ಮೀಸಲಾತಿ ರದ್ದುಗೊಳಿಸಿರುವ ಕರ್ನಾಟಕ ರಾಜ್ಯ ಸರ್ಕಾರದ ನಿರ್ಧಾರವು ‘ತೀರ ಕಳಪೆ ಹಾಗೂ ದೋಷಪೂರಿತದಿಂದ ಕೂಡಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ’ ಎಂದು ಹೇಳಿತ್ತು.
ಈ ಮೊದಲು ಒಕ್ಕಲಿಗರು ಶೇ. 4 ಮತ್ತು ಲಿಂಗಾಯತರು ಶೇ. 5 ಮೀಸಲಾತಿ ಹೊಂದಿದ್ದರು. ರಾಜ್ಯ ಸಚಿವ ಸಂಪುಟದ ನಿರ್ಧಾರದ ನಂತರ, ಒಕ್ಕಲಿಗರು ಶೇ. 6ರಷ್ಟು ಮತ್ತು ಲಿಂಗಾಯತರು ಶೇ. 7ರಷ್ಟು ಮೀಸಲಾತಿ ಪಡೆಯುತ್ತಾರೆ.
ಒಬಿಸಿ ವರ್ಗದಿಂದ ಮುಸ್ಲಿಮರನ್ನು ತೆಗೆದುಹಾಕಿ ಶೇ. 10ರಷ್ಟು ಮೀಸಲಾತಿ ಇರುವ ಆರ್ಥಿಕವಾಗಿ ದುರ್ಬಲ ವಿಭಾಗದಡಿಯಲ್ಲಿ ಅವರಿಗೆ ಅವಕಾಶ ಕಲ್ಪಿಸಲು ಸರ್ಕಾರ ನಿರ್ಧರಿಸಿದೆ. ರಾಜ್ಯ ಸರ್ಕಾರದ ನಿರ್ಧಾರದಿಂದ ಮೀಸಲಾತಿ ಮಿತಿ ಸುಪ್ರೀಂಕೋರ್ಟ್ ನಿಗದಿ ಮಾಡಿದ ಶೇ. 57ನ್ನು ಮೀರುತ್ತದೆ.