ಪಶ್ಚಿಮ ಬಂಗಾಳದ ಶಿಕ್ಷಕರ ನೇಮಕಾತಿ ಹಗರಣದಲ್ಲಿ ಆರೋಪಿಯಾಗಿರುವ ಟಿಎಂಸಿ ನಾಯಕ ಅಭಿಷೇಕ್ ಬ್ಯಾನರ್ಜಿ ವಿರುದ್ಧ ಸಿಬಿಐ ಮತ್ತು ಜಾರಿ ನಿರ್ದೇಶನಾಲಯದ ತನಿಖೆಯಲ್ಲಿ ಮಧ್ಯಪ್ರವೇಶಿಸಲು ಸುಪ್ರೀಂ ಕೋರ್ಟ್ ಸೋಮವಾರ(ಜುಲೈ 10) ನಿರಾಕರಿಸಿದ್ದು, ಪ್ರಕರಣದ ತನಿಖೆಗೆ ಅಡ್ಡಿಪಡಿಸಲು ಸಾಧ್ಯವಿಲ್ಲ ಎಂದು ಹೇಳಿದೆ.
ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿ ಪಿ ಎಸ್ ನರಸಿಂಹ ಅವರನ್ನೊಳಗೊಂಡ ದ್ವಿಸದಸ್ಯ ಪೀಠವು ಕಾನೂನಿನಡಿಯಲ್ಲಿ ಲಭ್ಯವಿರುವ ಪರಿಹಾರಗಳನ್ನು ಪಡೆಯಲು ಬ್ಯಾನರ್ಜಿ ಅವರಿಗೆ ಅವಕಾಶ ಮಾಡಿಕೊಟ್ಟಿತು. ಆದರೆ ಕಲ್ಕತ್ತಾ ಹೈಕೋರ್ಟ್‌ನ ಮೇ 18 ರ ಆದೇಶದಲ್ಲಿ ಮಧ್ಯಪ್ರವೇಶಿಸಲು ನಿರಾಕರಿಸಿತು.
“ನಾವು ದೋಷಾರೋಪಣೆ ಮಾಡಲಾದ ಆದೇಶದಲ್ಲಿ ಮಧ್ಯಪ್ರವೇಶಿಸುವುದಿಲ್ಲ, ಏಕೆಂದರೆ ಇದು ತನಿಖೆಯನ್ನು ಅಸ್ತವ್ಯಸ್ತಗೊಳಿಸುತ್ತದೆ. ಅರ್ಜಿದಾರರು ಕಾನೂನಿನ ಅಡಿಯಲ್ಲಿ ಲಭ್ಯವಿರುವ ಪರಿಹಾರಗಳನ್ನು ಪಡೆಯಬಹುದು,” ಎಂದು ಪೀಠ ಹೇಳಿದೆ.
ಮೇ 26 ರಂದು, ಪಶ್ಚಿಮ ಬಂಗಾಳದ ಶಾಲಾ ಉದ್ಯೋಗ ಹಗರಣದ ಪ್ರಕರಣಗಳಲ್ಲಿ ಸಿಬಿಐ ಮತ್ತು ಜಾರಿ ನಿರ್ದೇಶನಾಲಯ ಅಭಿಷೇಕ್ ಬ್ಯಾನರ್ಜಿ ಅವರನ್ನು ವಿಚಾರಣೆಗೆ ಒಳಪಡಿಸಬಹುದು ಎಂಬ ತನ್ನ ಹಿಂದಿನ ಆದೇಶವನ್ನು ಮರುಪರಿಶೀಲಿಸಲು ಮಾಡಿದ ಮನವಿಯನ್ನು ಹೈಕೋರ್ಟ್ ವಜಾಗೊಳಿಸಿತ್ತು.
ಆದಾಗ್ಯೂ, ಈ ಪ್ರಕರಣಗಳಿಗೆ ಸಂಬಂಧಿಸಿದಂತೆ ಕೇಂದ್ರ ತನಿಖಾ ಸಂಸ್ಥೆಗಳು ತೃಣಮೂಲ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯನ್ನು ಪ್ರಶ್ನಿಸಬಹುದು ಎಂದು ಹೇಳಿದ್ದ ಹೈಕೋರ್ಟ್ ಆದೇಶವನ್ನು ಸುಪ್ರೀಂ ಕೋರ್ಟ್ ತಡೆಹಿಡಿಯಲಿಲ್ಲ.
ಅಭಿಷೇಕ್ ಬ್ಯಾನರ್ಜಿ ಅವರು ಟಿಎಂಸಿ ವರಿಷ್ಠ ಮತ್ತು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಸೋದರಳಿಯ.
ಹಗರಣಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಸಿಬಿಐ ಮತ್ತು ಜಾರಿ ನಿರ್ದೇಶನಾಲಯದಂತಹ ತನಿಖಾ ಸಂಸ್ಥೆಗಳು ತನ್ನನ್ನು ವಿಚಾರಣೆಗೆ ಒಳಪಡಿಸಬಹುದು ಎಂದು ತನ್ನ ಹಿಂದಿನ ಆದೇಶವನ್ನು ಹಿಂಪಡೆಯುವಂತೆ ಕೋರಿ ಲೋಕಸಭಾ ಸಂಸದ ಬ್ಯಾನರ್ಜಿ ಸಲ್ಲಿಸಿದ್ದ ಅರ್ಜಿಯನ್ನು ಕಲ್ಕತ್ತಾ ಹೈಕೋರ್ಟ್ ವಜಾಗೊಳಿಸಿದೆ.
ಈ ಸುದ್ದಿ ಓದಿದ್ದೀರಾ? ಮಣಿಪುರದಲ್ಲಿ ಹಿಂಸಾಚಾರವನ್ನು ಹೆಚ್ಚಿಸಲು ಸುಪ್ರೀಂ ಕೋರ್ಟ್ ವೇದಿಕೆಯಲ್ಲ: ಸಿಜೆಐ
ಏಪ್ರಿಲ್ 28 ರಂದು, ನ್ಯಾಯಮೂರ್ತಿ ಅಭಿಜಿತ್ ಗಂಗೋಪಾಧ್ಯಾಯ ಅವರು ಟಿವಿ ಸುದ್ದಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಕೆಲವು ದಿನಗಳ ನಂತರ, ಪಶ್ಚಿಮ ಬಂಗಾಳದ ಶಾಲಾ ಉದ್ಯೋಗ ಹಗರಣದ ಪ್ರಕರಣದ ವಿಚಾರಣೆಗೆ ಮತ್ತೊಬ್ಬ ನ್ಯಾಯಾಧೀಶರನ್ನು ಮರು ನಿಯೋಜಿಸುವಂತೆ ಕಲ್ಕತ್ತಾ ಹೈಕೋರ್ಟ್‌ನ ಹಂಗಾಮಿ ಮುಖ್ಯ ನ್ಯಾಯಾಧೀಶರನ್ನು ಸುಪ್ರೀಂ ಕೋರ್ಟ್ ಕೇಳಿದೆ.
ಮೇ 20 ರಂದು ಸಿಬಿಐನಿಂದ ಒಂಬತ್ತು ಗಂಟೆಗಳ ಕಾಲ ವಿಚಾರಣೆಗೆ ಒಳಗಾದ ಅಭಿಷೇಕ್ ಬ್ಯಾನರ್ಜಿ, ತನಿಖಾ ಸಂಸ್ಥೆಯು ತನ್ನ ವಿರುದ್ಧ ಯಾವುದೇ ಬಲವಂತದ ಕ್ರಮಗಳನ್ನು ತೆಗೆದುಕೊಳ್ಳದಂತೆ ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸಿದ್ದಾರೆ.
ಸ್ಥಳೀಯ ಉದ್ಯಮಿ ಮತ್ತು ಶಾಲಾ ಉದ್ಯೋಗ ಹಗರಣ ಪ್ರಕರಣಗಳಲ್ಲಿ ಆರೋಪಿಯಾಗಿರುವ ಕುಂತಲ್ ಘೋಷ್ ಅವರು ಸಲ್ಲಿಸಿದ ದೂರಿನಲ್ಲಿ ಟಿಎಂಸಿ ನಾಯಕನ ಹೆಸರು ದಾಖಲಾಗಿದೆ. ಈ ಪ್ರಕರಣದಲ್ಲಿ ಬ್ಯಾನರ್ಜಿ ಅವರನ್ನು ಸಿಲುಕಿಸಲು ಕೇಂದ್ರ ತನಿಖಾ ಸಂಸ್ಥೆಗಳು ಒತ್ತಡ ಹೇರುತ್ತಿವೆ ಎಂದು ಅಭಿಷೇಕ್ ಅವರು ಆರೋಪಿಸಿದ್ದಾರೆ.
ಶಾಲಾ ಉದ್ಯೋಗ ಹಗರಣ ಪ್ರಕರಣಗಳ ಕ್ರಿಮಿನಲ್ ಆರೋಪಗಳನ್ನು ಸಿಬಿಐ ತನಿಖೆ ನಡೆಸುತ್ತಿದ್ದರೆ, ಪಶ್ಚಿಮ ಬಂಗಾಳದಲ್ಲಿ ಶಿಕ್ಷಕರ ನೇಮಕಾತಿಯಲ್ಲಿನ ಅಕ್ರಮಗಳಲ್ಲಿ ಭಾಗಿಯಾಗಿರುವ ಹಣದ ಜಾಡುಗಳನ್ನು ಜಾರಿ ನಿರ್ದೇಶನಾಲಯ ಪರಿಶೀಲಿಸುತ್ತಿದೆ.