ದೆಹಲಿ ಸರ್ಕಾರದ ಸೇವೆಗಳ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಹೊರಡಿಸಿರುವ ಸುಗ್ರೀವಾಜ್ಞೆ ಪ್ರಶ್ನಿಸಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಸರ್ಕಾರ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಸೋಮವಾರ(ಜುಲೈ 10) ಕೇಂದ್ರಕ್ಕೆ ನೋಟಿಸ್ ನೀಡಿದೆ.
ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಪಿ ಎಸ್ ನರಸಿಂಹ ಅವರನ್ನೊಳಗೊಂಡ ಸುಪ್ರೀಂಕೋರ್ಟ್ ದ್ವಿಸದಸ್ಯ ಪೀಠವು ಲೆಫ್ಟಿನೆಂಟ್ ಗವರ್ನರ್ ವಿ ಕೆ ಸಕ್ಸೇನಾ ಅವರನ್ನು ಪ್ರಕರಣದಲ್ಲಿ ಕಕ್ಷಿದಾರರನ್ನಾಗಿ ಸೇರಿಸುವಂತೆ ನಿರ್ದೇಶಿಸಿದೆ.
ಎಎಪಿ ಸರ್ಕಾರದ ಪರವಾಗಿ ಹಾಜರಿದ್ದ ಹಿರಿಯ ವಕೀಲ ಅಭಿಷೇಕ್ ಸಿಂಘ್ವಿ ಅವರು ತಮ್ಮ ಮನವಿಯಲ್ಲಿ, ಪ್ರಕರಣದಲ್ಲಿ ಲೆಫ್ಟಿನೆಂಟ್ ಗವರ್ನರ್ ಅವರನ್ನು ಕಕ್ಷಿದಾರರನ್ನಾಗಿ ಸೇರಿಸುವಂತೆ ಮನವಿ ಮಾಡಿದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಸುಪ್ರೀಂ ಕೋರ್ಟ್,”ನಾವು ನೋಟಿಸ್ ನೀಡುತ್ತೇವೆ. ಜುಲೈ 17 ರಂದು ವಿಚಾರಣೆ ಕೈಗೆತ್ತಿಕೊಳ್ಳುತ್ತೇವೆ” ಎಂದು ತಿಳಿಸಿದೆ.
ಈ ಸುದ್ದಿ ಓದಿದ್ದೀರಾ? ಶಿಕ್ಷಕರ ನೇಮಕಾತಿ ಹಗರಣ; ಟಿಎಂಸಿಯ ಅಭಿಷೇಕ್ ಬ್ಯಾನರ್ಜಿಗೆ ಸುಪ್ರೀಂ ಕೋರ್ಟಿನಲ್ಲಿ ಹಿನ್ನಡೆ
ಎಎಪಿ ಸರ್ಕಾರವು ತನ್ನ ಮನವಿಯಲ್ಲಿ, ಕೇಂದ್ರ ಸರ್ಕಾರದ ನಿರ್ಧಾರವು “ಅಸಂವಿಧಾನಿಕ ನಡೆಯಾಗಿದ್ದು,ಇದು ಉನ್ನತ ನ್ಯಾಯಾಲಯ ಮತ್ತು ಸಂವಿಧಾನದ ಮೂಲ ರಚನೆಯನ್ನು “ಅತಿಕ್ರಮಿಸಲು” ಪ್ರಯತ್ನಿಸುತ್ತದೆ. ಅಸಂವಿಧಾನಿಕವಾದ ಸುಗ್ರೀವಾಜ್ಞೆಯನ್ನು ರದ್ದುಗೊಳಿಸುವುದರ ಜೊತೆಗೆ, ಮಧ್ಯಂತರ ತಡೆಯಾಜ್ಞೆ ನೀಡಬೇಕೆಂದು ಕೋರಿದೆ.
ನ್ಯಾಯಾಲಯವು ಕಾಯಿದೆಯನ್ನು ತಡೆಹಿಡಿಯಲು ಸಾಧ್ಯವಿಲ್ಲ ಎಂದು ಹೇಳುವ ಮೂಲಕ ತಡೆಯಾಜ್ಞೆಯ ಮನವಿಯನ್ನು ಪರಿಗಣಿಸಲು ಪೀಠವು ಆರಂಭದಲ್ಲಿ ಒಪ್ಪಲಿಲ್ಲ. ಇದು ಸುಗ್ರೀವಾಜ್ಞೆ, ನಾವು ವಿಷಯವನ್ನು ಆಲಿಸಬೇಕಾಗಿದೆ ಎಂದು ಸಿಜೆಐ ಚಂದ್ರಚೂಡ್ ಹೇಳಿದರು. ಆದರೆ, ನ್ಯಾಯವಾದಿ ಅಭಿಷೇಕ್ ಮನು ಸಿಂಘ್ವಿ ನ್ಯಾಯಾಲಯದ ಕಾನೂನಿಗೆ ತಡೆಯಾಜ್ಞೆ ನೀಡಿದ ಉದಾಹರಣೆಗಳನ್ನು ನೀಡುವ ಮೂಲಕ ಪೀಠದ ಮನವೊಲಿಸಿದರು.
ಕೇಂದ್ರವು ಸುಪ್ರೀಂ ಕೋರ್ಟ್ ಆದೇಶಕ್ಕೆ ವಿರುದ್ಧವಾಗಿ ಮೇ 19 ರಂದು ದೆಹಲಿಯಲ್ಲಿ ಗ್ರೂಪ್ ಎ ಅಧಿಕಾರಿಗಳನ್ನು ವರ್ಗಾವಣೆ ಮಾಡಲು ಮತ್ತು ನಿಯೋಜಿಸಲು ಸುಗ್ರಿವಾಜ್ಞೆಯನ್ನು ಹೊರಡಿಸಿ ಎಲ್‌ಜಿ ಅವರಿಗೆ ಹೆಚ್ಚಿನ ಅಧಿಕಾರವನ್ನು ನೀಡಿತು.
ಪೊಲೀಸ್, ಸಾರ್ವಜನಿಕ ಸುವ್ಯವಸ್ಥೆ ಮತ್ತು ಭೂಮಿ ಹೊರತುಪಡಿಸಿ ಉಳಿದಂತೆ ರಾಷ್ಟ್ರ ರಾಜಧಾನಿಯ ಆಡಳಿತದಲ್ಲಿನ ಅಧಿಕಾರಿಗಳ ವರ್ಗಾವಣೆ ನಿಯಂತ್ರಣವು ಚುನಾಯಿತ ಸರ್ಕಾರಕ್ಕೆ ಸೇರುತ್ತದೆ ಎಂದು ಸುಪ್ರೀಂಕೋರ್ಟ್ ಆದೇಶ ನೀಡಿದ ಒಂದು ವಾರದ ಒಳಗೆ ಕೇಂದ್ರ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿತ್ತು.
ಮೇ 11ರಂದು ಸುಪ್ರೀಂಕೋರ್ಟ್ ಆದೇಶ ನೀಡುವುದಕ್ಕೂ ಮುನ್ನ, ದಿಲ್ಲಿ ಸರ್ಕಾರಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳ ವರ್ಗಾವಣೆ ಮತ್ತು ನಿಯೋಜನೆಯ ಎಲ್ಲ ಕಾರ್ಯನಿರ್ವಹಣ ನಿಯಂತ್ರಣವು ಕೇಂದ್ರ ಸರ್ಕಾರ ನೇಮಿಸಿರುವ ಲೆಫ್ಟಿನೆಂಟ್ ಗವರ್ನರ್ ಅವರ ಬಳಿ ಇತ್ತು.